News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಿಯಾನಮನ್ ಚೌಕ್ ಟು ಕೊರೋನಾ : ಕಮ್ಯೂನಿಷ್ಠ ಚೀನಾ ಬಿಚ್ಚಿಟ್ಟದಕ್ಕಿಂತ ಬಚ್ಚಿಟ್ಟಿದ್ದೇ ಹೆಚ್ಚು

ಜೂನ್‌ 4, 1989 – ಬೀಜಿಂಗ್‌ನ ತಿಯಾನಮನ್ ಸ್ಕ್ವೇರನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಚೀನಾದ ಆಡಳಿತದ ವಿರುದ್ಧ ಶಾಂತಿಯುತವಾದ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಎರಡು ತಿಂಗಳಿಂದ ನಡೆಯುತ್ತಿದ್ದ ಈ ಪ್ರತಿಭಟನೆ ಚೀನಾದ 400 ಹೆಚ್ಚು ನಗರಕ್ಕೂ ಕೂಡ ಹಬ್ಬಿದ್ದು ಚೀನಾದ ಆಡಳಿತಾರೂಢ ಕಮ್ಯೂನಿಷ್ಠ ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು. ಈ ಘಟನೆಯು ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದ ಪ್ರಾರಂಭಗೊಂಡು ಮಾವೋ ನಂತರದ ಅತ್ಯಂತ ದೊಡ್ಡ ಸರ್ಕಾರ ವಿರೋಧಿ ಆಂದೋಲನವಾಗಿತ್ತು.

ಇದನ್ನು ಹತ್ತಿಕ್ಕುವ ಪ್ರಯತ್ನವಾಗಿ ಸರಕಾರ ಮೂರು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಬೀಜಿಂಗ್‌ನತ್ತ ಸಾಗಿಸಿತ್ತು. ಕೇವಲ ಶಸ್ತ್ರಸಜ್ಜಿತ ಸೈನಿಕರು ಮಾತ್ರವಲ್ಲ, ಯುದ್ಧ ಟ್ಯಾಂಕರ್‌ಗಳು ಕೂಡ ನೋಡ ನೋಡುತ್ತಿದ್ದಂತೆ ಬೀಜಿಂಗ್‌ನ ತಿಯಾನಮನ್ ಚೌಕ್ ಸೇರಿಕೊಂಡವು. ಸರ್ಕಾರ ಮಾರ್ಷಲ್ ಲಾ ಜಾರಿಗೊಳಿಸಿ ಸೈನಿಕ ಕಾರ್ಯಾಚರಣೆಗೆ ಆದೇಶ ನೀಡಿತು. ಟ್ಯಾಂಕರ್‌ಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳತ್ತ ಸಾಗತೊಡಗಿದವು. ಎಷ್ಟಾದರೂ ನಮ್ಮದೇ ದೇಶದ ಸೈನಿಕರು. ನಮ್ಮ ಮೇಲೆ ವೈರಿ ದೇಶದ ಸೈನ್ಯದ ಮೇಲೆ ದಾಳಿ ಮಾಡಿದಂತೆ ಮಾಡಲಾರರು ಎಂದು ನಂಬಿದ್ದ ಪ್ರತಿಭಟನಾಕಾರರಿಗೆ ದೊಡ್ಡ ಆಘಾತ ಕಾದಿತ್ತು. ಆ ಟ್ಯಾಂಕರ್‌ಗಳು ಪ್ರತಿಭಟನಾಕಾರರನ್ನು ತನ್ನಡಿಗೆ ಹೊಸುಕಿ ಹಾಕಿ ಮುಂದೆ ಸಾಗ ತೊಡಗಿದವು. ಎಲ್ಲೆಡೆ ರಕ್ತಪಾತ. ಕೇವಲ ಪ್ರತಿಭಟನಾಕಾರರು ಮಾತ್ರವಲ್ಲ ಇತರ ಅನೇಕರು ಕೂಡ ಇದರಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟರು.

ಈ ಘಟನೆ ನಡೆದು ಇಂದಿಗೆ ಮೂರು ದಶಕಗಳು ಕಳೆದರೂ ಕೂಡ, ಇದನ್ನು ಒಂದು ಸಣ್ಣ ಪ್ರತಿಭಟನೆ ಎಂದು ಚೀನಾ ಸಾಗಿ ಹಾಕುತ್ತ ಬಂದಿದೆ. ಈ ಒಂದು ಘಟನೆ ಚೀನಾದ ಇತಿಹಾಸದಲ್ಲಿ ದಾಖಲಾಗದಂತೆ ಹಾಗೂ ಇದರ ಬಗ್ಗೆ ಹೆಚ್ಚು ಮಾಹಿತಿ ಎಲ್ಲೂ ಸಿಗದ ರೀತಿಯಲ್ಲಿ ಚೀನಾ “ಮ್ಯಾನೇಜ್’ ಮಾಡಿದೆ. ಇದರ ಬಗ್ಗೆ ಚೀನಾದಲ್ಲಿ ಧ್ವನಿಯತ್ತಿದವರೆಲ್ಲಾ ನಿಗೂಢ ರೀತಿಯಲ್ಲಿ ನಾಪತ್ತೆಯಾಗುತ್ತಾ ಹೋದರು.

ಈ ಘಟನೆಗೆ ನಿಖರ ಕಾರಣವೇನು ? ಸರಕಾರ ಏಕೆ ಈ ರೀತಿಯಾದ ಅನಾಗರೀಕ ಕ್ರಮಕ್ಕೆ ಮುಂದಾಯಿತು? ಎಷ್ಟು ಜನ ಕೊಲ್ಲಲ್ಪಟ್ಟರು, ಬಂಧಿಸಲ್ಪಟ್ಟರು? ಪ್ರತಿಭಟನಾಕಾರರ ಮೇಲೆ ಟ್ಯಾಂಕರ್ ಹಾಯಿಸಲು ಸೇನೆಗೆ ಆದೇಶ ಕೊಟ್ಟವರಾರು? ಈ ಎಲ್ಲ ಪ್ರಶ್ನೆಗಳು ಶಾಸನಕ್ಕೆ ಕೇಳಬಾರದ ಪ್ರಶ್ನೆಗಳ ಕ್ಯಾಟೆಗರಿಯಲ್ಲಿ ಸೇರಿಕೊಂಡು ಬಿಟ್ಟವು. ಎಂದಿನಂತೆ ಕಮ್ಯೂನಿಷ್ಠ ಚೀನಾ ತನ್ನ ನೀತಿಗೆಟ್ಟ ಮುಖದಿಂದ ಚೀನಾ ಮಾತ್ರವಲ್ಲ ಜಗತ್ತಿನ ಇತರ ದೇಶಗಳಲ್ಲೂ ತನ್ನ ಕೊಳಕು ಕಮ್ಯೂನಿಷ್ಠ ಮಾನಸಿಕತೆಯನ್ನು ಪ್ರಸ್ತುತಪಡಿಸುತ್ತ ಸಾಗತೊಡಗಿತು.‌

ಕೊರೋನಾ ಸಂಕ್ರಾಮಿಕ ಮತ್ತು ಚೀನಾದ ಸಂದರ್ಭದಲ್ಲಿ ಇಂದು 31 ವರ್ಷಗಳ ನಂತರವೂ ತಿಯಾನಮನ್ ಚೌಕ್ ಘಟನೆ ಸ್ಮರಣೆ ದಿನದಂದು ಮತ್ತೆ ಮತ್ತೆ ಚೀನಾದ ಶಾಸನದ ಮಾನಸಿಕತೆಯನ್ನು ವಿಶ್ಲೇಷಿಸಬೇಕೆನಿಸುತ್ತದೆ.

ತನ್ನ ದೇಶದ ಹಿಂದಿನ ಆಡಳಿತವನ್ನು ಕಿತ್ತೊಗೆಯಲು ಚೀನಾದ ಕಮ್ಯೂನಿಷ್ಠ ಪಕ್ಷ ಹಿಂಸೆಯ ಮಾರ್ಗವನ್ನು ಅನುಸರಿಸಿ ಅದಕ್ಕೆ “ನ್ಯಾಯಸಮ್ಮತ್ತ”ದ ಮುಖವಾಡವನ್ನು ಹಾಕಿತ್ತು. ಈಗ ಆದೇ ಮಾರ್ಗವನ್ನು ತನ್ನ ಪ್ರಜೆಗಳ ವಿರುದ್ಧವೂ ಅನುಸರಿಸುತ್ತ ಮತ್ತೆ “ನ್ಯಾಯಸಮ್ಮತ”ದ ಮುಖವಾಡ ಬಳಸುತ್ತಿದೆ. ಮೂರು ದಶಕಗಳಿಂದ ತಾನು ಮಾಡಿದ ದುಷ್ಕೃತ್ಯದ ಬಗ್ಗೆ ತೇಪೆ ಸಾರುತ್ತ ಸಾಗುತ್ತಿದ್ದರೂ ಕೂಡ ಕ್ಷಣ ಕ್ಷಣಕ್ಕೂ ಜಗತ್ತಿನೆದರು ನಗ್ನವಾಗುತ್ತ ಸಾಗಿದೆ.

ಕೊರೋನಾ ಸಾಂಕ್ರಾಮಿಕದ ವಿಷಯದಲ್ಲೂ ಚೀನಾದ ಕಮ್ಯೂನಿಷ್ಠ ಆಡಳಿತ ಹೀಗೆ ನಡೆದುಕೊಳ್ಳಲಿಲ್ಲವೇ? ಮಾಹಿತಿಯನ್ನು, ಮಾಹಿತಿದಾರರನ್ನು ಹೊಸುಕಿ ಹಾಕಲಿಲ್ಲವೇ? ಅಂಕಿ ಸಂಖ್ಯೆಗಳ ವಿಷಯದಲ್ಲಿ ಚೆಲ್ಲಾಟವಾಡಲಿಲ್ಲವೇ? ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥನನ್ನು ಬುಟ್ಟಿಯಲ್ಲಿ ಹಾಕಿಕೊಂಡು ಜಗತ್ತನ್ನೇ ಸಂಕಷ್ಟಕ್ಕೆ ಕೆಡವಲಿಲ್ಲವೇ?

ಅಂದು ತಿಯಾನಮನ್ ಚೌಕ ಘಟನೆ ನಡೆದ ಸಂದರ್ಭದಲ್ಲೂ ಮಾಧ್ಯಮಗಳಿಗೆ ಕಡಿವಾಣ ಹಾಕಲಾಗಿತ್ತು. ಮಾಧ್ಯಮಗಳಿಗೆ ಬೆದರಿಕೆ ಒಡ್ಡಲಾಗಿತ್ತು. ಕೇಬಲ್ ಹಾಗೂ ಇತರ ಸಂಪರ್ಕ ಸಾಧನಗಳನ್ನು ತೆಗೆದು ಹಾಕಲಾಗಿತ್ತು. ಎಷ್ಟೂ ವಿದೇಶಿ ಮಾಧ್ಯಮ ಪ್ರತಿನಿಧಿಗಳು ಪಕ್ಕದ ಹಾಂಕ್­ಕಾಂಗ್­ಗೆ ಹೋಗಿ ವರದಿ ಮಾಡಿದ್ದವು.

ಇಂದಿಗೂ ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕ ಚೀನಾ ಜಗತ್ತಿನಿಂದ ಸಂಪರ್ಕರಹಿತವಾಗಿದೆ. ಇಡೀ ವಿಶ್ವಕ್ಕೆ ಮಾಹಿತಿ ತಂತ್ರಜ್ಞಾನದ ವಸ್ತುಗಳನ್ನು ನಿರ್ಮಿಸಿ ರಫ್ತು ಮಾಡುವ ಚೀನಾ ತನ್ನಲ್ಲಿ ಮಾತ್ರ ಇದನ್ನು ಜನತೆಯ ಮೇಲೆ ನಿಗಾವಹಿಸಲು ಮಾತ್ರ ಬಳಸುತ್ತದೆ. ಪತ್ರಿಕೆಗಳು ಸರಕಾರದ ಮುಖವಾಣಿ ಮಾತ್ರವಾಗಿರಬೇಕು. ಗೂಗಲ್­ನಂತಹ ಸರ್ಚ ಇಂಜೀನಗಳಲ್ಲಿ ಚೀನಾದ ಕುರಿತಂತೆ ಸತ್ಯ ಮಾಹಿತಿಗಳು ಸುಲಭವಾಗಿ ದೊರೆಯದಂತೆ ಚೀನಾ ಆಟವಾಡುತ್ತದೆ.

ಹಾಗಾದರೆ ಚೀನಾ, ಉತ್ತರ ಕೋರಿಯಾದಂತಹ ನಿರಂಕುಶ ಪ್ರಭುತ್ವಗಳು ಸದಾ ಸತ್ಯವನ್ನೇಕೆ ಮುಚ್ಚಿಡಲು ಪ್ರಯತ್ನಿಸುತ್ತವೆ? ಅದಕ್ಕೆ ಏಕೈಕ ಕಾರಣವೆಂದರೆ ಆ ಪ್ರಭುತ್ವದ ಅಡಿಪಾಯವೇ ಅಸತ್ಯ ಹಾಗೂ ಅನೈತಿಕತೆಯಿಂದ ಸ್ಥಾಪಿತವಾಗಿರುತ್ತದೆ. ಆದರೆ ಸತ್ಯ ಒಂದಿಲ್ಲಾ ಒಂದು ರೀತಿಯಲ್ಲಿ ಜೀವಂತವಾಗಿರುತ್ತದೆ. ಅದು ಮನುಷ್ಯನ ಸ್ಮೃತಿಯಲ್ಲಿ ಸದಾ ಜಾಗೃತವಾಗಿರುತ್ತದೆ. ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಒಂದು ಸಮುದಾಯ, ದೇಶ, ನಾಗರೀಕತೆಗೆ ಅದರ ಇತಿಹಾಸದ ನೆನಪು, ಸ್ಮೃತಿ ಅತ್ಯಂತ ಅವಶ್ಯಕ. ಈ ಮೂಲ ಸತ್ವವನ್ನು ನಾಶಪಡಿಸುವುದೇ ಈ ನಿರಂಕುಶವಾದಿ ಪ್ರಭುತ್ವ, ಸಿದ್ಧಂತಗಳ ಮೂಲ ಆಶಯವಾಗಿರುತ್ತದೆ. ಅದು ಧರ್ಮವನ್ನು ಅಫೀಮಿಗೆ ಹೋಲಿಸುವುದರಿಂದ ಹಿಡಿದು, ನಾಗರೀಕ ಸಮಾಜವನ್ನು ಅನಾಗರಿಕವೆಂದು ಹಿಯ್ಯಾಳಿಸಿ ತನ್ನ ಸಿದ್ಧಾಂತದ ಮೂಲಕ ತಥಾಕಥಿತ ನಾಗರೀಕನ್ನಾಗಿಸುವ ಪ್ರಯತ್ನಗಳ ಹೆಸರಿನ ತಂತ್ರಗಳ ಮೂಲಕ ಇದನ್ನು ಸಾಧಿಸುವ ಯತ್ನ ಸದಾ ನಡೆಸಲಾಗುತ್ತದೆ.

ಇಂದು ಮಾವೂ ಕನಸಿನ ಚೀನಾ ನಾಗರೀಕರಿಲ್ಲದ ನಾಗರಿಕತೆಯಾಗಿದೆ. ಜಗತ್ತಿನ ಎಲ್ಲೆಡೆ ಮಾನವ ಹಕ್ಕುಗಳ ಬಗ್ಗೆ ಡಂಗುರ ಸಾರುವ ಸಿದ್ಧಾಂತದವರು ಇಲ್ಲಿ ಮಾತ್ರ ಆ ಶಬ್ದವನ್ನು ತಮ್ಮ ಡಿಕ್ಷನರಿಯಿಂದ ತೆಗೆದು ಹಾಕಿದ್ದಾರೆ. ತನ್ನ ಪ್ರಜೆಗಳನ್ನು ಯಂತ್ರಗಳ ರೀತಿಯಲ್ಲಿ ಕಾಣುವ ಚೀನಾದ ಆಡಳಿತ ಪಕ್ಷ, ಎಂದೂ ಕೂಡ ಅದರ ಒಳಿತಿಗಾಗಿ ಕೆಲಸ ಮಾಡಲಿಲ್ಲ. ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ಜಗತ್ತಿಗೆ ಮಂಕುಬೂದಿ ಎರಚಿದ್ದಾರೆ. ಎಪ್ಪತ್ತು ವರ್ಷಗಳ ಸತತ ಆಡಳಿತ ನಡೆಸಿದ ಹೊರತಾಗಿಯೂ ತನ್ನ ಸ್ವಂತ ಪ್ರಜೆಗಳ ಮೇಲೆ ಅಲ್ಲಿನ ಸರಕಾರಕ್ಕೆ ನಂಬಿಕೆ ಇಲ್ಲವೆಂದರೆ ಅದು ಎಷ್ಟು ಜನಪ್ರಿಯ ಸರಕಾರ ಎಂದು ತಿಳಿಯಬಹುದಾಗಿದೆ. ಅವರ ಸಿದ್ಧಾಂತ ಎಷ್ತು ಟೊಳ್ಳಾಗಿದೆ ಎಂದು ತಿಳಿಯಬಹುದಾಗಿದೆ.

ಚೀನಾ ಅರ್ಥಿಕವಾಗಿ ಬಲಿಷ್ಠವಾದಲ್ಲಿ ಅಲ್ಲಿ ಹೊಸ ಆಲೋಚನೆಗಳು, ಪ್ರಜಾಪ್ರಭುತ್ವ ಸ್ಥಾಪನೆ ಸೇರಿದಂತೆ ಮಾನವೀಯ ಮೌಲ್ಯಗಳಾದ ವಾಕ್ ಸ್ವಾತಂತ್ರ್ಯ ಇತ್ಯಾದಿಗಳು ಸ್ಥಾಪಿತವಾಗಲಿವೆ ಎಂದು ಜನತೆಯನ್ನು ಹಾಗೂ ಜಗತ್ತನ್ನು ನಂಬಿಸುವ ಪ್ರಯತ್ನ ಚೀನಾದ ಆಡಳಿತ ಪಕ್ಷದ ಸಿದ್ಧಾಂತವಾದಿಗಳು ಎಲ್ಲೆಡೆ ಪ್ರಯತ್ನಪಟ್ಟರು. ಆರ್ಥಿಕವಾಗಿ ಬಲಿಷ್ಠವಾದ ಚೀನಾ, ನರಿ ಬುದ್ಧಿ ಹೊತ್ತ ಕೊಬ್ಬಿದ ಮದ ಆನೆಯಾಯಿತೇ ಹೊರತು ಒಂದು ಸಮಗ್ರ ಚಿಂತನೆಯುಳ್ಳ ದೇಶವಾಗಲೇ ಇಲ್ಲ.

70 ವರ್ಷಗಳ ಹಿಂದಿನ ಆತಂಕ, ಮೂವತ್ತು ವರ್ಷಗಳ ಹಿಂದಿನ ಆತಂಕ ಚೀನಾಕ್ಕೆ ಸದಾ ಕಾಡುತ್ತಲೇ ಇರುತ್ತದೆ. ಸರ್ವ ರೀತಿಯ ವೈರುಧ್ಯಗಳ ಉತ್ತುಂಗಕ್ಕೇರಿರುವ ಚೀನಾದಲ್ಲಿ ಮತ್ತೊಂದು ತಿಯಾನಮನ್ ಚೌಕ ಮಾದರಿಯ ಘಟನೆ ನಡೆದಲ್ಲಿ ಬಹುಶಃ ಚೀನಾದ ಪ್ರಜೆಗಳೇ ಚೀನಾದ ಹೊಸ ನಕ್ಷೆ ಬರೆಯಲ್ಲಿದ್ದಾರೆ.

✍️ ಅಮೃತ ಜೋಶಿ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top