ಕೊರೋನಾ ವೈರಸ್ ಇಡೀ ಜಗತ್ತಿನ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಸಾಮಾಜಿಕವಾಗಿ ಜನರು ಹೆಚ್ಚು ಓಡಾಟ ನಡೆಸಿದಂತೆ, ಗುಂಪುಗೂಡಿದಂತೆಲ್ಲಾ ಜನರನ್ನು ಹೆಚ್ಚು ವ್ಯಾಪಿಸುತ್ತಿದೆ, ಹೆಚ್ಚು ಆತಂಕಕ್ಕೆ ಒಳಗಾಗಿಸುತ್ತಿದೆ. ಔಷಧವೂ ಇಲ್ಲದ, ಜನರನ್ನು ಪೆಡಂಭೂತದಂತೆ ಕಾಡುತ್ತಿರುವ ಈ ವೈರಸ್ ನಿಂದ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ. ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳ ಕತೆಯೂ ಇದಕ್ಕೆ ಭಿನ್ನವಲ್ಲ. ಹೀಗಿರುವಾಗ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಸ್ಥಿತಿ ನಿಯಂತ್ರಣಕ್ಕಾಗಿ ಹಂತ ಹಂತಗಳ ಲಾಕ್ಡೌನ್ ಪ್ರಕ್ರಿಯೆ ಜಾರಿಗೆ ತಂದಿತು. ಇದಕ್ಕೆ ಸಮಾಜದಲ್ಲಿ ಅದ್ಭುತ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಆದರೆ ಆರ್ಥಿಕತೆಯ ಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು, ಸದ್ಯಕ್ಕೆ ಕೊಂಚ ಕೊಂಚವೇ ಲಾಕ್ಡೌನ್ ಸಡಿಲಿಕೆ ಪ್ರಕ್ರಿಯೆ ಯನ್ನೂ ಜಾರಿಗೆ ತರಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೋನಾದ ಜೊತೆಗೆಯೇ ದೈನಂದಿನ ಬದುಕನ್ನು ಹೆಚ್ಚು ಜಾಗ್ರತೆಯಿಂದ ಹೇಗೆ ನಿಭಾಯಿಸಬಹುದು? ಇದಕ್ಕೆ ಇಲ್ಲಿದೆ ಉತ್ತರ..
ಇದು ಕಣ್ಣಿಗೆ ಕಾಣದ ವೈರಸ್ ವಿರುದ್ಧದ ಯುದ್ಧ. ಕಾಣುವ ಶತ್ರುವನ್ನು ಜಯಿಸುವುದು ಸುಲಭ. ಆದರೆ ಕಾಣದ ಅಗೋಚರ ಶತ್ರುವಿನ ಜೊತೆಗೆ ಹೋರಾಟ ಅಂದುಕೊಂಡಷ್ಟು ಸುಲಭದ ಮಾತಲ್ಲ. ಈಗ ನಮ್ಮ ಮೂಂದಿರುವುದು ಎರಡು ಆಯ್ಕೆ. ಒಂದೋ ಕೊರೋನಾ ವೈರಸ್ ವಿರುದ್ಧ ಹೋರಾಡಿ ಅದನ್ನು ನಾಶವಾಗಿಸುವುದು. ಇಲ್ಲವಾದರೆ, ವೈರಸ್ ನೊಂದಿಗೆ ನಮಗೆ ಅದರಿಂದ ಯಾವುದೇ ಸಮಸ್ಯೆ ಬಂದೊದಗದಂತೆ ಎಚ್ಚರಿಕೆ ವಹಿಸಿಕೊಂಡೇ ಬದುಕನ್ನು ಆರಂಭ ಮಾಡುವುದು. ಮೊದಲನೇ ಆಯ್ಕೆಯ ವಿಚಾರಕ್ಕೆ ಹೋದರೆ, ವೈರಸ್ ವಿರುದ್ಧ ಪರಿಣಾಮಕಾರಿ ಔಷಧ ಕಂಡುಹಿಡಿಯುವಲ್ಲಿ ನಮ್ಮ ವಿಜ್ಞಾನಿಗಳು ಪ್ರಯತ್ನ ಮಾಡುತ್ತಲೇ ಇದ್ದಾರೆ. ಫಲ ಯಾವಾಗ ದೊರೆಯುವುದೋ ಗೊತ್ತಿಲ್ಲ. ಇನ್ನು ಎರಡನೇಯ ಆಯ್ಕೆ, ಜನಸಾಮಾನ್ಯರೆಲ್ಲರೂ ಮಾಡಬಹುದಾದಂತ ವಿಚಾರ. ನಮ್ಮ ರಕ್ಷಣೆ, ನಮ್ಮದೇ ಹೊಣೆ ಎಂಬ ವಿಚಾರವನ್ನು ಅರಿತುಕೊಂಡು, ಅದರಂತೆ ಯೋಜನೆಗಳನ್ನು ರೂಪಿಸಿ, ಅವುಗಳ ಪ್ರಕಾರವೇ ನಡೆದೆವೆಂದಾದಲ್ಲಿ, ನಮ್ಮನ್ನು, ಜೊತೆಗೆ ನಮ್ಮ ಸುತ್ತಮುತ್ತಲಿನ ಎಲ್ಲರನ್ನೂ ಕೊರೋನಾಗೆ ಬಲಿಯಾಗದಂತೆ ತಡೆಯುವುದು ಸಾಧ್ಯ.
ಹಾಗಾದರೆ ನಾವೇನು ಮಾಡಬೇಕು?
ಇಲ್ಲಿ ತಿಳಿಸುವ ವಿಷಯಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹದ್ದೇ. ಆದರೆ ಅದನ್ನು ಅಳವಡಿಸಿಕೊಳ್ಳುವಲ್ಲಿ ಎಡವುತ್ತಿರುವುದರಿಂದಷ್ಟೇ ಇದನ್ನು ಮತ್ತೆ ಮತ್ತೆ ನೆನಪಿಸಬೇಕಾದ ಪ್ರಮೇಯ ಬರುತ್ತಿದೆ ಅಷ್ಟೇ. ಕೊರೋನಾದಿಂದ ದೇಶವಾಸಿಗಳನ್ನು ಕಾಪಾಡುವ ಸಲುವಾಗಿ ದೇಶದ ಪ್ರಧಾನಿ ಸಾರಿ ಸಾರಿ ಹೇಳಿದ್ದೂ ಇದನ್ನೇ. ಹಿಂದಿನ ಕಾಲದಲ್ಲಿ ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕಗಳು ಹೇಗೆ ಬಳಕೆಗೆ ಬಂದಿತ್ತೋ, ಹಾಗೆಯೇ ಇನ್ನು ಮುಂದಿನ ದಿನಗಳಲ್ಲಿ ಕೊರೋನಾ ಪೂರ್ವ, ಕೊರೋನಾ ನಂತರ ಎಂದು ಹೇಳುವ ದಿನಗಳನ್ನು ನಾವು ಕಾಣಲಿದ್ದೇವೆ. ಇದು ನಗುವ ಮಾತಲ್ಲ. ಬದಲಾಗಿ ಜಗತ್ತು ಎದುರಿಸಿದ ಮಹಾನ್ ದುಸ್ಥಿತಿಯ ಪ್ರತಿಬಿಂಬ. ಹಾಗಾದರೆ, ಕೊರೋನಾದ ಜೊತೆಗೆ ನಾವು ನಮ್ಮ ಮುಂದಿನ ದಿನಗಳನ್ನು ರೂಪಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಗಮನಿಸೋಣ. ಅದಕ್ಕೆ ಸರಳ ಮತ್ತು ಸುಲಭ ಮಾರ್ಗಗಳನ್ನು ತಿಳಿಯೋಣ.
ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸೋಣ
ಅಯ್ಯೋ, ಇದು ಗೊತ್ತಿರೋದೇ ಅಲ್ವಾ ಅಂತ ಯೋಚಿಸುತ್ತಿದ್ದೀರಿ ಅಲ್ಲವೇ. ಹೌದು ಗೊತ್ತಿದೆ. ಆದರೆ ನಮ್ಮಲ್ಲಿ ಎಷ್ಟು ಜನ ಇದನ್ನು ಗಂಭೀರವಾಗಿ ಪಾಲನೆ ಮಾಡುತ್ತಿದ್ದೇವೆ ಎಂಬುದರ ಬಗೆಗೂ ಒಮ್ಮೆ ಯೋಚಿಸಿ ನೋಡಿ. ಹೌದು, ಸರ್ವೇ ಸಾಮಾನ್ಯ ವಾಗಿ ಸಣ್ಣ ಸಣ್ಣ ವಿಚಾರಗಳೇ ಬದುಕಿನಲ್ಲಿ ನಮಗೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಆದ್ದರಿಂದ ಮನೆಯಿಂದ ಹೊರಗೆ ಹೊರಡುತ್ತೇವೆ ಎಂದಾಗ ಮೂಗು, ಬಾಯಿಗೆ ಯಾವುದೇ ವೈರಸ್ ಹೋಗಲು ಸಾಧ್ಯವಾಗದಂತೆ ಮಾಸ್ಕ್ ಅಥವಾ ಬಟ್ಟೆಯನ್ನು ಬಳಸಿ ಮುಚ್ಚಿಕೊಳ್ಳುವುದನ್ನು ಬದುಕಿನುದ್ದಕ್ಕೂ ಅಭ್ಯಾಸ ಮಾಡಿಕೊಳ್ಳೋಣ. ಶುಚಿಯಾದ ಬಟ್ಟೆಗಳನ್ನು ಧರಿಸೋಣ. ಮಾಸ್ಕ್ ಅಥವಾ ಮುಖಗವಸುಗಳ ವಿಚಾರದಲ್ಲಿಯೂ ಶುಚಿತ್ವವನ್ನು ಪಾಲಿಸೋಣ. ಏಕೆಂದರೆ, ಪರಿಸರದಲ್ಲಿ ಸಾಮಾನ್ಯವಾಗಿ ಅನೇಕ ಹಾನಿಕಾರಕ ವೈರಸ್ಗಳು ಇರುತ್ತವೆ. ಜೊತೆಗೆ ನಾವು ಇನ್ನೊಬ್ಬರಲ್ಲಿ ಮಾತನಾಡುವ ಸಂದರ್ಭದಲ್ಲಿ ಅವರ ಬಾಯಿಯಿಂದ ಹೊರಬರುವ ವೈರಸ್ಗಳೂ ನಮ್ಮ ದೇಹ ಸೇರುವ ಸಾಧ್ಯತೆಗಳಿರುತ್ತವೆ. ಕೇವಲ ಕೊರೋನಾ ಮಾತ್ರವಲ್ಲದೆ ಇನ್ನಿತರ ಕಣ್ಣಿಗೆ ಕಾಣದ, ಆದರೆ ಆರೋಗ್ಯ ಕೆಡಿಸುವ ವೈರಸ್ಗಳು ನಮ್ಮನ್ನು ಬಾಧಿಸದಂತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಹೆಚ್ಚು ಧನಾತ್ಮಕ ಫಲಿತಾಂಶ ನೀಡುತ್ತದೆ. ಆದ್ದರಿಂದ ಬದುಕಿನುದ್ದಕ್ಕೂ ದೈನಂದಿನ ಜೀವನದಲ್ಲಿ ಮಾಸ್ಕ್ ನಮ್ಮ ಆಧ್ಯತೆಯಾಗಿರಲಿ.
ಕೈಗಳನ್ನು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳೋಣ
ಆರೋಗ್ಯ ಮತ್ತು ನಮ್ಮ ಕೈಗಳಿಗೆ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಕೈಗಳ ಸ್ವಚ್ಛತೆಗೆ ನಾವು ಹೆಚ್ಚು ಒತ್ತು ನೀಡುವ ಮೂಲಕ, ಮುಂದೆ ಸಂಭವಿಸಬಹುದಾದ ಆರೋಗ್ಯ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದು ಸಾಧ್ಯವಿದೆ. ಕೈಗಳ ಮೂಲಕವೇ ಆಹಾರ ಸೇವಿಸುವ ನಾವು, ಅವುಗಳನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ, ಕೈಗಳಲ್ಲಿದ್ದ ಕೀಟಾಣು, ವೈರಾಣು ಗಳು ಆಹಾರದ ಜೊತೆಗೆ ನಮ್ಮ ದೇಹವನ್ನು ಸೇರುವ ಎಲ್ಲಾ ಸಾಧ್ಯತೆಗಳೂ ಇದೆ. ಇದರಿಂದಾಗಿ ನಾವು ಶೀತ, ಜ್ವರ ದಂತಹ ಸಾಮಾನ್ಯ ಕಾಯಿಲೆಗಳಿಂದ ಹಿಡಿದು, ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿಯೂ ಬರುವ ಸಾಧ್ಯತೆಗಳಿವೆ.
ಹಾಗಾಗಿ ಕೈಗಳನ್ನು ಆಗಾಗ್ಗೆ ಸ್ಯಾನಿಟೈಸರ್ ಬಳಕೆ ಮಾಡುವುದು, ಶುದ್ಧ ನೀರಿನಿಂದ ತೊಳೆದು ಶುಚಿಯಾಗಿರಿಸಿಕೊಳ್ಳುವುದರತ್ತಲೂ ನಾವು ಗಮನ ನೀಡಬೇಕು. ಅಲ್ಲದೆ ಹಣ್ಣು, ತರಕಾರಿಗಳನ್ನು ಶುಚಿಗೊಳಿಸಿದ ನಂತರವೇ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ
ಕೊರೋನಾ ಆರಂಭವಾದಾಗಿನಿಂದ ಈ ಮಾತು ಹೆಚ್ಚು ಪ್ರಚಲಿತದಲ್ಲಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಇರುವುದರಿಂದಲೇ ನಾವಿಂದು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದೇವೆ. ಯಾರಾದರೂ ಸಿಕ್ಕಾಗ ಅವರಿಂದ ಸುಮಾರು 1 ಅಡಿಯಷ್ಟು ಅಂತರವನ್ನು ಕಾಪಾಡಿಕೊಳ್ಳುವ ಮೂಲಕವೇ ಮಾತುಕತೆ ವ್ಯವಹಾರ ನಡೆಸುವುದನ್ನು ರೂಢಿಸಿಕೊಳ್ಳೋಣ. ಜೊತೆಗೆ ಶೇಕ್ಹ್ಯಾಂಡ್ ಬದಲು ನಮಸ್ಕಾರ ಪದ್ಧತಿ ಅಳವಡಿಸಿಕೊಳ್ಳೋಣ. ಇದರಿಂದಾಗಿ ನಮ್ಮ ಕೈಯಲ್ಲಿರುವ ವೈರಸ್ ಅವರ ಕೈಗಳಿಗೂ ,ಅವರ ಕೈಗಳಲ್ಲಿರುವ ವೈರಸ್ ನಮ್ಮ ಕೈಗಳಿಗೂ, ಆ ಮೂಲಕ ನಮ್ಮ ದೇಹಕ್ಕೂ ಹಬ್ಬುವುದನ್ನು ತಪ್ಪಿಸಿಕೊಳ್ಳಬಹುದು. ಆ ಮೂಲಕ ನಮ್ಮ ಆರೋಗ್ಯ ರಕ್ಷಣೆ ನಾವೇ ಮಾಡಿಕೊಳ್ಳುವತ್ತಲೂ ಮುಂದಿನ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ಕಂಡುಕೊಳ್ಳಬಹುದು.
ಆರೋಗ್ಯ ತಪಾಸಣೆ
ಕೊರೋನಾ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವ ವೈರಸ್. ಸೋಂಕಿತ ವ್ಯಕ್ತಿ ನಮ್ಮ ಸುತ್ತ ಸಂಚರಿಸಿದರೂ ಕೊರೋನಾ ನಮ್ಮನ್ನು ಬಾಧಿಸುವ ಸಂಭಾವ್ಯ ಅಪಾಯಗಳಿರುತ್ತದೆ. ಆದ್ದರಿಂದ ಕೊರೋನಾ ದ ಸಾಮಾನ್ಯ ಲಕ್ಷಣಗಳು ನಮ್ಮನ್ನು ಕಾಡಿದರೆ ತಕ್ಷಣ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಮೂಲಕ ಸಂದೇಹ ನಿವಾರಿಸಿಕೊಳ್ಳುವತ್ತ ಚಿತ್ತ ನೆಟ್ಟಲ್ಲಿ ಸೂಕ್ತ. ಇದರಿಂದ ನಮಗೆ ಸೋಂಕೂ ತಗುಲುವುದು ತಪ್ಪುತ್ತದೆ. ಒಂದು ವೇಳೆ ನಾವು ಸೋಂಕಿಗೊಳಗಾಗಿದ್ದರೆ ಅದು ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ ಆರೋಗ್ಯ ಸಂಬಂಧಿಸಿದಂತೆ ನಿರಂತರ ಪರಿಶೀಲನೆ ನಡೆಸುವ ಮೂಲಕವೂ ನಮ್ಮನ್ನು, ಜೊತೆಗೆ ನಮ್ಮವರನ್ನು ಸೋಂಕಿನಿಂದ ಕಾಪಾಡಿಕೊಳ್ಳುವುದು ಸಾಧ್ಯ.
ಐಸೋಲೇಷನ್
ಒಂದೊಮ್ಮೆ ಆರೋಗ್ಯ ತಪಾಸಣೆಯ ವೇಳೆ ನಾವು ಕೊರೋನಾ ಸೋಂಕಿತರಾಗಿರುವುದು ತಿಳಿದು ಬಂದಲ್ಲಿ ಅದನ್ನು ಕಡೆಗಣಿಸುವುದಲ್ಲ. ಬದಲಾಗಿ ಸ್ವ ಇಚ್ಛೆಯಿಂದ ಐಸೋಲೇಷನ್ ಪ್ರಕ್ರಿಯೆಗೆ ಒಳಗಾಗಬೇಕು. ಇದರಿಂದ ಪೂರಕ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಜೊತೆಗೆ ವೈರಸ್ ಪ್ರಸರಣವನ್ನು ತಡೆಯುವುದೂ ಸಾಧ್ಯ. ಈ ಅಭಿಪ್ರಾಯವನ್ನು ಎಲ್ಲಾ ವೈದ್ಯರೂ ಸಹ ತಿಳಿಸುತ್ತಾರೆ.
ಕೊರೋನಾ ಇರುವುದು ತಿಳಿದೂ ನಾವು ಸ್ವಯಂಪ್ರೇರಿತ ಐಸೋಲೇಷನ್ ಪ್ರಕ್ರಿಯೆಗೆ ಒಳಗಾಗದೆ ಮನಸೋ ಇಚ್ಛೆ ಓಡಾಡುತ್ತಿದ್ದೇವೆ ಎಂದಾದಲ್ಲಿ ಇದರಿಂದ ನಮ್ಮ ಜೀವದ ಜೊತೆಗೆ ಇತರರ ಜೀವ, ಜೀವನವನ್ನೂ ಅಪಾಯಕ್ಕೆ ತಳ್ಳಿದಂತಾಗುತ್ತದೆ. ಆದ್ದರಿಂದ ಎಚ್ಚರಿಕೆ ಅಗತ್ಯ. ಹಾಗೂ ರೋಗಕ್ಕೆ ತುತ್ತಾಗಿದ್ದಲ್ಲಿ ಐಸೋಲೇಷನ್ಗೆ ಒಳಪಡುವ ಮೂಲಕ ನಮ್ಮ ಜೊತೆಗೆ ನಮ್ಮವರನ್ನು ರಕ್ಷಿಸುವ ನಿಟ್ಟಿನಲ್ಲಿ ಯೋಚಿಸೋಣ.
ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕೊರೋನಾ ವ್ಯಾಪಿಸುವ ವೇಗವೂ ಹೆಚ್ಚಾಗಿರುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ರಕ್ಷಣೆಯ ಮಾರ್ಗಗಳನ್ನು ಸ್ವಯಂ ಅನುಸರಿಸಿಕೊಂಡು ಕೊರೋನಾದ ಜೊತೆಗೆಯೇ ಬದುಕುವುದನ್ನು ಕಲಿತಲ್ಲಿ ಮಾತ್ರ ನಮ್ಮ ಉಳಿವು ಸಾಧ್ಯ. ಅಲ್ಲದೆ ಬೇಜವಾಬ್ದಾರಿ ವರ್ತನೆಗಳನ್ನು ತೋರಿದೆವೆಂದಾದಲ್ಲಿ ಮುಂದೊಮ್ಮೆ ಅದರ ಪರಿಣಾಮಕ್ಕೆ ತುತ್ತಾಗಿ ಕಷ್ಟ ಪಡುವವರೂ ನಾವೇ ಆಗಿರುತ್ತೇವೆ. ಆದ್ದರಿಂದ ಮುಂದಾಲೋಚನೆ ಮತ್ತು ಮುನ್ನೆಚ್ಚರಿಕೆಯ ಜೊತೆಗೆ ಹೆಜ್ಜೆ ಇಡುವುದನ್ನು ರೂಢಿಸಿಕೊಂಡಾಗ ಮಾತ್ರ ಬದುಕು ಸ್ವಸ್ಥವಾಗುವ ಮೂಲಕ, ದೇಶ ಆರೋಗ್ಯಪೂರ್ಣವಾಗುವುದು ಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.