ನವದೆಹಲಿ: ಕೊರೋನಾ ಸೋಂಕು ಆರಂಭವಾದಂದಿನಿಂದ ಐಐಟಿಯು ಒಂದಿಲ್ಲೊಂದು ಕೊರೋನಾ ನಿರ್ವಹಣೆಗೆ ಪೂರಕವಾದ ಹೊಸ ತಂತ್ರಜ್ಞಾನಗಳನ್ನು ಸಂಶೋಧನೆ ಮಾಡುತ್ತಲೇ ಇದೆ. ಸದ್ಯ ಐಐಟಿ ಮಂಡಿಯ ಎರಡು ತಂಡಗಳು ಕಡಿಮೆ ಬೆಲೆಯ, ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಪೋರ್ಟೆಬಲ್ ವೆಂಟಿಲೇಟರ್ಗಳನ್ನು ತಯಾರಿಸಿ ಮತ್ತೆ ಸುದ್ದಿಯಾಗಿದೆ.
ಡಾ. ಅರ್ಪಣ್ ಗುಪ್ತಾ ತಂಡದ ವೆಂಟಿಲೇಟರ್
ಐಐಟಿ ಮಂಡಿಯ ಸ್ಕೂಲ್ ಆಫ್ ಎಂಜಿನಿಯರಿಂಗ್ ನ ಸಹಾಯಕ ಪ್ರಾಧ್ಯಾಪಕ ಡಾ. ಅರ್ಪಣ್ ಗುಪ್ತ, ಸಂಶೋಧನಾರ್ಥಿಗಳಾದ ಲೋಕೇಂದ್ರ ಸಿಂಗ್ ಮತ್ತು ಸೌರಭ್ ದೋಗ್ರಾ ಅವರು ಕಡಿಮೆ ಬೆಲೆಯ ಪೋರ್ಟೆಬಲ್ ವೆಂಟಿಲೇಟರ್ ಒಂದನ್ನು ಸಿದ್ಧಪಡಿಸಿದ್ದಾರೆ.
ಇದರ ಮೌಲ್ಯ ಕೇವಲ 4000 ರೂ. ಗಳಾಗಿದ್ದು, ಆರ್ಟಿಫಿಷಿಯಲ್ ಮ್ಯಾನ್ವಲ್ ಬ್ರೀದಿಂಗ್ ಯುನಿಟ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಲ್ಲಿ ರೋಗಿಯ ಶ್ವಾಸಕೋಶಕ್ಕೆ ಸರಬರಾಜಾಗುವ ಗಾಳಿಯ ಪ್ರಮಾಣವನ್ನು ನಿಯಂತ್ರಿಸುವ ಆಯ್ಕೆಗಳನ್ನೂ ನೀಡಲಾಗಿದ್ದು ,ಇದು ರೋಗಿಗೆ ಅಗತ್ಯವಿರುವ ಪ್ರಮಾಣದಲ್ಲಿ ಆಕ್ಸಿಜನ್ ಅನ್ನು ಒದಗಿಸುವ ಕೆಲಸವನ್ನು ಮಾಡುವುದಾಗಿಯೂ ಸಂಶೋಧಕರು ತಿಳಿಸಿದ್ದಾರೆ. ಇದನ್ನು ತುರ್ತು ಸಂದರ್ಭದಲ್ಲಿ ದೂರದ ಸ್ಥಳಗಳಿಗೆ ಒಯ್ಯಲು ಸಾಧ್ಯವಾಗುವಂತೆ ರಚಿಸಲಾಗಿದೆ.
ಇದನ್ನು ಕೈಯಿಂದ ಮಾತ್ರವಲ್ಲದೆ, ವೈಫೈ ಮೂಲಕವೂ ನಿಯಂತ್ರಿಸುವಂತೆ ಸಿದ್ಧ ಮಾಡಲಾಗಿದೆ. ಇದರ ಬಳಕೆಗಾಗಿ ಐಐಟಿ ಮಂಡಿ ವೆಂಟಿಲೇಟರ್ ಎಂಬ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಒಂದನ್ನು ಸಿದ್ಧಮಾಡಲಾಗಿದ್ದು, ಈ ಆ್ಯಪ್ ಮೂಲಕವೂ ಇದನ್ನು ವೈಫೈ ಬಳಕೆ ಮಾಡುವ ಮೂಲಕವೇ ಸುಲಭವಾಗಿ ನಿಯಂತ್ರಿಸುವುದು ಸಾಧ್ಯ ಎಂಬುದಾಗಿಯೂ ಸಂಶೋಧಕರು ತಿಳಿಸಿದ್ದಾರೆ. ಇದನ್ನು ಬಳಸಿಕೊಂಡಂತೆ ವೆಂಟಿಲೇಟರ್ ಅನ್ನು ಕಾರ್ಯಾರಂಭ ಮಾಡಬಹುದು. ನಿಲ್ಲಿಸಬಹುದು. ಉಸಿರಾಟದ ಗತಿಯ ಮೇಲೆಯೂ ನಿಗಾ ವಹಿಸುವಲ್ಲಿ ಸಹಕಾರಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಾ. ಅರ್ಪಣ್ ಗುಪ್ತಾ, ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಈ ವೆಂಟಿಲೇಟರ್ ಹೆಚ್ಚು ಸಹಾಯ ಮಾಡುತ್ತದೆ. ಇದನ್ನು ವೈಫೈ ಮೂಲಕವೂ ಬಳಕೆ ಮಾಡುವುದು ಸಾಧ್ಯವಿರುವುದರಿಂದ ವೈದ್ಯಕೀಯ ಸಿಬ್ಬಂದಿ ಸೋಂಕಿತರ ಸಂಪರ್ಕಕ್ಕೆ ಬರದೆಯೇ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ. ಜೊತೆಗೆ ವೈದ್ಯಕೀಯ ಸಿಬ್ಬಂದಿಗಳಿಗೆ ತಮ್ಮನ್ನು ತಾವು ಕೋವಿಡ್-19 ನಿಂದ ರಕ್ಷಿಸಿಕೊಳ್ಳುವುದಕ್ಕೆ ಪೂರಕವಾಗಿ ಇದು ಕಾರ್ಯ ನಿರ್ವಹಿಸುತ್ತದೆ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಐಐಟಿ ಮಂಡಿಯ ವೈದ್ಯಕೀಯ ಅಧಿಕಾರಿಗಳಾದ ಡಾ. ಚಂದರ್ ಸಿಂಗ್, ಡಾ. ಮಂಜುಳ್ ಶರ್ಮಾ ಮತ್ತು ಡಾ. ಜಸ್ದೀಪ್ ಅವರೊಂದಿಗೆ ಸಮಾಲೋಚನೆ ನಡೆಸಿ ಅವರ ಮಾರ್ಗದರ್ಶನದಂತೆ ಈ ವೆಂಟಿಲೇಟರ್ ಅನ್ನು ನಿರ್ಮಿಸಿದ್ದಾಗಿಯೂ ಅವರು ತಿಳಿಸಿದ್ದಾರೆ. ಅಲ್ಲದೆ ಅಪಾಯದ ಸಂದರ್ಭದಲ್ಲಿ ಬಳಕೆ ಮಾಡಲು ಮೊಬೈಲ್ ಆಪ್ ನಲ್ಲಿ ತುರ್ತು ಸ್ವಿಚ್ ಅನ್ನು ಸಹ ಅಳವಡಿಸಲಾಗಿದ್ದು, ಅಸಮರ್ಪಕ ಪ್ರಕ್ರಿಯೆಗಳು ನಡೆದಲ್ಲಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳುವಲ್ಲಿಯೂ ಇದು ಪೂರಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.
ಡಾ. ರಾಜೀವ್ ಅವರ ಸಂಶೋಧನಾ ತಂಡದ ವೆಂಟಿಲೇಟರ್
ಇನ್ನು ಐಐಟಿ ಮಂಡಿಯ ಇನ್ನೊಂದು ತಂಡ ಕಡಿಮೆ ಬೆಲೆಯ ಯಾಂತ್ರಿಕ ವೆಂಟಿಲೇಟರ್ ಒಂದನ್ನು ಅಭಿವೃದ್ಧಿ ಮಾಡಿದೆ. ಸ್ಕೂಲ್ ಆಫ್ ಎಂಜಿನಿಯರಿಂಗ್ನ ಸಹಾಯಕ ಪ್ರಾಧ್ಯಾಪಕ ಡಾ. ರಾಜೀವ್ ಮತ್ತವರ ತಂಡ ಈ ವೆಂಟಿಲೇಟರ್ ಅನ್ನು ಸಿದ್ಧಪಡಿಸಿದ್ದು, ವಿದ್ಯುತ್ ಮೋಟಾರ್ನ ಸಹಾಯದಿಂದ ಇದು ನಿಯಂತ್ರಿಸಲ್ಪಡುತ್ತದೆ. ಸುಮಾರು 2,500 ಅಡಿಗಳಷ್ಟು ದೂರದಿಂದಲೂ ಇದನ್ನು ನಿಯಂತ್ರಿಸುವುದು ಸಾಧ್ಯವಾಗಿದೆ.
ಈ ಮೋಟಾರ್ ಚಾಲಿತ ಎಲೆಕ್ಟ್ರಿಕ್ ವೆಂಟಿಲೇಟರ್ನಲ್ಲಿ ಆರ್ಟಿಫಿಷಿಯಲ್ ಮ್ಯಾನ್ವಲ್ ಬ್ರೀದಿಂಗ್ ಯುನಿಟ್ ಅನ್ನು ಬಳಕೆ ಮಾಡಲಾಗಿದೆ. ಸ್ವಯಂಚಾಲಿತ ಗಾಳಿ ಚೀಲಗಳನ್ನೂ ಈ ವೆಂಟಿಲೇಟರ್ಗಳಿಗೆ ಅಳವಡಿಸಲಾಗಿದ್ದು, ಇದು ಒಂದು ರಾಕ್ ಮತ್ತು ಪಿನಿಯನ್ ಮೆಕ್ಯಾನಿಸಂ ಸಿಸ್ಟಂ ಅನ್ನು ಬಳಸಿಕೊಂಡು ರೋಗಿಗೆ ಉಸಿರಾಟದ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಈ ವೆಂಟಿಲೇಟರ್ ಬಗ್ಗೆ ಮಾಹಿತಿ ನೀಡಿರುವ ಸಂಶೋಧಕ ಡಾ. ರಾಜೀವ್, ಕೊರೋನ ಸಂದರ್ಭದಲ್ಲಿ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಕಡಿಮೆ ವೆಚ್ಚದ, ಹೆಚ್ಚು ಸಾಮರ್ಥ್ಯ ಹೊಂದಿರುವ ವೆಂಟಿಲೇಟರ್ ಅನ್ನು ತಯಾರಿಸಿರುವುದಾಗಿ ತಿಳಿಸಿದ್ದಾರೆ.
ಈ ವೆಂಟಿಲೇಟರ್ ಪೋರ್ಟೇಬಲ್ ಆಗಿದ್ದು, ರೋಗಿಯ ಉಸಿರಾಟದ ಪ್ರಮಾಣವನ್ನು ಸಹ ದಾಖಲಿಸಿಕೊಳ್ಳುತ್ತದೆ. ಒತ್ತಡ ನಿರ್ವಹಣೆಯ ಸೆಟ್ಟಿಂಗ್ಗಳು, ಅಲರಾಂ ವ್ಯವಸ್ಥೆಯನ್ನೂ ಈ ವೆಂಟಿಲೇಟರ್ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.