ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಒಂದು ವರ್ಷದವರೆಗೆ ಪ್ರತಿ ತಿಂಗಳು ಪಿಎಂ ಕೇರ್ಸ್ ನಿಧಿಗೆ ರೂ. 50,000 ನೀಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈಗಾಗಲೇ ರಾವತ್ ಅವರು ಏಪ್ರಿಲ್ ತಿಂಗಳಿನಿಂದ ಕೊಡುಗೆಯನ್ನು ನೀಡಲು ಆರಂಭಿಸಿದ್ದಾರೆ. ಮುಂದಿನ ವರ್ಷದ ಮಾರ್ಚ್ವರೆಗೆ ಇದನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.
“ಇದು ಅವರ ತಿಂಗಳ ವೇತನದ ಶೇ. 20 ರಷ್ಟು ಭಾಗ ಆಗಿದೆ. ಒಂದು ವರ್ಷದವರೆಗೆ ಅವರು ಒಟ್ಟು 6 ಲಕ್ಷ ರೂಪಾಯಿಗಳನ್ನು ಪಿಎಂ ಕೇರ್ಸ್ ನಿಧಿಗೆ ಕೊಡುಗೆಯಾಗಿ ನೀಡಲಿದ್ದಾರೆ” ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ರಾವತ್ ಅವರು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದಾರೆ. ಈ ಮೊದಲು ಮಾರ್ಚ್ ತಿಂಗಳಲ್ಲಿ ಅವರು ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ (ಪಿಎಂ ಕೇರ್ಸ್) ನಿಧಿಗೆ ತಮ್ಮ ಒಂದು ದಿನದ ವೇತನವನ್ನು ನೀಡಿದ್ದರು. ರಕ್ಷಣಾ ಸಚಿವಾಲಯದ ಮತ್ತು ಮೂರು ಸೇನಾ ಪಡೆಗಳ ಸಮಗ್ರ ನಿರ್ಧಾರದ ಭಾಗವಾಗಿ ಅವರು ಈ ಕೊಡುಗೆಯನ್ನು ನೀಡಿದ್ದರು.
ಮಾರ್ಚ್ ತಿಂಗಳಲ್ಲಿ ಕೊರೋನಾವೈರಸ್ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು.
ಹಲವು ರಾಜಕೀಯ ನಾಯಕರುಗಳು, ಕಾರ್ಪೊರೇಟ್ಗಳು, ರಕ್ಷಣಾ ಸಿಬ್ಬಂದಿಗಳು, ರೈಲ್ವೆ ಉದ್ಯೋಗಿಗಳು ಮತ್ತು ಪಿಸಿಯು ಗಳು ಮತ್ತು ಚಲನಚಿತ್ರ ರಂಗದ ಗಣ್ಯರು ನಿಧಿಗೆ ತಮ್ಮ ಕೈಲಾದಷ್ಟು ಕೊಡುಗೆಯನ್ನು ನೀಡಿದ್ದಾರೆ. ಜನಸಾಮಾನ್ಯರು ಕೂಡ ಕೊಡುಗೆಯನ್ನು ನೀಡುತ್ತಿದ್ದಾರೆ.
ಈಗಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 1.5 ಮಿಲಿಯನ್ ಬಲಿಷ್ಠ ಸೇನಾ ಪಡೆಯ ಸಿಬ್ಬಂದಿಗಳು 11 ತಿಂಗಳುಗಳ ಕಾಲ ಒಂದು ದಿನದ ವೇತನವನ್ನು ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಪಿಎಂ ಕೇರ್ಸ್ಗೆ ಸ್ವಯಂ ಕೊಡುಗೆ ನೀಡಲಿದ್ದಾರೆ ಎಂದು ಘೋಷಣೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.