ವೈಯಕ್ತಿಕ ಸುರಕ್ಷಾ ಕವಚ ಮತ್ತು ಮಾಸ್ಕ ಧರಿಸಿ, ಕೈಕಾಲು ಸಂಪುರ್ಣವಾಗಿ ಮುಚ್ಚುವ ಗ್ಲವ್ಸ್ ಹಾಗೂ ಶೂ ಗಳನ್ನು ಹಾಕಿಕೊಂಡು ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರೊಂದಿಗೆ ಸೇರಿ ಕೊರೋನಾ ಪೀಡಿತ ಕೆಂಪು ವಲಯದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅಲ್ಲಿ ಕೊರೋನಾ ‘ಪಾಸಿಟಿವ್’ ಜನರಿಗಾಗಿ ತಪಾಸಣೆ ಮಾಡುವ ಕಾರ್ಯವನ್ನು ಸಂಘದ ಸ್ವಯಂಸೇವಕರು ಕೂಡ ಮಾಡಬಹುದು ಎಂದು ಈ ಮುಂಚೆ ಎಂದಾದರೂ ಕಲ್ಪನೆ ಮಾಡಿಕೊಂಡಿದ್ದೇವಾ? ಹೌದು ಕಳೆದ 21 ದಿನಗಳಿಂದ ಸಂಘದ ಸ್ವಯಂಸೇವಕರು ಪುಣೆ ಮಹಾನಗರದ ಸೇವಾಬಸ್ತಿ (ಸ್ಲಂ)ಗಳಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ಮಾನವ ಸಮಾಜದ ಸೇವೆಯೇ ಉದ್ದೇಶವಾಗಿದ್ದರೂ ಕೂಡ ಇದು ಒಂದು ರೀತಿಯಲ್ಲಿ ನವಯುಗದ ಸ್ವಯಂಸೇವಕತ್ವ.
ಮಾರ್ಚ್ 22 ರ ಜನತಾ ಕರ್ಫ್ಯೂ ನಂತರ ತತ್ಕ್ಷಣ ಸಂಘದ ಸೇವಾ ಕಾರ್ಯಗಳು ಪ್ರಾರಂಭವಾದವು. ಸಂಘದ ಪುಣೆ ಮಹಾನಗರದ ತಂಡ ಹಿರಿಯರೊಂದಿಗೆ ಸಮಾಲೋಚಿಸಿ “ಆಪದಾ ಮದತ್ ಕೇಂದ್ರ” ಹೆಸರಿನಲ್ಲಿ 250 ಹೆಚ್ಚು ಸಹಾಯ ಕೇಂದ್ರಗಳನ್ನು ಪುಣೆ ನಗರದಾದ್ಯಂತ ತೆರೆಯಲಾಯಿತು. ಈ ಕಾರ್ಯದಲ್ಲಿ ಸುಮಾರು 650 ಸ್ವಯಂಸೇವಕರು ಜೋಡಣೆಗೊಂಡರು. ಈ ತಂಡದ ಮುಖ್ಯ ಕಾರ್ಯ ಪಡಿತರ ಮತ್ತು ಔಷಧಿ ವಿತರಣೆ. ಮುಖ್ಯವಾಗಿ ನಗರದ ಸೇವಾಬಸ್ತಿಗಳಲ್ಲಿ ಹಾಗೂ ಅವಶ್ಯ ಇತರ ಭಾಗಗಳನ್ನು ಕೇಂದ್ರೀಕರಿಸಿ ತನ್ನ ಕಾರ್ಯ ಪ್ರಾರಂಭಿಸಿತು.
ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಸ್ವಯಂಸೇವಾ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳು ನಡೆಸಿದ ಸಮೀಕ್ಷೆಯನ್ನು ಆಧರಿಸಿ ಪರಿವಾರಗಳನ್ನು ಗುರುತಿಸಿ, ಅದರಲ್ಲೂ ವಿಶೇಷವಾಗಿ, ದಿನಕೂಲಿಗಳು, ದಿವ್ಯಾಂಗರು, ವೃದ್ಧರು, ಬೇರೆ ಕಡೆಯಿಂದ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರ ಕಾರ್ಯ ನಡೆಸಲಾಯಿತು.
ಸೇವಾ ಕಾರ್ಯದಲ್ಲಿ ತೊಡಗಲು ಆಸಕ್ತ 20-50 ಮಧ್ಯದ ವಯಸ್ಸಿನ ಸ್ವಯಂಸೇವಕರು ಮೊದಲು “ಆಪದಾ ಮದತ್ ಕೇಂದ್ರ” ಗಳಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳಬೇಕು. ಅವರು ದೈಹಿಕವಾಗಿ ಸಮರ್ಥರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಮಾಸ್ಕ್ ಧರಿಸಿ ಕಾರ್ಯ ಮಾಡಲು ಸಿದ್ಧರಿರುವವರನ್ನು ಅಲ್ಲಿನ ವೈದ್ಯರ ಮೌಖಿಕ ಸಂದರ್ಶನ ಹಾಗೂ ಪ್ರಶ್ನಾವಳಿಗೆ ಉತ್ತರಿಸಿದ ನಂತರವೇ ಅವರನ್ನು ಈ ಕಾರ್ಯಕ್ಕೆ ಜೋಡಿಸಲಾಗುತ್ತಿತ್ತು. ಇದು ಸಾಮಾಜಿಕ ಸೇವಾ ಕಾರ್ಯದಲ್ಲಿ ಒಂದು ಹೊಸ ಆಯಾಮದ ಜೋಡಣೆ ಮಾಡಿದಂತಾಯಿತು ಎಂದೇ ಹೇಳಬಹುದು. ಈ ಕಾರಣದಿಂದಾಗಿ ಎಲ್ಲ ಕಡೆಯೂ ಶಿಸ್ತಿನಿಂದ ಕೂಡಿದ ತರಬೇತಿ ಪಡೆದ, ಸರ್ವ ರೀತಿಯಲ್ಲೂ ಸನ್ನದ್ಧನಾದ, ಸುರಕ್ಷಿತ ಸ್ವಯಂಸೇವಕರ ದೊಡ್ಡ ಪಡೆಯೇ ಮೈದಾನಕ್ಕಿಳಿದು ಕಾರ್ಯ ಮಾಡತೊಡಗಿತು.
ಅನೇಕ ವ್ಯಕ್ತಿಗಳು, ಸಂಸ್ಥೆಗಳು, ಇಸ್ಕಾನ್, ಐಆರ್ಸಿಟಿಸಿ, ರೆಡ್ ಕ್ರಾಸ್ ಮುಂತಾದ ಸೇವಾ ಸಂಸ್ಥೆಗಳು ಜೊತೆಯಲ್ಲಿ ಪಿಪಿಸಿಆರ್ ನಂತರ ಔದ್ಯಮಿಕ ಸಂಘಟನೆಗಳು ಕೂಡ ತಮ್ಮ ಸಂಪನ್ಮೂಲ, ಕೌಶಲ್ಯ ಹಾಗೂ ಅನುಭವ ಹಂಚಿಕೊಳ್ಳುವ ಮೂಲಕ ಇದೊಂದು “ಕೊರೋನಾ ವಿರುದ್ಧ ಪುಣೇಕರರ ಹೋರಾಟ”ದ ರೂಪ ಪಡೆದುಕೊಂಡಿತು.
ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ, ಕಾರ್ಪೋರೇಟ್ ವಲಯದ ನೇತೃತ್ವಗಳೊಂದಿಗೆ ಸತತ ಸಂವಾದ, ಎಲ್ಲ ಸಂಬಂಧಪಟ್ಟವರಲ್ಲಿ ಏಕ ರೂಪದ ಮಾಹಿತಿ, ತಿಳುವಳಿಕೆಗೆ ಹಾಗೂ ಸನ್ನದ್ಧತೆ ರೂಪಿಸುವಲ್ಲಿ ಸಹಾಯಕವಾಯಿತು.
ನಿಯಂತ್ರಣ, ವೈದ್ಯಕೀಯ ಸೌಲಭ್ಯ ಮತ್ತು ಸಾಮರ್ಥ್ಯ ವಿಸ್ತರಣೆ, ಸ್ಕ್ರೀನಿಂಗ್, ಪರೀಕ್ಷೆ ಮತ್ತು ಸಕಾರಾತ್ಮಕತೆ ಕರೋನಾ ವಿರುದ್ಧದ ಈ ಯುದ್ಧದಲ್ಲಿ ಐದು ಪ್ರಮುಖ ಆಯಾಮಗಳಾದವು. ಈ ಐದು ತಂಡಗಳು ಪ್ರತಿದಿನ ರಾತ್ರಿ 10 ರಿಂದ 11.30 ರ ನಡುವೆ ಮಾಹಿತಿ ಹಂಚಿಕೆ, ಚರ್ಚೆಗಳು, ಕಾರ್ಯತಂತ್ರ ಮತ್ತು ನಿರ್ಧಾರಗಳಿಗಾಗಿ ಮಹಾನಗರ ಆಪಾದಾ ಮದತ್ ಕೇಂದ್ರದ ಆನ್ಲೈನ್ ಸಭೆ ಸೇರುತ್ತಾರೆ. ಇದು ಈ ಅಭಿಯಾನವನ್ನು ಇಲ್ಲಿಯವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಮುನ್ನಡೆಯಲು ಅತ್ಯಂತ ಉಪಯುಕ್ತವಾಗಿದೆ. ಲಭ್ಯ ಉಚಿತ ಸೌಲಭ್ಯ ಹಾಗೂ ಕೆಲ ಬಾರಿ ಹಣ ಪಾವತಿ ಮಾಡಿ ಆಡಿಯೋ- ವಿಡಿಯೋ ಸಭೆಗಳನ್ನು ನಡೆಸಲಾಗುತ್ತಿದೆ. ಇಂತಹ ಸಾವಿರಾರು “ಇ- ಸಭೆ” ಗಳು ಈಗಾಗಲೇ ನಡೆದಿವೆ.
ಮಾರ್ಚ್ 25 ರಿಂದ ಪ್ರಾರಂಭವಾಗಿ ಮೇ 16 ರವರೆಗೆ ಸುಮಾರು 40098 ಕುಟುಂಬಗಳಿಗೆ ಪಡಿತರ ಕಿಟ್ ಅನ್ನು ಒದಗಿಸಲಾಗಿದೆ. ಇದು 5 ಜನರ ಕುಟುಂಬಕ್ಕೆ ಸುಮಾರು 3 ವಾರಗಳಿಗೆ ಸಾಕಾಗುವಷ್ಟು ಪಡಿತರವನ್ನು ಹೊಂದಿರುತ್ತದೆ. ಅದೇ ರೀತಿಯಲ್ಲಿ 978626 ಆಹಾರ ಪೊಟ್ಟಣಗಳನ್ನು ಕೂಡ ವಿತರಿಸಲಾಗಿದೆ. ಒಟ್ಟು 228870 ಜನರಿಗೆ ಸೇವೆ ತಲುಪಿಸಲಾಗಿದೆ.
ಜನಕಲ್ಯಾಣ ರಕ್ತ ನಿಧಿಯ ಸದೃಢ ವ್ಯವಸ್ಥೆ ಹಾಗೂ ಕರ್ಮಠ ಸಿಬ್ಬಂದಿಗಳ ಸಹಯೋಗದಿಂದ ರಕ್ತದಾನದ ಅಭಿಯಾನ ಕೈಗೊಳ್ಳಲಾಯಿತು. ಇದರಿಂದಾಗಿ ಸುಮಾರು 2194 ಬ್ಲಡ್ ಬ್ಯಾಗ್ ಸಂಗ್ರಹವಾಯಿತು.
ಟೀಂ “ಹೆಚ್” ನಿಂದ ಸ್ಕ್ರೀನಿಂಗ್ ಯೋಜನೆ ಎರಡನೇ ಲಾಕ್ಡೌನ್ ಸಂದರ್ಭದಲ್ಲಿ ಪುಣೆಯ ಜನನಿಬಿಡ ಕೊಳೆಗೇರಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕಠಿಣವಾಗತೊಡಗಿತು. ಕೊರೋನಾ ತನ್ನ ಕರಾಳಬಾಹುಗಳನ್ನು ವಿಸ್ತರಿಸತೊಡಗಿತ್ತು. ಹೆಚ್ಚೆಚ್ಚು ಜನರು ಸಂಕ್ರಮಿತರಾದರು, ಹೆಚ್ಚೆಚ್ಚು ಜನರು ಆಸ್ಪತ್ರೆಗೆ ದಾಖಲಾಗತೊಡಗಿದರು, ಕೆಲವು ದುರಾದೃಷ್ಟಕರ ಸಾವುಗಳು ಸಂಭವಿಸಿದವು. ಇದು ಮುಂಬರುವ ಕಠಿಣ ಸವಾಲಿನ ಸಂಕೇತವಾಗಿತ್ತು.
ಕೆಂಪು ವಲಯಗಳನ್ನು ಹೊಂದಿರುವ ಇತರ ಯಾವುದೇ ನಗರಗಳು ಮತ್ತು ಪಟ್ಟಣಗಳಂತೆ ಪುಣೆಯ ಜನತೆ ಕೂಡ ಭಯ ಹಾಗೂ ನಕಾರಾತ್ಮಕತೆಗೆ ಒಳಗಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೆಲ ಯುವಕರು ಮತ್ತು ವೃತ್ತಿಪರರು ಭಯ ತೊರೆದು ಧೈರ್ಯಶಾಲಿಗಳಂತೆ ಈ ಯುದ್ಧವನ್ನು ಮುನ್ನಡೆಸುವ ಅವಶ್ಯಕತೆ ಕಾಣಸುತ್ತಿತ್ತು. ಈ ಕಾರಣಕ್ಕಾಗಿಯೇ ಸ್ವಯಂಸೇವಕರಿಗೆ ಕರೆ ನೀಡಲಾಗಿ, ಅದು ಹೆಚ್ಚಿನ ಅಪಾಯದ ಪ್ರದೇಶಲ್ಲಿ, ಹೆಚ್ಚಿನ ದೈಹಿಕ ಮತ್ತು ಮಾನಸಿಕ ಶಕ್ತಿ ಮತ್ತು ಹೆಚ್ಚಿನ ಮಟ್ಟದ ಪ್ರೇರಣೆ ಬಯಸುವ ‘ಟೀಮ್ ಎಚ್’ ರಚನೆಗೆ ಕಾರಣವಾಯಿತು.
ಆರೋಗ್ಯ ಸೇವಾ ಅಭಿಯಾನ ಎಂಬ ವಿಶೇಷ ತಪಾಸಣಾ ಕಾರ್ಯಕ್ರಮವನ್ನು ಪುಣೆ ಮಹಾನಗರ ಪಾಲಿಕೆ, ವಿವಿಧ ಸ್ವಯಂಸೇವಾ ಸಂಸ್ಥೆಗಳು, ವೈದ್ಯಕೀಯ ಸಂಘ ಮುಂತಾದವರ ಸಹಯೋಗದಲ್ಲಿ ನಿರೂಪಿಸಲಾಯಿತು.
ಎರಡು ಅಥವಾ ಮೂರು ವೈದ್ಯರು, 4-5 ಸ್ವಯಂಸೇವಕರು ( 20-40 ವಯಸ್ಸಿನ ಒಳಗಿನವರು), ಒಬ್ಬರು ಅಥವಾ ಇಬ್ಬರು ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಈ ತಪಾಸಣಾ ತಂಡ ಅಥವಾ ಸ್ಕ್ರೀನಿಂಗ್ ತಂಡದಲ್ಲಿರುತ್ತಿದ್ದರು.
ಮಂಗಳವಾರ ಪೇಟೆಯ ಸದಾನಂದ ನಗರದಲ್ಲಿ ಈ ಪ್ರಯೋಗ ಮಾಡಲಾಗಿ, ಎರಡು ದಿನಗಳಲ್ಲಿ 100 ಜನರನ್ನು ತಪಾಸನೆಗೆ ಒಳಪಡಿಸಲಾಯಿತು. ಇದು ಜನರಲ್ಲಿನ ಭಯ ಹೊಡೆದೋಡಿಸಿ, ಧೈರ್ಯ ತುಂಬುವಂತಾಯಿತು.
ಈ ಸಫಲ ಪ್ರಯೋಗ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಬರುತ್ತಿದ್ದಂತೆಯೇ ಹೆಚ್ಚೆಚ್ಚು ಸ್ವಯಂಸೇವಕರು, ವೈದ್ಯರು, ಯುವಕರು ಸೇರಿದಂತೆ ವಿವಿಧ ವ್ಯವಸಾಯಗಳಿಗೆ ಸೇರಿದ ಸಾವಿರಾರು ಜನರು ಸೇವೆಗೈಯಲು ಮುಂದೆ ಬಂದರು.
ಈ ಅಭಿಯಾನದಲ್ಲಿ 22093 ಮನೆಗಳನ್ನು ಸಂಪರ್ಕಿಸಲಾಯಿತು. 98515 ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. 1840 ಜನರಿಗೆ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅದರ ಮಾಹಿತಿಯನ್ನು ಮಹಾನಗರ ಪಾಲಿಕೆಗೆ ನೀಡಲಾಯಿತು. ಒಟ್ಟು 973 ತರಬೇತಿ ಪಡೆದ ಸ್ವಯಂಸೇವಕರು, 352 ವೈದ್ಯರು, 218 ಪಾಲಿಕೆ ಸಿಬ್ಬಂದಿಗಳು ಹಾಗೂ 153 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಈ ಎಲ್ಲ ಸ್ವಯಂಸೇವಕರು ವಿಮೆ ರಕ್ಷಣೆಗೆ ಒಳಪಟ್ಟಿದ್ದು, ಸುರಕ್ಷಾ ಕವಚಗಳನ್ನು ಹಾಗೂ ಇತರ ಅವಶ್ಯಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇವರೆಲ್ಲರನ್ನು 8 ದಿನಗಳ ಕಾಲ ಕ್ವಾರಂಟೈನ್ ವ್ಯವಸ್ಥೆಯಲ್ಲಿ ಇಟ್ಟು, ನಂತರ ಎಲ್ಲ ರೀತಿಯ ವೈದ್ಯಕೀಯ ತಪಾಸಣೆ ನಂತರ ಮನೆಗೆ ಕಳುಹಿಸಿ ಕೊಡಲಾಯಿತು.
ಸ್ವಂತದ ಬಗ್ಗೆ ಚಿಂತಿಸದೇ, ಯುದ್ಧ ಕ್ಷೇತ್ರದಲ್ಲಿ ಧುಮುಕಿ, ಮುಂದಾಳತ್ವವಹಿಸಿ ಕೊರೋನಾದ ವಿರುದ್ಧ ಹೋರಾಟ ನಡೆಸಿದ ಈ ಎಲ್ಲ ಸ್ವಯಂಸೇವಕರು ತಮ್ಮ ಮನೆಗಳಿಗೆ ತೆರೆಳಿದಾಗ ಹೂಮಳೆ, ಆರತಿ, ಭಾರತ ಮಾತಾ ಕೀ ಜಯ್ ಘೋಷಣೆಗಳ ಮೂಲಕ ಸಮರವೀರರಂತೆ ಅವರನ್ನು ಸ್ವಾಗತಿಸಲಾಯಿತು.
ಮೂಲ ಬರಹ – ರವೀಂದ್ರ ವಂಜಾರವಾಡಕರ್
ಪುಣೆ ಮಹಾನಗರ ಸಂಘಚಾಲಕ್ , ಆರೆಸ್ಸೆಸ್
ಹಾಗೂ ಮಾಜಿ ಡೆಪ್ಯೂಟಿ ಕಲೆಕ್ಟರ್, ಎಂ.ಸಿ.ಎಸ್.
ಕನ್ನಡಕ್ಕೆ : ಅಮೃತ್ ಜೋಶಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.