ಇಡೀ ಬಾಗಲಕೋಟೆ ನಗರದಲ್ಲಿ ಶಾಂತಿನಗರ, ಎಕ್ಸ್ಟೆನ್ಷನ್ ಏರಿಯಾ ಅಂದ್ರೆ ಒಂದು ಸಹಜ ಮಾತು ಬರುತ್ತೆ. ಅದೇನೆಂದರೆ ಈ ಏರಿಯಾ ಶ್ರೀಮಂತರು ವಾಸಿಸುವ ಏರಿಯಾ. ಇಲ್ಲಿ ಯಾವುದೇ ಮೂಲಭೂತ ವಸ್ತುಗಳಿಗೆ ಕೊರತೆಯಿಲ್ಲ. ಹಳೆನಗರದ ಒಂದು ತರಹದ ಸ್ವರ್ಗ ಅನ್ನುವ ಮಟ್ಟಿಗೆ ಅಲ್ಲಿಯ ವಾತಾವರಣ ಇದೆ. ಈ ವ್ಯವಸ್ಥಿತ ಏರಿಯಾದಲ್ಲಿ ಈ ಸಮಯದಲ್ಲಿ ಜನರ ಓಡಾಟ ಒಂದು ಬಿಟ್ಟರೆ ಮತ್ತೇನೂ ಸಮಸ್ಯೆಗಳು ಕಾಣಲು ಸಿಗೋಲ್ಲ.
ಹೀಗಿದ್ದಾಗ ಈ ಶಾಂತಿ ನಗರ ಉತ್ಸವ ಸಮಿಯ ಸದಸ್ಯರು ಸೇರಿ ಒಂದು ಯೋಜನೆ ಮಾಡಿದರು. ಅದೇನೆಂದರೆ ನಮ್ಮ ಏರಿಯಾ ಅಥವಾ ಅಕ್ಕಪಕ್ಕದ ಏರಿಯಾದ ಬಡ ಕೂಲಿ ಕಾರ್ಮಿಕರಿಗೆ ನಮ್ಮ ಸಮಿತಿಯಿಂದ ಸಹಾಯ ಮಾಡೋಣ ಅಂತ ನಿಶ್ಚಯಿಸಿದರು. ಏರಿಯಾ ತುಂಬಾ ಹುಡುಕಾಟದ ನಂತರ 8 ಕುಟುಂಬಗಳನ್ನು ಗುರುತಿಸಿದರು. ಅವರಿಗೆ ಅವಶ್ಯಕ ದಿನಸಿ ಸಾಮಗ್ರಿಗಳನ್ನು ತಲುಪಿಸಲು ಅಣಿಯಾಗುತ್ತಿದ್ದಾಗ ಮತ್ತೊಮ್ಮೆ ಹಿರಿಯರ ಸಲಹೆ ಮೇರೆಗೆ ಮತ್ತೊಮ್ಮೆ ಸಮೀಕ್ಷೆ ಮಾಡಿ 50 ಕುಟುಂಬಗಳನ್ನು ಗುರುತಿಸಿದರು. ಇದರ ಜೊತೆಗೆ ಅಕ್ಕಪಕ್ಕದ ಏರಿಯಾದ ಕೆಲವು ಬಡವ ಕೂಲಿ, ಮನೆಗೆಲಸದ ಕಾರ್ಮಿಕರನ್ನು ಒಟ್ಟಾಗಿಸಿ 70 ಕುಟುಂಬಗಳ ಪಟ್ಟಿಯನ್ನು ತಯಾರಿಸಿಯೇ ಬಿಟ್ಟರು. ಸಮಿತಿಯ ಸದಸ್ಯರಿಗೂ ಆ ಏರಿಯಾದಲ್ಲಿ ಅಷ್ಟು ಬಡ ಕುಟುಂಬಗಳು ವಾಸಿಸುತ್ತಿವೆ ಅನ್ನೋದೇ ಆಶ್ಚರ್ಯ ! 70 ಕುಟುಂಬಗಳ ಪಟ್ಟಿಯಲ್ಲಿ ಮನೆಗೆಲಸದವರು, ಆಟೋದವರು, ಟಂಟಂದವರು, ಅಗಸರು, ವಿಧುವೆಯರು, ನಿರ್ಗತಿಕರು, ದಿನಗೂಲಿ ಕಾರ್ಮಿಕರು ಇದ್ದರು.
ಮೊದಲನೇ ಲಾಕ್ಡೌನ್ ಸಲುವಾಗಿ ಕಂಗೆಟ್ಟಿರುವ ಬಡವರಿಗೆ ಲಾಕ್ಡೌನ್ ಇನ್ನೂ ಮುಂದುವರೆಯುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿ ಒಪ್ಪತ್ತಿನ ಊಟಕ್ಕೂ ಬೇಡಿ ತಿನ್ನುವ ಪರಿಸ್ಥಿತಿ ಎದುರಾಗುವ ಮುಂಚೆಯೇ ಸಹಾಯಕ್ಕೆ ಧಾವಿಸಿದ್ದು ಶಾಂತಿ ನಗರ ಉತ್ಸವ ಸಮಿತಿ.
ಮೊದಲಿಗೆ ಒಂದು ವಾರಕ್ಕಾಗುವಷ್ಟು ಕಿರಾಣಿ ಸಾಮಗ್ರಿಗಳನ್ನು ಕೊಟ್ಟು ಅಲ್ಲಿನ ಹಿರಿಯರು, ಬಡವರು, ಶ್ರೀಮಂತರು ಸಮಿತಿಯವರ ಮೇಲೆ ಪೂರ್ಣ ವಿಶ್ವಾಸ ಇಟ್ಟರು. ಮಕ್ಕಳು ವೃದ್ಧರು, ಹೆಣ್ಣುಮಕ್ಕಳಷ್ಟೆ ಜಾಸ್ತಿ ಇರುವ ಈ ಬಡ ಕುಟುಂಬಗಳಲ್ಲಿನವರು ಊಟಕ್ಕೆ ತೊಂದರೆ ಪಡುತ್ತಿರುವಾಗ ಮಕ್ಕಳಿಗೆ, ವೃದ್ದರಿಗೆ ಹಾಲು ಸಿಗಲು ಹರಸಾಹಸ ಪಡಬೇಕಾಯಿತು. ಅದಕ್ಕಾಗಿ ನಿರಂತರವಾಗಿ ಹಾಲು ಪೂರೈಸೋಣ ಅಂತ ಈ ಸಮಿತಿಯವರು ನಿರ್ಧರಿಸಿದರು. ಅದಕ್ಕಾಗಿ ದಾನಿಗಳನ್ನು ಮಾತಾಡಿಸಿದರು. ಯೋಜನೆಯಂತೆ ಎಲ್ಲವೂ ತಯಾರಾಯಿತು. ಆದರೆ ಸಾಮಾಜಿಕ ಅಂತರ ಕಾಪಾಡುವುದು ಹೇಗೆ ? ದಿನಾಲೂ ಹಾಲು ಹೇಗೆ ಮುಟ್ಟಿಸಬೇಕು ಅನ್ನೋದೆ ದೊಡ್ಡ ಸಮಸ್ಯೆ ಎನಿಸಿತು. ಆ ಸಮಿತಿಯಲ್ಲಿ ಸಂಘದ ಸ್ವಯಂಸೇವಕರು ಇರುವುದರಿಂದ ವ್ಯವಸ್ಥಿತವಾಗಿ ಸಾಮಾಜಿಕ ಅಂತರದ ಬಾಕ್ಸ್ಗಳನ್ನು ಹಾಕಿದರು, ಮೊದಲು ಪ್ರತಿ ಬಡ ಕುಟುಂಬಕ್ಕೂ ಒಂದು ಪಾಸ್ ಕೊಟ್ಟರೂ, ಬೆಳಿಗ್ಗೆ 7 ರಿಂದ 7-20 ರ ಒಳಗಾಗಿ ಬಂದ್ರೆ ಮಾತ್ರ ಹಾಲು ದೊರೆಯುತ್ತದೆ, ಕೈಯಲ್ಲಿ ಚೀಲ ಇರಬೇಕು ಅಂತ ಖಡಕ್ಕಾಗಿ ಹೇಳಿದರು.
ಅದರಂತೆಯೇ ಬಸವ ಜಯಂತಿಯ ದಿನದಿಂದ ಆರಂಭವಾದ ಹಾಲು ವಿತರಣೆ ನಿರಂತರವಾಗಿ ಬೆಳಿಗ್ಗೆ 7 ರಿಂದ 7.20 ರೊಳಗಾಗಿ 70 ಕುಟುಂಬಗಳಿಗೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿ ಹಾಲು ತರಲು ಬರುವವರು ಕಡ್ಡಾಯವಾಗಿ ಪಾಸ್ ತರಬೇಕು ಅಂದಿದ್ದರಿಂದ ಅನವಶ್ಯಕ ಗದ್ದಲವಿಲ್ಲದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊಟ್ಟು ಮುಗಿಸುತ್ತಿದ್ದರು. ಒಟ್ಟು 70 ಕುಟುಂಬಗಳು ಪ್ರತಿ ಕುಟುಂಬಕ್ಕೂ ಅರ್ಧ ಲೀಟರ್ ಹಾಲನ್ನು ನಿರಂತರವಾಗಿ ಮೇ 10 ರ ವರೆಗೂ 15 ದಿನಗಳ ಕಾಲ ನಿರಂತರ, ವ್ಯವಸ್ಥಿತವಾಗಿ ಸೇವೆ ಒದಗಿಸಿದರು.
ಕೊನೆಯ ದಿನ ಅಂದರೆ ದಿನಾಂಕ ಮೇ 10, 2020 ರಂದು ವ್ಯವಸ್ಥಿತ ಕಾರ್ಯ ನೋಡಿದ್ದ ಸ್ಥಳೀಯರು ಬಿಸ್ಕೇಟ್, ಗೋಧಿಹಿಟ್ಟು ಹಾಲು, ಕೊಟ್ಟು ಸಮಾರೋಪ ಕಾರ್ಯಕ್ರಮ ಮಾಡಿ ಸೇವೆಯ ಧನ್ಯತೆ ಮೆರೆದರು.
ಪ್ರೇರಣಾದಾಯಿ ಘಟನೆಗಳು
ಆ ಏರಿಯಾದಲ್ಲಿ ಒಂದು ಕುಟುಂಬ ನೋಡೋದಕ್ಕೆ ದೊಡ್ಡ ಬಿಲ್ಡಿಂಗ್ ಇದೆ ತಾಯಿ ಮಗ ಇಬ್ಬರೇ ವಾಸಿಸುತ್ತಾರೆ. ತಂದೆಯಿಲ್ಲ. ಮಗನೂ ಸಹಿತ ಮಾನಸಿಕವಾಗಿ ಸದೃಢನಿಲ್ಲ. ಅವರ ಮನೆ ನೋಡಿದವರು ಸಹಜವಾಗಿ ಇವರದು ಶ್ರೀಮಂತ ಕುಟುಂಬ ಎನಿಸುತ್ತದೆ. ಚಿಕ್ಕ ಬಟ್ಟೆ ಅಂಗಡಿ ಇದೆ ಅದನ್ನು ತಾಯಿ ನೋಡಿಕೊಳ್ಳುತ್ತಾರೆ. ಹೀಗಿರುವಾಗ ಮನೆಯಲ್ಲಿ ತುಂಬಾ ಸಮಸ್ಯೆ ಇದ್ದರೂ ಯಾರಿಗೂ ಹೇಳಿರಲಿಲ್ವಂತೆ ಆ ತಾಯಿ. ಮನೆಯ ಮುಂದಿನ ಮಾವಿನ ಮರದ ಕಾಯಿಯನ್ನು ಕಿತ್ತು 10 ರೂ.ಗೆ ಒಂದು ಕಾಯಿ ಕೊಡುತ್ತಿದ್ದರಂತೆ ಅದರಲ್ಲಿ ಬಂದ ಹಣದಿಂದಲೇ ಸ್ವಲ್ಪ ದಿನ ಮನೆ ನಡೆಸಿದರಂತೆ. ಸಮಿತಿಯವರಿಗೆ ಈ ವಿಷಯ ತಿಳಿದಾಗ ತುಂಬಾ ನೋವಿನಿಂದ ಆ ತಾಯಿಯ ಕಣ್ಣೀರು ಒರೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ತಾಯಿ ನಿಮ್ಮ ಸೇವೆ ಸದಾ ಹೀಗೆ ಇರಲಿ. ಆ ದೇವರು ಇನ್ನಷ್ಟು ಬಡವರಿಗೆ ಸಹಾಯ ಮಾಡುವ ಶಕ್ತಿಯನ್ನು ಭಗವಂತ ನಿಮಗೆ ಕರುಣಿಸಲಿ ಎಂದು ಹಾರೈಸಿದರು. ಹೆತ್ತ ಕರುಳಿನ ಸಂಕಟ ಮನಗಂಡು ಸಹಾಯ ಮಾಡಿದ ಸಮಿತಿಯವರಿಗೆ ಧನ್ಯತೆಯ ಮೆರುಗು ಹೆಚ್ಚಿಸಿದೆ.
ಶಾಂತಾಬಾಯಿ ಅಂತ ಒಬ್ಬರು ಬೇರೆಯವರ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಾರೆ. ಮಕ್ಕಳು ಅವಳನ್ನು ಅನಾಥರನ್ನಾಗಿಸಿದ್ದಾರೆ. ಬೇಡಿ ತಿನ್ನುವುದಕ್ಕಿಂತ ದುಡಿದು ತಿನ್ನುವ ಸ್ವಭಾವ ಶಾಂತಾಬಾಯಿ ಅವರದ್ದು. ಶಾಂತಿ ನಗರ ಉತ್ಸವ ಸಮಿತಿ ಮಾಡಿದ ವ್ಯವಸ್ಥಿತ ಕಾರ್ಯಕ್ಕೆ ಮನಸೋತು ನೋಡ್ರಪ್ಪ ನನಗೆ ಮಕ್ಕಳಿಲ್ಲ, ನನ್ನ ಮಕ್ಕಳು ಇದ್ದರೂ ನನ್ನನ್ನು ಬಿಟ್ಟು ಹೋಗ್ಯಾರಾ. ನೀವೇ ನನ್ನ ಮಕ್ಕಳಿದ್ದಂತೆ ಅಂತ ಸ್ವಂತ ಮಕ್ಕಳಿಗೆ ಹರಸುವ ಹಾಗೇ ಹರಸಿದ್ದಾರೆ. ದೊಡ್ಡ ವಯಸ್ಸಿನ ಹಿರಿಯಾಸೆಗಳಿಗೆ ಮಕ್ಕಳಾಗಿ ಸೇವೆ ಸಲ್ಲಿಸಿದ್ದು ಸಮಿತಿಯವರಿಗೆ ಪ್ರೇರೇಪಿಸಿದ್ದು ಸುಳ್ಳಲ್ಲ.
95 ವರ್ಷದ V S ತೋಟದ ದಂಪತಿಗಳು ಹಾಗೂ 102 ವರ್ಷದ ಸಂಗಪ್ಪ ಗೋಳಪ್ಪನವರ ಮತ್ತು ಒಬ್ಬರು 72 ವರ್ಷದ ಅಜ್ಜಿ ಈ ವ್ಯವಸ್ಥಿತ ಸೇವೆ ನೋಡಿ ಒಂದು ದಿನ ತಲಾ ಒಬ್ಬೊಬ್ಬರು ವಹಿಸಿಕೊಂಡು ಸ್ವತಃ ಯುವಕರಂತೆ ವಿತರಿಸಿ ಯುವಕರ ಉತ್ಸಾಹ ಹೆಚ್ಚಿಸಲು ಕಾರಣರಾದರು.
ಸಮಿತಿಯವರು ಆ ಬಡ ಕಾರ್ಮಿಕರಿಂದ ಒಂದು ಚಿಕ್ಕ ಅಳಿಲು ಸೇವೆಯನ್ನು ಅಪೇಕ್ಷಿಸಿದರು. ಅದೇನೆಂದರೆ ಕೊನೆಯ ದಿನ ನಿಮ್ಮ ಕೈಲಾದಷ್ಟು ಹಣದ ಸಹಾಯವನ್ನು ನೀಡಬೇಕೆಂದು ಕೋರಿಕೆಯನ್ನಿಟ್ಟಿದ್ದರು. ಪ್ರತಿಯೊಂದು ಬಡ ಕುಟುಂಬದವರು ಈ ಕೋರಿಕೆಗೆ ಸ್ಪಂದಿಸಿ ಮತ್ತೊಬ್ಬರಿಗೂ ತಮ್ಮಿಂದ ಸಹಾಯವಾಗಲಿ ಎನ್ನುವ ಅಪೇಕ್ಷೆಯನ್ನು ಈಡೇರಿಸಿದರು.
ಅದರಲ್ಲಿ ಮನೆಯ ಕೆಲಸ ಮಾಡುವ ಒಬ್ಬ ಮಹಿಳೆ ತಾನು ಕೆಲಸ ಮಾಡುವ ಮನೆಗೆ ಹೋಗಿ ಅವರಿಗೆ ಕೈ ಕಾಲು ಮುಗಿದು ಲಾಕ್ಡೌನ್ ಮುಕ್ತಾಯವಾದ ಮೇಲೆ ನಿಮಗೆ ಸಾಲ ತೀರಿಸುತ್ತೇನೆ ಅಂತ 100 ತಂದು ಕೊಟ್ಟಿದ್ದು ಮಾತ್ರ ಸಮಿತಿಯವರ ಕಣ್ಣಲ್ಲಿ ನೀರು ಜಿನುಗಿಸಿದೆ.
ಹೀಗೆ ಸಂಗ್ರಹವಾದ ಹಣವನ್ನು ಜೊತೆಗೆ ಇನ್ನೊಂದಿಷ್ಟು ಹಣ ಸಂಗ್ರಹ ಮಾಡಿ 10 ಸಾವಿರ ರೂ.ಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಈ ಹಿಂದೆ ಸಾಕಷ್ಟು ಸೇವಾಕಾರ್ಯಗಳಲ್ಲಿ ಈ ಸಮಿತಿಯವರು ಬೇರೆಯವರ ಜೊತೆಗೆ ಭಾಗವಹಿಸಿದ್ದರು. ಆದರೆ ಈ ಕೊರೋನಾ ಸಮಯದಲ್ಲಿ ಮಾತ್ರ ಸ್ವತಃ ತಾವೇ ಯೋಜಿಸಿ ವ್ಯತಿರಿಕ್ತ ಪರಿಸ್ಥಿಯಲ್ಲಿಯೂ, ಆರೋಗ್ಯದ ಕಡೆಗೆ ಗಮನವಿಟ್ಟುಕೊಂಡು ಮತ್ತೊಬ್ಬರಿಗೆ ಬಾಳಿನ ದೀಪವಾಗಿ ಬೆಳಕನ್ನು ನಿಡುವ ಮೂಲಕ ಇಡೀ ಬಾಗಲಕೋಟೆ ನಗರಕ್ಕೆ ಮಾದರಿ ಎನಿಸಿದರು. ಕಾರ್ಯಕ್ರಮ ಚೆನ್ನಾಗಿ ಮಾಡಿ ಭೇಷ್ ಅನಿಸಿಕೊಳ್ಳುತ್ತಿದ್ದ ಈ ಯುವಮಿತ್ರರು ಒಂದು ವಿಶೇಷ ಸೇವಾಕಾರ್ಯದ ಮೂಲಕ ಓಣಿ ಅಷ್ಟೆಯಲ್ಲ ಊರಿನ ಗಮನ ಸೆಳೆದರು. ಯಾವುದೇ ಪರಿಸ್ಥಿತಿಯಲ್ಲಿಯೂ ಸೇವಾ ಭಾವ ಮುಂದುವರೆಸುತ್ತೇವೆ ಎನ್ನುವ ಆಶಯವನ್ನು ಈ ಶಾಂತಿ ನಗರ ಉತ್ಸವ ಸಮಿತಿಯ ಸದಸ್ಯರು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.