ಬೆಂಗಳೂರು: ಕೊರೋನಾ ಸೋಂಕು ವ್ಯಾಪಿಸುವ ಹಿನ್ನೆಲೆಯಲ್ಲಿ ದೇಶ ಲಾಕ್ಡೌನ್ ಆಗಿದೆ. ಇದರಿಂದಾಗಿ ಅದೆಷ್ಟೋ ಬಡ ವರ್ಗದ ಜನರು ಸರಿಯಾದ ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಆಹಾರ ಕೊಂಡುಕೊಳ್ಳುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಶಕ್ತರ ಪಾಲಿಗೆ ಆಶಾಕಿರಣ ಎಂಬಂತೆ RSS ಕೆಲಸ ಮಾಡುತ್ತಲೇ ಬಂದಿದೆ. ದೇಶದ ಮೂಲೆ ಮೂಲೆಗೂ ತಲುಪಿ ಸೇವಾ ಕಾರ್ಯಗಳನ್ನು ಸ್ವಾರ್ಥವಿಲ್ಲದೆ ಮಾಡಿದ್ದಾರೆ. ರಾಜ್ಯದಲ್ಲಿಯೂ ಜೀವದ ಹಂಗು ತೊರೆದು ಕೊರೋನಾ ಹೋರಾಟದಲ್ಲಿ ಬಡವರ ಸೇವೆ ಮಾಡುವ ಮೂಲಕ ಅಶಕ್ತರ ಪಾಲಿಗೆ ಬೆಳಕಾಗುತ್ತಿದ್ದಾರೆ.
ಬೆಂಗಳೂರಿನಲ್ಲಿಯೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ನಂತರದಲ್ಲಿ ನಗರದ ಕೃಷ್ಣರಾಜಪುರದಲ್ಲಿರುವ ಭಾರತಮಾತಾ ಮಂದಿರದಲ್ಲಿ ನಡೆಯುವ ಸತ್ಸಂಗಗಳು, ಇನ್ನಿತರ ಕಾರ್ಯಕ್ರಮಗಳು ರದ್ದಾಗಿದ್ದು, ಸ್ವಯಂಸೇವಕರು ಈ ಮಂದಿರವನ್ನು ಇದೀಗ ಲಾಕ್ಡೌನ್ ನಿರಾಶ್ರಿತರಿಗೆ ಪರಿಹಾರ ವಿತರಿಸುವ ಸೇವಾ ಚಟುವಟಿಕೆಗಳ ಕಾರ್ಯಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಬಡ ಜನರಿಗೆ ನೀಡಲು ಬೇಕಾದ ಆಹಾರ ವಸ್ತುಗಳನ್ನು, ಸಾಮಗ್ರಿಗಳನ್ನು ಸ್ವಯಂಸೇವಕರು ಇದೇ ಮಂದಿರದಲ್ಲಿ ದಾಸ್ತಾನು ಮಾಡುತ್ತಿದ್ದು, ಬಳಿಕೆ ಅಗತ್ಯವಿರುವವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ.
ಇಲ್ಲಿ ಅಕ್ಕಿ, ಬೇಳೆ, ಹಾಲು, ತರಕಾರಿ, ಗೋಧಿ ಮೊದಲಾದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡುತ್ತಾರೆ. ಬಳಿಕ ಕೃಷ್ಣರಾಜಪುರದಲ್ಲಿರುವ ಬಡ ಕುಟುಂಬಗಳಿಗೆ ಇದನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ವರೆಗೆ ಇಲ್ಲಿ ಕಾರ್ಯ ಪ್ರವೃತ್ತರಾಗಿರುವ ಕಾರ್ಯಕರ್ತರು 1,500 ಕ್ಕೂ ಅಧಿಕ ಬಡ ಕುಟುಂಬಗಳ ಮನೆಯ ಒಲೆಯುರಿಯುವಲ್ಲಿ ಸಹಕರಿಸಿದ್ದಾರೆ. ಪ್ರತಿ ನಿತ್ಯ ಕಾರ್ಯಕರ್ತರು ಮಂದಿರಕ್ಕೆ ಆಗಮಿಸಿ ಆಹಾರ ವಸ್ತುಗಳನ್ನು ಕಾರು, ರಿಕ್ಷಾ, ಬೈಕ್ ಗಳ ಮೂಲಕ (ಎಲ್ಲಾ ಕಾನೂನು ಕ್ರಮಗಳನ್ನು ಪಾಲಿಸಿ) ಬಡ ವರ್ಗದ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.
ಇನ್ನು 2004 ರಿಂದ ತೊಡಗಿದಂತೆ ಪ್ರತಿ ಅಕ್ಷಯ ತೃತೀಯಾದಂದು ಈ ಮಂದಿರದಲ್ಲಿ ಮಾತೆ ಭಾರತಭವಾನಿಗೆ ವಿಶೇಷ ಅಭಿಷೇಕ, ಅಲಂಕಾರ, ಆರಾಧನೆ ಸಲ್ಲಿಸಲಾಗುತ್ತದೆ. ಜೊತೆಗೆ ಸ್ಥಳೀಯ ಮಾತೆಯರು ಹಾಗೂ ಸಹೋದರಿಯರು ಈ ಮಂದಿರದ ಎದುರು ಸಿಹಿ ಪೊಂಗಲ್ಗಳನ್ನು ತಯಾರಿಸುವ ಮೂಲಕ ಮಾತೆಯನ್ನು ಆರಾಧನೆ ಮಾಡುತ್ತಾರೆ. ಆದರೆ ಲಾಕ್ಡೌನ್ನಿಂದಾಗಿ ಈ ಬಾರಿಯ ಅಕ್ಷಯ ತೃತೀಯಾದಂದು ಇಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆದಿಲ್ಲ. ಬದಲಾಗಿ ಜನರು ತಮ್ಮ ಸ್ವ ಗೃಹಗಳಲ್ಲೇ ಭಾರತ ಮಾತೆಗೆ ಪೂಜೆ, ಆರಾಧನೆ ಸಲ್ಲಿಸಿದ್ದಾರೆ. ಆದರೆ ಆ ದಿನದಂದು ಭಾರತಮಾತಾ ಮಂದಿರದಲ್ಲಿ ಸ್ವಯಂಸೇವಕರು ಅಶಕ್ತರ, ನಿರ್ಗತಿಕರ, ಬಡವರ್ಗದ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಅಕ್ಷಯ ತೃತೀಯಾವನ್ನು ಆಚರಣೆ ಮಾಡಿದ್ದಾರೆ. ಆ ಮೂಲಕ ನಿಜವಾದ ಅರ್ಥದಲ್ಲಿ ತಾಯಿ ಭಾರತಿಗೆ ನಮನ ಸಲ್ಲಿಸುವ ಮಹತ್ಕಾರ್ಯ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.