ಬೆಂಗಳೂರು : ಒಂದು ಶತಮಾನಕ್ಕೂ ಹೆಚ್ಚು ಸಮಯ ಅಧಿಕಾರದಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಗಾಗಲಿ ಕಮ್ಯೂನಿಸಂ ವ್ಯವಸ್ಥೆಗಾಗಲಿ ಕೊರೋನಾ ಸಾಂಕ್ರಮಿಕದ ತಲ್ಲಣಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಾವಲಂಬನೆ ಹಾಗೂ ವಿಕೇಂದ್ರೀಕರಣ ಆಧಾರಿತ ಸ್ವದೇಶ ಆರ್ಥಿಕ ಮಾದರಿ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.
ವಿದೇಶಿ ಮಾಧ್ಯಮಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ಕೊರೋನಾ ಸಾಂಕ್ರಾಮಿಕದ ವೈರಸ್ ಹರಡುವಿಕೆ ಹಾಗೂ ಅದರ ದುಷ್ಪರಿಣಾಮಗಳ ಕುರಿತಾಗಿ ಮನವೀಯ ಹಿತದೃಷ್ಠಿಯಿಂದ ಸಮಗ್ರವಾದ ವಿಚಾರಣೆ ನಡೆಸುವುದು ಅಗತ್ಯ. ಮುಂದೆ ಕೂಡ ಈ ರೀತಿಯಾದ ಆತಂಕಗಳು ವ್ಯಕ್ತಿಯಿಂದ, ಸಂಘಟನೆಗಳಿಂದ, ಆಡಳಿತಾರೂಢರಿಂದ, ದೇಶಗಳಿಂದ ನಡೆಯದಂತೆ ನೋಡಿಕೊಳ್ಳಲು ಜಗತ್ತಿನ ಎಲ್ಲರೂ ಕೈ ಜೋಡಿಸಬೇಕಿದೆ.
ಕೆಲವರು ಮಾಡುವ ತಪ್ಪಿಗಾಗಿ ಇಡೀ ಸಮಾಜವನ್ನು ದೂಷಿಸುವುದು ತಪ್ಪು ಎಂದು ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಮಾತುಗಳನ್ನು ಪುನರುಚ್ಚರಿಸಿದ ದತ್ತಾತ್ರೇಯ ಹೊಸಬಾಳೆ, ಅನೇಕ ಮುಸ್ಲಿಂ ಬುದ್ಧಿಜೀವಿಗಳು ಸರಸಂಘಚಾಲಕರ ಈ ನಿಲುವು ಶ್ಲಾಘಿಸಿ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದ ಅವರು, ಸಂಘವು ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಸಂಘದ ಪ್ರತಿನಿಧಿ ಸಭಾ ಬೈಠಕ್ ಅನ್ನು ರದ್ದುಗೊಳಿಸಿ, ಸ್ವಯಂಸೇವಕರು ಸಾಮಾಜಿಕ ಕಾರ್ಯದಲ್ಲಿ ತೊಡಗಬೇಕೆಂದು ಕರೆ ಕೊಟ್ಟಿತು, ಹಾಗೂ ಜೂನ್ ಅಂತ್ಯದವರೆಗೆ ಸಂಘದ ಪ್ರಶಿಕ್ಷಣ ವರ್ಗಗಳು ಸೇರಿದಂತೆ ಸ್ವಯಂದೇವಕರು ಸೇರುವಂತಹ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಿತು. ಇದು 1929 ರ ನಂತರ ಮೊದಲ ಬಾರಿಗೆ ಹೀಗಾಗಿದೆ. ಸಂಘದ ಸೇವಾ ಕಾರ್ಯಗಳ ಮೂಲಕ ಈವರೆಗೆ 67336 ಸ್ಥಾನಗಳಲ್ಲಿ 50,48,088 ಪರಿವಾರಗಳಿಗೆ ಸಹಾಯ ಮಾಡಲಾಗಿದೆ. ಈ ಕಾರ್ಯದಲ್ಲಿ 3,42,000 ಸ್ವಯಂಸೇವಕರು ತೊಡಗಿಕೊಂಡಿದ್ದರು. ಯಾವುದೇ ಬೇಧ ಭಾವ ಇಲ್ಲದೇ ದೇಶದ ಎಲ್ಲ 130 ಕೋಟಿ ಭಾರತೀಯರು ಕೂಡ ಭಾರತ ಮಾತೆಯ ಮಕ್ಕಳು ಎಂಬ ಭಾವನೆಯಿಂದ ಸೇವೆಗೈದಿದ್ದಾರೆ ಎಂದು ಹೇಳಿದರು.
ಕುಟುಂಬವೂ ಸಮಾಜದ ಮೂಲಕ ಘಟಕ. ಲಾಕ್ಡೌನ್ ಕಾರಣದಿಂದಾಗಿ ಎಲ್ಲರೂ ಮನೆಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಸಂವಾದ ಹೆಚ್ಚಾಗಿದೆ. ಇದು ಕುಟುಂಬದ ಮಹತ್ವ ಹಾಗೂ ಮೌಲ್ಯವನ್ನು ಹೆಚ್ಚಿಸಿದೆ. ಕೊರೋನಾ ನಂತರದ ಅವಧಿಯಲ್ಲಿ ಇದು ಇನ್ನಷ್ಟು ಹೆಚ್ಚಾಗಿದೆ.
ಮಾನವೀಯತೆಯ ಶತ್ರುವಿನ ವಿರುದ್ಧ ಯಾವುದೇ ತಾರತಮ್ಯವಿಲ್ಲದೇ ಎಲ್ಲರೂ ಒಂದಾಗಿ ಯಶಸ್ವಿಯಾಗಿ ಹೋರಾಡಿ, ಪ್ರಕಾಶಮಾನವಾದ ಹೊಸ ಅಧ್ಯಾಯಗಳನ್ನು ಬರೆಯಬೇಕಾದ ಸಮಯ ಇದು. ಹಾಗೆಯೇ ಈ ಏಕತೆಗೆ ವಿರೋಧಿಯಾಗಿರುವ ಅಥವಾ ವಿರೋಧಾಬಾಸಿಗಳಾಗಿರುವ ಶಕ್ತಿಗಳ ಬಗ್ಗೆ ನಾವು ಸದಾ ಎಚ್ಚರಿಕೆಯಿಂದಿರಬೇಕು ಹಾಗೂ ಇವರ ದುರುದ್ದೇಶವನ್ನು ಬಯಲುಗೊಳಿಸಬೇಕು.
ಕೊರೋನಾ ಸಾಂಕ್ರಾಮಿಕವು ಅತ್ಯಂತ ಕ್ರೂರ ಹಾಗೂ ದುರಾದೃಷ್ಟಕರವಾಗಿದ್ದರೂ ಕೂಡ ಈ ನಿಮಿತ್ತವಾಗಿ ವಿಕಾಸದ ಸದ್ಯದ ಮಾದರಿಗಳು, ಜೀವನಶೈಲಿ, ಪರಿಸರದ ಕುರಿತಾಗಿ ನಮ್ಮ ದೃಷ್ಠಿ, ಈ ಎಲ್ಲದರ ಬಗ್ಗೆ ಅವಲೋಕನಕ್ಕಾಗಿ ಒಂದು ಒಳ್ಳೆಯ ಅವಕಾಶವನ್ನು ಒದಗಿಸಿದೆ ಎಂದು ಸಂಘ ಭಾವಿಸುತ್ತದೆ. ಇಂತಹ ಸಂದರ್ಭದಲ್ಲಿ ಮಾನವ ಕುಲವನ್ನು ಸುಸ್ಥಿರ ಅಭಿವೃದ್ಧಿ, ಮಾನವೀಯ ಮುಖವುಳ್ಳ ಪ್ರಗತಿಯ ಮಾರ್ಗದಲ್ಲಿ ಕೊಂಡೊಯ್ಯಲು ಹಾಗೂ ಸಹಕಾರ ಮತ್ತು ಪರಸ್ಪರ ಗೌರವದಿಂದ ಕೂಡಿದ ಶಾಂತಿಯನ್ನು ಸ್ಥಾಪಿಸಲು ಮಹತ್ವವಾದ ಪಾತ್ರ ನಿರ್ವಹಿಸಲು ಭಾರತ ಸಶಕ್ತವಾಗಿದೆ. ಈ ಸವಾಲನ್ನು ನಾವು ಸ್ವೀಕರಿಸಿ, ಸಂಯಮದಿಂದ ಕಾರ್ಯ ಮಾಡುತ್ತ ಸಾಮರಸ್ಯದಿಂದ ಕೂಡಿದ ವಿಶ್ವದ ಕಲ್ಪನೆಯ ಸಾಕಾರದತ್ತ ಸಾಗಬೇಕಿದೆ. ಮಾನವೀಯ ಕೇಂದ್ರಿತ ಸಮಗ್ರ ಒಕ್ಕೂಟ ನವ ವೈಶ್ವಿಕ ವ್ಯವಸ್ಥೆಯ ಸ್ಥಾಪನೆಯ ಪೂರ್ವಾವಶ್ಯಕತೆಯಾಗಿದೆ. ಇದರ ಸಾಕಾರದತ್ತ ನಾವು ಕಾರ್ಯ ಮಾಡಬೇಕಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.