ಉಡುಪಿ: ಕಳೆದ ಕೆಲವು ದಿನಗಳಿಂದ ಮರಳು ಕೊರತೆಯಿಂದ ತತ್ತರಿಸಿದ ನಿರ್ಮಾಣ ಉದ್ಯಮ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದ್ದರೂ ಅದು ಮತ್ತೆ ಜುಲೈ ಕೊನೆವರೆಗೂ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ. ಸ್ಥಳೀಯ ಪರಿಸ್ಥಿತಿ ಪರಿಗಣಿಸಿ ಮಳೆಗಾಲದಲ್ಲಿ ಮತ್ತು ಮೀನು ಸಂತಾನೋತ್ಪತ್ತಿ ಸಮಯ ಸಿಆರ್ಝಡ್ ಪ್ರದೇಶದಲ್ಲಿ ಮರಳು ತೆಗೆಯುವುದರಿಂದ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಕಂಡು ಬಂದರೆ ಮರಳುಗಾರಿಕೆಗೆ ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ಜಿಲ್ಲಾಧಿಕಾರಿ ಅವರಿಗೆ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ ನೀಡಿರುವ ಹಿನ್ನೆಲೆಯಲ್ಲಿ ಜು. 7ರಂದು ನಡೆದ ಸಿಆರ್ಝಡ್ ಮರಳು ಉಸ್ತುವಾರಿ ಸಮಿತಿ ಸಭೆ ಆಕ್ಷೇಪಣೆಗಳನ್ನು ಜು. 15ರ ವರೆಗೆ ಆಹ್ವಾನಿಸಿ ಮಳೆಗಾಲದಲ್ಲಿ ಮರಳು ತೆಗೆಯುವುದನ್ನು ಜು. 16ರಿಂದ ಆರಂಭಿಸಲು ನಿರ್ಧರಿಸಿತ್ತು.
ಈ ಪ್ರಕಟನೆ ಲೆಕ್ಕಾಚಾರದಂತೆ ಮರಳುಗಾರಿಕೆ ಆರಂಭವಾಗಬೇಕಿತ್ತು. ಇದಕ್ಕೆ ಜು. 15ರಂದು ಜಿಲ್ಲಾಡಳಿತದಿಂದ ಅನುಮತಿ ಮಂಜೂರಾಗಬೇಕಿತ್ತು. ಆದರೆ ಅನುಮತಿ ದೊರಕಿಲ್ಲ. ಇದಕ್ಕೆ ಕಾರಣವೆಂದರೆ ಆಕ್ಷೇಪಣೆ ಬಂದದ್ದಲ್ಲ. ಮರಳುಗಾರಿಕೆ ಮಾಡಬಹುದು ಎಂಬುದಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ಭೂವಿಜ್ಞಾನಿಯವರ ಕಚೇರಿಯಿಂದ ಮಲ್ಪೆ ಮೀನುಗಾರರ ಸಂಘಟನೆಗೆ ಪತ್ರ ಹೋಯಿತು. ಮೀನುಗಾರರ ಸಂಘದಿಂದ, ಅಂದಾಜೀಕರಣ ಸಮಿತಿ ನಿರ್ಣಯದಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಬಹುದು ಎಂದು ಉತ್ತರ ಹೋಯಿತು. ಮೀನುಗಾರರ ಸಂಘದವರು ಮರಳುಗಾರಿಕೆ ಮಾಡಬಹುದು ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಈಗ ಮರಳುಗಾರಿಕೆ ಮಾಡಬಹುದೆ ಎಂದು ಸ್ಪಷ್ಟವಾಗಿ ತಿಳಿಸಲು ಭೂವಿಜ್ಞಾನ ಇಲಾಖೆಯಿಂದ ಮೀನುಗಾರರ ಸಂಘಟನೆಗೆ ಮತ್ತೆ ಪತ್ರ ಬರೆಯಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮೀನುಗಾರರ ಸಂಘದವರು ಮರಳುಗಾರಿಕೆ ಮಾಡಬಹುದು ಎಂದು ಸ್ಪಷ್ಟವಾಗಿ ನಿರಾಕ್ಷೇಪಣೆ ಪತ್ರ ಕೊಟ್ಟರೆ ಮರಳುಗಾರಿಕೆ ಆರಂಭಿಸಬಹುದು. ಇಲ್ಲವಾದರೆ ಕಾಯಿದೆ ಪ್ರಕಾರ ಜು. 31ರ ವರೆಗೆ ನಿಷೇಧ ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆ. 1ರಿಂದ ಹೇಗಿದ್ದರೂ ಮೀನುಗಾರಿಕೆ ಆರಂಭಗೊಳ್ಳುತ್ತದೆ, ಅದರೊಂದಿಗೆ ಮರಳುಗಾರಿಕೆಯೂ ಆರಂಭಗೊಳ್ಳುತ್ತದೆ.
ರಿಸ್ಕ್ “ಹೆಗಲಾಂತರ’! ಮರಳುಗಾರಿಕೆ ಸ್ಥಗಿತಗೊಂಡ ಕಾರಣ ಪರಸ್ಥಳದಿಂದ ಬಂದಿದ್ದ ನೂರಾರು ಕೂಲಿ ಕಾರ್ಮಿಕರು ಹಿಂದೆ ತೆರಳಿದ್ದಾರೆ. ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ವ್ಯಾಪಾರಸ್ಥರು, ಉದ್ಯಮಿಗಳ ಕೈಕಟ್ಟಿ ಹಾಕಿದಂತಾಗಿದೆ. ಇಡೀ ಕ್ಷೇತ್ರವೇ ಸ್ಥಗಿತದ ಭೀತಿ ಎದುರಿಸುತ್ತಿದೆ. ಅಂದು ಮರಳುಗಾರಿಕೆಗೆ ಮತ್ತೆ ಅನುಮತಿ ಕೊಡಬಹುದೆಂಬ ಆಶಾವಾದ ಉದ್ಯಮಿಗಳು, ಮನೆ ನಿರ್ಮಾಣ ಗ್ರಾಹಕರು, ಕಾರ್ಮಿಕರ ದೃಷ್ಟಿಯಲ್ಲಿ ಆಶಾದಾಯಕ ವಾತಾವರಣ ಸೃಷ್ಟಿಸಿತ್ತು. ಈಗ ಮತ್ತೆ “ಕ್ವೆರೀಸ್’ (ಸರಕಾರಿ ಭಾಷೆಯ ಪಾರಿಭಾಷಿಕ ಶಬ್ದ) ಎದ್ದ ಕಾರಣ ಆಶಾದಾಯಕ ವಾತಾವರಣ ಮತ್ತೆ ಕಮರಿದಂತಿದೆ. “ರಿಸ್ಕ್’ನ್ನು ಇನ್ನೊಬ್ಬರ ಹೆಗಲ ಮೇಲೆ ಹೊರಿಸುವುದು ಆಡಳಿತ ವ್ಯವಸ್ಥೆಯ ಒಂದು ಭಾಗ! ಇದು ಕೇವಲ ಸರಕಾರಿ ವ್ಯವಸ್ಥೆಗೆ ಮಾತ್ರವಲ್ಲ, ಖಾಸಗಿ ವ್ಯವಸ್ಥೆಗೂ ಅನ್ವಯ. ಈಗೀಗ ನಿತ್ಯ ಖಾಸಗೀ ಬದುಕಿನಲ್ಲಿಯೂ ಇದೇ ತಂತ್ರ ಅನುಸರಿಸುತ್ತಿದ್ದಾರೆ.
ಇದುವರೆಗೆ ಸಿಆರ್ಝಡ್ ಕಾಯಿದೆ ಇದ್ದರೂ ಜಾರಿಯಲ್ಲಿಲ್ಲದ ಕಾನೂನು ಈ ಬಾರಿ ಒಂದೇ ಸಮನೆ ಜಾರಿಗೆ ಬಂದು ಹಲವರ ನಿದ್ದೆಗೆಡಿಸಿದ್ದನ್ನು ನೋಡಿದರೆ ಜನರ ನಿದ್ದೆಗೆಡಿಸಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ ಎನ್ನುವುದು ದೃಢಪಟ್ಟಿದೆ. ಅಗತ್ಯಕ್ಕೆ ಬೇಕಾದಂತೆ ಬತ್ತಳಿಕೆಯಿಂದ ಒಂದೊಂದೇ ಕಾನೂನಿನ ಬಾಣ ಪ್ರಯೋಗಿಸಿದರೆ ನಿದ್ದೆಗೆಡಿಸುವುದು ಸುಲಭ.
ದ.ಕ. ಜಿಲ್ಲೆಗೆ ಅನ್ವಯ? ಜಿಲ್ಲಾ ಮಟ್ಟದಲ್ಲಿ ನಿರ್ಧಾರ ತಳೆಯುವ ಅಧಿಕಾರ ಕೊಟ್ಟಿರುವುದು ರಾಜ್ಯ ಪ್ರಾಧಿಕಾರದ ಸೂಚನೆಯಾದ ಕಾರಣ ದಕ್ಷಿಣ ಕನ್ನಡ ಜಿಲ್ಲೆಗೂ ಅನ್ವಯವಾಗಿದ್ದು, ಅಲ್ಲಿಯೂ ಉಡುಪಿಯಂತೆ ಆಕ್ಷೇಪಣೆ ಕೇಳಿದ್ದಾರೆ. ಇಲ್ಲಿ ಅನ್ವಯವಾದ ಕಾನೂನೇ ಅಲ್ಲಿಗೂ ಅನ್ವಯವಾಗುವ ಕಾರಣ ಪರಿಸ್ಥಿತಿ ಅಲ್ಲಿಯೂ ಮುಂದುವರಿಯುವ ಸಾಧ್ಯತೆ ಹೆಚ್ಚಿಗೆ ಇದೆ. ಮರಳುಗಾರಿಕೆ ಸಮಸ್ಯೆ ತಲೆದೋರಿದ್ದರಿಂದ ಎರಡೂ ಜಿಲ್ಲೆಗಳಲ್ಲಿ ನಿರ್ಮಾಣಕಾರರು ಪ್ರತಿಭಟನೆ ನಡೆಸಿ ಸಚಿವರು, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು. ಮರಳು ತೆಗೆಯುವುದಕ್ಕೆ ನಿಷೇಧ ಹೇರಿದ ಬಳಿಕ ದಾಸ್ತಾನಿದ್ದ ಮರಳಿನ ಬೆಲೆ ಏಕಾಏಕಿ ಏರಿಕೆಯಾಗಿತ್ತು. ನಿಷೇಧ ಇದ್ದರೂ ಕೆಲವೆಡೆ ಪೊಲೀಸರ ಕಣ್ತಪ್ಪಿಸಿ ದೂರದ ಊರುಗಳಿಗೆ ತಡರಾತ್ರಿ ಒಳದಾರಿಗಳಲ್ಲಿ ಸಾಗಾಟವೂ ನಡೆಯುತ್ತಿದೆ. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ದಾಸ್ತಾನು ಮಾಡಿಕೊಂಡ ಗುತ್ತಿಗೆದಾರರಿಗೆ ಒಳ್ಳೆಯ “ಪಡಾವು’ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.