ಬೆಂಗಳೂರು: ವಲಸೆ ಕಾರ್ಮಿಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಕೇಂದ್ರ ಸೂಚಿಸಿದ ಬೆನ್ನಲ್ಲೇ, ರಾಜ್ಯದ ಮುಖ್ಯಮಂತ್ರಿ ಅವರು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗದೆಯೇ ರಾಜ್ಯದಲ್ಲಿಯೇ ಉಳಿದುಕೊಳ್ಳುವಂತೆ ಮನವಿ ಮಾಡಿರುವ ಅವರು, ಕೇಂದ್ರ ಒಪ್ಪಿಗೆ ನೀಡಿದ ತಕ್ಷಣವೇ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲಾಗುವುದಾಗಿಯೂ ತಿಳಿಸಿದ್ದಾರೆ.
ಮೇ 1 ರ ಕಾರ್ಮಿಕ ದಿನಾಚರಣೆಯಂದು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಈ ಮೂರು ಭಾಷೆಗಳಲ್ಲಿಯೂ ಶುಭಾಶಯ ಕೋರಿರುವ ಮುಖ್ಯಮಂತ್ರಿ ವಲಸೆ ಕಾರ್ಮಿಕರು ರಾಜ್ಯದಲ್ಲಿಯೇ ಉಳಿದುಕೊಳ್ಳುವಂತೆ ತಿಳಿಸಿದ್ದಾರೆ. ಜೊತೆಗೆ ಕೇಂದ್ರ ನಿರ್ದೇಶನ ನೀಡಿದ ಕೂಡಲೇ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ. ಅವುಗಳ ಪುನರಾರಂಭಕ್ಕೆ ಕಾರ್ಮಿಕರು ರಾಜ್ಯದ ಜೊತೆಗೆ ಸಹಕರಿಸುವಂತೆಯೂ ಕೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ವಾಣಿಜ್ಯ ಚಟುವಟಿಕೆಗಳ ಆರಂಭದ ಕುರಿತಂತೆ ಈಗಾಗಲೇ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಜೊತೆಗೂ ಚರ್ಚೆ ನಡೆಸಲಾಗಿದೆ. ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವುದು ಮತ್ತು ಅವರಿಗೆ ವೇತನ ನೀಡಲು ವ್ಯವಸ್ಥೆ ಮಾಡುವಂತೆಯೂ ಅವರಲ್ಲಿ ಮನವಿ ಮಾಡಲಾಗಿರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನು ಕೇಂದ್ರದ ಸೂಚನೆಯಂತೆ ವಲಸಿಗರಿಗೆ ತಮ್ಮ ಸ್ವರಾಜ್ಯ ಗಳಿಗೆ ಹಿಂದಿರುಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಅಲ್ಲದೆ ಇಂತಹ ಕಠಿಣ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂದೂ ಯಡಿಯೂರಪ್ಪ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.