ನವದೆಹಲಿ : ಸ್ಥಳೀಯವಾಗಿ ‘ಚಖಾವೊ’ ಎಂದು ಜನಪ್ರಿಯವಾಗಿರುವ ಮಣಿಪುರ ಕಪ್ಪು ಅಕ್ಕಿ ಭೌಗೋಳಿಕ ಸೂಚಕ (ಜಿಐ-Geographical Indication) ಟ್ಯಾಗ್ ಅನ್ನು ಪಡೆದುಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭೌಗೋಳಿಕ ಸೂಚಕಗಳ ನೋಂದಾವಣೆ ವೆಬ್ಸೈಟ್, ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಚಖಾವೋ ಅನ್ನು ‘ಮಣಿಪುರ ಕಪ್ಪು ಅಕ್ಕಿ’ ಎಂದು ನೋಂದಾಯಿಸಲಾಗಿದೆ ಎಂಬುದನ್ನು ದೃಢಪಡಿಸಿದೆ.
ಚಖಾವೊಗೆ ಜಿಐ ಪಡೆಯುವ ನಿಟ್ಟಿನಲ್ಲಿ ಅರ್ಜಿಯನ್ನು ಮಣಿಪುರದ ಚಖಾವೊ (ಕಪ್ಪು ಅಕ್ಕಿ) ಉತ್ಪಾದಕರ ಒಕ್ಕೂಟವು ಸಲ್ಲಿಸಿತ್ತು ಮತ್ತು ಕೃಷಿ ಇಲಾಖೆ, ಮಣಿಪುರ ಸರ್ಕಾರ ಮತ್ತು ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮ ಲಿಮಿಟೆಡ್ ಇದಕ್ಕೆ ಸಹಕಾರವನ್ನೂ ನೀಡಿತ್ತು.
ರಾಜ್ಯ ಕೃಷಿ ಇಲಾಖೆಯ ತಂಡದ ಸದಸ್ಯರ ದಾಖಲಾತಿ ಸೇರಿದಂತೆ ನೋಂದಣಿ ಪ್ರಕ್ರಿಯೆಗೆ ಒಂದು ವರ್ಷಕ್ಕೂ ಹೆಚ್ಚು ಸಮಯ ಹಿಡಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಐ ಟ್ಯಾಗ್ ಒಂದು ನಿರ್ದಿಷ್ಟ ಪ್ರದೇಶದಿಂದ ಉತ್ಪಾದಿಸಲ್ಪಡುವ ಸರಕುಗಳನ್ನು ಅದರ ಭೌಗೋಳಿಕ ಮೂಲದಿಂದ ಗುರುತಿಸುವ ಒಂದು ಸೂಚಕವಾಗಿದೆ. ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಲು ಜಿಐಗೆ ಹೆಚ್ಚಿನ ಸಾಮರ್ಥ್ಯವಿದೆ ಮತ್ತು ಅನೇಕ ಸಾಂಪ್ರದಾಯಿಕ ಕೌಶಲ್ಯಗಳನ್ನು ಕಾಪಾಡಲು ಇದಕ್ಕೆ ಜಿಐ ಟ್ಯಾಗ್ ನಿಂದ ಸಾಧ್ಯವಾಗುತ್ತದೆ.
ನೋಂದಣಿ ಪಡೆದ ನಂತರ, ಮಣಿಪುರ ಸಣ್ಣ ರೈತರ ಕೃಷಿ-ವ್ಯವಹಾರ ಒಕ್ಕೂಟದ ಯೋಜನಾ ಸಂಯೋಜಕ ಎಂ.ಎಸ್. ಖೈಡೆಮ್ ಅವರು ಪ್ರತಿಕ್ರಿಯೆ ನೀಡಿ, “ಈಗ ನಾವು ಬೀಜಗಳು ಮತ್ತು ಧಾನ್ಯಗಳನ್ನು ಜಗತ್ತಿನ ಯಾವುದೇ ಭಾಗಗಳಿಗೆ ಮಾರಾಟ ಮಾಡಬಹುದು. ಯಾರಾದರೂ ವ್ಯಾಪಾರ ಮಾಡಲು ಬಯಸಿದರೆ ನಾವು ಅದಕ್ಕೆ ಬೇಕಾದ ಸಹಕಾರ ನೀಡುತ್ತೇವೆ” ಎಂದಿದ್ದಾರೆ.
ಕೆಲವು ಸಂದರ್ಭಗಳಲ್ಲಿ, ವಿವಿಧ ಉದ್ದೇಶಗಳಿಗಾಗಿ ಬೀಜಗಳನ್ನು ದೇಶದ ಇತರ ಭಾಗಗಳಿಗೆ ಸಾಗಿಸಿ ನಂತರ ಅಲ್ಲಿ ಈ ಭತ್ತದ ತಳಿಯನ್ನು ಬೆಳೆಸುವ ಮತ್ತು ಕೊಯ್ಲು ಮಾಡುವ ವರದಿಗಳು ಬಂದಿವೆ. ಈ ಬಗ್ಗೆ ರಾಜ್ಯದ ಕೆಲವು ಕೃಷಿ ಸಮುದಾಯಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ.
ಶತಮಾನಗಳಿಂದ ಮಣಿಪುರದಲ್ಲಿ ಕೃಷಿ ಮಾಡಲಾಗುತ್ತಿರುವ ಚಖಾವೊ ಎಂಬ ಪರಿಮಳಯುಕ್ತ ಗ್ಲುಟಿನಸ್ ಭತ್ತವು ಅದರ ವಿಶೇಷ ಸುವಾಸನೆಯಿಂದ ನಿರೂಪಿಸಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ಸಮುದಾಯದ ಹಬ್ಬಗಳಲ್ಲಿ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ ಮತ್ತು ಇದನ್ನು ಚಖಾವೋ ಖೀರ್ ಎಂದು ಬಡಿಸಲಾಗುತ್ತದೆ.
ಸಾಂಪ್ರದಾಯಿಕ ಔಷಧದ ಭಾಗವಾಗಿ ಸಾಂಪ್ರದಾಯಿಕ ವೈದ್ಯರು ಚಖಾವೊವನ್ನು ಬಳಸಿದ್ದಾರೆ. ಇಂಫಾಲ್ ಮಾರುಕಟ್ಟೆಯಲ್ಲಿ ಇದನ್ನು ಸರಾಸರಿ ಕೆಜಿಗೆ 100-120 ರೂ.ಗೆ ಮಾರಾಟ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.