ಬೆಂಗಳೂರು: ಜಗತ್ತು ಕೋವಿಡ್-19 ನ ಕರಿ ನೆರಳಿಗೆ ಸಿಲುಕಿ ನಲುಗುತ್ತಿದೆ. ಕೊರೋನಾದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದ್ದು, ಅವೆಲ್ಲವನ್ನೂ ಅನುಸರಿಸುವಂತೆಯೂ ಸೂಚನೆ ನೀಡಿದೆ. ಅಗತ್ಯ ಪಿಪಿಇ ಗಳನ್ನು ಬಳಸಿ ಕೊರೋನಾದಿಂದ ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳುವಂತೆಯೂ ಈಗಾಗಲೇ ತಿಳಿಸಿದೆ.
ಆದರೆ ದೇಶದಲ್ಲಿ ಅಗತ್ಯ ಪಿಪಿಇ ಗಳ ಕೊರತೆ ಇದೆ. ಈ ಕೊರತೆ ವೈದ್ಯಕೀಯ ಲೋಕವನ್ನೂ ತಟ್ಟಿದೆ. ಹಾಗಾಗಿ ತೀರಾ ಅಗತ್ಯವೆನಿಸಿದ ವೈದ್ಯಕೀಯ ಸಿಬ್ಬಂದಿಗಳಿಗೆ ಲಭ್ಯವಿರುವ ಪಿಪಿಇ ಸಾಧನಗಳನ್ನು ಬಳಕೆಗೆ ನೀಡಲು ಅನುವು ಮಾಡಿಕೊಡುವಂತೆಯೂ ಸೂಚಿಸಿರುವ ಸರ್ಕಾರ, ಜನ ಸಾಮಾನ್ಯರಿಗೆ ಹೋಂ ಮೇಡ್ ಮಾಸ್ಕ್ ಬಳಕೆ ಮಾಡುವಂತೆಯೂ ಮನವಿ ಮಾಡಿದೆ. ಇವೆಲ್ಲದರ ನಡುವೆ ಅದೆಷ್ಟೋ ಸಂಘ ಸಂಸ್ಥೆಗಳು, ಜನರು ಹೋಂ ಮೇಡ್, ರಿ ಯೂಸೇಬಲ್ ಮಾಸ್ಕ್ಗಳನ್ನು ತಯಾರಿಸಿ ನೀಡುವ ಕೆಲಸ ಮಾಡುತ್ತಿದ್ದಾರೆ.
90 ವರ್ಷದ ವಯೋ ವೃದ್ಧೆ, ಬೆಂಗಳೂರಿನ ಆರ್. ಆರ್. ನಗರದ ನಿವಾಸಿಯಾಗಿರುವ ನರಸಮ್ಮ ಅವರು ತಮ್ಮ ಈ ಇಳಿ ವಯಸ್ಸಿನಲ್ಲಿಯೂ ದಿನಕ್ಕೆ 25 ರಿಂದ 30 ಮಾಸ್ಕ್ ಗಳನ್ನು ತಯಾರಿಸಿ ಅಕ್ಕ ಪಕ್ಕದ ಮನೆಯವರಿಗೆ, ಕೆಲಸಗಾರರಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಕೆಲಸ ಮಾಡಲು ಮನಸ್ಸು ಮುಖ್ಯ, ವಯಸ್ಸಲ್ಲ ಎಂಬುದನ್ನು ಬಟ್ಟೆಗಳಿಂದ ಮಾಸ್ಕ್ ಹೊಲೆಯುವ ಮೂಲಕ ಯುವ ಜನರಿಗೆ ತಿಳಿಸಿ ಕೊಟ್ಟಿದ್ದಾರೆ. ಚಿಕ್ಕಂದಿನಿಂದಲೇ ಕಸೂತಿ, ಬಟ್ಟೆ ಹೊಲೆಯುವ ಕೆಲಸಗಳಲ್ಲಿ ಆಸಕ್ತಿ ಇದ್ದ ಇವರಿಗೆ ಮಕ್ಕಳು ಕೆಲ ಸಮಯದ ಹಿಂದಷ್ಟೇ ಮೋಟಾರ್ ಚಾಲಿತ ಹೊಲಿಗೆ ಯಂತ್ರವನ್ನೂ ಕೊಡಿಸಿದ್ದರು.
ಇನ್ನು ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿರುವ ನರಸಮ್ಮ ಅವರು, ಮನೆಯಲ್ಲಿದ್ದ ಹಳೆ ಬಟ್ಟೆಗಳನ್ನು ಬಳಸಿ ಮಾಸ್ಕ್ ತಯಾರಿಸುತ್ತಿದ್ದಾರೆ. ಜೊತೆಗೆ ಕೊರೋನಾ ನಿಯಂತ್ರಣ ಕ್ರಮಗಳ ಬಗೆಗೂ ಜನಜಾಗೃತಿ ಮೂಡಿಸುತ್ತಿದ್ದಾರೆ. ಆ ಮೂಲಕ ತನ್ನ ವೃದ್ಧಾಪ್ಯದಲ್ಲಿಯೂ ಹೀಗೊಂದು ಸಾಮಾಜಿಕ ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.