ಹುಬ್ಬಳ್ಳಿ: ಕೊರೋನಾ ಸೋಂಕು ಹರಡದಂತೆ ತಡೆಯಲು ಅನೇಕ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗಿದ್ದರೂ, ಸೋಂಕು ಹರಡುವ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. ಇದೀಗ ಆರೋಗ್ಯ ಸಿಬ್ಬಂದಿಗಳಿಗೆ ಹೆಚ್ಚು ಸಹಾಯವಾಗುವಂತೆ ಸ್ವಯಂ ಚಾಲಿತ ಸೆನ್ಸಾರ್ ಸಿಸ್ಟಂನ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಹುಬ್ಬಳ್ಳಿಯ ಕೆಎಲ್ಇ ಟೆಕ್ನ ವಿದ್ಯಾರ್ಥಿಗಳ ತಂಡ ಅಭಿವೃದ್ಧಿ ಮಾಡಿದ್ದು, ಆ ಮೂಲಕ ಕೋವಿಡ್ ವಿರೋಧಿ ಹೋರಾಟದಲ್ಲಿ ಕೈಜೋಡಿಸಿದ್ದಾರೆ.
ಹೇಗಾದರೂ ಕೋವಿಡ್-19 ಅನ್ನು ಹಿಮ್ಮೆಟ್ಟಿಸಬೇಕು ಎಂಬ ಕಾರಣಕ್ಕೆ ದೇಶದ ಲಾಕ್ಡೌನ್ ಸ್ಥಿತಿಗೂ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಆದರೆ ಕೆಲವು ಜನರು ಮಾತ್ರ ತಮಗೂ, ಈ ನಿಯಂತ್ರಣ ಕ್ರಮಗಳಿಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿ ಸೋಂಕು ಹರಡಿಸಿಕೊಳ್ಳುತ್ತಿದ್ದಾರೆ, ಹರಡುವುದಕ್ಕೂ ಕಾರಣರಾಗುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡುವ, ಮಾಸ್ಕ್ ಧರಿಸುವ, ಸ್ವಚ್ಛತೆ ಯ ಬಗೆಗೂ ಕೆಲವರು ಕಾಳಜಿ ವಹಿಸದೇ ಇದ್ದು, ಆ ಮೂಲಕ ಹಲವರ ಆರೋಗ್ಯ ಕೆಡುವಂತೆ ಮಾಡುತ್ತಿದ್ದಾರೆ.
ರೋಗಿಗಳು ಹೆಚ್ಚಾದಂತೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ಚಿಕಿತ್ಸೆ ನೀಡುವ ವೈದ್ಯರು ಸಮಸ್ಯೆ ಅನುಭವಿಸಬೇಕಾಗುತ್ತದೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ವೈದ್ಯಕೀಯ ಸಿಬ್ಬಂದಿಗಳಿಗೂ ಒಮ್ಮೊಮ್ಮೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇದನ್ನು ಮನಗಂಡ ಕೆಎಲ್ಇ ಟೆಕ್ನ ವಿದ್ಯಾರ್ಥಿಗಳು ಅಟೋಮೆಟಿಕ್ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಿದ್ದಾರೆ. ಇದನ್ನು ಕೈಯಿಂದ ಮುಟ್ಟದೆಯೇ ಬಳಕೆ ಮಾಡಲು ಸಾಧ್ಯವಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಪರಿಣಾಮಕಾರಿ ಎನ್ನಬಹುದು. ಈ ವರೆಗೆ ಬಳಕೆಯಲ್ಲಿದ್ದ ಸ್ಯಾನಿಟೈಸರ್ ಅನ್ನು ಕೈಯಿಂದ ಮುಟ್ಟಿ ಬಳಸಬೇಕಾಗಿತ್ತು. ಆದರೆ ಈ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸ್ಯಾನಿಟೈಸರ್ ಅನ್ನು ಮುಟ್ಟದೆಯೇ ಬಳಸಬಹುದಾಗಿದೆ. ಪಿಪಿಇ ಬಳಸಿದ ಆರೋಗ್ಯ ಸಿಬ್ಬಂದಿಗಳಿಗೆ ಇದನ್ನು ಬಳಸುವುದು ಸುಲಭ.
ಇನ್ನು ಈ ಸ್ಯಾನಿಟೈಸರ್ ತಯಾರಿಸುವ ತಂಡದಲ್ಲಿ ವಿದ್ಯಾರ್ಥಿಗಳಾದ ಕಾರ್ತಿಕ್ ವಿ. ಆರ್., ಅಭಿಲಾಷ್ ಜಿ., ಪ್ರವೀಣ್, ಸಂತೋಷ, ವಿನಾಯಕ್, ಅಭಿಲಾಷ್ ಕೆ. ಶ್ರಮ ವಹಿಸಿದ್ದು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ರವಿ ಗುತ್ತಲ, ಕಿಮ್ಸ್ನ ಉಪ ವೈದ್ಯಕೀಯ ಅಧೀಕ್ಷಕ ಡಾ. ಎಸ್. ವೈ. ಮುಲ್ಕಿ ಪಾಟೀಲ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಸ್ಯಾನಿಟೈಸರ್ ಅನ್ನು ಬಳಕೆಗಾಗಿ ಕಿಮ್ಸ್ಗೆ ನೀಡಿರುವ ವಿದ್ಯಾರ್ಥಿಗಳು, ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಹಸ್ತಾಂತರಿಸಿದ್ದಾರೆ.
ವಿದ್ಯಾರ್ಥಿಗಳ ಶ್ರಮವನ್ನು ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ಇನ್ನೂ ಅನೇಕರು ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.