ನವದೆಹಲಿ: ಕೊರೋನಾ ಸೋಂಕಿನ ತೀವ್ರತೆಯನ್ನು ನೋಡಿಕೊಂಡು, ಸ್ಥಿತಿಗತಿಗಳನ್ನು ಅವಲೋಕನ ಮಾಡಿರುವ ಯುಜಿಸಿಯಿಂದ ನಿಯೋಜನೆಗೊಂಡಿರುವ ಸಮಿತಿ, ಜುಲೈಗೆ ಬದಲಾಗಿ ಸೆಪ್ಟೆಂಬರ್ನಲ್ಲಿ ಕಾಲೇಜುಗಳು ಈ ವರ್ಷದ ಶೈಕ್ಷಣಿಕ ಅವಧಿಯನ್ನು ಆರಂಭಿಸುವಂತೆ ವರದಿ ನೀಡಿದೆ.
ಕೊರೋನಾ ವೈರಸ್ನಿಂದಾಗಿ ಉಂಟಾಗಿರುವ ಲಾಕ್ಡೌನ್ನಿಂದಾಗಿ ಆದ ಶೈಕ್ಷಣಿಕ ನಷ್ಟ ಮತ್ತು ಆನ್ಲೈನ್ ಶಿಕ್ಷಣದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಯುಜಿಸಿ ಎರಡು ಸಮಿತಿಗಳನ್ನು ನೇಮಿಸಿದ್ದು, ಅವುಗಳು ಈ ವರದಿಯನ್ನು ಯುಜಿಸಿಗೆ ಸಲ್ಲಿಸಿವೆ.
ಲಾಕ್ಡೌನ್ ಸಂದರ್ಭದಲ್ಲಿ ವಿವಿ ಗಳು ಪರೀಕ್ಷೆಗಳನ್ನು ನಡೆಸಲು, ಶೈಕ್ಷಣಿಕ ಕೆಲಸಗಳನ್ನು ಸಮರ್ಥವಾಗಿ ಪೂರೈಸಲು ಸಾಧ್ಯವಿದೆಯೇ ಎಂಬುದರ ಅಧ್ಯಯನಕ್ಕೆ ಹರ್ಯಾಣ ವಿವಿ ಯ ಉಪಕುಲಪತಿ ಆರ್. ಸಿ. ಕುಹದ್ ನೇತೃತ್ವದಲ್ಲಿ ಒಂದು ಸಮಿತಿ ಮತ್ತು ಆನ್ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಿದ್ಧ ಮಾಡಲು ಇಗ್ನೋದ ವಿಸಿ ನಾಗೇಶ್ವರ್ ರಾವ್ ನೇತೃತ್ವದಲ್ಲಿ ಇನ್ನೊಂದು ಸಮಿತಿಯನ್ನು ಶೈಕ್ಷಣಿಕ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ರಚಿಸಲಾಗಿತ್ತು. ಈ ಎರಡೂ ತಂಡಗಳು ಅಧ್ಯಯನ ಕೈಗೊಂಡು ಶುಕ್ರವಾರ ಯುಜಿಸಿ ಬೋರ್ಡ್ಗೆ ತಿಳಿಸಿದೆ.
ಈ ವರದಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದಿನ ವಾರದಲ್ಲಿ ಈ ಕುರಿತಂತೆ ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಯುಜಿಸಿ ತಿಳಿಸಿದೆ. ಕಾರ್ಯ ಸಾಧ್ಯತೆ ಮತ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಚರ್ಚೆ ನಡೆಸಿ ಈ ಮಾರ್ಗಸೂಚಿಗಳನ್ನು ಸಿದ್ಧ ಪಡಿಸುವುದಾಗಿಯೂ ಯುಜಿಸಿ ಮಾಹಿತಿ ನೀಡಿದೆ. ಜೂನ್ನಲ್ಲಿ ನಡೆಯಬೇಕಿದ್ದ ನೀಟ್, ಜೆಇಇ ಗಳನ್ನೂ ಕೊರೋನಾ ಪರಿಸ್ಥಿತಿ ನೋಡಿ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದೆ.
ಸಿಬಿಎಸ್ಸಿ ಯು ಪ್ರೊಮೋಟ್ ಮತ್ತು ಪದವಿಪೂರ್ವ ಪ್ರವೇಶವನ್ನು ನಿರ್ಧರಿಸುವ ಬಾಕಿ ಉಳಿದ 29 ವಿಷಯಗಳ ಪರೀಕ್ಷೆಯನ್ನು ನಡೆಸುವುದಾಗಿ ಈಗಾಗಲೇ ಮಾಹಿತಿ ನೀಡಿದೆ. ಕೊರೋನಾ ಕಾರಣದಿಂದ ಮಾರ್ಚ್ 16 ರಿಂದಲೇ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ ಎಂದೂ ಯುಜಿಸಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.