ಚವಿ ರಾಜಾವತ್, ಎಂ.ಬಿ.ಎ ಮತ್ತು ಬಿಐಎಂಎಂ ಪುಣೆ ಪಧವೀದರೆ. ಐಷಾರಾಮಿ ಜೀವನ ನಡೆಸಲು ಬೇಕಾದ ಎಲ್ಲಾ ಸವಲತ್ತುಗಳೂ ಆಕೆಗಿತ್ತು. ಆದರೆ ಅದು ಆಕೆಗೆ ಸಂತೃಪ್ತಿಯನ್ನು ನೀಡಲಿಲ್ಲ. ಹೈ ಪ್ರೊಫೈಲ್ ಕಾರ್ಪೋರೇಟ್ ಕಂಪನಿಯ ಉದ್ಯೋಗಿಯಾಗಿ ಕೈ ತುಂಬಾ ಹಣ ಸಂಪಾದಿಸುವುದು ಆಕೆಯ ಗುರಿಯಾಗಿರಲಿಲ್ಲ.
ಹೀಗಾಗಿ ಆಕೆ ತನ್ನ ಉದ್ಯೋಗವನ್ನೇ ತೊರೆದು ನೇರ ತಾನು ಹುಟ್ಟಿ ಬೆಳೆದ ರಾಜಸ್ಥಾನದ ಜೈಪುರದಿಂದ 60 ಕಿ.ಮೀ ದೂರದಲ್ಲಿರುವ ಬಡವರೇ ಇರುವ ಸೋಡ ಗ್ರಾಮಕ್ಕೆ ಬಂದಳು. ತನ್ನೂರಿನ, ಹಳ್ಳಿಗರ ಉದ್ಧಾರಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಳು.
ಈಗ ಅವಳು ಆ ಗ್ರಾಮದ ಸರ್ಪಂಚ್. ಯಾವುದೇ ರಾಜಕೀಯ ಪಕ್ಷದಲ್ಲೂ ಆಕೆ ಇಲ್ಲ. ರಾಜಕೀಯ ಮಾಡುವುದು ಆಕೆಯ ಗುರಿಯೂ ಅಲ್ಲ. ಆದರೂ ಗ್ರಾಮದ ಜನರು ಆಕೆಯನ್ನು ಸರ್ಪಂಚ್ ಆಗಿ ಆಯ್ಕೆ ಮಾಡಿದ್ದಾರೆ. ಅದಕ್ಕೆ ಕಾರಣ ಆಕೆಯ ಸೇವಾ ಮನೋಧರ್ಮ, ತ್ಯಾಗಮಯ ಜೀವನ. ಈಕೆ ದೇಶದ ಏಕೈಕ ಎಂಬಿಎ ಪಧವೀಧರೆ ಸರ್ಪಂಚ್ ಕೂಡ ಹೌದು.
ಸರ್ಪಂಚ್ ಆದ ಬಳಿಕ ಆಕೆ ಮಾಡಿದ ಕಾರ್ಯ ಒಂದೆರಡಲ್ಲ. ಮಳೆ ನೀರು ಕೊಯ್ಲು, ಎಲ್ಲಾ ಮನೆಗೂ ಶೌಚಾಲಯ ನಿರ್ಮಾಣ, ರಸ್ತೆಗಳಿಗೆ ಕಾಂಕ್ರೀಟ್, 24 ಗಂಟೆಯೂ ವಿದ್ಯುತ್ ಎಲ್ಲವನ್ನೂ ಗ್ರಾಮಕ್ಕೆ ಆಕೆ ಒದಗಿಸಿದ್ದಾಳೆ. ಗ್ರಾಮವನ್ನು ಮದ್ಯ ಮುಕ್ತಗೊಳಿಸಿದ್ದಾಳೆ. ವರದಕ್ಷಿಣೆಯನ್ನು ನಿಷೇಧಿಸಿದ್ದಾಳೆ. ಸರ್ಕಾರಿ ಆಸ್ಪತ್ರೆ, ಶಾಲೆಯ ಸ್ಥಿತಿಯನ್ನು ಸುಧಾರಿಸಿದ್ದಾಳೆ.
ಬಾಲ ಕಾರ್ಮಿಕತೆಯ ವಿರುದ್ಧ ಕ್ರಮಕೈಗೊಂಡಿದ್ದಾಳೆ, ತನ್ನ ಗ್ರಾಮವನ್ನು ಶೇ.100ರಷ್ಟು ಸಾಕ್ಷರತಾ ಗ್ರಾಮವನ್ನಾಗಿಸಬೇಕೆಂಬ ಪಣತೊಟ್ಟು ಆ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾಳೆ.
ನಾನು ಬೆಳೆದ ಹಳ್ಳಿಯ ಋಣವನ್ನು ಸಂದಾಯ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳುವ ಚವಿ ರಾಜವತ್, ತಂತ್ರಜ್ಞಾನ ದಿನದಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಸನ್ಮಾನಿತರಾಗಿದ್ದಾರೆ.
ನಿಮ್ಮ ಬೇರುಗಳಿಂದ ಓಡಿ ಹೋಗುವ ಪ್ರಯತ್ನ ಮಾಡಬೇಡಿ, ಯಾಕೆಂದರೆ ಅದು ನಿಮ್ಮ ಮತ್ತು ಈ ದೇಶದ ಅಡಿಪಾಯ. ಬದಲಾವಣೆ ತರಬೇಕೆಂದು ನೀವು ಬಯಸಿದರೆ ಮೂಲದಿಂದಲೇ ಅದನ್ನು ಆರಂಭಿಸಬೇಕು, ಒಬ್ಬರು ಮಾಡಬಹುದಾದಂತಹ ಹಲವಾರು ಕಾರ್ಯಗಳಿವೆ ಎಂದು ಚವಿ ದೇಶದ ಯುವ ಜನತೆಗೆ ಸಂದೇಶ ನೀಡಿದ್ದಾರೆ.
ಸಿಟಿ ಬದುಕು, ಆಡಂಬರ, ಕಾರ್ಪೋರೇಟ್ ಗ್ಲಾಮರ್ ಇವೆಲ್ಲವನ್ನೂ ತೊರೆದು ತನ್ನೂರಿಗೆ ಬಂದು ಹಳ್ಳಿಗರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಚವಿ ಸೆಲೆಬ್ರಿಟಿಯಲ್ಲ, ಮಾಧ್ಯಮಗಳಿಗೆ ಆಕೆ ಯಾರೆಂದೂ ಗೊತ್ತಿಲ್ಲ. ಆದರೂ ಆಕೆ ನಾಯಕಿ, ದೇಶದ ಬದಲಾವಣೆಗೆ ಶ್ರಮಿಸುತ್ತಿರುವ ಧೀಮಂತ ನಾಯಕಿ, ಮಹಾತ್ವಕಾಂಕ್ಷೆ ಹೊಂದಿದ ಅಸಾಮಾನ್ಯ ಮಹಿಳೆ. ಆಕೆ ಇನ್ನಷ್ಟು ಸಮಾಜಸೇವೆ ಮಾಡಲಿ ಎಂದು ಹಾರೈಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.