ಕೋವಿಡ್-19 ಎಂಬ ಸಾಂಕ್ರಾಮಿಕ ರೋಗದ ಕಪಿಮುಷ್ಟಿಗೆ ಸಿಲುಕಿ ಈ ವರೆಗೆ ಅದೆಷ್ಟೋ ಜನರು ಅಸುನೀಗಿದ್ದಾರೆ. ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳೂ ಕೊರೋನಾ ಸಂಕಷ್ಟಕ್ಕೆ ಸಿಲುಕಿ ನಲುಗಿವೆ. ಇದರಿಂದ ಹೊರ ಬರುವ ಪ್ರಯತ್ನದಲ್ಲಿ ಎಲ್ಲಾ ರಾಷ್ಟ್ರಗಳೂ ಇವೆ. ಔಷಧ ಸಿದ್ಧವಾಗುವವರೆಗೆ ಇದಕ್ಕೆ ನಿಯಂತ್ರಣವೇ ಮದ್ದಾಗಿದ್ದು, ಜನರು ಕೇಂದ್ರ, ರಾಜ್ಯಗಳ ನಿಯಂತ್ರಣಾ ನಿಯಮಗಳನ್ನು ಅನುಸರಿಸಿದಲ್ಲಿ ಕೋವಿಡ್ನಿಂದ ಕಾಪಾಡಿಕೊಳ್ಳಲು ಸಾಧ್ಯವಿದೆ.
ಇನ್ನು ಚೀನಾದಿಂದ ಹುಟ್ಟಿದ ಈ ಸೋಂಕಿನ ನಿವಾರಣೆಗೆ ಎಲ್ಲಾ ರಾಷ್ಟ್ರಗಳೂ ಪ್ರಯತ್ನ ನಡೆಸುತ್ತಲೇ ಬಂದಿವೆ. ಆದರೆ ಮಹಾಮಾರಿಗೆ ಈ ವರೆಗೆ ಯಾವುದೇ ಔಷಧ ಕಂಡುಹಿಡಿಯುವಲ್ಲಿ ಯಾವ ದೇಶವೂ ಸಫಲವಾಗಿಲ್ಲ. ದೊಡ್ಡಣ್ಣ ಎಂದು ಮೆರೆಯುತ್ತಿದ್ದ ಅಮೇರಿಕಾವೂ ಈ ಸೋಂಕಿನ ಮುಂದೆ ಮಂಡಿಯೂರಿ ಕುಳಿತು ಬಿಟ್ಟಿದೆ. ಇದಕ್ಕೆ ಇನ್ನೂ ಯಾವುದೇ ಲಸಿಕೆ ಅಥವಾ ಔಷಧ ಪತ್ತೆ ಮಾಡಲು ಸಾಧ್ಯವಾಗದೇ ಇರುವುದರಿಂದ, ಹಲವಾರು ನಿಯಂತ್ರಣ ಕ್ರಮಗಳ ಮೂಲಕವೇ ಸೋಂಕು ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳೂ ಹೋರಾಟ ನಡೆಸುತ್ತಲೇ ಇವೆ. ಆದರೂ ಸೋಂಕಿತರ ಸಂಖ್ಯೆ ಮಾತ್ರ ಏರುತ್ತಲೇ ಇದೆ ಎಂಬುದೇ ದುರಾದೃಷ್ಟ.
ಇನ್ನು ಕೊರೋನಾಗೆ ಸಂಬಂಧಿಸಿದಂತೆ ಭಾರತದಲ್ಲಿಯೂ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ನಿಯಂತ್ರಣ ಕ್ರಮಗಳನ್ನು ರೂಪಿಸಿವೆ. ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ಜಗತ್ತಿನ ಎರಡನೇ ರಾಷ್ಟ್ರವಾದ ಭಾರತ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಪ್ರಮಾಣದಲ್ಲಿ ಕೊರೋನಾ ಪೀಡಿತರನ್ನು ಹೊಂದಿದೆ ಎಂದು ಹೇಳಬಹುದು. ಇದಕ್ಕೆ ಕಾರಣ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ತಂಡ ತೆಗೆದುಕೊಂಡ ಸಮಯೋಚಿತ ನಿರ್ಧಾರಗಳು ಎಂದರೂ ತಪ್ಪಾಗಲಾರದು. ಸಾಮಾಜಿಕ ಅಂತರ ಕಾಪಾಡುವ ಮೂಲಕ, ಗುಂಪು ಸೇರದಂತೆ, ಮನೆಯಲ್ಲಿ ಮತ್ತು ಮನೆಯಿಂದ ಹೊರಹೋಗುವ ಸಂದರ್ಭ ಮಾಸ್ಕ್ ಬಳಕೆ, ಸ್ವಚ್ಛತೆ ಮೊದಲಾದ ಕ್ರಮಗಳನ್ನು ಅನುಸರಿಸುವಂತೆ ಜನರಿಗೆ ಮಾಹಿತಿ ನೀಡುವ ಮೂಲಕ, ದೇಶವನ್ನು ಲಾಕ್ಡೌನ್ ಮಾಡುವ ಮೂಲಕ ಕೊರೋನಾ ತುರ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನ ಮಾಡಿದ್ದರು. ಅದರಲ್ಲಿ ಕೊಂಚ ಮಟ್ಟಿನ ಯಶಸ್ಸೂ ನಮ್ಮದಾಗಿತ್ತು.
ಆದರೆ ಕೊರೋನಾ ಎಂಬುದೊಂದು ಸಾಮಾನ್ಯ ಯುದ್ಧವಲ್ಲ. ಕಣ್ಣಿಗೆ ಕಾಣುವ ಶತ್ರುವನ್ನು ಹೇಗಾದರೂ ಹೊಡೆದುರುಳಿಸಬಹುದು. ಆದರೆ ಕಣ್ಣಿಗೆ ಕಾಣದ ವೈರಸ್ ವಿರುದ್ಧದ ಹೋರಾಟ ಅಷ್ಟು ಸುಲಭವಲ್ಲ. ವೈರಸ್ ಸೃಷ್ಟಿಯಾದ ಚೀನಾವೇ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗದೆ ಅಕ್ಷರಶಃ ಮೂರು ತಿಂಗಳು ಲಾಕ್ಡೌನ್ ಆಗಿತ್ತು. ಆದೆಷ್ಟೋ ಜನರ ಪ್ರಾಣ ಕಾಪಾಡಲಾಗದೆ ಕೈ ಚೆಲ್ಲಿ ಕುಳಿತಿತ್ತು. ಇಂದಿಗೂ ಚೀನಾದಲ್ಲಿ ಕೊರೋನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಇನ್ನು ಭಾರತದಲ್ಲಿ ಪೂರಕ ನಿಯಂತ್ರಣ ಕ್ರಮಗಳ ಬಳಿಕೆ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ದೆಹಲಿಯ ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ ಜನರು ನಿಯಂತ್ರಣ ನಿಯಮಗಳನ್ನು ಉಲ್ಲಂಘನೆ ಮಾಡಿ ದೇಶದ ಉದ್ದಗಲಕ್ಕೂ ಸಂಚಾರ ನಡೆಸಿದ ಪರಿಣಾಮ ಮತ್ತೆ ಸೋಂಕು ಹೆಚ್ಚಾಗುವಂತಾಯಿತು. ಪರಿಣಾಮ ದೇಶದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರ ಜೊತೆಗೆ ದೇಶದ ಆರ್ಥಿಕತೆಯ ಮೇಲೆಯೂ ಅಡ್ಡ ಪರಿಣಾಮ ಬೀರಿದೆ.
WHO ದಿಂದಲೇ ಸಾಂಕ್ರಾಮಿಕ ರೋಗ ಎಂದು ಪರಿಗಣಿಸಲ್ಪಟ್ಟಿರುವ ಈ ಸೋಂಕಿಗೆ ಬಲಿಯಾಗುವವರಲ್ಲಿ ವೃದ್ಧರೇ ಹೆಚ್ಚು. ಈ ಹೋರಾಟದಲ್ಲಿ ನಾವು ನಮ್ಮನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ಹೆತ್ತವರು, ಪರಿವಾರದ ರಕ್ಷಣೆಗೂ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಮೂಲಕ ಸೋಂಕು ಹರಡಿಸಿಕೊಳ್ಳುವುದು ಮತ್ತು ಹರಡುವುದು ಎರಡನ್ನೂ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾದಲ್ಲಿ ಮಾತ್ರ ಮುಂದೊಂದಿನ ನಾವು ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಇನ್ನು ಚೀನಾದಲ್ಲಿ ಈವರೆಗೆ ಈ ಸೋಂಕಿನಿಂದ 4000 ಜನರು ಮೃತಪಟ್ಟಿದ್ದಾಗಿ ಚೀನಾವೇ ವರದಿ ನೀಡಿದೆ. ಇಡೀ ವಿಶ್ವಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, 23,95,636 ಜನರು ಸೋಂಕಿಗೆ ಒಳಗಾಗಿದ್ದು, 1,64,565 ಮಂದಿ ಮೃತಪಟ್ಟಿದ್ದಾರೆ. 6,15,668 ಮಂದಿ ಗುಣಮುಖರಾಗಿರುವುದಾಗಿ ವರದಿಗಳು ಮಾಹಿತಿ ನೀಡುತ್ತದೆ. ಮುಂದುವರೆದ ದೇಶ ಅಮೆರಿಕಾಗೂ ಈ ಸೋಂಕಿನ ಮುಂದೆ ಮಂಡಿಯೂರಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಮೆರಿಕಾದಲ್ಲಿ 7,59,134 ಮಂದಿಗೆ ಸೋಂಕು ತಗುಲಿದ್ದು, 40,265 ಮಂದಿ ಮೃತಪಟ್ಟಿದ್ದಾರೆ. 69,927 ಮಂದಿ ಗುಣಮುಖರಾಗಿದ್ದಾರೆ. ಸ್ಪೇನ್ನಲ್ಲಿ 1,95,944 ಮಂದಿ ಸೋಂಕಿತರಲ್ಲಿ 20,453 ಜನರು ಮೃತಪಟ್ಟಿದ್ದಾರೆ ಮತ್ತು 77,357 ಮಂದಿ ಬಚಾವಾಗಿದ್ದಾರೆ. ಪ್ರಾನ್ಸ್ ನಲ್ಲಿ 1,52894 ಮಂದಿಗೆ ಸೋಂಕು ತಗುಲಿದ್ದು, 19,718 ಜನರು ಮೃತಪಟ್ಟಿದ್ದಾರೆ. ಹಾಗೆಯೇ ಜರ್ಮನಿ ಯಲ್ಲಿ 1,45,184 ಮಂದಿಗೆ ಸೋಂಕು ತಗುಲಿದ್ದು, 4586 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಈವರೆಗೆ 20,000 ದಷ್ಟು ಮಂದಿಗೆ ಸೋಂಕು ತಗುಲಿದ್ದು, 500 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 2000ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಆ ಮೂಲಕ ಅಮೆರಿಕಾ, ಪ್ರಾನ್ಸ್, ಜರ್ಮನ್, ಚೀನಾಗಳಿಗಿಂತ ಕಡಿಮೆ ಸಂಖ್ಯೆಯಲ್ಲಿಭಾರತದಲ್ಲಿ ಸೋಂಕು ಹರಡಿದ್ದೂ, ಸಾವು ನೋವುಗಳ ಸಂಖ್ಯೆಯೂ ಕಡಿಮೆ ಇದೆ.
ಭಾರತದಲ್ಲಿ ಸಾವು ನೋವುಗಳ ಸಂಖ್ಯೆ, ಶಂಕಿತ, ಸೋಂಕಿತರ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬರಲು ಮುಖ್ಯ ಕಾರಣ ದೇಶದ ಚುಕ್ಕಾಣಿ ಹಿಡಿದು, ಸಮಯ ಸಂದರ್ಭಕ್ಕೆ ಪೂರಕವಾದ ರೀತಿ ನೀತಿಗಳನ್ನು ಜಾರಿಗೆ ತರುತ್ತಿರುವ ಮೋದಿ ಅವರ ನಾಯಕತ್ವ ಎಂಬುದರಲ್ಲಿ ಎರಡು ಮಾತಿಲ್ಲ. ದೇಶದ ಆರ್ಥಿಕತೆಗಿಂತ ದೇಶದ ಜನರ ಆರೋಗ್ಯ, ಹಿತಾಸಕ್ತಿಯೇ ಮುಖ್ಯವೆಂದು ಅದಕ್ಕಾಗಿ ದೇಶವನ್ನೇ ಲಾಕ್ಡೌನ್ ಮಾಡುವ ಮೂಲಕ ಸೋಂಕು ಹೆಚ್ಚು ಹರಡದಂತೆ ತೆಗೆದುಕೊಂಡ ಕಠಿಣ ನಿರ್ಧಾರವೇ ಮೋದಿ ಓರ್ವ ಸಮರ್ಥ ನಾಯಕ ಎಂಬುದಕ್ಕೆ ಸಾಕ್ಷಿ ನೀಡುತ್ತದೆ. ಇನ್ನು ಈ ಕ್ರಮವನ್ನು ಉಲ್ಲಂಘನೆ ಮಾಡಿ ನಡೆಸಿದ ಸಭೆ, ಅಲ್ಲಿ ನೆರೆದಿದ್ದವರ ದೇಶ ಸಂಚಾರದ ಕಾರಣದಿಂದ ಭಾರತದಲ್ಲಿ ಮತ್ತಷ್ಟು ಪ್ರಕರಣಗಳು ಕಾಣಿಸಿಕೊಂಡಿವೆ. ಕ್ವಾರಂಟೈನ್ಗೆ ಒಳಗಾಗಲು ಸೂಚಿಸಿದರೂ, ಅಸಡ್ಡೆ ತೋರಿದವರಿಂದಲೇ ಇಂದು ಭಾರತದಲ್ಲಿ ಕೊರೋನಾ ಹೆಚ್ಚಾಗಿದೆ ಎಂದರೂ ತಪ್ಪಾಗಲಾರದು.
ಇನ್ನು ಭಾರತದ ಆಂತರಿಕ ಅಂದರೆ ರಾಜ್ಯಗಳ ವಿಚಾರಕ್ಕೆ ಬಂದರೆ, ಬಿಹಾರದಲ್ಲಿ 1,03,84,637 ಜನರಿದ್ದು ಇವರಲ್ಲಿ ಕೇವಲ 86 ಮಂದಿಗೆ ಸೋಂಕು ತಗುಲಿದ್ದು, 37 ಮಂದಿ ಗುಣಮುಖರಾಗಿದ್ದಾರೆ. 2 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ 1,084 ಜನರಿಗೆ ಸೋಂಕು ತಗುಲಿದ್ದು ಅವರಲ್ಲಿ 108 ಮಂದಿ ಗುಣಮುಖರಾಗಿದ್ದಾರೆ ಮತ್ತು 17 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ದಲ್ಲಿ 3651 ಮಂದಿಗೆ ಸೋಂಕು ತಗುಲಿದ್ದು, 211ಮಂದಿ ಮೃತಪಟ್ಟಿದ್ದಾರೆ ಹಾಗೂ 365 ಮಂದಿ ಗುಣಮುಖರಾಗಿದ್ದಾರೆ. ಪ. ಬಂಗಾಳದಲ್ಲಿ 310 ಸೋಂಕಿತರಲ್ಲಿ 62 ಮಂದಿ ಗುಣಮುಖರಾಗಿದ್ದಾರೆ ಮತ್ತೆ 12 ಜನರು ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 1893 ಮಂದಿ ಸೋಂಕಿತರಲ್ಲಿ 72 ಮಂದಿ ಗುಣಮುಖರಾಗಿದ್ದಾರೆ ಮತ್ತು 43 ಮಂದಿ ಮೃತಪಟ್ಟಿದ್ದಾರೆ. ಹರ್ಯಾಣದಲ್ಲಿ 223 ಮಂದಿಗೆ ಸೋಂಕು ತಗುಲಿದ್ದು 87 ಗುಣಮುಖರಾಗಿದ್ದಾರೆ ಮತ್ತು 3 ಮಂದಿ ಮೃತಪಟ್ಟಿದ್ದಾರೆ. ಹೀಗೆ ಎಲ್ಲಾ ರಾಜ್ಯಗಳ ಬಗೆಗೂ ಗಮನ ಹರಿಸಿದರೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ.
ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗುವುದೇನೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಪಾಲನೆ ಮಾಡುವುದು ಮತ್ತು ತಮ್ಮ ಜೀವವನ್ನೇ ಪಣಕ್ಕಿಟ್ಟು ಸೋಂಕು ಹರಡದಂತೆ ಮತ್ತು ಅದಕ್ಕೆ ಚಿಕಿತ್ಸೆ ನೀಡುವವರಿಗೆ ಸಹಕರಿಸುವ ಮೂಲಕವೇ ನಾವು ಕೊರೋನಾ ವಿರುದ್ದ ಸಮರ್ಥವಾಗಿ ಹೋರಾಟ ನಡೆಸುವುದು ಸಾಧ್ಯವಿದೆ ಎಂದು.
ದೇಶ ಇಂದು ಒಬ್ಬ ಸಮರ್ಥ ನಾಯಕನ ಕೈಯಲ್ಲಿದೆ. ಯಾವುದೇ ಅಪಾಯದಿಂದ ದೇಶವನ್ನು ಕಾಪಾಡುವುದಕ್ಕೂ ಸಮರ್ಥ ನಾಯಕ ನಮಗೆ ದೊರಕಿದ್ದಾರೆ. ಹೀಗಿರುವಾಗ ಆ ನಾಯಕನ ಆದೇಶ ಪಾಲಿಸುವ ಮೂಲಕ ಇತರ ಎಲ್ಲಾ ರಾಷ್ಟ್ರಗಳಿಗಿಂತಲೂ ಮೊದಲು ನಾವು ಗೆಲುವು ಸಾಧಿಸುವುದು ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.