ಲಾಕ್ಡೌನ್ ತರುವಾಯ ವಲಸೆ ಕಾರ್ಮಿಕರ ಸಮಸ್ಯೆಯ ಹಲವು ಮುಖಗಳು ಅನಾವರಣಗೊಳ್ಳುತ್ತಿವೆ. ದೆಹಲಿ ಸುತ್ತಮುತ್ತಲಿನ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ನೆಡೆದು ಹೊರಟಿದ್ದು ದೊಡ್ಡ ಸುದ್ದಿಯಾಗಿತ್ತು. ಅಷ್ಟರಲ್ಲಿ ತಬ್ಲಿಘಿ ಜಮಾತ್ ಪ್ರಕರಣ ಹೊರಬಂದು ಹತ್ತಾರು ರಾಜ್ಯಗಳಲ್ಲಿ ಕೊರೋನಾವೈರಸ್ ಹರಡುವಂತೆ ಆದದ್ದು – ವಲಸೆ ಕಾರ್ಮಿಕರ ವಿಷಯ ಪಕ್ಕಕ್ಕೆ ಸರಿದಿತ್ತು. ಇದೀಗ ಮತ್ತೆ ಮುಂಬೈ, ಸೂರತ್ ಸೇರಿದಂತೆ ಹಲವೆಡೆ ವಲಸೆ ಕಾರ್ಮಿಕರ ಕೂಗು ಕೇಳಲಾರಂಭಿಸಿದೆ.
ಇತ್ತೀಚಿಗೆ ಗೆಳೆಯರೊಬ್ಬರು ಅನೇಕಲ್ ತಾಲೂಕಿನ ಇಂಡ್ಲಬೆಲೆ ಗ್ರಾಮದ ಸುತಮುತ್ತ ನೆಲೆಸಿರುವ ಬಿಹಾರ, ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕರಿಗೆ ದಿನಸಿ ವಸ್ತುಗಳನ್ನು ವಿತರಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದರು. ಸಹಜವಾಗಿ ಮನಸ್ಸಿಗೆ ಬರುವ ಪ್ರಶ್ನೆ – ಎಲ್ಲಿಯ ಇಂಡ್ಲಬೆಲೆ ? ಎಲ್ಲಿಯ ಪಶ್ಚಿಮ ಬಂಗಾಳ ? ಎಂಟು – ಹತ್ತು ಸಾವಿರದ ತಿಂಗಳ ಸಂಬಳಕ್ಕೆ ಸ್ವಂತ ಊರು, ಬಂಧು, ಬಳಗ ಬಿಟ್ಟು ಎರಡು ಸಾವಿರ ಕಿಲೋಮೀಟರ್ ಬರುವುದೆಂದರೆ ? ಇದು ಇಂಡ್ಲಬೆಲೆಯಲ್ಲಿ ಸಿಲುಕಿರುವ ಶ್ರಮಜೀವಿಗಳದ್ದಷ್ಟೆ ಕಥೆಯಲ್ಲ. ಬೆಂಗಳೂರಿನ ಪೆಟ್ರೋಲ್ ಬಂಕುಗಳಲ್ಲಿ, ಮಾಲು, ಸೂಪರ್ ಮಾರ್ಕೆಟ್ಗಳಲ್ಲಿನ ಪರಿಚಾರಕರಲ್ಲಿ, ಸೆಕ್ಯುರಿಟಿ ಗಾರ್ಡುಗಳಲ್ಲಿ, ಮೆಟ್ರೋ, ವಿಮಾನ ನಿಲ್ದಾಣ, ಮೇಲುಸೇತುವೆಗಳ, ದೊಡ್ಡ ವಸತಿ ಸಮುಚ್ಚಯಗಳ ಕಾಮಗಾರಿಗಳಲ್ಲಿ…. ಹೀಗೆ ಎಲ್ಲೆಲ್ಲೂ ಬಿಹಾರ, ಪಶ್ಚಿಮ ಬಂಗಾಳ, ಒರಿಸ್ಸಾ, ಉತ್ತರಪ್ರದೇಶ ಮೂಲದ ವಲಸೆ ಕಾರ್ಮಿಕರನ್ನು ಕಾಣಬಹುದು. ಇವರ ನಡುವೆ ಕನ್ನಡಿಗರೂ ಇದ್ದಾರೆ. ಪಕ್ಕದ ಅಂಧ್ರ, ತಮಿಳುನಾಡಿನಿಂದ ಬಂದ ವಲಸಿಗರೂ ಇದ್ದಾರೆ.
ಸಾಮಾನ್ಯವಾಗಿ ಇವರೆಲ್ಲ ಕೌಶಲ್ಯವಿಲ್ಲದ, ಹೆಚ್ಚಿನ ವಿದ್ಯಾಭ್ಯಾಸವೂ ಇಲ್ಲದ ಆದರೆ ಮೈಮುರಿದು ದುಡಿಯುವ ಮಂದಿ. ಬರೀ ಬೆಂಗಳೂರು ಮಾತ್ರವಲ್ಲ ಪಕ್ಕದ ಚೆನ್ನೈ, ಹೈದರಾಬಾದಿನಲ್ಲೂ ಇದೇ ನಾಲ್ಕು ರಾಜ್ಯಗಳ ಜನ – ಇದೇ ಪರಿಸ್ಥಿತಿ.
ಕರ್ನಾಟಕದ ವಲಸೆ ಕಾರ್ಮಿಕರು ಬೆಂಗಳೂರು ಅಲ್ಲದೆ ಕರಾವಳಿ, ಮಲೆನಾಡಿಗೆ ತೋಟದ ಕೆಲಸಗಳಿಗೆ ಹೋಗುವುದಿದೆ. ಉತ್ತರಕರ್ನಾಟಕದ ಕೆಲ ಜಿಲ್ಲೆಗಳಿಗೆ ಬೆಂಗಳೂರಿಗಿಂತ ಗೋವಾ, ಮುಂಬೈ, ಹೈದರಾಬಾದ್ ಹತ್ತಿರವೆನಿಸುವುದರಿಂದ ಅತ್ತ ವಲಸೆ ಹೋಗುವುದಿದೆ. ಎಲ್ಲ ರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ಒಂದು ರಾತ್ರಿಯ ಬಸ್ಸೋ, ರೈಲಿನ ಪ್ರಯಾಣದ ದೂರಕ್ಕೆ ಕೆಲಸ ಆರಸಿ ಹೋಗುವುದು ಸಾಮಾನ್ಯ. ಕೆಲವೆಡೆ ಜೂನ್ನಿಂದ ಆರು ತಿಂಗಳು ತಮ್ಮ ಹಳ್ಳಿಯಲ್ಲೇ ಕೃಷಿ ದುಡಿಮೆ ಮಾಡಿ ಮತ್ತೆ ಆರು ತಿಂಗಳು ಹೊರ ಹೋಗುವವರಿದ್ದಾರೆ.
ಆದರೆ ಈ ನಾಲ್ಕು ರಾಜ್ಯಗಳ ವಲಸಿಗರ ಕಥೆ ಹಾಗಿಲ್ಲ. ದೆಹಲಿ ಸುತ್ತಮುತ್ತ ಲಾಕಡೌನ್ ತರುವಾಯ ನೆಡೆದು ಹೊರಟವರಲ್ಲಿ ಶೇ. 90 ರಷ್ಟು ಮಂದಿ ಇದೇ ನಾಲ್ಕು ರಾಜ್ಯದವರು. ನೋಯ್ಡಾ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲೂ ಈ ನಾಲ್ಕು ರಾಜ್ಯಗಳ ಶ್ರಮಿಕರೇ ಆವರಿಸಿಕೊಂಡಿದ್ದಾರೆ.
ಈ ನಾಲ್ಕು ರಾಜ್ಯಗಳ ಶ್ರಮಿಕರು ಕೆಲಸ ಆರಸಿ ಎಷ್ಟೋ ದೂರ ಹೋಗುತ್ತಾರೆ. ವರ್ಷವಿಡೀ ಯಾವುದೋ ರಾಜ್ಯದ ಮೂಲೆಯಲ್ಲಿ ದುಡಿಯುತ್ತಲೇ ಇರುತ್ತಾರೆ. ಕೊನೆಗೊಂದು ಸೂರು ಇಲ್ಲದೆ ಅತಂತ್ರ ಸ್ಥಿತಿಯಲ್ಲೆ ವರ್ಷಗಳನ್ನು ದೂಡುತ್ತಾರೆ. ಯಾಕೆ ಹೀಗೆ ? ಈ ನಾಲ್ಕು ರಾಜ್ಯಗಳ ಸಮಸ್ಯೆ ಏನು ? ಅಲ್ಲಿನ ಸರಕಾರಗಳು ಎಂಟು – ಹತ್ತು ಸಾವಿರ ಸಂಬಳದ ಉದ್ಯೋಗವನ್ನೂ ತಮ್ಮವರಿಗೆ ಕೊಡಲಾರದ ಸ್ಥಿತಿಯಲ್ಲಿ ಏಕಿವೆ ? ಗಂಗೆ, ಯಮುನೆ ಸೇರಿದಂತೆ ಗೋಮತಿ, ಭಾಗಮತಿ, ಗಂಡಕಿ, ಮಹಾನದಿ, ಹೂಗ್ಲಿ, ತೀಸ್ತಾ, ದಾಮೋದರ್ ಹೀಗೆ ಹತ್ತಾರು ದೊಡ್ಡ ನದಿಗಳು ಈ ರಾಜ್ಯಗಳಲ್ಲಿ ಹರಿಯುತ್ತವೆ. ಅರಣ್ಯ, ಖನಿಜ ಸಂಪತ್ತು, ಒಳ್ಳೆಯ ಕೃಷಿ ಭೂಮಿಯೂ ಇದೆ. ಆದರೂ ಏಕೆ ಈ ದುರವಸ್ಥೆ ? ಇವತ್ತು ಈ ನಾಲ್ಕು ರಾಜ್ಯಗಳ ಲಕ್ಷಾಂತರ ಜನ ದೂರದ ರಾಜ್ಯಗಳಲ್ಲೆಲ್ಲೋ ರಸ್ತೆಯಲ್ಲಿ ನಿಂತಿದ್ದಾರೆಂದರೆ ಇದಕ್ಕೆ ಹೊಣೆ ಈ ರಾಜ್ಯಗಳನ್ನು ಕಳೆದ 50 ವರ್ಷ ಆಳಿದವರೇ ಆಗುತ್ತಾರೆ. 1970 ರಿಂದ 2020 ರವರಗೆ ಈ ರಾಜ್ಯಗಳನ್ನು ಆಳಿದವರು ಯಾರು ? ಯಾವ, ಯಾವ ವಿಚಾರಧಾರೆಯವರು ಆಡಳಿತದ ಚುಕ್ಕಾಣಿ ಹಿಡಿದಿದ್ದರು ಎಂಬುದನ್ನು ನೋಡಿದರೆ ಸಮಸ್ಯೆಯ ಮೂಲ ಸ್ಪಷ್ಟವಾಗುತ್ತದೆ.
ಕಳೆದ 50 ವರ್ಷಗಳಲ್ಲಿ ಈ ರಾಜ್ಯಗಳು ಕಂಡ ಪ್ರಮುಖ ಮುಖ್ಯಮಂತ್ರಿಗಳು ಯಾರ್ಯಾರು ?
ಉತ್ತರಪ್ರದೇಶ : ಚರಣ ಸಿಂಗ್, ವಿ ಪಿ ಸಿಂಗ್, ಹೆಚ್ ಎನ್ ಬಹುಗುಣ, ಎನ್ ಡಿ ತಿವಾರಿ, ಕಲ್ಯಾಣ ಸಿಂಗ್, ಮುಲಾಯಮ್ ಸಿಂಗ್ ಯಾದವ್, ರಾಜನಾಥ್ ಸಿಂಗ್, ಮಾಯಾವತಿ, ಅಖಿಲೇಶ್ ಯಾದವ್, ಯೋಗಿ ಆದಿತ್ಯನಾಥ್.
ಬಿಹಾರ : ಕರ್ಪೂರಿ ಠಾಕೂರ್, ಲಲ್ಲೂಪ್ರಸಾದ್ ಯಾದವ್ , ರಾಬ್ಡಿದೇವಿ, ಜಿತಿನ್ ರಾಮ್ ಮಾಂಜಿ, ನಿತೀಶ್ ಕುಮಾರ್.
ಪಶ್ಚಿಮ ಬಂಗಾಳ : ಸಿದ್ಧಾರ್ಥ ಶಂಕರ್ ರೇ, ಜ್ಯೋತಿ ಬಸು, ಬುದ್ಧದೇವ್ ಭಟ್ಟಾಚಾರ್ಯ, ಮಮತಾ ಬ್ಯಾನರ್ಜಿ
ಒರಿಸ್ಸಾ : ನಂದಿನಿ ಸತ್ಪತಿ ನೀಲಮಣಿ ರೌತ್ ರಾಯ್, ಜೆ ಬಿ ಪಾಟ್ನಾಯಕ್, ಗಿರಿಧರ್ ಗೊಮಾಂಗೊ, ಬಿಜು ಪಾಟ್ನಾಯಕ್, ನವೀನ್ ಪಾಟ್ನಾಯಕ್.
ಇವರಲ್ಲಿ ಅನೇಕರು ಸಮಾಜವಾದಿ ಸಿದ್ಧಾಂತದಿಂದ, ಕಮ್ಯುನಿಸ್ಟ್ ವಿಚಾರದಿಂದ ಬಂದವರು. ದುಡಿಯುವ ವರ್ಗದ ಬಗ್ಗೆ ಇನ್ನಿಲ್ಲದ ಕಾಳಜಿ ತೋರಿದವರು. ಅಪವಾದಕ್ಕೆ ಕೆಲವರನ್ನು ಬಿಟ್ಟರೆ ಹೆಚ್ಚಿನವರು ಒಳ್ಳೆಯ ಆಡಳಿತ ನೀಡಿದರು ಎಂಬ ಪ್ರತೀತಿಯೂ ಇದೆ. ಆದರೂ ಈ ಮುಖ್ಯಮಂತ್ರಿಗಳು ಇಂದು ತಮ್ಮ ಸಿದ್ಧಾಂತಗಳ ಸಮೇತ ಕಟಕಟೆಯಲ್ಲಿ ನಿಲ್ಲಬೇಕಾಗಿದೆ.
ಪಶ್ಚಿಮ ಬಂಗಾಳ ಬಿಟ್ಟರೆ ಉಳಿದೆಡೆ ಭೂ ಸುಧಾರಣಾ ಕಾಯ್ದೆಯ ಜಾರಿಯಲ್ಲಿ ನ್ಯೂನತೆಗಳು ಹಾಗೆ ಉಳಿದವು, ಶಿಕ್ಷಣದಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿಸಲಿಲ್ಲ, ರಾಜ್ಯಗಳ ರಾಜಧಾನಿ ಬಿಟ್ಟರೆ ಎರಡನೇ ಹಂತದ ನಗರಗಳು ರೂಪಗೊಳ್ಳಲಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಬಲಾಡ್ಯ ಜಾತಿಗಳ ಶೋಷಣೆ ಹೆಚ್ಚೇ ಆಗಿದೆ, ಜಾಗತಿಕರಣದ ಮೂಲಕ ವಿಜ್ಞಾನ – ತಂತ್ರಜ್ಞಾನಕ್ಕೆ ತೆರೆದುಕೊಳ್ಳಲಿಲ್ಲ, ಗ್ರಾಮೀಣ ಕಾಯಕಗಳು ನಶಿಸಿ ಹೋದವು… ಹೀಗೆ ದುಡಿಯುವ ಜನರ ವಲಸೆಗೆ ಕಾರಣಗಳನ್ನು ಪಟ್ಟಿ ಮಾಡಬಹುದು.
ವಲಸೆ ಬಂದ ಕಾರ್ಮಿಕರನ್ನು ಅಲ್ಲಲ್ಲಿನ ರಾಜ್ಯಗಳು ಹತ್ತಾರು ಬಗೆಯಲ್ಲಿ ದುಡಿಸಿಕೊಳ್ಳುತ್ತವೆ, ಆದರೆ ಮೂಲಸೌಲಭ್ಯ ಕೊಡುವ ಬಗ್ಗೆ ತಲೆಕೆಡಸಿಕೊಳ್ಳುವುದಿಲ್ಲ ಏಕೆಂದರೆ ಈ ರಾಜ್ಯಗಳಿಗೆ ಇವರು ನಮ್ಮವರಲ್ಲ, ಇವರುಗಳು ಬಿಟ್ಟು ಬಂದ ರಾಜ್ಯದವರೂ ತಲೆ ಕೆಡಸಿಕೊಳ್ಳುತ್ತಿಲ್ಲ, ಏಕೆಂದರೆ ಇವರು ಅವರ ಕಣ್ಣೆದುರಿಲ್ಲ.
ಬಿಹಾರದ ದಲಿತ ಚಿಂತಕ ಡಾ. ಸಂಜಯ್ ಪಾಸ್ವಾನ್ – ಈ ವಿಷಯದ ಕುರಿತು ಚರ್ಚಿಸುವಾಗ – ಒಂದು ಮಾತು ಹೇಳಿದರು ‘ನಮ್ಮಲ್ಲಿ ಧಾರ್ಮಿಕ ಚಳವಳಿ ನಡೆಯಲಿಲ್ಲ, ಸಾಮಾಜಿಕ ಚಳವಳಿ ನಡೆಯಲಿಲ್ಲ, ಬರೀ ರಾಜಕೀಯ ಚಳವಳಿ ನಡೆಯಿತು. ಹೀಗಾಗಿ ಒಳ್ಳೆಯ ಯೋಜನೆಗಳೂ ಕೆಳಗೆ ಇಳಿಯಲಿಲ್ಲ, ಯೋಜನೆ ಮಾಡಿದವರು ದೊಡ್ಡವರಾದರು. ಜನ ಮತ್ತೂ ನಿರ್ಗತಿಕರಾದರು’.
✍️ ವಾದಿರಾಜ್ , ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.