“ಇದು ಯಾವ ಯುಗ ?” ಎಂದು ಯಾರಾದರೂ ಕೇಳಿದರೆ, ಅದಕ್ಕೆ ನನ್ನ ಉತ್ತರ “ಇದು ಶಿಕ್ಷಣದ ಯುಗ” ಎಂದು.
ಅರೇ! ಇದೇನು ಉತ್ತರ ಮಹಾ! ಎಂದುಕೊಳ್ಳುತ್ತೀರೇನು ? ಆದರೆ ಶಿಕ್ಷಣ ಏತಕ್ಕಾಗಿ ಎಂದು ಕೇಳಿದರೆ, ಪ್ರತಿಯೊಬ್ಬನೂ ಕೊಡಬಹುದಾದ ಉತ್ತರ ” ಜೀವನ ನಿರ್ವಹಣೆಗೆ” .” “ಉದ್ಯೋಗ ಸಂಪಾದನೆಗೆ ” !?
ಒಟ್ಟಿನಲ್ಲಿ “ಹಣ ಸಂಪಾದನೆಗೆ” .!
ಬಹುಶಃ ಇದರ ಕುರಿತಾಗಿ ಒಂದು ಮಗುವಿಗೆ ಕೂಡ ತಿಳಿದಿರುವಂತೆ ನಾವು ತಯಾರು ಮಾಡುತ್ತೇವೆ.
ಆದರೆ ಈ ಎಲ್ಲಾ ನಮ್ಮ ಕಲ್ಪನೆ, ಸಂಕಲ್ಪಗಳನ್ನು ಸ್ವಾಮಿ ವಿವೇಕಾನಂದರು ತೀಕ್ಷ್ಣವಾಗಿ ಮುರಿದು ಹಾಕುತ್ತಾರೆ.
ಅವರು ಕಲಿಸಿದ ಪಾಠಗಳು ನಮ್ಮಲ್ಲಿ ನಿರಂತರವಾಗಿ ಸ್ಫೂರ್ತಿಯ ಚಿಲುಮೆಯನ್ನು ಚಿಮ್ಮಿಸುವ ನಾದ ತರಂಗಗಳು.
ಎಲ್ಲಾ ವಯಸ್ಸು, ಜಾತಿ ಜನಾಂಗ, ದೇಶಗಳನ್ನು ಮೀರಿ ಅವರ ಮಾತು ಕೆಲಸ ಮಾಡುತ್ತದೆ. ಆದ ಕಾರಣ, ಜಗತ್ತಿಗಾಗಿ ಬದುಕುವುದು ಎಂದರೆ, ಹಾಗೆ ಬದುಕುವುದರ ಮೂಲಕವೇ, ತಮ್ಮ ಮಾತು ಕೆಲಸ ಮಾಡುವಂತೆ ಮಾಡುವುದು. ಅಂದರೆ, ಬದುಕೇ ಅವರ ಮಾತಾಗುವುದು. ನಮಗೆ ಮಾತೇ ಬದುಕು.!
ವಿವೇಕಾನಂದರಂತಹವರ ಬದುಕು ನಮ್ಮ ಮಾತು ಮನಸ್ಸುಗಳನ್ನು ಮೀರಿ ನಿಂತಿರುತ್ತದೆ.
1893 ರಲ್ಲಿ ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಅವರು ಮಾತಾಡಿದ್ದು ” ಹಿಂದೂ ಧರ್ಮ” ದ ಬಗ್ಗೆ. ಅದರಲ್ಲೂ ವೇದಗಳ ಮಹತ್ವದ ಬಗ್ಗೆ.
” ವೇದಗಳು ಯಾವಾಗ ಬಂತು? ” ಯಾರಾದರೂ ಕೇಳಿದರೆ, ಉತ್ತರ ಆ ಭಾಷಣದಲ್ಲಿತ್ತು. ವೇದಗಳು ಅನಾದಿ ಮತ್ತು ಅನಂತ. ವೇದಕ್ಕೆ ಮೊದಲಿಲ್ಲ, ವೇದಕ್ಕೆ ಸಾವಿಲ್ಲ. ವೇದಗಳು ಇಂತಹ ಕಾಲಘಟ್ಟದಲ್ಲಿ ಬಂತು, ಎಂದರೆ ಅದನ್ನು ಕಾಲದ ಕಟ್ಟಿಗೆ ನಾವು ಒಳಪಡಿಸಿದ ಹಾಗಾಯಿತು. ವೇದಗಳನ್ನು ಇಂತಹ ವ್ಯಕ್ತಿ ಜಾರಿಗೆ ತಂದರು ಎಂದರೆ, ಅದನ್ನು ವ್ಯಕ್ತಿಯ ಮಟ್ಟಕ್ಕೆ ಸೀಮಿತಗೊಳಿಸಿದ ಹಾಗಾಯಿತು. ಆದರೆ ಇದೆರಡೂ ಅಲ್ಲ.
ವೇದಗಳೆಂದರೆ ಆಧ್ಯಾತ್ಮಿಕ ಅನುಶಾಸನ. ಆದಕಾರಣ ವೇದಗಳನ್ನು ಅರಿಯಬೇಕಾದರೆ, ಅದಕ್ಕೆ ವಿಶೇಷವಾದ ರೀತಿಯ ಶಿಕ್ಷಣ ಅಗತ್ಯ. ಇಂತಹ ಶಿಕ್ಷಣವೇ ರಾಷ್ಟ್ರದ ಅಭ್ಯುದಯಕ್ಕೆ ಅಗತ್ಯವಾದ ಪರಿಕರ ಎಂದು ಒತ್ತಿ ಹೇಳಿದವರಲ್ಲಿ ವಿವೇಕಾನಂದರು ಮುಂಚೂಣಿಯಲ್ಲಿದ್ದಾರೆ.
ಬ್ರಿಟಿಷರ ಅಧಿಕಾರ ಅವಧಿಯಲ್ಲಿ, ಈ ರೀತಿಯ ಭಾರತೀಯ ಚಿಂತನ ಪರಂಪರೆ ರೀತಿಯಲ್ಲಿ ಶಿಕ್ಷಣ ಇರಲಿಲ್ಲ ಎಂಬುದು ಆ ಕಾಲದ ಅನಾನುಕೂಲ ಎಂಬುದು ವಿವೇಕಾನಂದರ ಅಭಿಪ್ರಾಯ ಆಗಿತ್ತು. ಬ್ರಿಟಿಷರು ಜಾರಿಗೆ ತಂದದ್ದು ವ್ಯಕ್ತಿತ್ವವುಳ್ಳ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಶಿಕ್ಷಣವಲ್ಲ. ಬ್ರಿಟಿಷರ ಶಿಕ್ಷಣ ಎಷ್ಟೊಂದು ಅಪಾಯಕಾರಿಯಾಗಿತ್ತು ಎಂದರೆ, ಅದು ನಮ್ಮ ಪೂರ್ವಜರು ಹೇಳಿಕೊಟ್ಟ ಧರ್ಮ, ಪರಂಪರೆಗಳನ್ನು ಕೆಟ್ಟದ್ದು ಎಂದು ಬಿಂಬಿಸಿ, ಆ ವಿಷಯಗಳಿಗೆ ತಲೆ ಹಾಕದಂತೆ ತಡೆಯುವ ರೀತಿಯಲ್ಲಿತ್ತು. ಅರ್ಥಾತ್, ನಮ್ಮನ್ನು ಸಾಂಸ್ಕೃತಿಕವಾಗಿಯೂ ದಾಸ್ಯತೆಯಲ್ಲಿ ಇಡುವ ಶಿಕ್ಷಣ ಪದ್ಧತಿ ಆಗಿತ್ತು.
ಆದರೆ ವಿವೇಕಾನಂದರು, ನಮ್ಮ ದೇಶವನ್ನು ಈ ದೇಶದ ಆಧ್ಯಾತ್ಮಿಕ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯದ ಪ್ರಾಮುಖ್ಯತೆಯನ್ನು ಘಂಟಾಘೋಷವಾಗಿ ಹೇಳಿದ್ದರು. ಸಮಾಜದ ಎಲ್ಲಾ ವರ್ಗ, ಪಂಗಡಗಳಿಗೂ ಶಿಕ್ಷಣ ಒದಗಿಸಬೇಕು ಎಂದು ಅವರ ಆಶಯವಾಗಿತ್ತು. ರಾಷ್ಟ್ರವನ್ನು ಶಕ್ತಿಶಾಲಿಯಾಗಿ ಸುವ ಒಂದೇ ಒಂದು ಮಾರ್ಗವೆಂದರೆ ಅದು ಶಿಕ್ಷಣದ ಮೂಲಕ ಮಾತ್ರ ಎಂಬುದು ಅವರ ಅಂಬೋಣ ವಾಗಿತ್ತು.
ಹಾಗಾದರೆ ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ ಇತ್ಯಾದಿಗಳನ್ನು ಕಲಿಯುವುದು ಶಿಕ್ಷಣ ವಲ್ಲವೇ ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
ಹೌದು, ಖಂಡಿತವಾಗಿಯೂ ಇದನ್ನು ನಾವೆಲ್ಲ ಕಲಿಯಲೇಬೇಕು. ಆದರೆ ಆ ವಿಷಯಗಳಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಆಧ್ಯಾತ್ಮಿಕ ವಿಷಯಕ್ಕೂ ಕೊಡಬೇಕು . ಅದಕ್ಕೋಸ್ಕರ ವೇದಗಳ ಕುರಿತಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂಬುದನ್ನು ಸೂಚಿಸಿದ್ದರು. ವೇದಗಳು ಸರ್ವಾತ್ಮ ಭಾವವನ್ನು ಹೇಳುತ್ತವೆ. ಸರ್ವಾತ್ಮ ಭಾವವನ್ನು ಹೊಂದುವುದೇ ಪ್ರತಿಯೊಬ್ಬ ಜೀವನ ಗುರಿ ಎಂಬುದನ್ನು ನಿರ್ದೇಶಿಸುತ್ತದೆ.
ಆ ರೀತಿ ಸರ್ವಾತ್ಮ ಭಾವದ ಧೋರಣೆ ಇದ್ದಾಗಲೇ ಸಹಾನುಭೂತಿಯ ಸಾಧ್ಯತೆ ಇರುವುದು ಎಂಬುದನ್ನು ವಿವೇಕಾನಂದರು ಬಿಡಿಸಿ ಹೇಳಿದ್ದರು. ಸಮಾಜದಲ್ಲಿ ಈ ಸಹಾನುಭೂತಿ ಇದ್ದಾಗ ಮಾತ್ರ ಚಾರಿತ್ಯ ನಿರ್ಮಾಣ ಸಾಧ್ಯ. ಚಾರಿತ್ರ್ಯ ಎನ್ನುವುದು ನೀತಿಯ ಅಡಿಪಾಯದ ಮೇಲೆ ನಿಲ್ಲುವಂಥದ್ದು. ನೀತಿಗೆ ಧೈರ್ಯದ ಸಾಹಚರ್ಯ ಬೇಕು.
ಏಕೆಂದರೆ ಒಬ್ಬ ವ್ಯಕ್ತಿ, ಎಷ್ಟೇ ಕಷ್ಟಗಳನ್ನು ಎದುರಿಸಿದರು ಕೂಡಾ , ಸರಿಯಾದ ದಾರಿಯಲ್ಲಿ ನಡೆಯಬೇಕು. ಈ ರೀತಿಯ ನಡೆಯಿಂದ ಮಾತ್ರ, ಜಗತ್ತಿನ ಸಂಕಟಗಳನ್ನು ದೂರ ಮಾಡಬಲ್ಲ ಸಮಾಜವನ್ನು ಕಟ್ಟುವುದು ಸಾಧ್ಯ. ಉತ್ತಮ ಸಮಾಜವನ್ನು ನಿರ್ಮಿಸದ ಶಿಕ್ಷಣವು, ಶಿಕ್ಷಣ ಎಂಬ ಹೆಸರಿನಿಂದ ಕರೆಯಲ್ಪಡುವುದಕ್ಕೆ ಯೋಗ್ಯವಲ್ಲ ಎಂಬ ನಿಖರವಾದ ಮಾತುಗಳು ಅವರ ಕಲ್ಪನೆಯ ಶಿಕ್ಷಣ ಹೇಗಿತ್ತು ಎಂಬುದಕ್ಕೆ ಮಾರ್ಗದರ್ಶಿ. ಓದುವುದು, ಬರೆಯುವುದು ಮತ್ತು ಕೆಲವೊಂದು ಸಿದ್ಧಾಂತಗಳನ್ನು ಬಾಯಿಪಾಠ ಮಾಡುವುದು, ಬೇರೆಬೇರೆ ಸುಧಾರಕರ ತತ್ವಗಳನ್ನು ಉರು ಹೊಡೆಯುವುದು- ನಿಷ್ಪ್ರಯೋಜಕವಾದದ್ದು. ಸಮಾಜದ ಉದ್ಧಾರಕ್ಕೆ ಅವುಗಳನ್ನು ಅನುಷ್ಠಾನಗೊಳಿಸದಿದ್ದರೆ ಆ ಶಿಕ್ಷಣ ಒಂದು ಶುಷ್ಕ ಪಾಂಡಿತ್ಯ ಅಷ್ಟೇ. ರಾಷ್ಟ್ರವನ್ನು ಎತ್ತರಿಸುವುದಕ್ಕೆ ಹಾಗೂ ರಾಷ್ಟ್ರವನ್ನು ಅದರ ಪರಮ ವೈಭವದ ಉತ್ತುಂಗತೆಗೆ ಒಯ್ಯದೆ ಇದ್ದರೆ, ಇಡೀ ಶಿಕ್ಷಣದ ಉದ್ದೇಶ ವ್ಯರ್ಥವಾಗುವುದು.
ಮದರಾಸಿನಲ್ಲಿ ವೇದಗಳನ್ನು ಕಲಿಸುವಂತಹ ಶಾಲೆಯನ್ನು ಸ್ಥಾಪಿಸಲು ಸೂಚಿಸಿದ್ದು ಇದೇ ಕಾರಣಕ್ಕೆ. ಅದರಲ್ಲೂ ಯುವಕರನ್ನು ವೇದಾಧ್ಯಯನದ ಕಡೆಗೆ ಒಯ್ಯುವುದಕ್ಕೆ. ವಿವೇಕಾನಂದರು ಏನು ಹೇಳಿದರೂ, ಮಾಡಿದರೂ, ಅವರ ದೃಷ್ಟಿ ಯುವಕರ ಕಡೆಗೆ ಇದ್ದೇ ಇತ್ತು. ಆದುದರಿಂದ ಇಂದಿಗೂ, ಎಂದೆಂದಿಗೂ ಅವರು ಯುವಕರಿಗೆ ಮಾದರಿ ರೂಪ. ಸ್ಫೂರ್ತಿಯ ವಿದ್ಯುಚ್ಛಕ್ತಿ. ಭಾರತೀಯ ವೇದಗಳನ್ನು ಅಧ್ಯಯನ ಮಾಡಿದ ನಂತರ ಜಗತ್ತಿನ ಇತರ ಧರ್ಮಗಳ ಅಧ್ಯಯನವನ್ನು, ಅವುಗಳ ಮೂಲತತ್ವಗಳನ್ನು ಯುವಕರು ಅಧ್ಯಯನ ಮಾಡಬೇಕೆಂಬುದು ವಿವೇಕಾನಂದರ ಅಂತರಂಗದ ಅಪೇಕ್ಷೆಯಾಗಿತ್ತು.
ಒಬ್ಬ ಮಾದರಿ ಶಿಕ್ಷಕರು ಧರ್ಮಗಂಥಗಳ ಅಂತಃಸತ್ವವನ್ನು, ಮೂಲ ಸಾರವನ್ನು ಅರಿತವನಾಗಿರಬೇಕು. ನಮ್ಮಲ್ಲಿ ಬಹಳಷ್ಟು ಸಲ ಧರ್ಮಗ್ರಂಥಗಳ ಮೂಲ ಅರ್ಥದ ಬದಲಿಗೆ, ಕಲ್ಪಿತ ಅರ್ಥದ ಅಥವಾ ಅರ್ಥದ ಆಭಾಸವನ್ನು ಕಲಿಸುವ ಸಂದರ್ಭದಲ್ಲಿ ವಿವೇಕಾನಂದರ ಮಾತುಗಳು ತುಂಬಾ ಪ್ರಸ್ತುತ. ಕಲಿಸುವವರು ತಾವು ಮೊದಲು ಸರಿಯಾದುದನ್ನು ತಿಳಿದಿರಬೇಕು ಮತ್ತು ಹಾಗೆ ತಿಳಿದಿದ್ದನ್ನು ಶಿಷ್ಯರಿಗೆ ವರ್ಗಾಯಿಸುವ ಸಾಮರ್ಥ್ಯ ಹೊಂದಿರಬೇಕು. ನಂತರವೇ ಅವರಿಗೆ ಅಧ್ಯಾಪನ ಮಾಡುವ ಹಕ್ಕು. ಅಷ್ಟೇ ಅಲ್ಲ, ಶಿಕ್ಷಕರು ವಿದ್ಯಾರ್ಥಿಗಳ ಅಂತರಾತ್ಮವನ್ನು ಹೊಕ್ಕು ತನ್ನ ಅಂತರಾತ್ಮವನ್ನು ವಿದ್ಯಾರ್ಥಿಗಳ ಹೃದಯದ ನೆಲೆಗೆ ಕಳುಹಿಸಿ, ಅವರ ದೃಷ್ಟಿಯಿಂದ ನೋಡಲು ಸಮರ್ಥರಿರಬೇಕು. ಗುರುಗಳಿಗೆ ಶಿಷ್ಯರೊಂದಿಗೆ ನೇರಾನೇರ ಸಂಪರ್ಕ ಇರಬೇಕು.
ಇವಿಷ್ಟು ವಿವೇಕಾನಂದರ ಪರಿಕಲ್ಪನೆಯ ಶಿಕ್ಷಣ.
ಅವರು ಬಂದು ಹೋಗಿ ಬಹಳ ಕಾಲ ಕಳೆದ ನಂತರವೂ, ಅವರ ಶಿಕ್ಷಣದ ಕುರಿತಾದ ದೃಷ್ಟಿಕೋನ ಹಾಗೂ ವಿಚಾರಧಾರೆಗಳು, ಇಂದಿನ ಮಟ್ಟಿಗೆ ಎಷ್ಟೊಂದು ಪ್ರಸ್ತುತ ಎಂಬುದು ಸೂಕ್ಷ್ಮವಾಗಿ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ನಮಗೆ ಅರ್ಥವಾಗಬಹುದು. ಅವರ ಮರಣಾ ನಂತರ ಶತಮಾನ ಕಳೆದರೂ, ಅವರ ಮಾತುಗಳು ಬೇರೆ ಬೇರೆ ಕಡೆಗಳಲ್ಲಿ, ಜಗತ್ತಿನಾದ್ಯಂತ ಮಂಥನಕ್ಕೆ ಒಳಗಾಗುತ್ತಿದೆ ಎಂದರೆ, ವಿವೇಕಾನಂದರ ಪ್ರಾಮುಖ್ಯತೆ ಎಷ್ಟು ಎಂಬುದು ಮನದಟ್ಟಾಗುವುದು.
ಒಂದು ಅರ್ಥದಲ್ಲಿ, ಅವರು ಶಿಕ್ಷಣಕ್ಕೆ ಮರುವ್ಯಾಖ್ಯಾನ ಕೊಟ್ಟರು. ಲೋಕದ ಜ್ಞಾನವನ್ನು ಕೊಡುವ ಶಿಕ್ಷಣಕ್ಕೆ ಉಪನಿಷತ್ತಿನಲ್ಲಿ ” ಪ್ರೇಯಸ್ಸು ” ಎಂದು ಕರೆಯಲಾಗಿದೆ. ಲೋಕೋತ್ತರವಾದ ಜ್ಞಾನವನ್ನು ಕೊಡುವ ಶಿಕ್ಷಣವನ್ನು ” ಶ್ರೇಯಸ್ಸು” ಎಂದು ಕರೆಯಲಾಗಿದೆ.
ಸ್ವಾಮಿ ವಿವೇಕಾನಂದರು, ಪ್ರೇಯಸ್ಸಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಶ್ರೇಯಸ್ಸಿಗೂ ಕೊಡಬೇಕು ಎನ್ನುವುದರ ಮುಖಾಂತರ , ಉಪನಿಷತ್ತನ್ನು ಆಧುನಿಕ ಗೊಳಿಸಿದರು ಎಂದರೆ ತಪ್ಪಾಗಲಾರದು. ಸ್ವಾಮಿ ವಿವೇಕಾನಂದರ ಮಾತು ಎಂದರೆ ಹಾಗೆಯೇ. ಅದು ಆಧುನಿಕ ಉಪನಿಷತ್ತು.
✍️ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು ಹಾಗೂ ರಾಷ್ಟ್ರೀಯ ಚಿಂತಕರು.
ಪ್ರಸಾದ್ ಹೆಲ್ತ್ ಕೇರ್ ಸೆಂಟರ್, ಪುರುಷರಕಟ್ಟೆ, ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ.
ಮೊಬೈಲ್:9740545979
rpbangaradka@gmail.com.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.