ಕಾಪು : ಮಾರುಕಟ್ಟೆಯಲ್ಲಿ ಸಿಗುವ ತರಕಾರಿ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳುವುದರ ಬದಲಾಗಿ ಮನೆ, ಶಾಲಾ ವಠಾರದಲ್ಲಿ ನಿರ್ಮಿಸಲಾಗುವ ಸುಂದರ ಕೈದೋಟಗಳ ಮೂಲಕ ಬೆಳೆಸುವ ತರಕಾರಿ ಬೆಳೆಗಳು ಆರೋಗ್ಯದಾಯಕವಾಗಿರುತ್ತವೆ. ವಿದ್ಯಾರ್ಥಿಗಳು ಈಗಿನಿಂದಲೇ ಕೈದೋಟ ಬೆಳೆಸುವುದನ್ನು ಮುಖ್ಯ ಹವ್ಯಾಸವನ್ನಾಗಿಸಿ ಕೊಳ್ಳುವುದು ಸೂಕ್ತ ಎಂದು ಉಡುಪಿ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕನಗವಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿ. ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಮಾತನಾಡಿ, ರಾಸಾಯನಿಕ ಬಳಕೆಯ ತರಕಾರಿ ವಿಷಯುಕ್ತ ಆಹಾರವಾಗಿದ್ದು, ಸಾವಯವ ಗೊಬ್ಬರ ಬಳಕೆ ಮಾಡಿ ಕೈದೋಟದ ಮೂಲಕ ಆರೋಗ್ಯಕರವಾದ ತಾಜಾ ತರಕಾರಿಯನ್ನು ಬೆಳೆಸಬಹುದು. ಕೈದೋಟ ರಚನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ 588 ಕಿಟ್ಗಳನ್ನು ವಿತರಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕೈದೋಟ ನಿರ್ಮಾಣ ಬಿತ್ತನೆಗೆ ಸೀಮಿತವಾಗದೆ ಆರೈಕೆ ನಡೆಸಿ ಫಲಭರಿತವಾಗಿ ಮೂಡಿ ಬರುವಂತಾಗಬೇಕು ಎಂದರು.
ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ/ಸದಸ್ಯ ಕಟಪಾಡಿ ಶಂಕರ ಪೂಜಾರಿ, ವಿದ್ಯಾಂಗ ಉಪ ನಿರ್ದೇಶಕ ದಿವಾಕರ ಶೆಟ್ಟಿ, ವಿದ್ಯಾನಿಕೇತನ ಪ. ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಪಿ. ಕೃಷ್ಣ ರಾವ್ ಮಾತನಾಡಿದರು. 75ಕ್ಕೂ ಅಧಿಕ ಮಂದಿಗೆ ತೋಟಗಾರಿಕಾ ಕಿಟ್ಗಳನ್ನು ವಿತರಿಸಲಾಯಿತು.
ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಯುವ ಜೇಸಿ ವಿಭಾಗ ವಲಯ 15, ಜೇಸಿಐ ಕಾಪು ಮತ್ತು ಯುವ ಜೇಸಿ ಘಟಕ ಕಾಪು, ಉಡುಪಿ ಜಿ. ಪಂ. ತೋಟಗಾರಿಕಾ ಇಲಾಖೆ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಕೈದೋಟ ರಚನೆ ಮತ್ತು ತಾರಸಿ ತೋಟ ಅಭಿವೃದ್ಧಿ ಬಗ್ಗೆ ತರಬೇತಿ, ಮಾಹಿತಿ ಕಾರ್ಯಾಗಾರ, ಮತ್ತು ಕಿಟ್ ವಿತರಣೆ ಹಾಗೂ ಫಲಾಮೃತ ಸಸಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೇಸಿಐ ವಲಯ ಉಪಾಧ್ಯಕ್ಷ ಅನಿಲ್ ಕುಮಾರ್, ಕಾಪು ಜೇಸಿಐನ ಅಧ್ಯಕ್ಷ ಯೋಗೀಶ್ ರೈ,ಯುವ ಜೇಸಿ ಅಧ್ಯಕ್ಷ ಕಾರ್ತಿಕ್ ಆಚಾರ್ಯ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋದನಾ ಕೇಂದ್ರದ ಸಹ ಪ್ರಾಧ್ಯಾಪಕ ಎ. ವಿ. ಧನಂಜಯ್, ವಿಷಯ ತಜ್ಞ ಡಾ| ಚೆ„ತನ್ಯ ಎಚ್. ಎಸ್. ಉಪಸ್ಥಿತರಿದ್ದರು.
ಯುವ ಜೇಸಿ ವಿಭಾಗದ ವಲಯ ನಿರ್ದೇಶಕ ರಾಕೇಶ್ ಕುಂಜೂರು ಸ್ವಾಗತಿಸಿದರು. ಹಿರಿಯ ತೋಟಗಾರಿಕಾ ನಿರ್ದೇಶಕ ಎಸ್. ಸದಾಶಿವ ರಾವ್ ಪ್ರಸ್ತಾವನೆಗೈದರು. ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ| ವಿ. ಕೆ. ಉದ್ಯಾವರ್ ವಂದಿಸಿದರು. ಅನುವುಗಾರ ರಾಮಣ್ಣ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.