ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ. ಜನಸಂಖ್ಯಾ ಹೆಚ್ಚಳವು ಶಾಪವಲ್ಲ ಎಂದು ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಂಪತ್ತನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವ ರಾಷ್ಟ್ರಗಳು. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ ಹೀಗೆ ಅದೆಷ್ಟೋ ಅಭಿವೃದ್ಧಿಯ ಮಂತ್ರಗಳು. ಮಾನವನ ಬದುಕಿನಲ್ಲಿಯೂ ಅದೆಷ್ಟೋ ರೂಪಾಂತರಗಳು. ಉದಾರೀಕರಣ, ಖಾಸಗೀಕರಣ, ಜಾಗತೀಕರಣ, ಕೈಗಾರಿಕೀಕರಣ, ಆಧುನೀಕರಣ, ತಾಂತ್ರಿಕರಣ ಹೀಗೆ ಅನೇಕಾನೇಕ ಬದಲಾವಣೆಗಳ ಮುಖಾಂತರ, ಕ್ರಾಂತಿಗಳ ಮುಖಾಂತರ ಅಭಿವೃದ್ಧಿಶೀಲ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ನಾಗಾಲೋಟ.
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳೆಂಬ ನಾಲ್ಕು ಯುಗಗಳ ಜೊತೆಗೆ ನಾವಿಂದು ಡಿಜಿಟಲ್ ಯುಗವೆಂಬ ಮತ್ತೊಂದು ಯುಗವನ್ನು ಸೇರ್ಪಡೆ ಗೊಳಿಸಿದ್ದೇವೆ. ನಾವು ಇಂದು ಅದೆಷ್ಟು ಮುಂದುವರಿದಿದ್ದೇವೆ ಎಂದರೆ ವಿದ್ಯಾರ್ಜನೆಗಾಗಿ ವಾರನ್ನವಿಲ್ಲ, ಗುರುಗಳ ಬಳಿಗೆ ತೆರಳಬೇಕಾದ ಅನಿವಾರ್ಯತೆ ಇಲ್ಲ. ಗ್ರಂಥಾಲಯಗಳಿಗೆ ಹೋಗಬೇಕಾಗಿಲ್ಲ. ಕೈಲ್ಲೊಂದು ಮೊಬೈಲ್ ಇಲ್ಲವೇ ಕಂಪ್ಯೂಟರ್, ಅದಕ್ಕೊಂದು ಅಂತರ್ಜಾಲದ ಸಂಪರ್ಕ. ಇಷ್ಟಿದ್ದರೆ ಇಡೀ ವಿಶ್ವವೇ ನಮ್ಮ ಅಂಗೈಯಲ್ಲಿ. ವಸ್ತುಗಳ ಖರೀದಿಗಾಗಿ ಅಂಗಡಿಗಳಿಗೆ ಹೋಗಬೇಕಾಗಿಲ್ಲ, ಚೌಕಾಶಿಯ ಪ್ರಮೇಯವೇ ಇಲ್ಲ. ನಾವು ಕೆಲಸ ಮಾಡುವ ಸ್ಥಳದಿಂದಲೋ, ಬಸ್ಸು, ರೈಲು ಪ್ರಯಾಣದಲ್ಲಿಯೋ ಅಥವಾ ಇನ್ನೆಲ್ಲಿಂದಲೋ ನಮಗೆ ಅಗತ್ಯವೋ ಅನಗತ್ಯವೋ ಅರಿವಿಲ್ಲದೆ ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಸಾಮಗ್ರಿಗಳು, ಬಟ್ಟೆಬರೆ, ಔಷಧಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದೇವೆ. ತೋಟ, ಕೃಷಿಯಲ್ಲಿ ಮನಸ್ಸಿಲ್ಲ. ಸಾಂಪ್ರದಾಯಿಕ ತಿಂಡಿತಿನಿಸುಗಳ, ಆಟೋಟಗಳ ಪರಿಚಯವಿಲ್ಲ. ಮನುಷ್ಯ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಮಾಡಿಕೊಂಡಿದ್ದೇವೆ. ಜನರ ನಡುವೆ ನಂಬಿಕೆಯಿಲ್ಲ, ಗೌರವವಿಲ್ಲ, ಪ್ರೀತಿ ವಿಶ್ವಾಸವಿಲ್ಲ. ಕೊಡುಕೊಂಡುಕೊಳ್ಳುವಿಕೆಯ ವಿಚಾರವೇ ಇಲ್ಲ. ಏನಿದ್ದರೂ ಹಣದ ವ್ಯವಹಾರ. ತಾನಾಯಿತು, ತನ್ನ ಬದುಕು ಆಯಿತು ಎನ್ನುವ ಮನೋಭಾವವೇ ಹೆಚ್ಚುತ್ತಿದೆ.
ಅಭಿವೃದ್ಧಿಯ ಹೆಸರಿನಲ್ಲಿ ನಾವಿಂದು ಪರಿಸರವನ್ನು ನಾಶ ಮಾಡುತ್ತಿದ್ದೇವೆ. ನಗರೀಕರಣದ ಹೆಸರಿನಲ್ಲಿ ನೂರಾರು ವರ್ಷಗಳಿಂದ ನೆರಳು, ಗಾಳಿ ನೀಡುತ್ತಿದ್ದ ಮರಗಳನ್ನು ಕಡಿದು ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ. ಹಕ್ಕಿಗಳ ಕಲರವ, ಕೋಗಿಲೆಯ ಇಂಪಾದ ದನಿ, ದುಂಬಿಗಳ ಝೇಂಕಾರ ಇಂದು ಕೇವಲ ಮೊಬೈಲ್ ರಿಂಗ್ ಟೋನ್ಗಳಾಗಿವೆ. ಆ ಕಾರಣದಿಂದಲೋ ಏನೋ ಇಂದು ಪ್ರಕೃತಿ ಮಾನವನೊಡನೆ ಮುನಿಸಿಕೊಂಡ ತರಹ ಅನ್ನಿಸುತ್ತಿದೆ. ಕಷ್ಟಗಳನ್ನು ತನ್ನೊಡಲೊಳಗೆ ಹಾಕಿಕೊಂಡು ಮನುಷ್ಯನಿಗೆ ಬರೀ ಸುಖವನ್ನೇ ಕರುಣಿಸುವ ಈ ಪ್ರಕೃತಿ ಮಾತೆ ಇಂದು ಮನುಷ್ಯನನ್ನು ಸಹ ತನ್ನೊಡಲೊಳಗೆ ಸೇರಿಸಿಕೊಳ್ಳಲು ಆರಂಭಿಸಿದ ತರಹ ಕಾಣುತ್ತಿದೆ. ಬಹುಶಃ ಈ ಭೂಮಿತಾಯಿ ಭಾರವನ್ನು, ನೋವನ್ನು ಸಹಿಸಲಾರದೆ ಕಷ್ಟಪಡುತ್ತಿದ್ದಾಳೆ. ಹಾಗಾಗಿ ಮೈ ಕೊಡವುತ್ತಿದ್ದಾಳೆ ಎಂದೆನಿಸುತ್ತಿದೆ. ಇಡೀ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಮಂದಿ ಇಂದು ಗೃಹಬಂಧಿಯಾಗಿದ್ದಾನೆ. ಯಾವುದೇ ಗಳಿಕೆಯಿಲ್ಲ, ಸಂಪಾದನೆ ಇಲ್ಲ. ಇದ್ದುದನ್ನು ತಿಂದು, ಉಂಡು ಮಲಗುವ ಪರಿಸ್ಥಿತಿ ಬಂದುಬಿಟ್ಟಿದೆ. ಅನಿವಾರ್ಯವಾಗಿ ಆದರೂ ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯುವ ಸಂದರ್ಭ ಬಂದಿದೆ. ನಿಸ್ವಾರ್ಥವಾಗಿ ಇನೊಬ್ಬರಿಗಾಗಿ ಚಪ್ಪಾಳೆ ತಟ್ಟುವುದನ್ನು ಇದೀಗ ಕಲಿಯುತ್ತಿದ್ದೇವೆ. ತಮಸೋಮಾ ಜ್ಯೋತಿರ್ಗಮಯ ಎಂಬಂತೆ ಕತ್ತಲೆಯಿಂದ ಹೊರಬರಲು, ಮುನ್ನಡೆಯಲು, ಪರಸ್ಪರ ಕೈಜೋಡಿಸಿ ಮುಂದೆ ಸಾಗಲು ಬೆಳಕಿನ ಅನಿವಾರ್ಯತೆಯನ್ನು ಮನಗಾಣುತ್ತಿದ್ದೇವೆ. ಮಾನವ ಇಂದು ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ಈಜಬಲ್ಲ, ಚಂದ್ರನಲ್ಲಿಗೂ ಸಂಚರಿಸಬಲ್ಲ, ಆದರೆ ಪ್ರಕೃತಿಯ ಎದುರು ಕುಬ್ಜನಾಗಿದ್ದಾನೆ !
✍️ ಅಮೃತಾ ದಿನೇಶ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.