ಬೆಳ್ತಂಗಡಿ : ಜಿಲ್ಲೆಯಾದ್ಯಂತ ಕೆಂಪು ಕಲ್ಲಿನ ಗಣಿಗಾರಿಕೆಯಿಂದ ಉಂಟಾಗಿರುವ ಬೃಹತ್ ಗುಂಡಿಗಳು ಮಳೆಗಾಲದಲ್ಲಿ ನೀರು ತುಂಬಿ ಮರಣಗುಂಡಿಗಳಾಗಿ ಪರಿಣಮಿಸುತ್ತಿದ್ದರೂ ಸ್ಥಳೀಯಾಡಳಿತಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಜೀವ ಬಲಿಗಾಗಿ ಕಾಯುತ್ತಿದೆ ಎನ್ನುವಂತಾಗಿದೆ ಕುವೆಟ್ಟು ಮತ್ತು ಸೋಣಂದೂರಿನ ಗ್ರಾಮಗಳ ಈ ಗುಂಡಿಗಳು.
ಕಳೆದ ವರ್ಷಜಿಲ್ಲೆಯಾದ್ಯಂತ ಇಂತಹಾ ಕೆಂಪು ಕಲ್ಲಿನ ಗಣಿಗಾರಿಕೆಯ ಗುಂಡಿಗಳಿಗೆ ನಾಲ್ಕೈದು ಅಮಾಯಕ ಜೀವಗಳು ಬಲಿಯಾದ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಗುಂಡಿಗಳನ್ನು ಮುಚ್ಚಲು, ಈ ಗುಂಡಿಯ ಸುತ್ತಲೂ ತಡೆಬೇಲಿಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸ್ಪಷ್ಟ ಆದೇಶ ನೀಡಿದ್ದರು. ಈ ಈ ಈ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಅವರು ಈ ಸಂಬಂಧ ಕಳೆದ ಒಂದು ವರ್ಷಗಳಿಂದ ಕನಿಷ್ಠ 10 ಕ್ಕಿಂತಲೂ ಹೆಚ್ಚು ಅಧಿಕಾರಿಗಳ ಸಭೆ ನಡೆಸಿ ಖಡಕ್ ಆದೇಶ ನೀಡಿದ್ದರು. ಆದರೂ ಕೂಡಾ ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾವುದೇ ಬೆಲೆ ನೀಡದೆ ಮಳೆಗಾಲದಲ್ಲಿ ಜೀವಗಳ ಬಲಿಗಾಗಿ ಕಾಯುತ್ತಿರುವಂತಿದೆ ಈ ಮರಣ ಗುಂಡಿಗಳು.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿಂದ ಸೋಣಂದೂರು ಗ್ರಾಮದ ಸಬರಬೈಲು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಕೆಂಪು ಕಲ್ಲಿನ ಗಣಿಗಾರಿಕೆಯಿಂದ ಉಂಟಾಗಿರುವ ಈ ಮರಣ ಗುಂಡಿಗಳು ಜೀವ ಬಲಿಗಾಗಿ ಬಾಯ್ತೆರೆದು ಕಾಯುತ್ತಿದೆ. ಮದ್ದಡ್ಕ ಸಮೀಪದ ಕಾಲನಿಯೊಂದರ ಸಮೀಪವೇ ಈ ಮರಣಗುಂಡಿಗಳು ಇದ್ದು ಅಪಾಯದ ಕರೆಗಂಟೆಯನ್ನು ಭಾರಿಸುತ್ತಿದೆ. ಗ್ರಾಮ ಸಡಕ್ ರಸ್ತೆಯ ಅಂಚಿನಲ್ಲಿಯೇ ಈ ಗುಂಡಿಗಳು ಕಾಣಸಿಗುತ್ತಿದ್ದು ಮಳೆಗಾಲದಲ್ಲಿ ನೀರುತುಂಬಿ ಕೃತಕ, ಅನಧಿಕೃತ ಈಜುಕೊಳಗಳಾಗಿ ಮಾರ್ಪಡುತ್ತಿದೆ. ಇದು ಮಳೆಗಾಲದಲ್ಲಿ ತೀರಾ ಅಪಾಯಕಾರಿಯಾಗಿದ್ದು ಈ ಗುಂಡಿ ಜರಿದರೆ ರಸ್ತೆ ಕೂಡಾ ಸಂಪರ್ಕ ಕಳೆದುಕೊಳ್ಳುವ ಅಪಾಯವಿದೆ. ವಿಪರ್ಯಾಸವೆಂದರೆ ಕಳೆದ ಒಂದು ವರ್ಷದಿಂದ ಈ ಅಕ್ರಮ ಕಲ್ಲಿನ ಕೋರೆಗಳಿಂದ ನಿರ್ಮಾಣವಾದ ಈ ಗುಂಡಿಗಳನ್ನು ಮುಚ್ಚಿಸಲು ಸ್ಥಳೀಯ ಗ್ರಾಮ ಪಂಚಾಯತ್ಗಳು ವಿಫಲವಾಗಿರುವುದು. ಜಿಲ್ಲಾಧಿಕಾರಿಗಳ ಆದೇಶ ಈ ಪಂಚಾಯತ್ಗೆ ಇನ್ನೂ ತಲುಪದಿರುವುದು ಸೋಜಿಗದ ಪ್ರಶ್ನೆಯಾಗಿದೆ. ಅಥವಾ ಇಲ್ಲೂ ಕಳೆದ ವರ್ಷ ನಡೆದ ಕಹಿ ಘಟನೆ ನಡೆಯಲಿ ಎಂಬ ದುರುದ್ದೇಶದಿಂದ ಈ ಮರಣಗುಂಡಿಗಳನ್ನು ಶಾಶ್ವತವಾಗಿ ಇಡಲಾಗಿದೆ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.
ಅಮಾಯಕರ ದುರುಪಯೋಗ?
ಬೆಳ್ತಂಗಡಿ ತಾಲೂಕಿನಾದ್ಯಂತ ಅಮಾಯಕ ದಲಿತ, ಇತರರನ್ನು ದುರುಪಯೋಗ ಪಡಿಸಿಕೊಂಡು ಅವರ ಜಮೀನಿನಲ್ಲಿ ಇದರ ಮೇಲ್ವರ್ಗದ ಜನರು ಈ ರೀತಿಯ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಗಣಿಗಾರಿಕೆ ಮುಗಿದ ತಕ್ಷಣ ಈ ಬೃಹದಾಕಾರದ ಗುಂಡಿಗಳನ್ನು ಮುಚ್ಚದೆ ಮರಣಗುಂಡಿಗಳಾಗಿ ಪರಿವರ್ತಿಸುತ್ತಿದ್ದಾರೆ ಎಂಬ ಆರೋಪ ಹಲವು ವರ್ಷಗಳದ್ದು. ತಾಲೂಕಿನ ಪಾರೆಂಕಿ, ಇಳಂತಿಲ, ಉರುವಾಲು, ಕಣಿಯೂರು, ಬಂದಾರು, ಮಚ್ಚಿನ, ಕುಕ್ಕಳ, ಸೋಣಂದೂರು, ಕುವೆಟ್ಟು, ಶಿರ್ಲಾಲು, ಕರಂಬಾರು ಈ ಗ್ರಾಮಗಳಲ್ಲಿ ಈ ರೀತಿಯಾಗಿ ಯಾರದೋ ಅಮಾಯಕರ ಭೂಮಿಯನ್ನು ಹಣದ ಆಸೆಗಾಗಿ ಲೀಸ್ಗೆ ಕೊಟ್ಟು ತಮ್ಮ ಭೂಮಿಯಲ್ಲಿ ಅನಧಿಕೃತ ಮರಣಗುಂಡಿಗಳ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ. ಇಂತಹಾ ಗುಂಡಿಗಳನ್ನು ಮುಚ್ಚುವುದು ಗಣಿಗಾರಿಕೆ ನಡೆಸುವವರ, ಭೂಮಿ ನೀಡಿದವರ ಆದ್ಯತೆ ಆಗಬೇಕು ಮತ್ತು ಈ ಗುಂಡಿಗಳನ್ನು ಮುಚ್ಚಿಸುವುದು ಸ್ಥಳೀಯಾಡಳಿತದ ಕರ್ತವ್ಯಗಳಲ್ಲಿ ಒಂದಾಗಬೇಕು. ಜಿಲ್ಲಾಡಳಿತದ ಅದೇಶವನ್ನು ಪಾಲಿಸುವ ಇಚ್ಚಾಶಕ್ತಿ ಸ್ಥಳೀಯಾಡಳಿತಕ್ಕೆ ಇರಬೇಕು. ಈ ರೀತಿಯಾದರೆ ಮಾತ್ರ ಇಂತಹಾ ಮರಣಗುಂಡಿಗಳಿಂದ ಅಮಾಯಕ ಜೀವಗಳನ್ನು ಉಳಿಸಬಹುದು.
ಅಧಿಕಾರಿಗಳ ವಿರುದ್ಧ ಕ್ರಮ ಆಗುವುದೇ ?
ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯಿಂದಎಚ್ಚೆತ್ತುಕೊಂಡ ಜಿಲ್ಲಾಡಳಿತ ಇಂತಹಾ ಮರಣಗುಂಡಿಗಳನ್ನು ತಕ್ಷಣ ಮುಚ್ಚಿಸುವ ಜವಾಬ್ದಾರಿ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ತಕ್ಷಣ ಈ ಕೆಲಸದಲ್ಲಿ ಯಾವುದೇ ನಿರ್ಲಕ್ಷ ತೋರದೆ ಮಾಡಬೇಕು. ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದರು. ಜಿಲ್ಲಾಧಿಕಾರಿಗಳ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿರುವ ಪಂಚಾಯತ್ ಪಿಡಿಓಗಳ ವಿರುದ್ಧ ಕಾನೂನು ಕ್ರಮಆಗುವುದೇ ಎಂಬುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಈ ರೀತಿಯಾದರೆ ಮಾತ್ರ ಮೇಲಾಧಿಕಾರಿಗಳು ನೀಡಿರುವ ಆದೇಶಗಳು ಸ್ಥಳೀಯ ಮಟ್ಟದಲ್ಲಿ ಸಹಕಾರಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಸರ್ವ ಅಭಿಪ್ರಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.