ನವದೆಹಲಿ: 100ಕ್ಕೂ ಹೆಚ್ಚು ದೇಶಗಳನ್ನು ಕೊರೋನವೈರಸ್ ಮಹಾಮಾರಿ ಬಾಧಿಸಿದೆ. ಪ್ರಸ್ತುತ ಭಾರತ ಕೊರೋನವೈರಸ್ ಸಾಂಕ್ರಾಮಿಕದ 2ನೇ ಹಂತದಲ್ಲಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಪ್ರಸ್ತುತ ಭಾರತದಲ್ಲಿ ಕೊರೋನಾವೈರಸ್ ಸಮುದಾಯ ಮಟ್ಟದಲ್ಲಿ ಹರಡಿಲ್ಲ.
2ನೇ ಹಂತ ಎಂಬುದರ ಅರ್ಥವೇನು?
“ನಾವು ಕೊರೋನಾವೈರಸ್ 2 ನೇ ಹಂತದಲ್ಲಿದ್ದೇವೆ ಎಂದು ನಮಗೆ ಈಗಾಗಲೇ ಸಷ್ಟವಾಗಿದೆ. ನಾವು 3ನೇ ಹಂತದಲ್ಲಿ ಇಲ್ಲ ಮತ್ತು ಎಂದಿಗೂ ಮೂರನೇ ಹಂತಕ್ಕೆ ನಾವು ಬರಬಾರದು. ಮೂರನೇ ಹಂತ ಸಮುದಾಯ ಪಸರಿಸುವಿಕೆ ಆಗಿದೆ. ಅದು ನಮ್ಮಲ್ಲಿ ಇರಬಾರದು ಎಂದು ನಾವು ಭಾವಿಸುತ್ತೇವೆ ”ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಮಂಗಳವಾರ ಹೇಳಿದ್ದಾರೆ.
“ಮೂರನೇ ಹಂತಕ್ಕೆ ತಲುಪದಿರುವುದು ನಾವು ನಮ್ಮ ಅಂತರರಾಷ್ಟ್ರೀಯ ಗಡಿಗಳನ್ನು ನಾವು ಎಷ್ಟು ಬಲವಾಗಿ ಮುಚ್ಚುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ವಿಷಯದಲ್ಲಿ ಸರ್ಕಾರವು ಬಹಳ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಸಮುದಾಯ ಪ್ರಸರಣವು ಸಂಭವಿಸುವುದಿಲ್ಲ ಎಂದು ನಾವು ಈಗಾಗಲೇ ಹೇಳಲಾಗುವುದಿಲ್ಲ, ”ಎಂದು ಅವರು ಹೇಳಿದ್ದಾರೆ.
ನಾಲ್ಕು ಹಂತಗಳ ಬಗೆಗಿನ ವಿವರ ಇಲ್ಲಿದೆ:
ಹಂತ 1: ಸೋಂಕು ಪೀಡಿತ ದೇಶಗಳಿಂದ ಪ್ರಕರಣಗಳು ನಮ್ಮ ದೇಶಕ್ಕೆ ಆಮದು ಆದಾಗ. ಅಂದರೆ ವಿದೇಶ ಪ್ರವಾಸ ಮಾಡಿದವರಲ್ಲಿ ಮಾತ್ರ ಸೋಂಕು ಇರುವುದು ಪತ್ತೆಯಾದಾಗ.
ಹಂತ 2: ಸೋಂಕಿತ ವ್ಯಕ್ತಿಗಳಿಂದ ಆತನ ಹತ್ತಿರದವರಿಗೆ ಸೋಂಕು ಹರಡಿದಾಗ. ಉದಾಹರಣೆಗೆ, ವಿದೇಶ ಪ್ರವಾಸ ಮಾಡಿದವರ ಸಂಬಂಧಿಕರು ಅಥವಾ ಪರಿಚಯಸ್ಥರಿಗೆ ಸೋಂಕು ತಗುಲಿದಾಗ. ಇರದಲ್ಲಿ ಕಡಿಮೆ ಜನರು ಪರಿಣಾಮ ಎದುರಿಸುತ್ತಾರೆ. ವೈರಸ್ ಮೂಲದ ಬಗ್ಗೆ ಇಲ್ಲಿ ತಿಳಿದಿರುತ್ತದೆ ಮತ್ತು ಸಮುದಾಯ ಪ್ರಸರಣವನ್ನು ತಡೆಗಟ್ಟಲು ಇಲ್ಲಿ ಕಾರ್ಯವಿಧಾನವನ್ನು ಸುಲಭವಾಗಿ ಅನುಸರಿಸಬಹುದಾಗಿದೆ.
ಹಂತ 3: ಸಮುದಾಯ ಪ್ರಸರಣ ಇದ್ದಾಗ ಮತ್ತು ದೊಡ್ಡ ಪ್ರದೇಶಗಳು ಪರಿಣಾಮ ಎದುರಿಸಿದಾಗ. ಯಾವುದೇ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸದೇ ಇದ್ದಾಗಲೂ ಅಥವಾ ಯಾವುದೇ ಪೀಡಿತ ದೇಶಗಳಿಗೆ ಪ್ರಯಾಣಿಸದಿದ್ದಾಗಲೂ ಜನರಲ್ಲಿ ಸೋಂಕು ಕಾಣಿಸಿಕೊಂಡರೆ ಅದು ಸಮುದಾಯ ಪ್ರಸರಣವಾಗುತ್ತದೆ.
ಹಂತ 4: ಇದು ಅತ್ಯಂತ ಕೆಟ್ಟ ಪರಿಸ್ಥಿತಿ. ಇಲ್ಲಿ ಸೋಂಕು ಸಾಂಕ್ರಾಮಿಕವಾಗುತ್ತದೆ. ಇಲ್ಲಿ ಸೋಂಕಿನ ಮೂಲದ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಚೀನಾದಲ್ಲಿ ಇರುವುದು ನಾಲ್ಕನೇ ಹಂತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.