ಸುಬ್ರಹ್ಮಣ್ಯ: ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಗ್ರಾಮದ ಆಸುಪಾಸಿನಲ್ಲಿ ನಿರಂತರವಾಗಿ ಕಳ್ಳತನವಾಗುತ್ತಿರುವ ಬಗ್ಗೆ ಶ್ರೀ ದೇವರ ಮುಂದೆ ಸೋಮವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗೂ ಭಕ್ತಾದಿಗಳು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಗುತ್ತಿಗಾರು ಗ್ರಾಮದ ಹಾಗೂ ವಿವಿಧೆಡೆಯ ಜನರ ನಂಬಿಕೆಯ ಕ್ಷೇತ್ರವಾದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಹುಂಡಿ ಒಡೆದು ಹಣ ದೋಚಿದ್ದರು. ಇದರಿಂದ ಭಕ್ತರಿಗೆ ಆಘಾತವಾಗಿದೆ. ಗುತ್ತಿಗಾರು ಆಸುಪಾಸಿನಲ್ಲೂ ಕಳ್ಳರ ಹಾವಳಿ ಹೆಚ್ಚಾಗಿದೆ. ವಳಲಂಬೆ ದೇವಸ್ಥಾನದಲ್ಲಿ ರಕ್ತೇಶ್ವರಿ ದೈವದ ಗುಡಿಯ ಬಳಿಕ ಸುಮಾರು ೧೨ ವರ್ಷಗಳಿಂದ ಯಾವುದೇ ಕಳ್ಳತನ ನಡೆದಿರಲಿಲ್ಲ.
ಇದೀಗ ಮತ್ತೆ ಕಳ್ಳತನವಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಭಕ್ತರು ದೇವರು ಹಾಗೂ ದೈವಗಳೇ ಮುಂದೆ ರಕ್ಷಣೆ ನೀಡಬೇಕು ಎಂದು ಮೊರೆ ಹೋಗಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಸೋಮವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗೂ ಭಕ್ತಾದಿಗಳ ಪರವಾಗಿ ಕ್ಷೇತ್ರದ ಪ್ರಧಾನ ಅರ್ಚಕ ಪರಮೇಶ್ವರ ಭಟ್ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಮಹಾಬಲೇಶ್ವರ ಭಟ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ, ಪ್ರಮುಖರಾದ ಡಿ.ಎಂ.ರಾಮಣ್ಣ ಗೌಡ, ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ, ರಾಧಾಕೃಷ್ಣ ಮಾವಿನಕಟ್ಟೆ,ಪದ್ಮನಾಭ ದಂಬೆಕೋಡಿ, ಕಲಾವತಿ ಮೊಟ್ಟೆ, ಪುಷ್ಪಾ ಡಿವಿ, ಮಹೇಶ್ ಪುಚ್ಚಪ್ಪಾಡಿ, ಲೋಕೇಶ್ವರ ಡಿಆರ್, ಸುಬ್ರಹ್ಮಣ್ಯ ಭಟ್ ಜೀರ್ಮುಕಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.