ಬೆಂಗಳೂರು: ರಾಜ್ಯದಾದ್ಯಂತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕ ವಲಯದಲ್ಲಿ ಡ್ರಗ್ಸ್ ಜಾಲ ಹೆಚ್ಚಾಗಿರುವುದರಿಂದ, ಅದರ ನಿಯಂತ್ರಣ ಮತ್ತು ತಡೆ ಕಾಯ್ದೆಯಲ್ಲಿ ಬದಲಾವಣೆ ತರಲು ರಾಜ್ಯ ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ.
ಡ್ರಗ್ಸ್ ಮಾಫಿಯಾ ಕುರಿತಾದಂತೆ ಸದನದಲ್ಲಿ ಪಕ್ಷಾತೀತ ಪ್ರಸ್ತಾಪಗಳು ಬಂದಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬೊಮ್ಮಾಯಿ, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಶಿಕ್ಷಣ ಸಂಸ್ಥೆಗಳ ಸಮೀಪ ಇಂತಹ ಅವ್ಯವಹಾರ ನಡೆಸುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಯುವ ಸಮುದಾಯ ಡ್ರಗ್ಸ್ ಚಟಕ್ಕೆ ಬಲಿಯಾಗದಂತೆ ತಡೆಯುವುದಕ್ಕಾಗಿ ಕಾಯ್ದೆ ಬದಲಾಯಿಸಲಿರುವ ಬಗ್ಗೆಯೂ ಅವರು ಈ ಸಂದರ್ಭ ಮಾಹಿತಿ ನೀಡಿದರು. ಸಂದರ್ಭಕ್ಕೆ ಅನುಗುಣವಾಗಿ ಕಾಯ್ದೆಯಲ್ಲಿ ಬದಲಾವಣೆ ತರುವುದಾಗಿಯೂ ಭರವಸೆ ನೀಡಿದರು.
ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಮಾದಕ ದ್ರವ್ಯ ತಡೆಗಾಗಿ 8 ಸೆಲ್ಗಳ ಪೊಲೀಸ್ ಠಾಣೆಯನ್ನೂ ಆರಂಭಿಸಲಾಗಿದೆ. ಇದರ ಜೊತೆಗೆ ವಿದ್ಯಾರ್ಥಿ ಸಮೂಹ, ಪೋಷಕರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿದರು. ಅದಕ್ಕಾಗಿ ವಿದ್ಯಾಸಂಸ್ಥೆಗಳು, ಸಾರ್ವಜನಿಕರು ಸರ್ಕಾರದ ಜೊತೆಗೆ ಕೈ ಜೋಡಿಸುವಂತೆಯೂ ಮನವಿ ಮಾಡಿದರು. ಅಲ್ಲದೆ ಗೃಹ ಇಲಾಖೆಯ ವತಿಯಿಂದಲೇ ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸುವುದಾಗಿಯೂ ಬೊಮ್ಮಾಯಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.