ಬೆಳ್ತಂಗಡಿ: ಪತ್ರಿಕೆಗಳು ಸಮಾಜದಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸುವ ಕಾರ್ಯ ಮಾಡುತ್ತಿದೆ. ಪತ್ರಿಕಾರಂಗ ತಂತ್ರಜ್ಞಾನ ಬೆಳೆದಂತೆ ಬದಲಾವಣೆಗಳನ್ನು ಕಂಡಿದೆ. ಮುಂದಿನ ದಿನಗಳಲ್ಲಿ ಪತ್ರಿಕೆಗಳು ಜ್ಞಾನವನ್ನು ಹೆಚ್ಚಿಸುವ ಕಾರ್ಯ ಮಾಡಬೇಕು. ಪತ್ರಿಕೆ ಸಮಾಜ ಮತ್ತು ಸರಕಾರದ ಮಧ್ಯೆ ಕೊಂಡಿಯಾಗಿದೆ ಎಂದು ಉಜಿರೆ ಮಂಜುವಾಣಿ ಮಾಸ ಪತ್ರಿಕೆಯ ಸಹಸಂಪಾದಕ ಪ್ರೋ. ನಾವುಜಿರೆ ಹೇಳಿದ್ದಾರೆ.
ಅವರು ಶನಿವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸಂಘ ರಿ. ಬೆಂಗಳೂರು, ಬೆಳ್ತಂಗಡಿ ಶಾಖೆ ಇದರ ವತಿಯಿಂದ ಇತ್ತೀಚೆಗೆ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ತೆಂಕಕಾರಂದೂರು ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದು ಪತ್ರಿಕೆಗಳು ಕೃಷಿ ವಿಚಾರಕ್ಕೆ ಸಂಬಂಧಿಸಿದಂತೆ ಲೇಖನ ಹಾಗೂ ಮಾಹಿತಿಗಳನ್ನು ಪ್ರಚಾರ ಮಾಡುತ್ತಿರುವುದರಿಂದ ರಾಸಾಯನ ಹಾಗೂ ವಿಷಕಾರಿ ಪದಾರ್ಥ ಬಳಸಿ ಬೆಳೆಸುವ ಕೃಷಿಯಿಂದ ಸಾವಯವ ಕೃಷಿ ಬೆಳೆಸುವತ್ತ ಮಹತ್ವ ಬಂದಿದೆ.ಇದರಿಂದಾಗಿ ವಿಷಕಾರಿ ತರಕಾರಿಗಳ ಸೇವನೆಯಿಂದ ಆರೋಗ್ಯ ಹಾಳಾಗುವುದನ್ನು ತಪ್ಪಿ, ಆರೋಗ್ಯವರ್ಧಕ ತರಕಾರಿ ಬಳಸುವಂತಾಗಿದೆ. ಹಿಂದೆ ವಿದೇಶಿ ರಾಸಾಯನಿಕ ಗೊಬ್ಬರಗಳ ಹಾವಳಿಯಿಂದ ರಾಸಾಯನಿಕವಿಲ್ಲದೆ ಕೃಷಿ ಇಲ್ಲ ಎಂಬ ಮಾತು ಇತ್ತು. ಆದರೆ ೧೯೭೦ರ ನಂತರ ಪತ್ರಿಕೆಗಳು ಕೃಷಿ ವಿಚಾರ ವರದಿಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿತ್ತು ಎಂದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್ ಮಾತನಾಡಿ ಪತ್ರಿಕೆಯ ಪ್ರತಿಯೊಂದು ವಿಷಯಗಳನ್ನು ಅತ್ಯಂತ ಸೂಕ್ಷ್ಮವಾಗಿಓದುವ ಹವ್ಯಾಸವುಳ್ಳವರು ಹಿರಿಯ ನಾಗರಿಕರು. ಇದರಿಂದ ಪತ್ರಿಕೆಗಳಲ್ಲಿನ ಬರಹಗಳಿಗೆ ಹೆಚ್ಚಿನ ಮೌಲ್ಯ ಬಂದಿದೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಕೆ.ಕೃಷ್ಣ, ಕೋಶಾಧಿಕಾರಿ ಅಲ್ಬರ್ಟ್ ಡಿಸೋಜಾ, ಸಹಕಾರ್ಯದರ್ಶಿ ಪಿ.ಪಿ ಜೋಯ್, ಉಪಾಧ್ಯಕ್ಷರುಗಳಾದ ಬಾಬು ಶೆಟ್ಟಿ, ಪಿ.ಜಿ. ಲಲಿತ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಜಯಕೀರ್ತಿ ಜೈನ್, ಉಜಿರೆ ಮಂಜುಶ್ರೀ ಪ್ರಿಂಟರ್ಸ್ನ ಮೆನೆಜರ್ ಶೇಖರ್ ಟಿ ಇವರನ್ನು ಸನ್ಮಾನಿಸಲಾಯಿತು. ಡಿ. ಎಂ. ಭಟ್ ಸ್ಮರಣಾರ್ಥ ವಿವಿಧ ಪ್ರೋತ್ಸಾಹಧನ ವಿತರಿಸಲಾಯಿತು.
ಸಂಘದ ಸಂಯೋಜಕ ಆರ್.ಎನ್. ಪೂವಣಿ ಸ್ವಾಗತಿಸಿ ಕಾರ್ಯದರ್ಶಿ ಕೆ.ಕೆ ಕೃಷ್ಣ ವಂದಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.