ಸಿಕ್ಕಿಂನ ಜನತೆ ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ಕೊಂಚ ಮಟ್ಟಿಗಾದರೂ ನಿರ್ಮೂಲನೆ ಮಾಡುವ ಉದ್ದೇಶದಿಂದ ಹೊಸತೊಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಬಿದಿರಿನ ಬಾಟಲಿಗಳಲ್ಲಿ ನೀರು ಮಾರಾಟ ಮಾಡುವ ಮೂಲಕ ಪ್ಲಾಸ್ಟಿಕ್ ಬಾಟಲಿಗಳನ್ನು ತಮ್ಮ ದೈನಂದಿನ ಜೀವನದಿಂದ ಕೊಂಚ ಮಟ್ಟಿಗೆ ದೂರವಿರಿಸಲು ಹೊರಟಿದ್ದಾರೆ.
ಸಿಕ್ಕಿಂನ ಲಾಚೆನ್ ಎಂಬ ಸಣ್ಣ ಹಳ್ಳಿ ಬಿದಿರಿನ ಬಾಟಲಿಗಳಲ್ಲಿ ಕುಡಿಯುವ ನೀರನ್ನು ಮಾರಾಟ ಮಾಡಿದ ಸಿಕ್ಕಿಂನ ಮೊದಲ ಪಟ್ಟಣ ಎಂಬ ಕೀರ್ತಿಗೂ ಭಾಜನವಾಗಿದೆ. ಆ ಮೂಲಕ ದಿನ ನಿತ್ಯದ ವ್ಯವಹಾರದಲ್ಲಿ ಪ್ಲಾಸ್ಟಿಕ್ ಅನ್ನು ಕಡಿಮೆಗೊಳಿಸುವುದಕ್ಕಾಗಿ ಒಂದು ಯಶಸ್ವಿ ಪ್ರಯತ್ನವನ್ನು ನಡೆಸಿದ್ದಾರೆ ಎಂದರೂ ತಪ್ಪಾಗಲಾರದು. ಇಲ್ಲಿನ ಪ್ರವಾಸೋದ್ಯಮ ಇಲಾಖೆಯೂ ಬಿದಿರಿನ ಬಾಟಲ್ಗಳ ತಯಾರಿ ಮತ್ತು ಬಳಕೆಯ ವಿಚಾರದಲ್ಲಿ ಕೈ ಜೋಡಿಸಿದ್ದು, ಆ ಮೂಲಕ ಈ ಪುಟ್ಟ ಹಳ್ಳಿಯನ್ನು ಇಡೀ ದೇಶಕ್ಕೇ ಮಾದರಿಯಾಗುವಂತೆ ಮಾಡಿದೆ.
ಸಿಕ್ಕಿಂ ಪ್ರಕೃತಿಯು ರಮಣೀಯ ತಾಣಗಳಿಗೆ, ಮಂಜಿನ ಗಿರಿ ಶಿಖರಗಳಿಗೆ ಹೆಸರುವಾಸಿಯಾದ ಪ್ರದೇಶ. ಹಾಗಾಗಿ ವರ್ಷಕ್ಕೆ ಅದೆಷ್ಟೋ ಪ್ರವಾಸಿಗರು ಇಲ್ಲಿಗೆ ಬಂದು ತಮ್ಮ ರಜಾ ದಿನಗಳನ್ನು ಎಂಜಾಯ್ ಮಾಡುತ್ತಾರೆ. ಆದರೆ ಹೀಗೆ ಆಗಮಿಸುವ ಜನರು ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕುಡಿಯುವ ನೀರನ್ನು ತರುತ್ತಾರೆ. ನೀರು ಮುಗಿದ ಮೇಲೆ ಆ ಬಾಟಲಿಗಳನ್ನು ಅಲ್ಲಲ್ಲಿ ಎಸೆದು ಹೋಗುತ್ತಾರೆ. ಇದು ನಗರದ ಸೌಂದರ್ಯವನ್ನು ಹಾಳು ಮಾಡುವುದು ಮಾತ್ರವಲ್ಲದೆ, ಪರಿಸರದ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಜೀವರಾಶಿಗಳ ಬದುಕಿಗೂ ಕಂಟಕವನ್ನು ತರುತ್ತದೆ. ಇಂತಹ ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಂಡ ಸಿಕ್ಕಿಂನ ಪ್ರವಾಸೋದ್ಯಮ ಇಲಾಖೆ ಇದಕ್ಕೆ ಬಿದಿರಿನ ಮೂಲಕ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿದೆ.
ಇನ್ನು ಇದಕ್ಕೆ ಬೇಕಾಗಿರುವ ಬಿದಿರಿನ ಬಾಟಲಿಗಳನ್ನು ಅಸ್ಸಾಂನಿಂದ ತರಿಸಿಕೊಳ್ಳುತ್ತಿದ್ದು, ಆ ಮೂಲಕ ಪ್ರವಾಸಿಗರಿಗೆ ಆರೋಗ್ಯಪೂರ್ಣ ನೀರನ್ನು ಒದಗಿಸುತ್ತಿದೆ. ಚಿತ್ತಾಕರ್ಷಕವಾಗಿರುವಂತಹ ಈ ಬಾಟಲಿಗಳನ್ನು ಅಸ್ಸಾಂನಿಂದ ತರುವ ಜವಾಬ್ದಾರಿಯನ್ನು ಸಿಕ್ಕಿಂನ ರಾಜ್ಯಸಭೆಯ ಸದಸ್ಯ ಹಿಸೇಯ್ ಲಾಚುಂಗ್ಪಾ ಅವರು ವಹಿಸಿಕೊಂಡಿದ್ದಾರೆ. ಆ ಮೂಲಕ ಸರ್ಕಾರವೂ ಈ ಬಗ್ಗೆ ಕಾಳಜಿ ವಹಿಸುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
1998ರಲ್ಲಿಯೇ ಪ್ಲ್ಯಾಸ್ಟಿಕ್ ವಿರುದ್ಧದ ಹೋರಾಟದಲ್ಲಿ, ಅದನ್ನು ನಿತ್ಯ ಬಳಕೆಯಿಂದ ನಿಷೇಧಿಸುವಂತೆ ಮಾಡುವಲ್ಲಿ ಮಹತ್ತರ ಹೆಜ್ಜೆಗಳನ್ನಿಡುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ 2016 ಸರ್ಕಾರಿ ಸಭೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿಡುವ ಪದ್ಧತಿಯನ್ನೂ ಕೈ ಬಿಟ್ಟಿತು. ಈಗ ಮತ್ತೊಂದು ಮಹತ್ತರ ನಿರ್ಧಾರ ಮಾಡಿಕೊಂಡಿರುವ ಲಾಚೆನ್ನ ಸರ್ಕಾರ ಪ್ರವಾಸಿಗರಿಗೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತೆಗೆದುಕೊಂಡು ಬರುವುದಕ್ಕೆ ನಿರ್ಬಂಧ ಹೇರಿದೆ. ಅಲ್ಲದೆ ಯಾವುದೇ ಪ್ರವಾಸಿ ವಾಹನಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತರಲಾಗಿದೆಯೇ ಎಂಬುದರ ಕುರಿತಾಗಿಯೂ ಕೂಲಂಕುಶವಾಗಿ ತನಿಖೆಯನ್ನೂ ಮಾಡಲಾಗುತ್ತಿದ್ದು, ಆ ಮೂಲಕ ಎಚ್ಚರಿಕಾ ಕ್ರಮಗಳನ್ನೂ ಅನುಸರಿಸಲಾಗುತ್ತಿದೆ.
ಮಹಾಮಾರಿ ಪ್ಲಾಸ್ಟಿಕ್ ಬಗ್ಗೆ ಭಾಷಣ ಬಿಗಿಯುವ ಕೆಲವರು ಸ್ವತಃ ಪ್ಲಾಸ್ಟಿಕ್ ಬಾಟಲಿ, ಲೋಟಗಳನ್ನು ಬಳಕೆ ಮಾಡಿ, ಅದರಲ್ಲಿಯೇ ನೀರು ಕುಡಿಯುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಈ ಪುಟ್ಟ ಹಳ್ಳಿಯ ದಿಟ್ಟ ಹೆಜ್ಜೆ ಮಾದರಿಯೂ ಹೌದು, ಮಾರ್ಗದರ್ಶನವೂ ಹೌದು. ಪ್ರಾಕೃತಿಕವಾಗಿ ಸಿಗುವ ಸಂಪನ್ಮೂಲಗಳನ್ನೇ ಬಳಕೆ ಮಾಡಿ ನಿಸರ್ಗದ ಜೊತೆಗೆ ನಮ್ಮ ಬದುಕನ್ನೂ ಹೇಗೆ ಸ್ವಾಸ್ಥ್ಯಪೂರ್ಣವಾಗಿ ಇಟ್ಟುಕೊಳ್ಳಬಹುದು, ಕಟ್ಟಿಕೊಳ್ಳಬಹುದು ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನ. ಬದಲಾಗುವ ಮನಸ್ಸಿದ್ದರೆ ನಾವೂ ಬದಲಾಗಬಹುದು, ಜೊತೆಗೆ ಸಮಾಜದ ಬದಲಾವಣೆಗೂ ಕಾರಣಕರ್ತರಾಗಬಹುದು ಎಂಬುದಕ್ಕೆ ಲಾಚೆನ್ ಸ್ಪಷ್ಟ ನಿದರ್ಶನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.