ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಮೈ ಕೈಗೆಲ್ಲಾ ಕೆಸರು ಮೆತ್ತಿಕೊಂಡು, ಬಿಸಿಲಿನಲ್ಲಿ ಬೆವರು ಸುರಿಸಿ ಮಾಡುವ ಕೆಲಸ ಯಾರಿಗೆ ತಾನೆ ಇಷ್ಟವಾಗುತ್ತದೆ. ಈ ಕಾರಣದಿಂದಲೇ ಇಂದು ಹಳ್ಳಿಗಾಡಿನ, ಕೃಷಿ ಬದುಕಿನಿಂದ ಜನರು ನಗರದ ಆಧುನಿಕತೆಯ ಜಗತ್ತಿನತ್ತ, ವೈಟ್ ಕಾಲರ್ ಜಾಬ್ಗಳತ್ತ ಮುಖ ಮಾಡಿರುವುದು. ಹಳ್ಳಿಗಳಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಮಾತ್ರ ಕೃಷಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವವರನ್ನು ನಾವು ಕಾಣುತ್ತೇವೆ. ಹೀಗಿರುವಾಗ ರಾಜಸ್ಥಾನದ 72 ವಯಸ್ಸಿನ ಕೃಷಿಕರೊಬ್ಬರು ಪದ್ಮಶ್ರೀಗೆ ಭಾಜನರಾಗಿದ್ದಾರೆ ಎಂದರೆ ನೀವು ನಂಬಲೇ ಬೇಕು.
ಜಗದೀಶ್ ಪರೀಖ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ಅಜಿತ್ಘರ್ ಎಂಬ ಹಳ್ಳಿಯವರು. 25 ಕೆ.ಜಿ. ತೂಕವುಳ್ಳ ಹೂ ಕೋಸು, 3 ಫೀಟ್ ಉದ್ದ ಬದನೆ ಕಾಯಿಯನ್ನು ಬೆಳೆಯುವ ಮೂಲಕ ತಾವೊಬ್ಬ ಅದ್ಭುತ ಕೃಷಿಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇವರ ಈ ಪರಿಶ್ರಮಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರ ಪದ್ಮಶ್ರೀ ನೀಡಿ ಗೌರವಿಸಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಸುಮಾರು 86 ಕೆ.ಜಿ. ತೂಕದ ಕುಂಬಳ ಕಾಯಿಯನ್ನು ಬೆಳೆದು ಇತರ ಕೃಷಿಕರಿಗೆ ಅಚ್ಚರಿಯನ್ನೂ ಮೂಡಿಸಿದ್ದರು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಇನ್ನಿತರ ರಾಷ್ಟ್ರದ ಗಣ್ಯರಿಗೂ ವಿಶಿಷ್ಟ ತರಕಾರಿಗಳನ್ನು ಬೆಳೆದು ಉಡುಗೊರೆಯಾಗಿಯೂ ನೀಡಿದ್ದಾರೆ.
ಪರೀಖ್ ಅವರು ಸಾವಯವ ಕೃಷಿಯನ್ನೇ ನೆಚ್ಚಿಕೊಂಡವರು. ಆ ಪದ್ಧತಿಯನ್ನು ಅನುಸರಿಸಿಯೇ ವಿಶಿಷ್ಟ ತರಕಾರಿಗಳನ್ನು ಬೆಳೆಯುವ ಮೂಲಕ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು. ತಮ್ಮ ಎರಡು ಹೆಕ್ಟೇರ್ ಪ್ರದೇಶದಲ್ಲಿ ವರ್ಷದ ಎಲ್ಲಾ ದಿನಗಳಲ್ಲಿಯೂ ಬೇರೆ ಬೇರೆ ಕೃಷಿಗಳನ್ನು ಮಾಡುವ ಮೂಲಕ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ. ಇವರ ಕೃಷಿ ಕ್ಷೇತ್ರವನ್ನು ಭಾರತದ 6 ಮಂದಿ ರಾಷ್ಟ್ರಪತಿಗಳು ಸಂದರ್ಶಿಸಿದ್ದಾರೆ. ಶಂಕರ್ ದಯಾಳ್ ಶರ್ಮ ಅವರಿಂದ ಹಿಡಿದು ರಾಷ್ಟ್ರಪತಿ ರಾಮನಾಥ್ ಕೋವಿಂದ್ವರೆಗೆ ಗಣ್ಯಾತಿ ಗಣ್ಯರು ಇಳಿವಯಸ್ಸಿನಲ್ಲಿಯೂ ಇವರು ಮಾಡುತ್ತಿರುವ ಕೃಷಿ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಣಬ್ ಮುಖರ್ಜಿ, ಪ್ರತಿಭಾ ದೇವಿಸಿಂಗ್ ಪಾಟಿಲ್, ಕಲಾಂ ಮೊದಲಾದವರಿಗೆ ತಾವು ಬೆಳೆದ ಸಾವಯವ ತರಕಾರಿಗಳನ್ನು ಉಡುಗೊರೆಯಾಗಿಯೂ ನೀಡಿದ್ದಾರೆ ಪರೀಖ್.
ಇನ್ನು ಇವರೊಬ್ಬ ವಿಶೇಷ ಕೃಷಿಕನಾಗಿ ಗುರುತಿಕೊಂಡಿರುವುದಕ್ಕೂ ಕಾರಣವಿದೆ. ಅದೇನೆಂದರೆ, ಇವರು ಬೆಳೆದ ಬೆಳಗಳೆಲ್ಲವೂ ಹೆಚ್ಚು ತೂಕವನ್ನು ಹೊಂದಿರುವುದು. ಮೂರು ಫೀಟ್ ಬೆಳೆಯುವ ಬದನೆ ಕಾಯಿ, 15 ರಿಂದ 86 ಕೆ.ಜಿ. ಬೆಳೆಯುವ ಕುಂಬಳಕಾಯಿ, 25 ಕೆ.ಜಿ. ವರೆಗಿನ ತೂಕ ಹೊಂದಿರುವ ಹೂ ಕೋಸುಗಳು, ಏಳು ಫಿಟ್ಗಳ ಸೋರೆಕಾಯಿ ಮೊದಲಾದಂತೆ ಇನ್ನೂ ಅನೇಕ ವಿಶೇಷತೆಗಳನ್ನು ಸಾವಯವ ಪದ್ಧತಿಯಲ್ಲಿಯೇ ಬೆಳೆದಿರುವುದನ್ನು ನಾವು ಗಮನಿಸಬಹುದು.
ಇನ್ನು ಇವರು ಬೆಳೆದಿರುವ ಹೂಕೋಸಿನ ವೈವಿಧ್ಯಮಯ ತಳಿಗೆ, ಇಂಟರ್ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ವತಿಯಿಂದ ನ್ಯಾಷನಲ್ ಗ್ಯಾಸ್ರೂಟ್ ಇನ್ನೋವೇಷನ್ ಅವಾರ್ಡ್ 2001 ರಲ್ಲಿ ಲಭಿಸಿದೆ. ಅಲ್ಲದೆ ಇವರಿಗೆ ಅಜಿತ್ಘರ್ನ ವೆರೈಟಿ ಎಂಬ ಬಿರುದನ್ನೂ ನೀಡಿ ಗೌರವಿಸಲಾಗಿದೆ. ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರದ್ದು ಕೃಷಿಯಲ್ಲಿ ಪಳಗಿದ ಕೈ ಎಂದೇ ಹೇಳಬಹುದು. ಜೊತೆಗೆ ತಾವು ಬೆಳೆದ ತರಕಾರಿಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ಇವರಿಗೆ ತಾವು ಹುಟ್ಟಿದ ಊರು ಜನಪ್ರಿಯವಾಗಬೇಕು ಎನ್ನುವ ಬಯಕೆ.
ಪಿಯುಸಿ ನಂತರ ಬಿಎ ಡಿಗ್ರಿಗೆ ಸೇರಿದ ಇವರು ಕಾರಣಾಂತರಗಳಿಂದಾಗಿ ಕೊನೆಯ ವರ್ಷವನ್ನು ಪೂರೈಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಿದ್ದರೂ ಇವರಿಗೆ ಒಎನ್ಜಿಸಿಯಲ್ಲಿ ಕೆಲಸ ದೊರೆಯುತ್ತದೆ. ಆದರೆ ಇದ್ಯಾವುದಕ್ಕೂ ಒಗ್ಗದ ಮನ ಮತ್ತೆ ಇವರನ್ನು ತಮ್ಮ ಕೃಷಿ ಭೂಮಿಯತ್ತ ಎಳೆದು ತರುತ್ತದೆ. ಕೃಷಿ ಮಾಡುವಂತೆ ಪ್ರೇರೇಪಿಸುತ್ತದೆ. ತಮ್ಮ ತಂದೆಯ ಮರಣಾ ನಂತರ ತಮ್ಮ ಸಂಬಂಧಿಯೊಬ್ಬರ ಜೊತೆಗೆ, ಅವರ ಕೃಷಿ ಭೂಮಿಯಲ್ಲಿಯೇ ಕೃಷಿಗೆ ಸಹಾಯ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಅವರ ಸಲಹೆ ಸೂಚನೆಗಳ ಕಾರಣದಿಂದಲೇ ತಾನಿಂದು ಈ ಪ್ರಮಾಣದಲ್ಲಿ ಕೃಷಿ ಕೆಲಸಗಳನ್ನು ಪೂರೈಸುವುದಕ್ಕೆ, ಸಮರ್ಥವಾಗಿ ನಿರ್ವಹಿಸುವುದಕ್ಕೆ ಸಾಧ್ಯವಾಗಿದೆ ಎಂಬುದು ಇವರ ಅಂಬೋಣ. ಸಮಯ, ಕಾಲ ಮತ್ತು ವಾತಾವರಣಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವ ಪರೀಖ್ ಅದಕ್ಕೆ ಗೊಬ್ಬರ, ನೀರು ಉಣಿಸುವ ಕಾರ್ಯಗಳನ್ನೂ ವೈಜ್ಞಾನಿಕವಾಗಿಯೇ ಮಾಡುತ್ತಿದ್ದಾರೆ. ಎಷ್ಟು ಪ್ರಮಾಣದ ನೀರು, ಗೊಬ್ಬರದ ಅವಶ್ಯಕತೆ ಇದೆ ಎಂದು ತಿಳಿದುಕೊಂಡು ನಂತರವೇ ಅದಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತಾರೆ. ಅಲ್ಲದೆ ಹಿಂದಿನ ವರ್ಷ ತಾವು ಬೆಳೆದ ಬೆಳೆಗಳಿಂದ ತೆಗೆದ ಬೀಜಗಳನ್ನಷ್ಟೇ ಮತ್ತೆ ಬೆಳೆ ಬೆಳೆಯುವುದಕ್ಕೆ ಉಪಯೋಗಿಸುತ್ತಾರೆ.
ಇನ್ನು ಬೆಳೆಯುವ ಬೆಳೆಗಳ ಮಧ್ಯೆ ಅಂತರ ಕಾಯ್ದುಕೊಳ್ಳುವ ಇವರು, ಮಳೆ ನೀರು ಇಂಗುವುದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಅವರಿಗೆ ಈ ವರೆಗೂ ನೀರಿನ ಸಮಸ್ಯೆಯಾಗಿಲ್ಲವಂತೆ. ಜೊತೆಗೆ ಮಣ್ಣಿನ ಸಾರವನ್ನು ಹಿಡಿದಿಡಲು, ಅದರ ಸಾವಯವ ಗುಣಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾವೇ ತಯಾರಿಸಿದ ಗೊಬ್ಬರವನ್ನು ಗಿಡಗಳಿಗೆ ಉಣಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಖರೀದಿಗೆ ಹೆಚ್ಚು ವ್ಯಯ ಮಾಡಬೇಕಾಗುತ್ತದೆ. ಅಲ್ಲದೆ ಅದರ ಬಳಕೆಯಿಂದ ಆರೋಗ್ಯದ ಮೇಲೂ ದುಷ್ಪರಿಣಾಮಗಳಾಗುತ್ತದೆ. ಮಣ್ಣಿನ ಫಲವತ್ತತೆಯ ಮೇಲೆಯೂ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಸಾವಯವ ಪದ್ಧತಿಯ ಕೃಷಿಯನ್ನೇ ತಾವು ನೆಚ್ಚಿಕೊಂಡಿರುವುದಾಗಿ ಅವರು ತಿಳಿಸುತ್ತಾರೆ. ಆದರೆ ಈ ಎಲ್ಲಾ ಕಠಿಣ ಪರಿಶ್ರಮದ ಹೊರತಾಗಿಯೂ ಮಾರುಕಟ್ಟೆಗೆ ಸಂಬಂಧಿಸಿದಂತೆ ತಾವು ತೊಂದರೆ ಅನುಭವಿಸುವುದಾಗಿ ತಿಳಿಸುವ ಅವರು, ರಾಸಾಯನಿಕ ಭರಿತ ತರಕಾರಿಗಳಂತೆ ಸಾವಯವ ತರಕಾರಿಗಳು ತಾಜಾ ಮತ್ತು ಹೊಳೆಯದಿರುವುದೇ ಇದಕ್ಕೆ ಕಾರಣ ಎಂದು ತಿಳಿಸುತ್ತಾರೆ. ಜೊತೆಗೆ ಇವುಗಳ ತೂಕದ ಕಾರಣಕ್ಕೂ ಜನರು ಇವರಿಂದ ತರಕಾರಿಗಳನ್ನು ಕೊಂಡುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರಂತೆ. ಅದಕ್ಕಾಗಿ ಇವರು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ತಾವು ಬೆಳೆದ ವಸ್ತುಗಳನ್ನು ಮಾರುತ್ತಾರೆ. ಹೀಗಿದ್ದರೂ ವಾರ್ಷಿಕವಾಗಿ 13 ಲಕ್ಷಗಳಷ್ಟು ಆದಾಯ ಗಳಿಸುತ್ತಿದ್ದಾರೆ ಈ ಯಶಸ್ವಿ ರೈತ.
ಕಠಿಣ ಪರಿಶ್ರಮ, ತಾಳ್ಮೆ ಮತ್ತು ಗಮನವಿದ್ದರೆ ಯವುದೇ ಕ್ಷೇತ್ರದಲ್ಲಿಯೂ ಸಾಧನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಜಗದೀಶ್ ಪರೀಖ್ ನಮ್ಮೆಲ್ಲರಿಗೂ ಮಾದರಿ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.