ಬೆಳ್ತಂಗಡಿ : ಮಲವಂತಿಗೆ ಗ್ರಾಮದ ಕಾಜೂರು ಎಂಬಲ್ಲಿ ತಂಡವೊಂದು ರಿಕ್ಷಾದಲ್ಲಿ ತೆರಳುತ್ತಿದ್ದವರ ಮೇಲೆ ಶುಕ್ರವಾರ ಹಲ್ಲೆ ನಡೆಸಿದ್ದು ಓರ್ವ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮಲವಂತಿಗೆ ಗ್ರಾಮದ ದಿಡುಪೆ ನಿವಾಸಿ ಪ್ರೇಮಾನಂದ ಗೌಡ ಅವರು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನ ಪ್ರಕಾರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕಡಿರುದ್ಯಾವರ ನಿವಾಸಿ ನವೀನ್ ಎಂಬವರ ರಿಕ್ಷಾದಲ್ಲಿ ದಿಡುಪೆಯ ತನ್ನ ಮನೆಯಿಂದ ಸೋಮಂತಡ್ಕಕ್ಕೆ ಹೋಗುತ್ತಿದ್ದಾಗ ಕಾಜೂರು ದರ್ಗಾದ ಬಳಿ ಮಲವಂತಿಗೆ ಗ್ರಾಮದ ನಿವಾಸಿಗಳಾದ ಅಕ್ಬರ್, ಉಮ್ಮರಬ್ಬ ಯಾನೆ ಉಮ್ಮರ್ ಕುಂಞಿ, ಸಲಾಂ, ಹಕೀಂ, ಅಬುಬೊಕ್ಕರ್, ಶೌಕತ್, ಮನ್ಸೂರ್, ಶಬೀರ್, ಉಸ್ಮಾನ್, ಸಾಹುಲ್ ಹಮೀದ್, ಅಶ್ರಫ್, ಆರೀಫ್, ತೌಸೀಫ್ ಹಾಗೂ ಇನ್ನಿತರರ ತಂಡ ಗುಂಪು ಗೂಡಿ ನಮ್ಮನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ದನ-ಕರುಗಳನ್ನು ಸಾಗಿಸುವ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡುತ್ತೀರಾ, ಜೀವ ಸಹಿತ ಬಿಡುವುದಿಲ್ಲವೆಂದು ಕೈಯಿಂದ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ನನ್ನಲ್ಲಿದ್ದ 4 ಸಾವಿರ ಹಣ ಹಾಗೂ ಚಿನ್ನದ ಸರವನ್ನು ಕಿತ್ತುಕೊಂಡಿದ್ದು, ನವೀನನ ಬಳಿಯಿದ್ದ ಹಣವನ್ನು ದರೋಡೆ ಮಾಡಿದ್ದಾರೆ. ರಿಕ್ಷಾದ ಗಾಜುಗಳನ್ನು ಪುಡಿಗೈದಿರುತ್ತಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆಯಿಂದ ನವೀನ್ ಗಾಯಗೊಂಡಿದ್ದು ಈತನನ್ನು ಬೆಳ್ತಂಗಡಿ ಆಸ್ಪತ್ರೆ ದಾಖಲಿಸಿದ್ದರೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಹಲ್ಲೆ ನಡೆಸಿದವರ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಹಿಂದೂ ಸಂಘಟನೆಗಳಿಂದ ಮನವಿ: ಹಲ್ಲೆ ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೆಳ್ತಂಗಡಿ ಠಾಣೆಗೆ ಆಗಮಿಸಿ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಠಾಣಾಧಿಕಾರಿಯವರಲ್ಲಿ ಮನವಿ ಮಾಡಿದರು. ಈ ಪರಿಸರದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ. ಅಲ್ಲದೆ ಅಕ್ರಮ ಕಸಾಯಿಖಾನೆ ಇದ್ದು ಮಾಂಸ ಮಾರಾಟ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಇದೇ ಪರಿಸರದಲ್ಲಿ ನಾಗಬನದ ಬಳಿ ಮಾಂಸದ ತ್ಯಾಜ್ಯ ಪತ್ತೆಯಾಗಿತ್ತು. ದನಗಳನ್ನು ಕದ್ದೊಯ್ದಿದ್ದರು ಯಾವುದೇ ಆರೋಪಿಗಳ ಬಂಧನವಾಗಿಲ್ಲ ಎಂಬಿತ್ಯಾದಿ ಬಗ್ಗೆ ಕಾರ್ಯಕರ್ತ ಠಾಣಾಧಿಕಾರಿಯವರಲ್ಲಿ ದೂರಿಕೊಂಡರು. ಈಗ ನಡೆದಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.