ನೆಲ್ಸನ್ ಮಂಡೇಲಾ ಎಂದೇ ಕರೆಯಲ್ಪಡುವ ರೋಲಿಹ ಮಂಡೇಲಾ ಅವರು ಜುಲೈ 18, 1918ರಂದು ದಕ್ಷಿಣ ಆಫ್ರಿಕಾದ ಟ್ರಾನ್ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಎನ್ಕೋಸಿ ಮಖಾಯಸ್ವಾ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಇವರ ತಾಯಿ ನಂಕಾಫಿ ನೋಸಿಕೆನಿ.
ತನ್ನ 12 ವರ್ಷ ಪ್ರಾಯದಲ್ಲಿ ತಂದೆಯನ್ನು ಕಳೆದುಕೊಂಡ ಮಂಡೇಲಾ ಅವರನ್ನು ಅವರ ತಾಯಿ ಮೆಖೆಂಜಿಯ ಗ್ರೇಟ್ ಪ್ಲೇಸ್ನ ಥೇಂಬು ರಾಜಪ್ರತಿನಿಧಿ, ಮುಖ್ಯಸ್ಥ, ಜೋಗಿಂಟಾಬಾ ದಲಿಂಯೆಬೋ ಅವರಿಗೆ ಒಪ್ಪಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕ್ಯುನು ಎಂಬಲ್ಲಿ ಪೂರೈಸಿದ್ದು, ಈ ಶಾಲೆಯ ಶಿಕ್ಷಕರೊಬ್ಬರಿಂದ ನೆಲ್ಸನ್ ಎಂಬ ಹೆಸರನ್ನು ಪಡೆದರು. ಕ್ಲಾರ್ಕ್ಬ್ಯುರಿ ಬೋರ್ಡಿಂಗ್ ಇನ್ಸ್ಟಿಟ್ಯೂಟ್ನಲ್ಲಿ ವ್ಯಾಸಂಗ ನಡೆಸಿ, ದಕ್ಷಿಣ ಆಫ್ರಿಕಾ ವಿಶ್ವವಿದ್ಯಾಲಯದಿಂದ ಬಿ.ಎ ಶಿಕ್ಷಣ ಪಡೆದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ 1942ರಲ್ಲಿ ಕಾನೂನು ಪದವಿಯನ್ನು ಪಡೆದರು.
1941ರಲ್ಲಿ ಜೊಹಾನಸ್ಬರ್ಗ್ನಲ್ಲಿ ಗಣಿ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ವಿಟ್ಕಿನ್ ಐಡಲ್ಮನ್ ಹಾಗೂ ಸಿಡೆಲ್ಸ್ಕಿ ಅವರ ಒಂದು ಸಂಸ್ಥೆಯ ಮೂಲಕ ತಮ್ಮ ಹಲವು ಲೇಖನಗಳನ್ನು ಪ್ರಕಟಿಸಿದರು. 1944ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರುವ ಮೂಲಕ ಇದರ ಯೂತ್ ಲೀಗ್ ರೂಪಿಸಲು ಸಹಕರಿಸಿದರು. ’ನ್ಯಾಷನಲ್ ಪಾರ್ಟಿ’ ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು 1956ರಿಂದ 1961ರವರೆಗೆ ಜೈಲು ಶಿಕ್ಷೆ ಅನುಭವಿಸಿದರು.
1952ರಲ್ಲಿ ಡಿಫೈಯನ್ಸ್ ಅಭಿಯಾನದ ಮೌಲ್ವಿ ಚಾಚಾಲಿಯ ಅವರ ಉಪಮುಖ್ಯಸ್ಥರಾಗಿ ಆಯ್ಕೆಗೊಂಡರು. ಅನ್ಯಾಯಯುತವಾದ ಆರು ಕಾನೂನುಗಳ ವಿರುದ್ಧದ ಅಸಹಸಕಾರ ಚಳುವಳಿಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಸೌತ್ ಆಫ್ರಿಕನ್ ಇಂಡಿಯನ್ ಕಾಂಗ್ರೆಸ್ ಜಂಟಿಯಾಗಿ ಭಾಗವಹಿಸಿ, ಮಂಡೇಲ ಸಹಿತ 19 ಮಂದಿಯನ್ನು ಬಂಧಿಸಲಾಗಿತ್ತು. 1961ರ ಡಿಸೆಂಬರ್ ೧೬ರಂದು ಸಶಸ್ತ್ರ ಹೋರಾಟದೊಂದಿಗೆ ಉಮಖೋತೊ ವಿಝೀವ್ (ರಾಷ್ಟ್ರಪಿತ ಈಟಿ) ಸ್ಥಾಪಿಸಲು ನೆರವಾದರು.
ಮೊದಲಿಗೆ ’ಅಹಿಂಸಾ ನೀತಿ’ಯನ್ನು ಆಚರಿಸಿದರೂ ನಂತರ ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು ಜನಾಂಗೀಯ ದ್ವೇಷ’ಕ್ಕೆ ಹೆಸರಾದ ಸರ್ಕಾರದ ವಿರುದ್ದ ಪ್ರಬಲ ಎದುರಾಳಿಯಾದರು. 1990ರ ವರೆಗಿನ ಅವರ 27 ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದೆ.
10 ಮೇ 1994ರಲ್ಲಿ ದಕ್ಷಿಣ ಆಫ್ರಿಕಾದ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾದರು. 1995ರಲ್ಲಿ ಸ್ಥಾಪಿಸಲಾದ ನೆಲ್ಸನ್ ಮಂಡೇಲಾ ಮಕ್ಕಳ ನಿಧಿ, ನಲ್ಸನ್ ಮಂಡೇಲಾ ಫೌಂಡೇಷನ್ ಹಾಗೂ ದಿ ಮಂಡೇಲ ರೋಡ್ಸ್ ಫೌಂಡೇಷನ್ಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
ಅವರು ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದವರಲ್ಲಿ ಆಯ್ಕೆಯಾದ ಮೊದಲ ಮುಖ್ಯ ಕಾರ್ಯನಿರ್ವಾಹಕ ಹಾಗೂ ಪ್ರಜಾಪ್ರಭುತ್ವ ಮಾದರಿ ಚುನಾವಣಾ ಪ್ರತಿನಿಧಿ. ಅವರ ಸರ್ಕಾರವು ಸಾಂಸ್ಥಿಕ ವರ್ಣಭೇದ, ಬಡತನ ಹಾಗೂ ಅಸಮಾನತೆಯನ್ನು ಎದುರಿಸುವ ಮೂಲಕ ವರ್ಣಭೇದವನ್ನು ಅಳಿಸಿ ಸಾಮರಸ್ಯವನ್ನು ಬೆಳೆಸುವಲ್ಲಿ ಸಮರ್ಥವಾಗಿ ಹೋರಾಡಿತು.
ಅಲ್ಲಿನ ಹಿಂದುಳಿದ ಜನಾಂಗದ ಹಕ್ಕುಗಳಿಗಾಗಿ ಹೋರಾಡಿದ ಮಂಡೇಲಾ, ಹಲವು ಬಾರಿ ಬಂಧಿತರಾಗಿ ಸುಮಾರು 27 ವರ್ಷಗಳ ಕಾಲ ಕಾರಾಗೃಹದಲ್ಲೇ ಕಳೆದರು. 1991ರಲ್ಲಿ ಭಾರತ ರತ್ನ ಪ್ರಶಸ್ತಿ, 1993ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ, 2001ರಲ್ಲಿ ಅಂತರ ರಾಷ್ಟ್ರೀಯ ಗಾಂಧಿ ಶಾಂತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ಡಿಸೆಂಬರ್ 5, 2013ರಂದು ಮಂಡೇಲ ತಮ್ಮ ಸ್ವಗೃಹದಲ್ಲಿ ನಿಧನರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.