ಎರಡು ದಿನಗಳ ಹಿಂದೆ ಪದ್ಮಶ್ರೀ ಪ್ರಶಸ್ತಿ ಪಡೆದವರ ಪಟ್ಟಿ ನೋಡ್ತಿದ್ದೆ ಅದರಲ್ಲಿ ಒಬ್ಬ ಅಜ್ಜನನ್ನು ನೋಡಿ ಮಾತನಾಡಿಸಿದ ನೆನಪು ಕಾಡ್ತಿತ್ತು. ಆದ್ರೆ ಸ್ಪಷ್ಟವಾಗಿ ನೆನಪಾಗಿರಲಿಲ್ಲ. ಆದ್ರೆ ರಾತ್ರಿ ತುಂಬಾ ವಿಚಾರ ಮಾಡಿದ ನಂತರ ಇಂದು ನಸುಕಿನ ಜಾವ್ ಶರೀಫ ಅಜ್ಜರನ್ನು ಬೇಟಿಯಾಗಿ ಮಾತನಾಡಿದ್ದ ನೆನಪು ಬಂತು. ಅದೆಲ್ಲವನ್ನು ತಿಳಿಸುವ ಪ್ರಯತ್ನ ಮಾಡ್ತಿನಿ.
ಕಳೆದ ವರ್ಷ (2019) ಜನವರಿ ತಿಂಗಳಲ್ಲಿ ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ ಪ್ರಯಾಗ ಕುಂಭಮೇಳಕ್ಕೆ ಹೋಗಿದ್ದೆವು. ಕುಂಭಮೇಳ ಮುಗಿಸಿ ಅಯೋಧ್ಯಾಪತಿ ಶ್ರೀರಾಮನ ದರ್ಶನ ಕೂಡ ಮಾಡಿದೆವು. ಅಲ್ಲಿ ದಿನಾಲೂ ಆಲೂಗಡ್ಡೆ ಪದಾರ್ಥಗಳನ್ನು ತಿಂದು ತಿಂದು ಸಾಕಾಗಿ ಇಡ್ಲಿ, ವಡೆ, ಅಥವಾ ಸೌತ್ ಇಂಡಿಯನ್ ಫುಡ್ ಸಿಗುವ ಅಂಗಡಿಗೆ ಕರೆದುಕೊಂಡು ಹೋಗು ಅಂತ ಆಟೋದವನಿಗೆ ದುಂಬಾಲು ಬಿದ್ದಾಗ ಇಲ್ಲಿಯೇ ಫೇಮಸ್ ದೋಸಾ ಅಂಗಡಿ ಇದೆ ಅಲ್ಲಿಗೆ ಹೋಗೋಣ ಅಂದ ಆಟೋದವನು. ಆ ಆಟೋದಲ್ಲಿ ದೋಸೆ ಅಂಗಡಿಗೆ ಹೋಗುವ ಸಮಯದಲ್ಲಿ ಒಂದು ಸೈಕಲ್ ಅಂಗಡಿ ತೋರಿಸಿ, ಅಲ್ಲಿದ್ದ ಒಬ್ಬ ಮುಸಲ್ಮಾನ ಅಜ್ಜನನ್ನು ತೊರಿಸಿ ಇವರು ಈ ಇಡೀ ಫೈಝಾಬಾದ್ ಜಿಲ್ಲೆಗೆ ಚಿರಪರಿಚಿತ ಎಂದ. ತಕ್ಷಣ ಅವರ ಬಗ್ಗೆ ಕ್ಯೂರಿಯಾಸಿಟಿ ಉಂಟಾಗಿ ಅವನ ಬಗ್ಗೆ ಕೇಳುತ್ತಾ ಹೋದೆವು, ಉತ್ತರಪ್ರದೇಶದ ಫೈಝಾಬಾದ್’ನಲ್ಲಿ ಸೈಕಲ್ ರಿಪೇರಿ ಮಾಡಿ ಜೀವನ ಸಾಗಿಸುವ ಮೊಹಮ್ಮದ್ ಶರೀಫ್, ಸುತ್ತಮುತ್ತಲಿನ ಊರುಗಳಲ್ಲಿ ಶರೀಫ್ ಚಾಚಾ ಅಂತಲೇ ಚಿರಪರಿಚಿತ. ಅವರು ಅನಾಥವಾಗಿ ಸತ್ತ ಶವಗಳ ಸಂಸ್ಕಾರ ಮಾಡ್ತಾರೆ ಅಂದಾಗ ಅವರನ್ನು ಭೇಟಿಯಾಗಬೇಕೆಂಬ ನಮ್ಮ ಇಚ್ಛೆಯನ್ನು ಆಟೋದವನು ಆಗಲೇ ಈಡೇರಿಸಿದ. ಅವರ ಸರಳ ಜೀವನ ನೋಡಿ ನಾವಂತು ತುಂಬಾ ಖುಷಿ ಪಟ್ಟೆವು. ಸೇವೆಯೇ ಜೀವನ ಅಂದು ಕೊಂಡ ಜೀವದ ಮುಂದೆ ಒಂದು ಸ್ವಲ್ಪ ಸಮಯ ಕಳೆದದ್ದು ನಮ್ಮ ಅಯೋಧ್ಯೇ ಯಾತ್ರೆಯೂ ಸಾರ್ಥಕವಾಗಿತ್ತು.
ನಾವು ಕುಂಭಮೇಳ, ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ಬಂದಿದ್ದೇವೆ ಅಂದಾಗ ನಮಗಿಂತ ಖುಷಿ ಪಟ್ಟಿದ್ದು ಅವರೇ. ಯಾಕಂದ್ರೆ ಇಷ್ಟು ಚಕ್ಕ ವಯಸ್ಸಿನಲ್ಲಿ ಯಾತ್ರೆ ಮಾಡ್ತಿದಿರಾ ಅಂದ್ರೆ ನೀವೆ ಧನ್ಯರು ಅಂದಿದ್ದರು. ಶ್ರೀರಾಮನ ಮಂದಿರದ ವಿವಾದವೂ ಬಗೆಹರೆಯದಿದ್ದಾಗಲೇ ಶ್ರೀರಾಮನ ಬಗ್ಗೆ ಸಹಿಷ್ಣತೆ ಹೊಂದಿದ್ದವರು ಅವರು. ಅಸಹಿಷ್ಣುತೆ ಭಾರತದಲ್ಲಿದೆ ಅನ್ನುವ ಮೂರ್ಖರು ಒಂದ್ಸಲನಾದ್ರೂ ಈ ಚಾಚಾರನ್ನು ಭೇಟಿಯಾಗಿ ಅತಿ ಸೂಕ್ಷ್ಮ ಪ್ರದೇಶದಲ್ಲೆ ಸಹಿಷ್ಣತೆಯನ್ನು ಹೇಗೆ ಮೈಗೂಡಿಸಿಕೊಂಡಿದ್ದಾರೆ ಅಂತ ಅರ್ಥೈಸಿಕೊಳ್ಳಬೇಕು. ಅವರಂತಹ ಸೌಹಾರ್ದಯುತ ವ್ಯಕ್ತಿ ಕಾಣ ಸಿಗುವುದು ಬಹು ಅಪರೂಪ. ತಾನೂ ಮುಸಲ್ಮಾನ ಎನ್ನುವ ಯಾವ ಗರ್ವವೂ ಅವರಲ್ಲಿ ನಾವು ಕಾಣಲಿಲ್ಲ ಬದಲಾಗಿ ಅವರೊಬ್ಬ ಭಾರತೀಯ ಎನ್ನುವುದು ಅವರ ಮಾತಿನ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ಈ ಎಲ್ಲಾ ಸೇವೆಗೆ ಮೂಲ ಪ್ರೇರಣೆ ಏನಂತ ಕೇಳಿದಾಗ ಶರೀಫ್ ಚಾಚಾ ಹೇಳಿದ್ದೇನೆಂದರೆ 1992ರಲ್ಲಿ ಹಿರಿಯ ಮಗ ಮೊಹಮ್ಮದ್ ರಯೀಸ್ ಖಾನ್ (25) ಕೆಮಿಸ್ಟ್ ಆಗಿ ಸುಲ್ತಾನಪುರಕ್ಕೆ ಹೋಗ್ತಿದ್ದನಂತೆ. ಒಂದು ದಿನ ರಯೀಸ್ ಕಾಣೆಯಾದ. ಸ್ವಲ್ಪ ದಿನಗಳ ನಂತರ, ಮಗ ಕೊಲೆಯಾಗಿದ್ದು ಪತ್ತೆಯಾಯಿತು. ಅವನಿದ್ದ ಊರಿನಿಂದ 40 ಕಿಲೋಮೀಟರ್ ದೂರದಲ್ಲಿ ಅವನ ಕೊಳೆತ ದೇಹ ಚೀಲದಲ್ಲಿ ಪತ್ತೆಯಾಗಿತ್ತು. ನನ್ನ ಕೈಯಿಂದ ಸಂಸ್ಕಾರವನ್ನು ಮಾಡಿಸಿಕೊಳ್ಳಲಾಗದ ಮಗನ ಸ್ಥಿತಿ ಯಾರಿಗೂ ಬರಬಾರದೆಂದು ಶರೀಫ್ ಚಾಚಾ ಅವತ್ತೇ ನಿರ್ಧರಿಸಿದರಂತೆ. ಅಂದಿನಿಂದ ಇಂದಿನವರೆಗೆ ಅನಾಥವಾಗಿ ಎಲ್ಲಿ ಯಾರೇ ಸತ್ತ ಸುದ್ದಿ ಬರಲಿ, ಸಹಾಯಕ್ಕೆ ಧಾವಿಸುತ್ತಾರೆ. ಸತ್ತ ವ್ಯಕ್ತಿ ಅಪರಿಚಿತನಾಗಿದ್ದು, ಅಥವಾ ವಾರಸುದಾರರಿಲ್ಲದಿದ್ದರೆ ಶರೀಫ್ ಚಾಚಾ ಯಾರದ್ದೋ ಸಹಾಯಕ್ಕೆ ಕಾಯುತ್ತಾ ಕೂರದೇ ತಕ್ಷಣವೇ ಶವಸಂಸ್ಕಾರ ಮಾಡುತ್ತಾರೆ.
“ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಘನವೆತ್ತ ಅಂತ್ಯಕ್ರಿಯೆಗೆ ಅರ್ಹನಾಗಿರುತ್ತಾನೆ. ಸತ್ತಮೇಲೆ ಅವನ ಜೀವನದ ಸರಿ-ತಪ್ಪುಗಳ ಲೆಕ್ಕವನ್ನೆಲ್ಲಾ ಬದಿಗಿಟ್ಟು, ಯಾವ ಮತ-ಧರ್ಮದವನೇ ಆಗಿದ್ದರೂ ಸಹ ಅವನ ಶವವನ್ನು ದಾರಿ ಬದಿಯ ಪ್ರಾಣಿಗಳ ಆಹಾರವಾಗಲು ಬಿಡಬಾರದು” ಎಂದು ಶರೀಫ್ ಚಾಚಾ ಹೇಳುತ್ತಾರೆ.
82ರ ವಯಸ್ಸಿನಲ್ಲೂ ಸಹ, ಇವತ್ತಿಗೂ ಬೆಳಗೆದ್ದು ಒಂದು ಸುತ್ತು ಸುತ್ತಮುತ್ತಲಿನ ಆಸ್ಪತ್ರೆ, ಶವಾಗಾರ, ರೈಲ್ವೇ ನಿಲ್ದಾಣ, ಪೊಲೀಸ್ ಠಾಣೆಗಳೆಡೆಗೆ ನಡೆದಾಡಿ ಯಾವುದಾದರೂ ಅನಾಥಶವವಿದೆಯೇ ಅಂತಾ ಕೇಳಿಬರೋದು ಶರೀಫ್ ಚಾಚಾರ ದಿನಚರಿ. ಆಡಳಿತಾಧಿಕಾರಿಗಳೂ ಸಹ 72 ಘಂಟೆಯವರೆಗೆ ಯಾವುದಾದರೂ ಶವಕ್ಕೆ ಯಾರೂ ವಾರಸುದಾರರು ಸಿಗದಿದ್ದರೆ ಶರೀಫ್ ಚಾಚಾರಿಗೆ ಫೋನಾಯಿಸುತ್ತಾರೆ.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ 27 ವರ್ಷದಿಂದ ಈ ಕೆಲಸ ಮಾಡುತ್ತಿರುವ ಚಾಚಾ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ನಿಜವಾಗಿಯೂ ಈ ಶ್ರೇಷ್ಠ ಮೂರ್ತಿಯನ್ನು ಭೇಟಿಯಾಗಿ ಮಾತನಾಡಿ ಜೀವನ ಧನ್ಯವಾಯಿತು. ಚಾಚಾ ಕೊನೆಗೆ ಹೊರಡುವಾಗ ಒಂದು ಮಾತು ಹೇಳಿದರು, ಆ ಮಾತು ಇವತ್ತು ನೆನಪಿಗೆ ಬಂದು ಈ ಲೇಖನ ಬರೆದೆ. ಅದೇನೆಂದರೆ ” ಫೀರ್ ಆವೋ ಬೇಟಾ”. (ಆ ಶ್ರೇಷ್ಠ ಸೇವಾ ಪುರುಷನನ್ನು ಭೇಟಿ ಮಾಡಿಸಿದ ಆಟೋದವನಿಗೂ ಈ ಮೂಲಕ ಒಂದು ಧನ್ಯವಾದ ಹೇಳಲೇಬೇಕು). ಆ ಸಾಧನಾಮಯಿ, ಸೇವಾಮಯೀಯ ಬಾಯಿಂದ ” ಫೀರ್ ಆವೋ ಬೇಟಾ” ಅಂತ ಇಷ್ಟು ಹೇಳಿಸಿಕೊಂಡ ನಾನಲ್ಲವೇ ಪುಣ್ಯವಂತ. ನಿಜವಾಗಿಯೂ ಇವರಿಗೆ ಪದ್ಮಶ್ರೀ ದೊರಕಿದ್ದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದೇ ಅರ್ಥ. ಶರೀಪ್ ಚಾಚಾರಿಗಿಂತ ಹೆಚ್ಚು ಖುಷಿ ಪಟ್ಟೆವು ನಾವು. ಒಂದು ಖೇದ ಸಂಗತಿ ಏನೆಂದರೆ ಅವರ ಜೊತೆಗೆ ಒಂದು ಪೋಟೋ ತೆಗೆಸಿಕೊಳ್ಳದ ಶತಮೂರ್ಖ ನಾನು ಎಂಬುದು.
ಭವ್ಯ ಭಾರತದ ಗೌರವ ಹೆಚ್ಚುತ್ತಿರೋದು ಅವರಂತಹ ಸಾಮಾನ್ಯ ವ್ಯಕ್ತಿಗಳಿಂದ. ಶ್ರೀಸಾಮಾನ್ಯರು ಮುನ್ನಲೆಗೆ ಬರುತ್ತಿದ್ದಾರೆಂದರೆ ಭಾರತ ಸ್ವಾಸ್ಥ್ಯ, ಸದೃಢ ಸಮಾಜವಾಗಿ ನಿರ್ಮಾಣವಾಗುತ್ತಿದೆ ಎಂದು ಗೋಚರವಾಗುತ್ತಿದೆ. ಇವರಂತಹ ಸಾಮಾನ್ಯ ವ್ಯಕ್ತಿಗಳ ಸೇವಾಗುಣಗಳನ್ನು ನಮ್ಮಲ್ಲಿಯೂ ಅಳವಡಿಸಿ ಕೊಳ್ಳಬೇಕು. ಅವರ ಹಾಗೆ ಸೇವೆಯೇ ಜೀವನದ ಭಾಗ ಅಂತ ಗುರುತಿಸಿಕೊಳ್ಳಬೇಕು. ಆಗ ಭಾರತ ವಿಶ್ವದ ತುತ್ತ ತುದಿಯಲ್ಲಿ ವಿರಾಜಮಾನವಾಗಿ ಮೆರೆಯುತ್ತದೆ.
✍ ಸುರೇಶ್ ಮಾಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.