ತಮ್ಮ ಪ್ರೀತಿಯ ಅಜ್ಜಿಗಾಗಿ ಇಡೀ ಕುಟುಂಬವೊಂದು ನೇತ್ರದಾನದ ಸಂಕಲ್ಪ ಮಾಡಿದೆ. ತನ್ನವರಿಂದ ‘ಅಬ್ಬೆ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಅಜ್ಜಿ ನೂರು ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಅವರ ಕುಟುಂಬದ ಕಿರಿಯ ಸದಸ್ಯರು ನೇತ್ರದಾನ ಮಾಡಿದ್ದಾರೆ. ಶಿರಸಿ ಮೂಲದ ಕಣ್ಣಿನ ಆಸ್ಪತ್ರೆಯನ್ನು ಸಂಪರ್ಕಿಸಿ ವೈದ್ಯರೊಂದಿಗೆ ಮಾತುಕತೆಯನ್ನು ನಡೆಸಿ ನೇತ್ರದಾನದ ಸಂಕಲ್ಪ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ಚಾಪಖಂಡ ಗ್ರಾಮದ ದೇವಮ್ಮ ಹೆಗಡೆ ಅವರು ಜನವರಿ 22 ರಂದು ನೂರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬದ 15 ಮಂದಿ ಸದಸ್ಯರು ನೇತ್ರದಾನ ಮಾಡುವ ಪ್ರತಿಜ್ಞೆಯನ್ನು ಮಾಡಿದ್ದಾರೆ.
ಅಜ್ಜಿ ದೇವಮ್ಮ ಅಬ್ಬೆಗೆ ಶತಮಾನ ಕಂಡ ಸಂಭ್ರಮಕ್ಕಾಗಿ ಜೋಯ್ಡಾದ ಪೊಟೋಲಿಯ ಹಕ್ಕಿಮನೆಯಲ್ಲಿ ಒಂದು ಚಿಕ್ಕ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗಿತ್ತು. ಇಲ್ಲಿ ದೇವತಾ ಕಾರ್ಯದ ಜೊತೆಯಲ್ಲಿ ಕುಟುಂಬದ ಸದಸ್ಯರೆಲ್ಲರು ನೇತ್ರದಾನ ಮಾಡುವ ವಾಗ್ದಾನವನ್ನು ಮಾಡಿದ್ದಾರೆ. ಅಲ್ಲದೇ, ನೇತ್ರದಾನದ ಮಹತ್ವ ಹಾಗೂ ಅವಶ್ಯಕತೆ ಕುರಿತು ವೈದ್ಯರಿಂದ ಜಾಗೃತಿ ಉಪನ್ಯಾಸ ಕೂಡ ನಡೆಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಮ್ಮ ಅವರ ಮೊಮ್ಮಗ ನರಸಿಂಹ ಹೆಗಡೆಯವರು, ‘ನೂರನೇ ವಯಸ್ಸಿನಲ್ಲಿ ನಮ್ಮಜ್ಜಿ ಅತ್ಯಂತ ಆರೋಗ್ಯಪೂರ್ಣವಾಗಿದ್ದಾರೆ ಎಂಬುದು ನಮಗೆ ಹೆಮ್ಮೆ. ಅವರ ಜನ್ಮದಿನವನ್ನು ಅತ್ಯಂತ ಸ್ಮರಣೀಯಗೊಳಿಸಲು ಮತ್ತು ಈ ಸಂದರ್ಭದಲ್ಲಿ ಅತ್ಯುತ್ತಮ ಸಾಮಾಜಿಕ ಸಂದೇಶವನ್ನು ರವಾನಿಸಲು ನಾವು ಬಯಸಿದ್ದೆವು. ಈ ಹಿನ್ನೆಲೆಯಲ್ಲಿ ನಾವು ಶಿರಸಿ ಆಸ್ಪತ್ರೆಗೆ ನೇತ್ರದಾನವನ್ನು ಮಾಡುವ ಪ್ರತಿಜ್ಞೆಯನ್ನು ಮಾಡಿದ್ದೇವೆ. ವೈದ್ಯರ ತಂಡ ನಮ್ಮ ಯೋಜನೆಯ ಬಗ್ಗೆ ಅತ್ಯಂತ ಸಂತೋಷಗೊಂಡಿತು. ನಮ್ಮ ಅಜ್ಜಿಯ ಜನ್ಮದಿನದ ಸಂದರ್ಭದಲ್ಲಿ ವೈದ್ಯರ ತಂಡ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಆಯೋಜಿಸಿತು” ಎಂದಿದ್ದಾರೆ.
“85 ವರ್ಷದವರೆಗೆ ದೇವಮ್ಮ ಅವರು ಕೃಷಿ ಕುಟುಂಬದ ಸದಸ್ಯರು ಮಾಡುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಅಡುಗೆ ಮಾಡಲು ಕಟ್ಟಿಗೆಯನ್ನು ಸಂಗ್ರಹಿಸಿ ತರುತ್ತಿದ್ದರು, ದನಕರುಗಳಿಗೆ ಮೇವು ಕೂಡ ಕತ್ತರಿಸಿ ತರುತ್ತಿದ್ದರು. ಈ ವಯಸ್ಸಲ್ಲೂ ಅವರ ಕಣ್ಣಿನ ದೃಷ್ಟಿ ಅತ್ಯುತ್ತಮವಾಗಿದೆ ಮತ್ತು ಅವರ ಕಿವಿ ಕೂಡ ಅತ್ಯಂತ ಸೂಕ್ಷ್ಮವಾಗಿದೆ. 12ನೇ ವಯಸ್ಸಿಗೆ ವಿಧವೆಯಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ನಮ್ಮ ಕುಟುಂಬದೊಂದಿಗೇ ಅವರು ವಾಸಿಸುತ್ತಿದ್ದಾರೆ. ಅವರ ಜೀವನ ವಿಧಾನ ಮತ್ತು ಆಹಾರ ಸೇವನೆ ಅತ್ಯಂತ ಆರೋಗ್ಯಪೂರ್ಣವಾಗಿದೆ ಅದುವೇ ಅವರ ದೀರ್ಘಾಯುಷ್ಯಕ್ಕೆ ಕಾರಣವಾಗಿದೆ. ಅವರು ರಾತ್ರಿ ವೇಳೆ ಯಾವತ್ತು ಕೂಡ ಆಹಾರ ಸೇವನೆ ಮಾಡಿಲ್ಲ” ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.
100 ವರ್ಷಗಳ ಸಾರ್ಥಕ ಜೀವನವನ್ನು ನಡೆಸಿರುವ ತಮ್ಮ ಅಬ್ಬೆಯ ಜನ್ಮದಿನವನ್ನು ಅತ್ಯುತ್ತಮ ಸಂದೇಶವನ್ನು ಸಾರುವ ಮೂಲಕ ಆಚರಿಸಿದ ಕುಟುಂಬ ಸದಸ್ಯರು ಎಲ್ಲರಿಗೂ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.