ಜನವರಿ 12, ಸ್ವಾಮಿ ವಿವೇಕಾನಂದರ ಜನ್ಮದಿನ. ವಿವೇಕಾನಂದರು ಅತ್ಯುತ್ತಮ ವಾಗ್ಮಿ. ಆಧ್ಯಾತ್ಮಿಕತೆಯ ಮೇರು ಪರ್ವತ. ಹಿಂದೂ ಧರ್ಮದ ಬಗ್ಗೆ ಆಳವಾದ ಜ್ಞಾನವನ್ನು ಅವರು ಹೊಂದಿದ್ದರು. ಪ್ರಖರವಾದ ಮಾತುಗಳ ಮೂಲಕವೇ ಅವರು ಜಗತ್ತನ್ನು ರೋಮಾಂಚನಗೊಳಿಸಿದವರು, ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದವರು. ಭಾರತೀಯ ಸಂಸ್ಕೃತಿ ಪರಂಪರೆ, ಇತಿಹಾಸಗಳ ಬಗ್ಗೆ ಅಧಿಕಾರ ವಾಣಿಯಿಂದ ಮಾತನಾಡುತ್ತಿದ್ದರು. ಎಂಥ ಗಹನ ವಿಷಯಗಳನ್ನು ಮಕ್ಕಳಿಗೂ ಅರ್ಥವಾಗುವಂತೆ ದೃಷ್ಟಾಂತ ಕಥೆಗಳ ರೂಪದಲ್ಲಿ ತಿಳಿಸುತ್ತಿದ್ದರು.
ಕಥೆ 1 : ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ
ಕಾಶಿಯಲ್ಲಿ ನಾನೊಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದೆ. ರಸ್ತೆಯ ಒಂದು ಬದಿ ದೊಡ್ಡ ಕೆರೆ. ಮತ್ತೊಂದು ಬದಿ ಎತ್ತರವಾದ ಗೋಡೆ. ದಾರಿಯಲ್ಲಿ ಕೋತಿಗಳ ಹಿಂಡು. ಕಾಶಿಯಲ್ಲಿನ ಕೋತಿಗಳ ಆಕಾರವೂ ದೊಡ್ಡದು. ಸ್ವಭಾವವೂ ಭಯಂಕರ. ತಮ್ಮ ರಸ್ತೆಯಲ್ಲಿ ನನ್ನನ್ನು ಹಾದು ಹೋಗಲು ಬಿಡಬಾರದೆಂದು ಅವಕ್ಕೆ ಅನಿಸಿರಬೇಕು. ಎಲ್ಲವೂ ಒಮ್ಮೆಗೇ ಹಾರಾಟ ಚೀರಾಟಕ್ಕೆ ಮೊದಲು ಮಾಡಿದುವು. ಮುಂದೆ ನಡೆದಂತೆಲ್ಲಾ ಕೆಲವು ನನ್ನ ಕಾಲನ್ನೇ ಹಿಡಿದುವು. ಅವು ನನ್ನ ಮೇಲೆ ಬೀಳಲು ಬಂದಂತೆಲ್ಲಾ ನಾನು ಜೋರಾಗಿ ಓಡಲು ಆರಂಭಿಸಿದೆ. ಆದರೆ ನಾನು ಜೋರಾಗಿ ಓಡಿದಂತೆಲ್ಲಾ ಅವೂ ಇನ್ನಷ್ಟು ಜೋರಾಗಿ ಅಟ್ಟಿಸಿಕೊಂಡು ಬಂದವು. ನನ್ನನ್ನು ಕಚ್ಚಲು ಪರಚಲು ಪ್ರಾರಂಭಿಸಿತು. ಅವುಗಳ ಕಾಟದಿಂದ ತಪ್ಪಿಸಿಕೊಳ್ಳುವ ಉಪಾಯವೇ ತೋಚಲಿಲ್ಲ. ಅಷ್ಟರಲ್ಲಿ ಯಾವನೋ ಒಬ್ಬ ಜೋರಾಗಿ ನನಗೆ ಕೂಗಿ ಹೇಳಿದ, ’ಓಡಬೇಡ, ಅವುಗಳನ್ನು ಎದುರಿಸು’ ಕೂಡಲೇ ನಾನು ಕೋತಿಗಳ ಕಡೆ ತಿರುಗಿ ನಿಂತೆ. ಏನಾಶ್ಚರ್ಯ? ಕೂಡಲೇ ಅವೂ ಹಿಂದೆ ಸರಿಯ ತೊಡಗಿದವು. ಕಡೆಗೆ ದಿಕ್ಕಾ ಪಾಲಾಗಿ ಅವು ಓಡತೊಡಗಿದುವು. ಈ ಘಟನೆಯಿಂದ ನಾನೊಂದು ಪಾಠ ಕಲಿತೆ. ಭಯಾನಕ ಪ್ರಸಂಗವನ್ನು ಧೈರ್ಯದಿಂದ ಎದುರಿಸಬೇಕು. ಜೀವನದಲ್ಲಿ ಬರುವ ಸಂಕಷ್ಟಗಳಿಗೆ ನಾವು ಬೆನ್ನು ತೋರಿಸದೆ ಧೈರ್ಯದಿಂದ ಎದುರಿಸಿದರೆ, ಕಷ್ಟಗಳು ಕೋತಿಯಂತೆ ಓಡಿಹೋಗುತ್ತದೆ.
ಕಥೆ 2: ಮೂಢನಂಬಿಕೆ ಬಿಡಿ
ಅದೊಂದು ರಾಜ್ಯ. ಅಲ್ಲೊಬ್ಬ ರಾಜ. ಒಬ್ಬ ಜ್ಯೋತಿಷಿ ರಾಜನ ಬಳಿ ತೆರಳಿ, ’ಇನ್ನು ಆರು ತಿಂಗಳಲ್ಲಿ ನೀನು ಸಾಯುತ್ತೀ’ ಎಂದು ಭವಿಷ್ಯ ಹೇಳಿದ. ಅದನ್ನು ಕೇಳಿದ ರಾಜನಿಗೆ ಜೀವವೇ ಹಾರಿಹೋಯಿತು. ಸಾವಿನ ಭಯಕ್ಕೆ ಅವನು ಸಾಯುವಂತಾದ. ಆದರೆ ಅವನ ಮಂತ್ರಿ ಮಹಾಜಾಣ. ಅವನು ರಾಜನಿಗೆ, ಜ್ಯೋತಿಷಿಗಳೆಂದರೆ ಶುದ್ಧ ಶುಂಠರು, ಎಂದು ಸಮಾಧಾನ ಮಾಡಲು ಎಷ್ಟೆಷ್ಟೋ ಪ್ರಯತ್ನಿಸಿದ. ಆದರೆ ರಾಜನಿಗೆ ಜ್ಯೋತಿಷಿಯ ಮಾತು ಆಳವಾಗಿ ಮನಸ್ಸಿನಲ್ಲಿ ಕೂತಿತ್ತು. ರಾಜನಿಗೆ ಸಮಾಧಾನವಾಗಲಿಲ್ಲ. ಕೊನೆಗೆ ಇನ್ನಾವ ಉಪಾಯವೂ ತೋರದೆ ಮಂತ್ರಿ ಆ ಜ್ಯೋತಿಷಿಯನ್ನೇ ಮತ್ತೆ ಅರಮನೆಗೆ ಕರೆಸಿದ. ಅವನನ್ನು ಪುನಃ ಅವನ ಲೆಕ್ಕಾಚಾರವೆಲ್ಲಾ ಸರಿ ಇದೆಯೇ ಎಂದು ರಾಜನ ಸಮ್ಮುಖದಲ್ಲಿ ಕೇಳಿದ. ಅದಕ್ಕೆ ಜ್ಯೋತಿಷಿ ಮತ್ತೊಮ್ಮೆ ಲೆಕ್ಕಾಚಾರ ಹಾಕಿ ನನ್ನ ಲೆಕ್ಕಾಚಾರ ತಪ್ಪಲು ಸಾಧ್ಯವೇ ಇಲ್ಲ. ರಾಜನಿಗೆ ಇನ್ನು ೧೫ ದಿನಗಳಲ್ಲಿ ಸಾವು ನಿಶ್ಚಿತ ಎಂದು ಸಾರಿದ. ದೊರೆಯ ಮುಖ ಇನ್ನಷ್ಟು ಬಿಳಿಚಿಕೊಂಡಿತು. ಆಗ ಮಂತ್ರಿ ಜ್ಯೋತಿಷಿಗೆ ಸರಿಯಪ್ಪ, ಈಗ ನಿನ್ನ ಆಯುಷ್ಯ ಎಷ್ಟೆಂದು ಲೆಕ್ಕಾಚಾರ ಹಾಕಿ ಹೇಳು ಎಂದ. ಜ್ಯೋತಿಷಿ ಖಚಿತವಾಗಿ ’ಇನ್ನೂ ೧೨ ವರ್ಷ ಇದೆ’ ಎಂದು ಉತ್ತರಿಸಿದ. ಕೂಡಲೇ ಮಂತ್ರಿ ಒರೆಯಿಂದ ಕತ್ತಿ ಸೆಳೆದು ಜ್ಯೋತಿಷಿಯ ತಲೆಯನ್ನು ತುಂಡರಿಸಿದ ಮತ್ತು ರಾಜನಿಗೆ ’ಮಹಾರಾಜ, ಅವನ ಭವಿಷ್ಯ ಎಷ್ಟು ಸುಳ್ಳು ಎಂದು ಈಗ ನಿಮಗೆ ಅರ್ಥವಾಯಿತೇ?’ ಎಂದು ಪ್ರಶ್ನಿಸಿದ. ರಾಜನಿಗೆ ಕವಿದಿದ್ದ ಭ್ರಮೆ ಕಳಚಿತು. ಈ ಕಥೆ ಹೇಳಿ ವಿವೇಕಾನಂದರು ಆಧ್ಯಾತ್ಮಿಕ ಅಥವಾ ಶಾರೀರಿಕ ದುರ್ಬಲತೆ ತರುವ ಯಾವ ಸಂಗತಿಯನ್ನು ನಿಮ್ಮ ಎಡಗಾಲು ಬೆರಳುಗಳಿಂದಲೂ ಸೋಕದಿರಿ ಎನ್ನುತ್ತಾರೆ.
ಕಥೆ 3 : ಪ್ರಸಿದ್ಧಿ ಪರಾನ್ಮುಖವಾಗಿ ನಿಶ್ಯಬ್ಧವಾಗಿ ನಿರಂತರ ಕರ್ತವ್ಯ ನಡೆಸುವವನೇ ಶ್ರೇಷ್ಠ
ಸೀತಾಮಾತೆ ಲಂಕೆಯಲ್ಲಿರುವ ವಿಷಯ ತಿಳಿದ ನಂತರ ವಾನರ ಸೈನ್ಯ ಸಮೇತ ಶ್ರೀರಾಮ ಚಂದ್ರ ಸಮುದ್ರ ತೀರವನ್ನು ತಲುಪಿದ. ಲಂಕೆ ತಲುಪಲು ಸಮುದ್ರಕ್ಕೆ ಸೇತುವೆ ಕಟ್ಟುವ ಕೆಲಸ ಪ್ರಾರಂಭವಾಯ್ತು. ಆಗ ಸಣ್ಣ ಅಳಿಲೊಂದು ಮರಗಳಲ್ಲಿ ಹೊರಳಾಡಿ, ನೀರ ಬಳಿ ಹೋಗಿ ಮೈಕೊಡವಿ ಬರುತ್ತಿತ್ತು. ಹೀಗೆ ರಾಮ ಕಾರ್ಯದಲ್ಲಿ ಅದೂ ತನ್ನ ಸೇವೆಸಲ್ಲಿಸುತ್ತಿತ್ತು. ಆದರೆ ವಾನವರಾದರೋ ಸೇತುವೆಗಾಗಿ, ದೊಡ್ಡ ದೊಡ್ಡ ಬಂಡೆಗಳನ್ನು, ಮರಗಳನ್ನು ಬೆಟ್ಟಗುಡ್ಡಗಳನ್ನೇ ತಂದು ನೀರಿಗೆ ಹಾಕುತ್ತಿದ್ದರು. ಅವರಿಗೆಲ್ಲಾ ಈ ಅಳಿಲಿನ ಕೆಲಸ ನೋಡಿ ನಗು ಬರುತ್ತಿತ್ತು. ಅದನ್ನು ನೋಡಿದ ಶ್ರೀರಾಮನು ಅವರಿಗೆ ಈ ಅಳಿಲಿಗೆ ದೇವರು ಒಳ್ಳೆಯದನ್ನು ಮಾಡಲಿ. ಅದು ಶಕ್ತಿ ಮೀರಿ ತನ್ನ ಕರ್ತವ್ಯ ಮಾಡುತ್ತಿದೆ. ಆದ್ದರಿಂದ ನಿಮ್ಮಲ್ಲಿನ ಅತ್ಯಂತ ಶ್ರೇಷ್ಠ ನಾದವನಷ್ಟೇ ಅದೂ ಸಹ ಶ್ರೇಷ್ಠ’ ಎಂದನು. ಅನಂತರ ರಾಮನು ಆ ಅಳಿಲಿನ ಬೆನ್ನ ಮೇಲೆ ಪ್ರೀತಿಯಿಂದ ಕೈಯಾಡಿಸಿದನು. ರಾಮನ ಬೆರಳಿನ ಉದ್ದನೆಯ ಗುರುತು ಇಂದಿಗೂ ಅಳಿಲಿನ ಬೆನ್ನ ಮೇಲೆ ಮೂಡಿದೆ.
✍ ಹೆಚ್. ನಾಗಭೂಷಣ್ ರಾವ್
ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕತೆಯ ಧ್ರುವ ತಾರೆ. ಅವರ ನುಡಿಮುತ್ತಗಳು ಯುವ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮದ ಭಾವವನ್ನು ಮೂಡಿಸುತ್ತವೆ. ಅವರ ಮಾತುಗಳಲ್ಲಿ ರೋಮಾಂಚಕತೆ ಇದೆ. ಅವರ ವ್ಯಕ್ತಿತ್ವವೇ ಒಂದು ಪ್ರೇರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.