ಬೆಳ್ತಂಗಡಿ : ಹಲವಾರು ಬೇಡಿಕೆಗಳನ್ನು ಪೂರೈಸುವಂತೆ ಹಾಗೂ ಬೆಳ್ತಂಗಡಿ ತಾಲೂಕು ಮಟ್ಟದ ಕೊರಗರ ಅಭಿವೃದ್ದಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವಂತೆ ಒತ್ತಾಯಿಸಿ ಕೊರಗ ಅಭಿವೃದ್ದಿ ಸಂಘ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೋಮವಾರ ಇಲ್ಲಿನ ತಾಲೂಕು ಪಂಚಾಯತ್ನ ಎದುರು ಪ್ರತಿಭಟನೆ ನಡೆಸಿದರು.
ಕೊರಗ ಸಮುದಾಯ ನಿವೇಶನ, ವಸತಿ, ಶಿಕ್ಷಣ, ಆರೋಗ್ಯ ಮೊದಲಾದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸರಕಾರ ನಮ್ಮ ಬಗ್ಗೆ ಕಾಳಜಿಯಿಂದ ಯಾವುದೇ ಅನುದಾನಗಳನ್ನು ನೀಡುತ್ತಿಲ್ಲ. ಭೂಮಿಗಾಗಿ ನಾವು ಅರ್ಜಿ ಸಲ್ಲಿಸಿದ್ದರೂ ಈವರೆಗೂ ನೀಡಿಲ್ಲ. ನಮ್ಮ ಕುಂದುಕೊರತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ಕರೆದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಡಾ| ಮಹಮ್ಮದ್ ಫೀರ್ ವರದಿಯ ಪ್ರಕಾರ ಪ್ರತಿ ಕುಟುಂಬಕ್ಕೆ ಎರಡೂವರೆ ಎಕರೆ ಜಮೀನು ಕೊಡಬೇಕು. ಜಮೀನು ಪಡೆದ ಕುಟುಂಬಗಳಿಗೆ ಪೂರ್ಣಪ್ರಮಾಣದ ಪುನರ್ವಸತಿ ಒದಗಿಸಬೇಕು. ಬುಟ್ಟಿ ಹೆಣೆಯಲು, ಕಾಡಿನ ಬೀಳು ತೆಗೆಯಲು ಅರಣ್ಯ ಇಲಾಕೆಯಿಂದ ಅನುಮತಿ ಮತ್ತು ಗುರುತು ಚೀಟಿ ಒದಗಿಸಬೇಕು ಹಾಗೂ 2 ತಿಂಗಳಿಗೊಮ್ಮೆ ಇಓ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕು ಎಂದು ತಾಪಂ. ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ಮಹಾಂತೇಶ್ ಅವರಿಗೆ ಮನವಿ ನೀಡಿದರು. ಇದಕ್ಕುತ್ತರಿಸಿದ ಅವರು ಇದೇ ಜುಲೈ 22 ರಂದು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದೆಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಈ ಸಂದರ್ಭ ಸಮಾಜ ಕಲಾಣ್ಯಾಧಿಕಾರಿ ಮೋಹನ್ ಕುಮಾರ್ ಇದ್ದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ-ಕೇರಳ ರಾಜ್ಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಮತಿ ಕಾಸರಗೋಡು, ಕಾರ್ಯದರ್ಶಿ ಸಂಜೀವ ಮೂಡುಬಿದ್ರೆ, ತಾಲೂಕು ಅಧ್ಯಕ್ಷ ಹರೀಶ, ಕಾರ್ಯದರ್ಶಿ ಸವಿತಾ ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.