ನವದೆಹಲಿ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ಗೆ ಪಶ್ಚಿಮಬಂಗಾಳದ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಟ್ಯಾಬ್ಲೋ ಆಯ್ಕೆಗಾಗಿ ನೇಮಕ ಮಾಡಿದ ತಜ್ಞರ ಸಮಿತಿ ಪಶ್ಚಿಮಬಂಗಾಳ ಕಳುಹಿಸಿದ ಪ್ರಸ್ತಾಪದಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಪತ್ತೆ ಮಾಡಿದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
“ಪಶ್ಚಿಮ ಬಂಗಾಳ ಸರ್ಕಾರದ ಟ್ಯಾಬ್ಲೋ ಪ್ರಸ್ತಾಪವನ್ನು ತಜ್ಞರ ಸಮಿತಿಯು ಎರಡು ಸುತ್ತಿನ ಸಭೆಗಳಲ್ಲಿ ಪರಿಶೀಲಿಸಿತು. ಎರಡನೇ ಸಭೆಯಲ್ಲಿ ಚರ್ಚಿಸಿದ ನಂತರ ಪಶ್ಚಿಮ ಬಂಗಾಳ ಸರ್ಕಾರದ ಪ್ರಸ್ತಾಪವನ್ನು ತಜ್ಞರ ಸಮಿತಿಯು ಹೆಚ್ಚಿನ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ” ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಆರು ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಳಗೊಂಡ 22 ಪ್ರಸ್ತಾಪಗಳನ್ನು ಗಣರಾಜ್ಯೋತ್ಸವ ಮೆರವಣಿಗೆಗೆ ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಒಟ್ಟು 56 ಟ್ಯಾಬ್ಲೋ ಪ್ರಸ್ತಾಪಗಳು ಬಂದಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 32 ಮತ್ತು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಂದ 24 ಪ್ರಸ್ತಾಪಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಇದರಲ್ಲಿ 22 ಅನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ.
“ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಟ್ಯಾಬ್ಲೋ ಆಯ್ಕೆ ಮಾಡಲು ಸುಸ್ಥಾಪಿತ ವ್ಯವಸ್ಥೆ ಇದೆ, ಅದರ ಪ್ರಕಾರ ರಕ್ಷಣಾ ಸಚಿವಾಲಯವು ಎಲ್ಲಾ ರಾಜ್ಯಗಳು / ಕೇಂದ್ರ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳು / ಇಲಾಖೆಗಳಿಂದ ಟ್ಯಾಬ್ಲೋಗಳ ಪ್ರಸ್ತಾಪಗಳನ್ನು ಆಹ್ವಾನಿಸುತ್ತದೆ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರಖ್ಯಾತ ವ್ಯಕ್ತಿಗಳನ್ನು ಒಳಗೊಂಡ ತಜ್ಞರ ಸಮಿತಿಯ ಸಭೆಗಳಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಂದ ಪಡೆದ ಟ್ಯಾಬ್ಲೋ ಪ್ರಸ್ತಾಪಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.