ಇತ್ತೀಚೆಗೆ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆಯಾಗುತ್ತಿದೆ. ಹಲವೆಡೆ ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ, ಅದಕ್ಕೆ ಪ್ರತಿಕ್ರಿಯೆಯಾಗಿ ದೇಶದ ಹಲವೆಡೆ ಈ ಕಾಯ್ದೆಯನ್ನು ಬೆಂಬಲಿಸಿ ಪ್ರದರ್ಶನಗಳು ನಡೆಯುತ್ತಿವೆ. ಈ ಕಾಯ್ದೆಯ ಮೂಲ ಉದ್ದೇಶವೇನು ಮತ್ತು ಕೆಲವರು ಇದನ್ನು ವಿರೋಧಿಸುತ್ತಿರುವುದು ಏಕೆ ಎಂಬ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಹಿನ್ನೆಲೆ
ಭಾರತವು 1947 ರಲ್ಲಿ ಮತೀಯ ಆಧಾರದ ಮೇಲೆ ವಿಭಜಿತವಾಯಿತು. ಪಾಕಿಸ್ಥಾನವು ಇಸ್ಲಾಂ ಮತೀಯ ರಾಷ್ಟ್ರವಾಯಿತು. ಭಾರತವು ಸಮಾನತೆ ಮತ್ತು ಭ್ರಾತೃತ್ವದ ಆಧಾರದ ಮೇಲೆ ಸಂವಿಧಾನವನ್ನು ರಚಿಸಿಕೊಂಡಿತು. ನಂತರದಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ದೇಶಗಳೂ ಕೂಡ ತಮ್ಮನ್ನು ಇಸ್ಲಾಂ ಮತೀಯ ರಾಷ್ಟ್ರವನ್ನಾಗಿ ಘೋಷಿಸಿಕೊಂಡವು. ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯಗಳ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ. ಕೋಮುಗಲಭೆ, ಹಲ್ಲೆ, ಕೊಲೆ, ಅಪಹರಣ, ಬಲಾತ್ಕಾರದ ವಿವಾಹಗಳು, ರಕ್ಷಣೆಗಾಗಿ ನಿಯಮಿತವಾಗಿ ಹಫ್ತಾ ವಸೂಲಿ, ಬೆದರಿಕೆ, ಇತ್ಯಾದಿಗಳ ಮೂಲಕ ಹಿಂದೂ, ಸಿಖ್ ಇತ್ಯಾದಿ ಸಮುದಾಯಗಳನ್ನು ವ್ಯವಸ್ಥಿತವಾಗಿ ಎತ್ತಂಗಡಿ ಮಾಡಲಾಗುತ್ತಿದೆ. ಈ ದೇಶಗಳಿಂದ ಭಾರತಕ್ಕೆ ನಿರಂತರವಾಗಿ ಜನರು ವಲಸೆ ಬರುತ್ತಿದ್ದಾರೆ. ಒಂದು ರೀತಿಯಲ್ಲಿ ವಿಭಜನೆಯ ನಂತರ ಪ್ರಾರಂಭವಾದ ವಲಸೆ ಇನ್ನೂ ನಿಂತಿಲ್ಲ. ಭಾರತಕ್ಕೆ ಬಂದ ಈ ನಿರ್ವಸಿತರು ಪುನಃ ತಮ್ಮ ಮೂಲ ನೆಲೆಗಳಿಗೆ ಹೋಗುವ ಪರಿಸ್ಥಿತಿ ಇಲ್ಲ. ಅವರು ಭಾರತೀಯ ಪೌರತ್ವವನ್ನು ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚಿನವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸ್ಲಮ್ಗಳಲ್ಲಿ ಬದುಕುತ್ತಿದ್ದಾರೆ.
ನೆರೆಯ ಇಸ್ಲಾಮಿಕ್ ದೇಶಗಳಲ್ಲಿ ದಮನಕ್ಕೆ ಒಳಗಾಗಿ ಭಾರತಕ್ಕೆ ನಿರ್ವಸಿತರಾಗಿ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರು ವಿಭಜನೆಯ ಪೂರ್ವದ ಅಖಂಡ ಭಾರತದ ಭಾಗವೇ ಆಗಿದ್ದವರು. ಸಹಜವಾಗಿ, ಅವರು ಅಲ್ಲಿ ಬದುಕಲು ಸಾಧ್ಯವಾಗದಿದ್ದಾಗ ಭಾರತಕ್ಕೆ ಬರಬೇಕೇ ಹೊರತು ಬೇರೆಲ್ಲಿ ಹೋಗಲು ಸಾಧ್ಯ ? ಅಂತಹ ನಿರಾಶ್ರಿತರನ್ನು ಭಾರತ ಸಹಾನುಭೂತಿಯಿಂದ ಕಾಣಬೇಕಾಗುತ್ತದೆ. ಅಕ್ರಮ ವಲಸೆಗಾರರನ್ನು ನಿಯಂತ್ರಿಸುವ ಕಾನೂನಿನ ಕ್ರಮಗಳಿಂದ ಇವರಿಗೆ ವಿನಾಯಿತಿ ಕೊಟ್ಟು ಅವರಿಗೆ ಭಾರತದಲ್ಲಿ ನೆಲೆಸುವ ಅವಕಾಶಗಳನ್ನು ಈಗಾಗಲೇ ದೊರಕಿಸಿಕೊಟ್ಟಿದೆ. ನಂತರ, ಕೇಂದ್ರ ಸರ್ಕಾರವು 8-1-2016 ಮತ್ತು 14-09-2016 ರಂದು ಹೊರಡಿಸಿದ ಆದೇಶಗಳು ಈ ವಲಸಿಗರು ದೀರ್ಘ ಕಾಲದ ವೀಸಾ ಕೊಟ್ಟು ಇಲ್ಲಿ ನೆಲೆಸುವ ಅರ್ಹತೆಯನ್ನು ಒದಗಿಸಿವೆ. ಈಗ ಜಾರಿಗೆ ಬಂದಿರುವ ಪೌರತ್ವ ತಿದ್ದುಪಡಿ ಕಾನೂನಿನ ಅನ್ವಯ ಈ ವಲಸಿಗರಿಗೆ ಪೌರತ್ವವನ್ನು ಪಡೆಯಲು ಅರ್ಹತೆ ಸಿಗಲಿದೆ. ಯಾವುದೇ ದೇಶದ ನಾಗರಿಕರು ಭಾರತದ ಪೌರತ್ವ ಪಡೆಯಲು 11 ವರ್ಷ ಇಲ್ಲಿ ನೆಲೆಸಿರಬೇಕೆಂಬ ನಿಯಮವಿದೆ. ಈ ಮೂರು ದೇಶಗಳ ಮುಸ್ಲಿಮೇತರರಿಗೆ ಈ ಅವಧಿ ಕೇವಲ 5 ವರ್ಷ ಮಾತ್ರ ಇರಲಿದೆ. ಅಂದರೆ, 2019 ರ ಡಿಸೆಂಬರ್ 31 ಕ್ಕೂ ಮೊದಲು ಭಾರತಕ್ಕೆ ಬಂದವರಿಗೆ ಪೌರತ್ವ ಸಿಗಲಿದೆ.
ಪೌರತ್ವ (ತಿದ್ದುಪಡಿ) ಕಾನೂನು 2019 ರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಹಲವಾರು ಪ್ರತಿಭಟನೆಗಳು ಹಿಂಸಾರೂಪ ತಳೆದಿವೆ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಮಾತ್ರ ಹೊರಗಿಟ್ಟಿರುವುದರಿಂದ ಭಾರತದ ಮುಸ್ಲಿಮರ ವಿರುದ್ಧ ಈ ಮಸೂದೆ ನಿರ್ದೇಶಿತವಾಗಿದೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಭಾರತ ಸರ್ಕಾರ ಮತ್ತು ಪೋಲಿಸ್ ಪಡೆಗಳು ಪ್ರತಿಭಟನಾಕಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಡೆಗಣಿಸಿ ಹತ್ತಿಕ್ಕುತ್ತಿವೆ ಎಂದು ದೂರಲಾಗುತ್ತಿದೆ.
ವಾಸ್ತವಾಂಶಗಳೇನು ?
1947 ರಲ್ಲಿ ದೇಶವನ್ನು ವಿಭಜಿಸಿದ್ದು ಮತದ ಆಧಾರದ ಮೇಲೇ! ಮುಸಲ್ಮಾನರಿಗೆ ಪ್ರತ್ಯೇಕ ದೇಶ ಬೇಕಿದೆ ಎಂಬ ವಾದದಿಂದ ಪಾಕಿಸ್ತಾನ ಸೃಷ್ಟಿಯಾಗಿದೆ. ಹಾಗಾಗಿ ವ್ಯಕ್ತಿಯ ಮತವು ಸಹಜವಾಗಿಯೇ ಈ ದೇಶಗಳ ಪೌರತ್ವದ ಪ್ರಶ್ನೆಯೊಂದಿಗೆ ಬೆಸೆದುಕೊಂಡಿದೆ. ಇದು ಯಾರದೇ ಇಷ್ಟಾನಿಷ್ಟಗಳಿಗೆ ಸಂಬಂಧಿಸಿಲ್ಲ. ಭಾರತವು ವಿಭಜನೆ ಆದ ನಂತರ ಕೋಮು ಗಲಭೆಗಳು ಎರಡೂ ದೇಶಗಳಲ್ಲಿ ನಿರಂತರವಾಗಿ ನಡೆಯಲಾರಂಭಿಸಿದವು. ಲಿಯಾಕತ್-ನೆಹರೂ ಅವರು ಮಾಡಿಕೊಂಡ ಒಪ್ಪಂದದ ಪ್ರಕಾರ ಎರಡೂ ದೇಶಗಳು ಅಲ್ಪಸಂಖ್ಯಾತರನ್ನು ರಕ್ಷಿಸಿ ಅವರಿಗೆ ಗೌರವಯುತ ಜೀವನವನ್ನು ನಡೆಸುವ ಅವಕಾಶವನ್ನು ಮಾಡಿಕೊಡಬೇಕಿತ್ತು. ಆದರೆ ಈ ಬದ್ಧತೆಯನ್ನು ಪಾಕ್ ಉಳಿಸಿಕೊಳ್ಳಲಿಲ್ಲ. ಬಾಂಗ್ಲಾ, ಆಫ್ಘಾನಿಸ್ತಾನಗಳಲ್ಲಿಯೂ ಸಹ ಹಿಂದೂಗಳಾದಿಯಾಗಿ ಎಲ್ಲ ಮುಸ್ಲಿಮೇತರರ ಸ್ಥಿತಿ ದಯನೀಯವಾಗಿದೆ. ಸಣ್ಣ ತಂಡಗಳಲ್ಲಿ ನಿರಂತರವಾಗಿ ಭಾರತವನ್ನು ಪ್ರವೇಶಿಸುತ್ತಿರುವ ನೆರೆಯ ಈ ಮೂರು ಇಸ್ಲಾಮಿಕ್ ದೇಶಗಳ ಅಲ್ಪಸಂಖ್ಯಾತರು ಭಾರತದ ಪೌರತ್ವವನ್ನು ಬಯಸುತ್ತಿದ್ದಾರೆ. ಲಿಯಾಕತ್-ನೆಹರೂ ಒಪ್ಪಂದಕ್ಕೆ ಇಂದಿಗೂ ಬದ್ಧವಾಗಿರುವ ಭಾರತಕ್ಕೆ ಈ ನಿರ್ವಸಿತರ ರಕ್ಷಣೆಯ ಜವಾಬ್ದಾರಿ ಇದೆ.
ಪಾಕ್, ಬಾಂಗ್ಲಾ ಮತ್ತು ಅಫ್ಘಾನಿಸ್ತಾನದ ಮುಸ್ಲಿಂ ಪ್ರಜೆಗಳೆಲ್ಲರಿಗೂ ಪೌರತ್ವವನ್ನು ನೀಡುವ ವಿಧಾನವನ್ನು ಸರಳಗೊಳಿಸಬೇಕೆಂಬ ವಾದ ದೋಷಪೂರಿತವಾಗಿದೆ. ಏಕೆಂದರೆ ಇದು ಮುಸ್ಲಿಮರಲ್ಲದ ಕಾರಣಕ್ಕೆ ದಮನಕ್ಕೆ ಒಳಗಾದವರಿಗೆ ಅಗತ್ಯವಿರುವ ಮಾನವೀಯ ನೆಲೆಯ ಸಹಾಯವನ್ನು ಅದರ ಅಗತ್ಯವಿಲ್ಲದ ಇತರರಿಗೂ ನೀಡಲು ಹೇಗೆ ಸಾಧ್ಯ ? ಪ್ರಸ್ತುತ ಕಾನೂನು ಮುಸ್ಲಿಮೇತರರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದ್ದರೂ ಅದು ತರ್ಕಬದ್ಧವಾಗಿಯೂ ಮಾನವೀಯತೆಗೆ ಅನುಗುಣವಾಗಿಯೂ ಇದ್ದು ಅತ್ಯಂತ ವ್ಯಾವಹಾರಿಕವಾಗಿದೆ. ಭಾರತದ ಸುಪ್ರೀಂ ಕೋರ್ಟಿನ ನಿರ್ದೇಶನಗಳಿಗೆ ಅನುಗುಣವಾಗಿಯೇ ಈ ಮಸೂದೆ ರಚಿಸಲಾಗಿದೆ.
ನೆರೆಯ ಇಸ್ಲಾಮಿಕ್ ದೇಶಗಳ ಮುಸ್ಲಿಮರು ತಮ್ಮ ದೇಶದಲ್ಲಿಯೇ ದಮನಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗದು. ಇಂತಹ ಸಂದರ್ಭದಲ್ಲಿ ದಮನಕ್ಕೆ ಒಳಗಾಗದ ವಿದೇಶಿ ಪ್ರಜೆಗಳು ಸರಿಯಾದ ದಾಖಲೆಗಳು ಇಲ್ಲದೇ ಭಾರತಕ್ಕೆ ಬಂದಾಗ ಅವರನ್ನು ‘ಅಕ್ರಮ ವಲಸೆಗಾರರು’ ಎಂದು ಕರೆಯುವುದು ಸೂಕ್ತವಾಗಿದೆ. ಯಾವುದೇ ದೇಶವು ಅಕ್ರಮ ವಲಸೆಗಾರರನ್ನು ಕುರುಡಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಭಾರತದಲ್ಲಿ ಅಕ್ರಮ ವಲಸೆಗಾರರ ವಿರುದ್ಧ ಕಾನೂನುಗಳು ಸ್ಪಷ್ಟವಾಗಿದ್ದು ಅದರ ಜಾರಿಯಲ್ಲಿ ಯಾವುದೇ ಗೊಂದಲಗಳು ಇಲ್ಲ. ವಿಶೇಷ ಸಂದರ್ಭದಲ್ಲಿ ಅರ್ಜಿಯೊಂದನ್ನು ಪರಿಗಣಿಸಿ ನೆರೆದೇಶದ ಮುಸ್ಲಿಂ ಪ್ರಜೆಗೆ ಭಾರತದ ಪೌರತ್ವವನ್ನು ನೀಡುವ ಸಾಧ್ಯತೆ ಇದ್ದೇ ಇದೆ. ಇತರ ಯಾವುದೇ ದೇಶದ ಪ್ರಜೆಯೊಬ್ಬ ಭಾರತದ ಪೌರತ್ವ ಪಡೆಯಲು ಅನುಸರಿಸುವ ಕ್ರಮಗಳೇ ಈ ಮೂರು ದೇಶಗಳ ಮುಸ್ಲಿಮರಿಗೂ ಅನ್ವಯಿಸುತ್ತದೆ.
ವಿರೋಧ ಮಾಡುತ್ತಿರುವವರು ಯಾರು ?
ವಿದೇಶಿ ಮುಸ್ಲಿಮರಿಗೂ ಪೌರತ್ವ ನೀಡಬೇಕೆಂಬ ವಾದದ ಹಿಂದೆ ಮತೀಯ ದುರಾಲೋಚನೆ ಇದೆ. ಇಸ್ಲಾಮೀ ಮತೀಯತೆಯ ದಮನಕ್ಕೆ ತುತ್ತಾದ ಮುಸ್ಲಿಮೇತರರ ಕಷ್ಟಕ್ಕೆ ಸಹಾನುಭೂತಿ ತೋರದ ಅಸಹನೆ ಇದೆ. ಭಾರತದಲ್ಲಿ ಅವರಿಗೆ ಸಿಗಲಿರುವ ಪೌರತ್ವದ ಬಗ್ಗೆ ಅಸೂಯೆ ಇದೆ. ಭಾರತೀಯ ಮುಸ್ಲಿಮರನ್ನು ದಾರಿ ತಪ್ಪಿಸಿ ಚುನಾವಣಾ ರಾಜಕೀಯದಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ ಇದೆ.
ಈಗ ಮಾಡಿರುವ ಕಾನೂನಿನ ತಿದ್ದುಪಡಿಯಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದಿಂದ ಬಂದ ಮುಸ್ಲಿಮೇತರರಿಗೆ ಪೌರತ್ವ ಕೊಡುವ ಉದ್ದೇಶವಿದೆಯೇ ಹೊರತು ಭಾರತೀಯ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವ ಮಾತಿಲ್ಲ. ಆದರೂ, ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುವ ಉದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಹಲ್ಲೆಬ್ಬಿಸಲಾಗುತ್ತಿದೆ. ಇದನ್ನು ನಂಬಿದ ಸಾಮಾನ್ಯ ಮುಸ್ಲಿಮರನೇಕರು ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ.
ಪ್ರತಿಭಟನೆ ಮತ್ತು ಹಿಂಸಾಚಾರಗಳ ಹಿಂದೆ ಅಕ್ರಮ ವಲಸೆಗಾರರ ಮತ್ತು ರಾಜಕೀಯ ಹಿತಾಸಕ್ತಿಗಳ ಕೈವಾಡ ಬೆಳಕಿಗೆ ಬರುತ್ತಿದೆ. ಅಕ್ರಮ ವಲಸೆಗಾರರು ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಪ್ರತಿಭಟನೆ ಪ್ರಾರಂಭವಾಗಿದೆ. ಮತ್ತು ನರೇಂದ್ರ ಮೋದಿ ಸರ್ಕಾರವನ್ನು ಇಷ್ಟಪಡದ ಲಿಬರಲ್ ಮತ್ತು ನವ ಎಡಪಂಥೀಯರು ಇದರ ನೇತೃತ್ವ ವಹಿಸಿದ್ದಾರೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತಿತರ ಪಕ್ಷಗಳು ಉದ್ದೇಶಪೂರ್ವಕವಾಗಿ ಭಾರತೀಯ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಈ ಕಾನೂನಿನ ಜೊತೆಗೇ ಎನ್ಆರ್ಸಿ (ರಾಷ್ಟ್ರೀಯ ಪೌರತ್ವ ನೋಂದಣಿ)ಯ ಬಗ್ಗೆಯೂ ಕೆಲವರು ಮಾತನಾಡುತ್ತಿರುವುದರಿಂದ ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗುತ್ತಿದೆ. ಅಕ್ರಮ ವಲಸಿಗರನ್ನು ಗುರುತಿಸಲು ಅನುಕೂಲವಾಗುವಂತೆ ನಮ್ಮ ದೇಶದ ನಾಗರಿಕರ ಪಟ್ಟಿಯೇ ಎನ್ಆರ್ಸಿ. ಯಾವುದೇ ದೇಶದ ಸುರಕ್ಷತೆ ದೃಷ್ಟಿಯಿಂದ ಅಂತಹ ಪಟ್ಟಿ ಇರುವುದು ಅತ್ಯಂತ ಸೂಕ್ತ. ನಮ್ಮ ದೇಶದಲ್ಲಂತೂ ಸುಮಾರು 2 ಕೋಟಿಗೂ ಅಧಿಕ ಬಾಂಗ್ಲಾದೇಶೀ ಅಕ್ರಮ ವಲಸಿಗರು ಇದ್ದಾರೆಂಬ ಅಂದಾಜಿದೆ. ಅಲ್ಲದೇ, ಅವರಲ್ಲಿ ಅನೇಕರು ಇಸ್ಲಾಮಿಕ್ ಉಗ್ರ ಸಂಘಟನೆಯ ಸದಸ್ಯರಾಗಿ ಇಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವುದೂ ಗಮನಕ್ಕೆ ಬಂದಿದೆ. ಹಾಗಾಗಿ, ದೇಶದ ಸುರಕ್ಷತೆ ದೃಷ್ಟಿಯಿಂದ ಎನ್ಆರ್ಸಿ ಅಗತ್ಯ. ಆದರೆ, ಅದು ಕಾನೂನಾಗಿ ಜಾರಿಯಾಗಲು ಇನ್ನೂ ಸ್ವಲ್ಪ ಸಮಯ ಬೇಕು. ಆಗಲೂ, ನಮ್ಮ ದೇಶದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಅಕ್ರಮ ವಲಸಿಗರನ್ನು ಗುರುತಿಸಿ ಹೊರ ಹಾಕುವುದು ಮಾತ್ರ ಇದರ ಉದ್ದೇಶ. ಈಗ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೂ ಎನ್ಆರ್ಸಿಗೂ ಯಾವುದೇ ಸಂಬಂಧವಿಲ್ಲ. ಪೌರತ್ವ ತಿದ್ದುಪಡಿ ಕಾನೂನಿನಿಂದಾಗಿ ನಮ್ಮ ನಾಗರಿಕತ್ವವನ್ನು ಸಾಬೀತು ಮಾಡುವ ದಾಖಲೆಗಳನ್ನು ಯಾರೂ ಕೊಡಬೇಕಾಗಿಲ್ಲ. ಭಾರತೀಯ ನಾಗರಿಕರಿಗೆ ಇದರಿಂದ ಏನೂ ತೊಂದರೆ ಇಲ್ಲವೇ ಇಲ್ಲ. ಈ ವಿಷಯವನ್ನು ಹೆಚ್ಚು ಹೆಚ್ಚು ಜನ ಅರಿತಷ್ಟೂ ಗೊಂದಲ ಕಡಿಮೆಯಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.