ತಮಿಳುನಾಡಿನ ಹೋರಾಟಗಾರರೊಬ್ಬರು ಕಳೆದ 20 ವರ್ಷಗಳಲ್ಲಿ 1.30 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಎಂ. ಕಲೈಮನಿ ಅವರು ಈ ಸಾಧನೆಯನ್ನು ಮಾಡಿದ ಪರಿಸರ ಪ್ರೇಮಿ. 1999 ರಿಂದ ಅವರು ತಂಜಾಪೂರು ಸುತ್ತಮುತ್ತ ಗಿಡ ನೆಡುವ ಕಾಯಕವನ್ನು ಆರಂಭಿಸಿದ್ದರು, ಇಂದಿಗೂ ಅದನ್ನು ಮುಂದುವರೆಸಿದ್ದಾರೆ.
ಯಾವುದೇ ಫೋಟೋಗ್ರಾಫಿ ಅಥವಾ ಪ್ರಸಿದ್ಧಿಗಾಗಿ ನಾನು ಈ ಕಾರ್ಯವನ್ನು ಮಾಡುತ್ತಿಲ್ಲ, ಜನರು ಗಿಡಮರಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ಅವರು ಹೇಳುತ್ತಾರೆ.
ಕಳೆದ 20 ವರ್ಷಗಳಲ್ಲಿ ಅವರು ತಮಿಳುನಾಡಿನ ಐದು ಜಿಲ್ಲೆಗಳ ತಂಜಾಪೂರು, ತಿರುವರೂರು, ನಾಗಪಟ್ಟಣಂ, ಪೆರಂಬಲೂರ್ ಮತ್ತು ಆರಿಯಲೂರ್ಗಳಲ್ಲಿ ಗಿಡಗಳನ್ನು ನೆಡುತ್ತಾ ಬಂದಿದ್ದಾರೆ.
2011 ರ ವರೆಗೆ ಅವರು ಒಬ್ಬಂಟಿಯಾಗಿ ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ರಸ್ತೆ ಬದಿಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ, ಕರಾವಳಿ ತೀರಗಳಲ್ಲಿ ಅವರು ಗಿಡಗಳನ್ನು ನೆಡುತ್ತಿದ್ದರು. 2011ರಲ್ಲಿ ಇವರು ವನಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದರ ಮೂಲಕ ಯುವಕ-ಯುವತಿಯರಿಗೆ, ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ತಮ್ಮ ಕಾರ್ಯದಲ್ಲಿ ಕೈಜೋಡಿಸುವಂತೆ ಪ್ರೇರೇಪಣೆ ನೀಡುತ್ತಾ ಬಂದಿದ್ದಾರೆ.
ಈಗ 47 ಯುವ ಸ್ವಯಂಸೇವಕರ ಸೈನ್ಯವನ್ನು ಒಳಗೊಂಡಿರುವ ವನಂ, 2018ರ ಗಾಜಾ ಚಂಡಮಾರುತ ದುರಂತದ ನಂತರ ತಂಜಾವೂರಿನ ಕಾಡುಗಳನ್ನು ಬೆಳೆಸುವಂತಹ ಗಮನಾರ್ಹ ಕೆಲಸಗಳನ್ನು ಮಾಡುತ್ತಿದೆ. ವಾಸ್ತವವಾಗಿ, ಕಳೆದ ಒಂದು ವರ್ಷದಲ್ಲಿ, ಕಲೈಮಾನಿ ಮತ್ತು ಅವರ ಪರಿಸರ ಸ್ವಯಂಸೇವಕರು 20,000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಗಾಜಾ ಪೀಡಿತ ಪ್ರದೇಶಗಳಲ್ಲಿ 1.3 ಲಕ್ಷ ತಾಳೆ ಬೀಜಗಳನ್ನು ಹಾಕಿ ಅದು ಗಿಡವಾಗುಂತೆ ಮಾಡಿದ್ದಾರೆ.
ವನ್ಯಜೀವಿ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಎಂ. ಕಲೈಮಾನಿ ಅವರು ಶಿಕ್ಷಣ ಮುಗಿದ ಕೂಡಲೇ ತಿರುವರೂರಿನಲ್ಲಿ ಯುವ ಚಟುವಟಿಕೆ ಸಂಘಟಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಬೆಂಬಲದೊಂದಿಗೆ ಕಲೈಮಾನಿ ಜಿಲ್ಲೆಯಾದ್ಯಂತ ಮರ ತೋಟ, ಪರಿಸರ ಅಭಿಯಾನ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ.
2003 ರಲ್ಲಿ ನಾಗಪಟ್ಟಣಂ ಜಿಲ್ಲಾಧಿಕಾರಿಗಳು ಅವರಿಗೆ ಅತ್ಯುತ್ತಮ ಯುವ ಪ್ರಶಸ್ತಿ ನೀಡಿ ಗೌರವಿಸಿದರು. “ಅಂದಿನಿಂದ ನಾನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ 70 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದೇನೆ” ಎಂದು ಕಲೈಮಾನಿ ಹೇಳಿಕೊಳ್ಳುತ್ತಾರೆ.
ಅವರ ಪರಿಸರ ಸ್ನೇಹಿ ಉಪಕ್ರಮಗಳು, ವಿಶೇಷವಾಗಿ ಗಿಡ ನೆಡುವ ಅಭಿಯಾನಗಳು ಕ್ರಮೇಣ ಜನಪ್ರಿಯತೆಯನ್ನು ಗಳಿಸಲು ಪ್ರಾರಂಭಿಸಿದವು, ಏಕೆಂದರೆ ಅವರು ಸ್ಥಳೀಯ ಪ್ರಭೇದಗಳಾದ ಮಾರುದಂ (ಅರ್ಜುನ ಮರ), ಮಾಗಿಲಂ (ಬಕುಲಾ), ವೆಂಬು (ಬೇವು), ಶೆನ್ಬಗಮ್ (ಚಂಪಕ), ಆಲಂ (ಆಲದ ಮರ) ಮತ್ತು ಅರಸು (ಅಶ್ವಥ)ಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದರು.
ಅವರು ಕೊಡುಕ್ಕಪುಲಿ (ಹುಣಸೆಹಣ್ಣು), ಕೊಯ್ಯ (ಪೇರಳೆ) ಮುಂತಾದ ಹಣ್ಣುಗಳನ್ನು ಕೊಡುವ ಮರಗಳನ್ನು ಕೂಡ ನೆಡುತ್ತಾ ಬಂದಿದ್ದಾರೆ. ಈ ಪ್ರದೇಶದ ಜೀವವೈವಿಧ್ಯತೆಯನ್ನು ಸಮೃದ್ಧಗೊಳಿಸುವ ಸ್ಥಳೀಯ ಪ್ರಭೇದಗಳಿಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ.
“ಮರಗಳನ್ನು ನೆಡುವುದು ಕೇವಲ ಮೊದಲ ಹೆಜ್ಜೆ. ಅವುಗಳನ್ನು ನಿರ್ವಹಿಸುವುದು ಅತ್ಯಂತ ನಿರ್ಣಾಯಕ ಭಾಗವಾಗಿದೆ. ಈ ವಿಷಯದಲ್ಲಿ ನನ್ನ ಕುಟುಂಬಕ್ಕೆ, ಅದರಲ್ಲೂ ವಿಶೇಷವಾಗಿ ನನ್ನ ಹೆಂಡತಿ ಮತ್ತು ನನ್ನ ತಾಯಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ. ತಂಜಾವೂರು ಹಳ್ಳಿಗಳಲ್ಲಿನ ಮರಗಳ ಸರಿಯಾದ ನಿರ್ವಹಣೆಯನ್ನು ಖಾತ್ರಿಪಡಿಸಿದ್ದೇನೆ ”ಎಂದು ಕಲೈಮಾನಿ ಹೇಳುತ್ತಾರೆ. 4 ವರ್ಷಗಳ ಹಿಂದೆ ತನ್ನ ಕೆಲಸವನ್ನು ತ್ಯಜಿಸಿರುವ ಕಲೈಮಾನಿ ಅವರು ತನ್ನ ಸಂಪೂರ್ಣ ಸಮಯವನ್ನು ಗಿಡಗಳ ನೆಡುವಿಕೆ, ಪಾಲನೆ ಪೋಷಣೆಗೆ ವಿನಿಯೋಗಿಸುತ್ತಿದ್ದಾರೆ.
ಇತ್ತೀಚಿಗೆ ಅವರು ಸಣ್ಣ ಮಟ್ಟದ ಬಟ್ಟೆ ಚೀಲ ಉತ್ಪಾದನಾ ಉದ್ಯಮವನ್ನು ಆರಂಭಿಸಿದ್ದು, ಇದು ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ.
ತಮ್ಮ ಪರಿಸರ ಸಂರಕ್ಷಣೆಯ ಪ್ರಾಮಾಣಿಕ ಕಾರ್ಯವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ, ಇದರಿಂದ ಅವರ ವನಂ ಸಂಸ್ಥೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಜನ ಬೆಂಬಲಗಳು ದೊರೆಯುತ್ತಿವೆ. ತಮ್ಮ ಮತ್ತು ಸ್ನೇಹಿತ ಸ್ವಂತ ದುಡ್ಡನ್ನು ಖರ್ಚು ಮಾಡಿ ಅವರು ಗಿಡಗಳನ್ನು ನೆಟ್ಟು ಪೋಷಿಸುತ್ತಾರೆ ಎಂಬುದು ವಿಶೇಷ.
ನವೆಂಬರ್ 2018 ರಲ್ಲಿ, ಗಾಜಾ ಚಂಡಮಾರುತವು ತಮಿಳುನಾಡಿನ ಕರಾವಳಿ ಮತ್ತು ಕಾವೇರಿ ತಟದ ಜಿಲ್ಲೆಗಳನ್ನು ತೀವ್ರ ಸ್ವರೂಪದಲ್ಲಿ ಹಾನಿಗೊಳಪಡಿಸಿತ್ತು. ಹಲವು ಗ್ರಾಮಗಳನ್ನು ನಾಶಪಡಿಸಿತ್ತು. ಈ ವಿಪತ್ತು ಲಕ್ಷಾಂತರ ಹೆಮ್ಮರಗಳನ್ನು ಕಿತ್ತುಹಾಕಿತ್ತು, ಹಸಿರು ಭೂಮಿಯನ್ನು ಒಂದು ರಾತ್ರಿಯಲ್ಲಿ ಬಂಜರು ಮಾಡಿತ್ತು. ಶತಮಾನಗಳಷ್ಟು ಹಳೆಯದಾದ ಆಲದ ಅಥವಾ ಅಶ್ವಥ ಮರಗಳು ಕ್ಷಣಾರ್ಧದಲ್ಲಿ ನೆಲಕ್ಕುರುಳಿದ್ದರು. ರಸ್ತೆಬದಿಗಳು ಆ ಸುಂದರವಾದ ಮರಗಳ ಸ್ಮಶಾನವಾಗಿ ಮಾರ್ಪಟ್ಟಿತ್ತು ಎಂದು ಕಲೈಮಾನಿ ವಿವರಿಸುತ್ತಾರೆ.
ಕಲೈಮಾನಿಯ ಅವರ ಅಪರೂಪದ ಸ್ಥಳೀಯ ಸಸಿಗಳ ಭಂಡಾರವನ್ನೇ ಹೊಂದಿದ್ದ ನರ್ಸರಿ ಕೂಡ ಚಂಡಮಾರುತಕ್ಕೆ ಬಲಿಯಾಗಿ ಹೋಗಿತ್ತು. ಆದರೆ ಈ ದುರ್ಘಟನೆ ಅವರ ಹುಮ್ಮಸ್ಸನ್ನು ಕಸಿದುಕೊಳ್ಳಲಿಲ್ಲ,ತನ್ನ ಭೂಮಿಯಲ್ಲಿ ಕಳೆದುಹೋದ ಹಸಿರು ಸಂಪತ್ತನ್ನು ಪುನಃಸ್ಥಾಪಿಸಲು ಅವರು ಇನ್ನಷ್ಟು ಹೆಚ್ಚು ಹುರುಪಿನಿಂದ ಕೆಲಸ ಮಾಡಿದರು.
ಸ್ಥಳೀಯ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳ ಸಹಾಯದಿಂದ ಕಲೈಮಾನಿ 174 ಕ್ಕೂ ಹೆಚ್ಚು ಜಾತಿಯ ಸ್ಥಳೀಯ ಸಸ್ಯಗಳನ್ನು ನೆಟ್ಟರು, ಇದರ ಸಂಖ್ಯೆಯು ಲಕ್ಷಕ್ಕೂ ಹೆಚ್ಚು. ಈ ಸಸಿಗಳು ಪೂರ್ಣವಾಗಿ ಬೆಳೆದ ಮರಗಳಾಗಿ ಬೆಳೆಯಲು ಕೆಲವು ವರ್ಷಗಳು ತೆಗೆದುಕೊಳ್ಳುತ್ತದೆ. ತಂಜಾವೂರು ಮತ್ತು ತಿರುವರೂರಿನ ನಾಲ್ಕು ಬ್ಲಾಕ್ಗಳಲ್ಲಿ, ಅವರು ಮಿಯಾವಾಕಿ ಸಾಮಾಜಿಕ ಅರಣ್ಯ ವಿಧಾನವನ್ನು ಸಹ ಅಳವಡಿಸಿಕೊಂಡಿದ್ದಾರೆ – ಸ್ಥಳೀಯ ಸಸ್ಯವರ್ಗವನ್ನು ಪುನಃಸ್ಥಾಪಿಸಲು ವೇಗವಾಗಿ ಸಾಬೀತಾಗಿರುವ ಮಾರ್ಗಗಳಲ್ಲಿ ಈ ವಿಧಾನವೂ ಒಂದು.
“ನಾವು 1.3 ಲಕ್ಷಕ್ಕೂ ಹೆಚ್ಚು ತಾಳೆ ಬೀಜಗಳನ್ನು ನದಿ ಬಂಡೆಗಳ ಜೊತೆಗೆ ಗಜಾ ಪೀಡಿತ ಕರಾವಳಿ ತೀರಗಳಲ್ಲೂ ನೆಟ್ಟಿದ್ದೇವೆ. ಕೆಲವು ವರ್ಷಗಳ ಹಿಂದೆ, ಸುನಾಮಿ ಪೀಡಿತ ಕರಾವಳಿ ಜಿಲ್ಲೆಗಳಲ್ಲಿ ನಾನು ಇದೇ ರೀತಿಯ ಉಪಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೇನೆ ”ಎಂದು ಕಲೈಮಾನಿ ಮಾಹಿತಿ ನೀಡುತ್ತಾರೆ.
ಸ್ನೇಹಿತರ ಅಚಲ ಬೆಂಬಲದೊಂದಿಗೆ, ಅವನ ನರ್ಸರಿ ವಿನಾಶದ ನಂತರದ ಕೇವಲ ಒಂಬತ್ತು ತಿಂಗಳಲ್ಲಿ ಮತ್ತೆ ಹೊಸ ಸಸಿಗಳೊಂದಿಗೆ ಅಭಿವೃದ್ಧಿ ಹೊಂದುತ್ತಿದೆ. ಅವರ ಅನುಯಾಯಿಗಳು ಮತ್ತು ಹಿತೈಷಿಗಳು ಅವರ ಪ್ಲಾಂಟೇಶನ್ ಡ್ರೈವ್ಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಲುಪುವಂತೆ ಮಾಡುತ್ತಿದ್ದಾರೆ, ಅವರ ಸರ್ವ ಪ್ರಯತ್ನಗಳು ಮಹತ್ತರವಾಗಿ ಯಶಸ್ವಿಯಾಗುತ್ತಿವೆ.
ಚೆನ್ನೈನ ಕೃಷ್ಣಪ್ರಿಯ ಫೌಂಡೇಶನ್, ಸೌದಿ ಅರೇಬಿಯಾದ ಜೆಡ್ಡಾ ತಮಿಳು ಸಂಗಮ್, ಕತಾರ್ ಶೆಲ್ ಜಿಟಿಎಲ್ ತಮಿಳು ಸ್ನೇಹಿತರು ಮತ್ತು ಇಡೀ ದಕ್ಷಿಣ ರಾಜ್ಯದಾದ್ಯಂತದ ಸಂಸ್ಥೆಗಳು ಅವರಿಗೆ ನೆರವಿನ ಹಸ್ತವನ್ನು ಚಾಚಿವೆ.
ಹೊಸ ದಶಕ ಹತ್ತಿರವಾಗುತ್ತಿದ್ದಂತೆ, ಕಲೈಮಾನಿ ಮತ್ತು ಅವರ ಹಸಿರು ಬ್ರಿಗೇಡ್ ಗ್ರೀನ್ ಡೆಲ್ಟಾ ಚಳವಳಿಗೆ ಸಜ್ಜಾಗುತ್ತಿದೆ, ಇದು ಡೆಲ್ಟಾ ಜಿಲ್ಲೆಗಳಲ್ಲಿ ಸಾಮಾಜಿಕ ಕಾಡುಗಳನ್ನು ಸೃಷ್ಟಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಇಟ್ಟುಕೊಂಡಿದೆ.
“ಜನರು ಮರಗಳ ಮಹತ್ವವನ್ನು ಅರಿತುಕೊಳ್ಳಬೇಕು ಮತ್ತು ಪರಿಸರ ಸಂರಕ್ಷಿಸಲು ತಮ್ಮದೇ ಆದ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ನಾನು ಬಯಸುತ್ತೇನೆ. ಪ್ರತಿಯೊಬ್ಬರ ಸಣ್ಣ ಸಣ್ಣ ಕಾರ್ಯಗಳು ದೊಡ್ಡ ಮಟ್ಟದ ಬದಲಾವಣೆಯನ್ನು ತರಬಲ್ಲವು” ಎಂದು ಕಲೈಮಾನಿ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.