ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆಯ ಹೆಸರಿನಲ್ಲಿ ಹಿಂಸಾಚಾರವನ್ನು ನಡೆಸಿದವರ ವಿರುದ್ಧ ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಸತ್ತವರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ಈ ಹಿಂದೆ ಘೋಷಿಸಿದ್ದ ಯಡಿಯೂರಪ್ಪ ಬಳಿಕ ತಮ್ಮ ನಿಲುವನ್ನು ಬದಲಾಯಿಸಿಕೊಂಡು ತನಿಖೆಯ ನಂತರವಷ್ಟೇ ಈ ಬಗ್ಗೆ ಚಿಂತನೆ ನಡೆಸುತ್ತೇನೆ. ಒಂದು ವೇಳೆ ಸತ್ತವರು ಅಪರಾಧಿಗಳು ಎಂದು ಸಾಬೀತಾದರೆ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ನಿಷೇಧಾಜ್ಞೆಯನ್ನು ಪೊಲೀಸರು ವಿಧಿಸಿದ ಬಳಿಕವೂ ಪ್ರತಿಭಟನೆಯ ಹೆಸರಿನಲ್ಲಿ ಬೀದಿಗಿಳಿದ ಕೆಲವರು ಹಿಂಸಾಚಾರ ನಡೆಯುವಂತೆ ಮಾಡಿದ್ದರು. ಪೊಲೀಸರ ವಿರುದ್ಧ ದಾಳಿಗಳನ್ನು ನಡೆಸಲಾರಂಭಿಸಿದ್ದರು. ದೊಡ್ಡ ಮಟ್ಟದಲ್ಲಿ ಗುಂಪು ಸೇರಿದ್ದ ದುಷ್ಕರ್ಮಿಗಳು ಪೊಲೀಸರ, ಅವರ ವಾಹನಗಳ ಮೇಲೆ ಕಲ್ಲುಗಳನ್ನು ಹೊಡೆಯಲು ಪ್ರಾರಂಭಿಸಿದ್ದರು. ಪರಿಸ್ಥಿತಿ ನಿಯಂತ್ರಣ ಮೀರದಂತೆ ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ, ಹೀಗಾಗಿ ಗುಂಡಿನ ದಾಳಿಯನ್ನು ನಡೆಸುವುದು ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ 20ಕ್ಕೂ ಅಧಿಕ ಪೊಲೀಸರಿಗೆ ಗಾಯಗಳಾದವು ಮತ್ತು ಹಲವು ಪ್ರತಿಭಟನಾಕಾರರಿಗೂ ಗಾಯಗಳಾಯಿತು. ಇಬ್ಬರು ಮೃತಪಟ್ಟರು.
ಮೃತಪಟ್ಟ ಇಬ್ಬರನ್ನು ಕಂದಕ್ ಮೂಲದ ಅಬ್ದುಲ್ ಜಲೀಲ್ ಮತ್ತು ಕುದ್ರೋಳಿಯ ನೌಶೀನ್ ಎಂದು ಗುರುತಿಸಲಾಗಿದೆ. ಇವರ ಸಾವು ನಗರದ ಅಶಾಂತಿಯನ್ನು ಹೆಚ್ಚುವಂತೆ ಮಾಡಿತ್ತು. ಪೊಲೀಸರ ನಿರಂತರ ಶ್ರಮದ ಫಲವಾಗಿ ಪರಿಸ್ಥಿತಿ ಹತೋಟಿಯಲ್ಲಿತ್ತು ಮತ್ತು ಗಲಭೆ ನಗರದ ಇತರ ಕಡೆಗಳಿಗೆ ಹಬ್ಬಲಿಲ್ಲ. ನಂತರ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಸಿಎಂ ನಗರಕ್ಕೆ ಭೇಟಿ ನೀಡಿ ಮೃತರ ಸಂಬಂಧಿಗಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಿದ್ದರು.
ಯಡಿಯೂರಪ್ಪ ಅವರ ಈ ನಿರ್ಧಾರ ಕೇವಲ ಶಿಷ್ಟಾಚಾರವಾಗಿತ್ತು. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಗಳು ವ್ಯಕ್ತವಾಗಿದ್ದವು. ಹಲವಾರು ಬಿಜೆಪಿ ನಾಯಕರು ಪರಿಹಾರ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದ್ದರು. ಅದರಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಅವರು ಪರಿಹಾರ ನೀಡಬಾರದಿತ್ತು, ದೇಶದ ವಿರುದ್ಧ ದಂಗೆ ಎಬ್ಬಿಸುವವರನ್ನು ಗುಂಡಿಕ್ಕಿ ಸಾಯಿಸಲೇ ಬೇಕು ಎಂದು ವಾದಿಸಿದ್ದರು.
ಇನ್ನು ಕೆಲವರು ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ನಡೆಸಲಾರಂಭಿಸಿದರು. ಅಮಾಯಕ ಮೇಲೆ ದಾಳಿ ನಡೆಸಲಾಗಿದೆ ಎಂದು ಬೊಬ್ಬಿಟ್ಟರು. ಈ ಅವಕಾಶವನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳಲು ಮುಂದಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮಗೆ ತೋಚಿದಂತೆ ಸರ್ಕಾರದ ವಿರುದ್ಧ, ಪೊಲೀಸರ ವಿರುದ್ಧ ಮಾತನಾಡಲಾರಂಭಿಸಿದರು. ಸಾವಿಗೆ ಸರ್ಕಾರವೇ ಹೊಣೆ ಎಂದು ಬೊಬ್ಬಿಟ್ಟರು.
ಆದರೆ ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ಕ್ಯಾಮೆರಾಗಳು ಹೇಳಿದ ಸತ್ಯಗಳು ಇಡೀ ಮಂಗಳೂರು ಮಾತ್ರವಲ್ಲ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರತಿಭಟನಾಕಾರರು ಕಲ್ಲನ್ನು ಹೇಗೆ ತಂದರು ಎಂಬುದರಿಂದ ಹಿಡಿದು ಪೊಲೀಸರ ಮೇಲೆ ಹೇಗೆ ದಾಳಿ ನಡೆಸಿದರು, ಸಿಸಿಟಿವಿಯನ್ನು ಹೇಗೆ ಧ್ವಂಸ ಮಾಡಿದರು, ಹೇಗೆ ರಸ್ತೆ ತಡೆ ಮಾಡಿದರು, ಹೇಗೆ ಪೆಟ್ರೋಲ್ ಬಾಂಬ್ ಎಸೆದರು ಎಂಬುದರವರೆಗೆ ಎಲ್ಲವೂ ಸ್ಪಷ್ಟವಾಗಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ಅವರು ನೀಡಿದ ಕರೆಯಂತೆ ಮಂಗಳೂರು ನಾಗರಿಕರು ತಮ್ಮ ಸಿಸಿಟಿವಿ, ಕ್ಯಾಮೆರಾ ಇತ್ಯಾದಿಗಳಲ್ಲಿ ದಾಖಲಾದ ಎಲ್ಲಾ ವೀಡಿಯೋಗಳನ್ನು ಕಳುಹಿಸಿಕೊಟ್ಟಿದ್ದರು. ಪೊಲೀಸರು ಗೋಲಿಬಾರ್ ಮಟ್ಟಕ್ಕೆ ಯಾಕೆ ಹೋದರು ಎಂಬುದಕ್ಕೆ ಈ ವೀಡಿಯೋಗಳು ಉತ್ತರಗಳಾಗಿದ್ದವು.
ಮಂಗಳೂರಿನಲ್ಲಿ ನಡೆದಿದ್ದು ಪ್ರತಿಭಟನೆಯಲ್ಲ, ಪ್ರತಿಭಟನೆ ಹೆಸರಿನ ದೊಂಬಿ, ಗಲಭೆ ಎಂಬುದು ಸ್ಪಷ್ಟವಾಗಿದೆ. ಪ್ರತಿಭಟನಾಕಾರರು ಪೊಲೀಸ್ ಠಾಣೆಯನ್ನು ಸುಡಲು ಪ್ರಯತ್ನಿಸಿದ್ದು ಮಾತ್ರವಲ್ಲ, ಬಂದೂಕು ಅಂಗಡಿಯನ್ನು ದೋಚಲು ಕೂಡ ಪ್ರಯತ್ನಿಸಿದ್ದರು ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ.
ಮಂಗಳೂರು ಗಲಭೆ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಗೆ ಒಳಪಡಿಸಿದೆ. ಪ್ರಜಾಫ್ರಭುತ್ವದಲ್ಲಿ ಇದು ಅವಶ್ಯಕ. ಪ್ರಮುಖ ತನಿಖೆಯನ್ನು ನಡೆಸಿದ ಬಳಿಕವೇ ಅಪರಾಧಿಗಳನ್ನು ಅಪರಾಧಿಗಳು ಎಂದು ಸಾಬೀತು ಮಾಡಲಾಗುತ್ತದೆ. ಅದೇನೆ ಇದ್ದರೂ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬ ಪ್ರಶ್ನೆಯನ್ನು ನಾಗರಿಕರು ಕೇಳುತ್ತಿದ್ದಾರೆ.
ಅದೇನೆಯಿರಲಿ ಯಡಿಯೂರಪ್ಪನವರು ಸತ್ತವರಿಗೆ ಘೋಷಿಸಿದ್ದ ಪರಿಹಾರವನ್ನು ವಾಪಾಸ್ ಪಡೆದುಕೊಂಡು ದೊಡ್ಡ ಕಾರ್ಯವನ್ನೇ ಮಾಡಿದ್ದಾರೆ. ನ್ಯಾಯಾಂಗ ಹೇಳಿದ್ದನ್ನೇ ಅವರು ಮಾಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಸುಪ್ರೀಂಕೋರ್ಟ್ ದಂಗೆಗಳಲ್ಲಿ ಆಸ್ತಿಪಾಸ್ತಿ ನಷ್ಟ ಮಾಡಿದವರಿಂದಲೇ ನಷ್ಟವನ್ನು ಭರಿಸಬೇಕು ಎಂದು ಹೇಳುತ್ತದೆ, ಅಲ್ಲದೇ ಅಪರಾಧಿಗಳಿಗೆ ಪರಿಹಾರ ನೀಡಬಾರದು ಎಂದಿದೆ. ಯಡಿಯೂರಪ್ಪ ಈ ನಿಟ್ಟಿನಲ್ಲಿ ಸರಿಯಾದ ಕ್ರಮವನ್ನೇ ಅನುಸರಿಸಿದ್ದಾರೆ, ಇಲ್ಲದೇ ಇರುತ್ತಿದ್ದರೆ ಗಲಭೆಕೋರರಿಗೆ ಇಂಬು ನೀಡುತ್ತಿತ್ತು. ತಾವೇನೂ ಮಾಡಿದರು ಸರ್ಕಾರ ಮಂಡಿಯೂರುತ್ತದೆ ಎಂಬ ಭಾವನೆ ಅವರಿಗೆ ಬರುತ್ತಿತ್ತು. ಆದರೆ ಮಂಗಳೂರು ವಿಷಯದಲ್ಲಿ ಹಾಗಾಗಲಿಲ್ಲ ಎಂಬುದೇ ಸಂತೋಷದಾಯಕ ಸುದ್ದಿ.
ಮೂಲ: ಸ್ವರಾಜ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.