ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಭಜನೆಗೊಂಡಿರುವ ಗಡಿಗಳಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸಿದವರು. ಅತ್ಯಂತ ಕಠಿಣ ಸಂದರ್ಭದಲ್ಲೂ ದೇಶವನ್ನು ಸಮರ್ಥವಾಗಿ ಮುನ್ನಡೆಸಿದವರು. ವರ್ಷಗಳು ಉರುಳಿದಂತೆ ಅವರ ಕೊಡುಗೆಗಳು, ಸಾಧನೆಗಳನ್ನು ನಾವು ಮರೆಯುತ್ತಾ ಸಾಗುತ್ತಿರಬಹುದು. ಆದರೆ ಆ ಧೀಮಂತ ನಾಯಕನನ್ನು, ಅವರ ಕೊಡುಗೆಗಳನ್ನು ಸ್ಮರಿಸುವ ಕಾಲ ಮತ್ತೆ ಬಂದಿದೆ.
ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡಿದವರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ವಾಜಪೇಯಿ. ಭದ್ರತೆಗೆ ಅವರು ನೀಡಿದ ಕೊಡುಗೆಗಳು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. 1998 ರಲ್ಲಿ ಪರಮಾಣು ಪರೀಕ್ಷೆಯ ನಂತರ ವಿಶ್ವದ ಮೂಲೆ ಮೂಲೆಗಳಿಂದ ಟೀಕೆಗಳು ಹೊರಹೊಮ್ಮಿದ್ದ ಸಂದರ್ಭದಲ್ಲಿ ಅವರು ಪ್ರದರ್ಶಿತ ದೃಢತೆ ನಿಜಕ್ಕೂ ಸ್ಮರಣೀಯವಾದುದು. ಕಠಿಣ ಸಂದರ್ಭದಲ್ಲಿ ದೇಶ ಮುನ್ನಡೆಸುವ ನಾಯಕ ಹೇಗಿರಬೇಕು ಎಂಬುದಕ್ಕೆ ಅರು ದ್ಯೋತಕವಾಗಿದ್ದರು. ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲೂ ಅವರು ಅಚಲ ವಿಶ್ವಾಸ ಮತ್ತು ದೃಢತೆಯ ಸಾಕಾರಮೂರ್ತಿಯಂತೆ ಕಂಗೊಳಿಸಿದರು.
ವಾಜಪೇಯಿ ಅವರ ಪ್ರಮುಖ ಐದು ಸಾಧನೆಗಳ ಬಗ್ಗೆ ಒಂದು ನೋಟ ಬೀರೋಣ
ಪರಮಾಣು ಪರೀಕ್ಷೆ
ಭಾರತವನ್ನು ವಿಶ್ವ ವೇದಿಕೆಯ ಮುಂದೆ ಬಲವಾಗಿ ಅನಾವರಣಗೊಳಿಸಿದ ಹಲವಾರು ಸಂಗತಿಗಳಲ್ಲಿ ಪೋಕ್ರಾನ್ ಪರಮಾಣು ಪರೀಕ್ಷೆಯೂ ಒಂದು. ಪ್ರಬುದ್ಧ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪರಮಾಣು ಶಕ್ತಿಯ ಬಗೆಗಿನ ತನ್ನ ನಿಲುವನ್ನು 1998ರಲ್ಲಿ ಭಾರತ ಸಾಬೀತುಪಡಿಸಿತ್ತು. ಅದಕ್ಕೆ ಕಾರಣರಾದವರು ವಾಜಪೇಯಿ.
1999 ರಲ್ಲಿ ವಾಜಪೇಯಿ ಪ್ರಧಾನಿಯಾದ ಕೇವಲ ಎರಡೇ ತಿಂಗಳಲ್ಲಿ ರಾಜಸ್ಥಾನದ ಫೋಖ್ರಾನ್ನಲ್ಲಿ ಪರಮಾಣು ಪರೀಕ್ಷೆ ನಡೆಸಲು ವಿಜ್ಞಾನಿಗಳಿಗೆ ಒಪ್ಪಿಗೆಯನ್ನು ಸೂಚಿಸಿದ್ದರು ಎಂಬುದು ಗಮನಾರ್ಹ. ಜಗತ್ತು ಬಿಗಿಯಾದ ಹದ್ದಿನ ಕಣ್ಣನ್ನು ಇಟ್ಟಿದ್ದ ಸಮಯದಲ್ಲಿ ಯಾರಿಗೂ ತಿಳಿಯದಂತೆ ಅಣು ಬಾಂಬ್ ಪರೀಕ್ಷೆ ನಡೆಸುವುದು ಸುಲಭದ ಮಾತಾಗಿರಲಿಲ್ಲ. ಅಣು ಪರೀಕ್ಷೆ ನಡೆಸಬೇಕಾಗಿದ್ದ ಜಾಗದಲ್ಲಿ “ನೀರಾವರಿ ಕಾಮಗಾರಿ ನಡೆಯುತ್ತಿದೆ” ಎಂದು ಬೋರ್ಡು ಹಾಕಿ ಕಾರ್ಯಾಚರಣೆ ನಡೆಸಲಾಗಿತ್ತು. ವಿಜ್ಞಾನಿಗಳಿಗೆ ಹಾಗೂ ಭೂಮಿಯನ್ನು ಅಗೆಯುತ್ತಿದ್ದ ಭಾರತೀಯ ಸೈನಿಕರಿಗೆ ಸಾರ್ವಜನಿಕ ಇಲಾಖೆಯ ಕಾಮಗಾರಿ ಕಾರ್ಮಿಕರಿಗೆ ಕೊಡಲಾಗುವಂತಹ ಮಾದರಿಯ ಬಟ್ಟೆ ಕೊಡಲಾಗಿತ್ತು. ಯಾರಿಗೂ ಅನುಮಾನ ಬಾರದೆಂದು ಸ್ಪೋಟಕ್ಕೆ ಸಂಬಂಧಿಸಿದ ಕಾರ್ಯವನ್ನು ಅಲ್ಲಿ ರಾತ್ರಿ ವೇಳೆ ನಡೆಸಲಾಗಿತ್ತು. ಎಲ್ಲವೂ ಸಫಲಗೊಂಡ ಬಳಿಕ ಖುದ್ದು ವಾಜಪೇಯಿಯವರು ಪ್ರಧಾನಮಂತ್ರಿ ಗೃಹದಲ್ಲಿ ಪತ್ರಕರ್ತರ ಸಭೆ ಕರೆದು ಫೋಖ್ರಾನ್ ಬಾಂಬ್ ಸ್ಫೋಟದ ಬಗ್ಗೆ ಅಧೀಕೃತವಾಗಿ ತಿಳಿಸಿದಾಗಲೇ ಈ ಬಗ್ಗೆ ಜಗತ್ತಿಗೆ ತಿಳಿದು ಬಂದಿತ್ತು. ಅಮೆರಿಕಾ ಸೇರಿದಂತೆ ಇತರ ರಾಷ್ಟ್ರಗಳು ಭಾರತದ ವಿರುದ್ಧ ಮುಗಿ ಬಿದ್ದಿದ್ದವು. ಆದರೆ ಆ ಸಂದರ್ಭದಲ್ಲಿ ವಾಜಪೇಯಿ ತೋರ್ಪಡಿಸಿದ ಪ್ರಬುದ್ಧತೆ, ಸ್ಥಿರತೆ ನಿಜಕ್ಕೂ ಪ್ರೇರಣಾದಾಯಕ.
ಲಾಹೋರ್ ಬಸ್ ಸೇವೆ
ಭಾರತದ ಬದ್ಧ ವೈರಿ ಪಾಕಿಸ್ಥಾನಕ್ಕೆ ಸ್ನೇಹ ಹಸ್ತವನ್ನು ಚಾಚಿದ್ದರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. 1999ರಲ್ಲಿ ಲಾಹೋರ್ಗೆ ಬಸ್ ಸೇವೆಯನ್ನು ಆರಂಭಿಸಿದರು, ತಾವೇ ಖುದ್ದಾಗಿ ಬಸ್ ಮೂಲಕ ಅಲ್ಲಿಗೆ ಸಂಚರಿಸಿದರು. ಈ ಮೂಲಕ ಆ ರಾಷ್ಟ್ರಕ್ಕೆ ಶಾಂತಿಯ ಒಂದು ಅವಕಾಶವನ್ನು ಅವರು ಕಲ್ಪಿಸಿಕೊಟ್ಟಿದ್ದರು. ಸಾಂಕೇತಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿರುವ ಮಿನಾರ್-ಇ-ಪಾಕಿಸ್ಥಾನಕ್ಕೆ ಭೇಟಿ ನೀಡುವ ಮೂಲಕ ಪಾಕಿಸ್ಥಾನ ಸಾರ್ವಭೌಮ ರಾಷ್ಟ್ರ ಎಂಬ ಭಾರತದ ನಿಲುವನ್ನು ದೃಢಪಡಿಸಿದ್ದರು. ಭಾರತದ ಬಗ್ಗೆ ಪಾಕಿಸ್ಥಾನಿಯರಿಗೆ ಇದ್ದ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಅವರು ಪ್ರಯತ್ನಿಸಿದ್ದರು. 1999ರ ಕಾರ್ಗಿಲ್ ಯುದ್ಧದ ಬಳಿಕವೂ ಬಸ್ ಸೇವೆ ಮುಂದುವರೆದಿತ್ತು ಎಂಬುದು ವಿಶೇಷ. 2001ರಲ್ಲಿ ಸಂಸತ್ತಿನ ಮೇಲಿನ ದಾಳಿಯ ಬಳಿಕ ಬಸ್ ಸೇವೆ ರದ್ದುಗೊಂಡಿತ್ತು.
ಆದರೆ ಬಸ್ ಸೇವೆ ಮೂಲಕ ಶಾಂತಿಯೊಂದೇ ಭಾರತದ ಅಂತಿಮ ಗುರಿ ಎಂದು ವಾಜಪೇಯಿ ಪುನರುಚ್ಛರಿಸಿದ್ದರು. ಲಾಹೋರಿನಲ್ಲಿ ವಾಜಪೇಯಿ ಅವರು ಅಪಾಯಗಳಿಗೆ ಹೆದರದ, ಮೂಲಭೂತವಾದಿಗಳಿಗೆ ಹೆದರದ ವ್ಯಕ್ತಿಯಾಗಿ ಹೊರಹೊಮ್ಮಿದ್ದರು ಎಂಬುದು ಉಲ್ಲೇಖಾರ್ಹ.
ಕಾರ್ಗಿಲ್ ಯುದ್ಧ
1999ರ ಕಾರ್ಗಿಲ್ ಯುದ್ಧ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ದೊಡ್ಡ ಆಘಾತವನ್ನು ಉಂಟು ಮಾಡಿತ್ತು. ವಾಜಪೇಯಿಗೆ ಅದಕ್ಕಿಂತಲೂ ದೊಡ್ಡ ಆಘಾತ ನೀಡಿತ್ತು. ಪಾಕಿಸ್ಥಾನ ನಾಯಕತ್ವವನ್ನು ಭಾರತದ ವಿಷಯದಲ್ಲಿ ಸರಿ ದಾರಿಗೆ ತರಲು ವಾಜಪೇಯಿ ಅವರು ಹೂಡಿದ ವೈಯಕ್ತಿಕ ಶ್ರಮಗಳೆಲ್ಲವೂ ವ್ಯರ್ಥವಾಗಿದ್ದವು. ಈ ನಿರಾಸೆಯನ್ನು ಬದಿಗಿಟ್ಟು ಯುದ್ಧದ ಕಠಿಣ ಸಂದರ್ಭದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸುವತ್ತ ಅವರು ತಮ್ಮ ಗಮನವನ್ನು ಹರಿಸಿದರು. ಸೈನಿಕರ ಮನೋಬಲವನ್ನು ಬಲಿಷ್ಠಗೊಳಿಸಿದರು, ಕೊನೆಗೂ ಭಾರತ ಈ ಯುದ್ಧದಲ್ಲಿ ವಿಜಯವನ್ನು ಗಳಿಸಿತು. ಈ ಯುದ್ಧದಿಂದ ಪಾಕಿಸ್ಥಾನಕ್ಕೆ ಭಾರತದ ಸಾಮರ್ಥ್ಯದ ದರ್ಶನವಾಯಿತು.
ಕಾಶ್ಮೀರ
ಕಾರ್ಗಿಲ್ ಯುದ್ಧದ ಬಳಿಕದ ಸನ್ನಿವೇಶ ಜಮ್ಮು ಕಾಶ್ಮೀರದಲ್ಲಿ ವಾಜಪೇಯಿ ಅವರಿಗೆ ಅಗ್ನಿ ಪರೀಕ್ಷೆಯಾಗಿತ್ತು. ಈ ಅವಧಿಯಲ್ಲಿ ರಾಜ್ಯ ಎದುರಿಸುತ್ತಿರುವ ಭದ್ರತಾ ಸವಾಲುಗಳು ಉತ್ತುಂಗಕ್ಕೇರಿತ್ತು. ನೈತಿಕ ಶ್ರೇಷ್ಠತೆಯನ್ನು ಮರಳಿ ಪಡೆಯುವ ವಿಮರ್ಶಾತ್ಮಕತೆ ಮತ್ತು ಭದ್ರತೆಯ ಸ್ಥಿರತೆಯನ್ನು ವಾಜಪೇಯಿ ಅರ್ಥಮಾಡಿಕೊಂಡರು. ಅವರು ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಾತರಿಪಡಿಸಿದರು, ಅವರ ಈ ದಿಟ್ಟತನವನ್ನು ಪ್ರತಿಯೊಬ್ಬರೂ ಒಪ್ಪಿಕೊಂಡರು. ಇದರಲ್ಲಿ ರಾಜ್ಯದ ಸಾಮಾನ್ಯ ಜನರನ್ನು ತಲುಪುವ ಅವರ ನೀತಿಯೂ ಇತ್ತು.
‘ಕಾಶ್ಮೀರಿಯತ್, ಇನ್ಸಾನಿಯತ್ ಮತ್ತು ಜಾಮೂರಿಯತ್’ (ಕಾಶ್ಮೀರಿತನ, ಮಾನವೀಯತೆ ಮತ್ತು ಪ್ರಜಾಪ್ರಭುತ್ವ) ಎಂಬ ಅವರ ಕರೆ ಅಂದಿನಿಂದ ಆ ರಾಜ್ಯದ ಜನರನ್ನು ಭಾರತದ ಇತರ ಜನರೊಂದಿಗೆ ಬೆಸೆಯುವ ಸೇತುವೆಯಾಗಿದೆ. ಭಾರತೀಯತೆಯ ಮೂಲ ತತ್ವವಾಗಿದೆ. ವಾಜಪೇಯಿ ಕಾಶ್ಮೀರದ ಬಲಿಷ್ಠ ಬೆಸುಗೆಯ ಸಂಕೇತವಾಗಿದ್ದಾರೆ.
ರಕ್ಷಣಾ ಸುಧಾರಣೆಗಳು
ಕಾರ್ಗಿಲ್ ಸಂಘರ್ಷದ ನಂತರದ ದಿನಗಳಲ್ಲಿ ಕಾರ್ಗಿಲ್ ಪರಿಶೀಲನಾ ಸಮಿತಿಯನ್ನು ಸ್ಥಾಪಿಸಲಾಯಿತು. ತಂತ್ರಜ್ಞ ಕೆ. ಸುಬ್ರಹ್ಮಣ್ಯಂ ಅವರ ಅಧ್ಯಕ್ಷತೆಯಲ್ಲಿದ್ದ ಸಮಿತಿಯು ಸಂಘರ್ಷವನ್ನು ಮರುಪರಿಶೀಲಿಸಿತು. ಇದು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಹಲವಾರು ಆಯಾಮಗಳಲ್ಲಿನ ದೂರಗಾಮಿ ಶಿಫಾರಸುಗಳನ್ನು ನೀಡಿತು. ಈ ಮೈಲಿಗಲ್ಲು ಸಾಧಿಸಬಲ್ಲ ವರದಿಯನ್ನು ಸಾರ್ವಜನಿಕಗೊಳಿಸಲಾಯಿತು, ಇದು ಹಿಂದಿನ ಸತ್ಯ-ಶೋಧನೆ ಪ್ರಯತ್ನಗಳನ್ನು ಹೊರಗಿಟ್ಟಿತು. ಇದರ ನಂತರ ರಾಷ್ಟ್ರೀಯ ಭದ್ರತೆಯ ಪ್ರಮುಖ ಕ್ಷೇತ್ರಗಳ ಕುರಿತು ಸಚಿವರ ಗುಂಪು (GoM) ಶಿಫಾರಸುಗಳನ್ನು ನೀಡಿತು. ಇವೆರಡರ ನಡುವೆ ಭಾರತ ದೇಶವನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.