ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ದೃಢವಾಗಿ ನಿರ್ಧರಿಸಿದೆ, ಅನುಷ್ಠಾನದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಜನಸಮೂಹದ ಹಿಂಸಾಚಾರವನ್ನು ತಡೆಗಟ್ಟಲು ಪೊಲೀಸರ ಕ್ರಮವು ಅವಶ್ಯಕವಾಗಿತ್ತು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದಾಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗುತ್ತದೆ ಎಂದಿದ್ದಾರೆ.
ಇಂಡಿಯಾ ಎಕನಾಮಿಕ್ ಕಾನ್ಕ್ಲೇವ್ ಅನ್ನು ಉದ್ದೇಶಿಸಿ ಮಾತನಾಡಿದ ಶಾ, “ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಉತ್ಪ್ರೇಕ್ಷಿಸಬಾರದು, ಏಕೆಂದರೆ ಸುಮಾರು 22 ವಿಶ್ವವಿದ್ಯಾಲಯಗಳಿಂದಲೂ ಇದಕ್ಕೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಪೈಕಿ ಕೇವಲ ನಾಲ್ಕು ಕ್ಯಾಂಪಸ್ಗಳು – ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ, ಲಕ್ನೋ ಮತ್ತು ಜೆಎನ್ಯು – ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗೆ ಸಾಕ್ಷಿಯಾದವು” ಎಂದಿದ್ದಾರೆ.
“ದೇಶದಲ್ಲಿ 400 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ ಎಂಬುದನ್ನು ಎಲ್ಲರು ತಿಳಿದುಕೊಳ್ಳಬೇಕು, ಆದರೆ ಕೇವಲ ಸುಮಾರು 22 ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿವೆ” ಎಂದು ಶಾ ಹೇಳಿದ್ದಾರೆ. ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಜಾಮಿಯಾದಲ್ಲಿ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. “ಯಾವುದೇ ರೂಪದ ಹಿಂಸಾಚಾರವನ್ನು ಸಮರ್ಥಿಸಲಾಗುವುದಿಲ್ಲ. ಹೇಗಿದ್ದಾಗ, ಘಟನೆ ಇನ್ನಷ್ಟು ಹದಗೆಡುವುದನ್ನು ಕಾಯುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಬೇಕು ಎಂದು ನೀವು ಭಾವಿಸುತ್ತೀರಾ? ”ಎಂದು ಶಾ ಪ್ರಶ್ನಿಸಿದ್ದಾರೆ.
ಜಾಮಿಯಾದಲ್ಲಿನ ಘಟನೆಗಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ಅವರು, “ಕಲ್ಲುಗಳು ಎಲ್ಲಿಂದ ಬಂದವು ಎಂದು ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯ ಹೊರಗಿನವರು ಇದ್ದರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಎಷ್ಟು ಬಸ್ಸುಗಳನ್ನು ಸುಟ್ಟುಹಾಕಲಾಗಿದೆ ಎಂಬುದನ್ನು ವೀಡಿಯೊ ತುಣುಕಿನಲ್ಲಿ ತೋರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಹಿಂಸೆಯನ್ನು ಹೇಗೆ ಹತೋಟಿಗೆ ತರುವುದು ಎಂದು ಅವರು ಪ್ರಶ್ನಿಸಿದ್ದಾರೆ.
“ಯಾವುದೇ ಕಾರಣಕ್ಕೂ ಪೌರತ್ವ (ತಿದ್ದುಪಡಿ) ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಕಿಂಚಿತ್ತೂ ಬದಲಾವಣೆಯನ್ನು ಮಾಡುವುದಿಲ್ಲ. ಪೌರತ್ವ (ತಿದ್ದುಪಡಿ) ಕಾಯ್ದೆಯಲ್ಲಿ ಅಲ್ಪಸಂಖ್ಯಾತರಿಗೆ ವಿರುದ್ಧವಾದ ಯಾವುದೇ ಅಂಶಗಳಿಲ್ಲ. ವಿಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಈ ಕಾನೂನಿನ ಅನುಷ್ಠಾನದಿಂದ ಹಿಂದೆ ಸರಿಯುವುದಿಲ್ಲ, ಕಾಯ್ದೆಯನ್ನು ಅನುಷ್ಠಾನ ಮಾಡದೇ ವಿರಮಿಸುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.