ಮಂಗಳೂರು: ಮತ್ತೊಂದು ಸಾಹಿತ್ಯೋತ್ಸವಕ್ಕೆ ಕಡಲತಡಿ ಮಂಗಳೂರು ಸಜ್ಜಾಗಿದೆ. ‘ಮಂಗಳೂರು ಲಿಟ್ ಫೆಸ್ಟ್’ ನ ಎರಡನೇ ಆವೃತ್ತಿಯು ನವೆಂಬರ್ 29 ಮತ್ತು 30 ರಂದು ನಗರದ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಜರುಗುತ್ತಿದೆ.
ಮಂಗಳೂರು ಲಿಟರರಿ ಫೌಂಡೇಶನ್ ಲಿಟ್ ಫೆಸ್ಟ್ ಅನ್ನು ಆಯೋಜನೆಗೊಳಿಸುತ್ತಿದೆ. ‘ಐಡಿಯಾ ಆಫ್ ಭಾರತ್ – ಟುಡೇ ಆ್ಯಂಡ್ ಟುಮಾರೋ” ಎಂಬುದು ಈ ವರ್ಷದ ಲಿಟ್ ಫೆಸ್ಟ್ನ ಥೀಮ್ ಆಗಿದೆ.
ಭಾರತೀಯ ಗ್ರಂಥಗಳಲ್ಲಿನ ಪ್ರಾಚೀನ ಐತಿಹಾಸಿಕ ದೃಷ್ಟಿಕೋನವನ್ನು ಬೌದ್ಧಿಕ ಪ್ರವಚನದ ಮೂಲಕ ಜಗತ್ತಿನಾದ್ಯಂತದ ಅತ್ಯುತ್ತಮ ಸಾಹಿತ್ಯಿಕ ಮನಸ್ಸುಗಳಿಂದ ಹೊರಹೊಮ್ಮಿಸುವುದು, ಪ್ರಾಚೀನ ಭಾರತದ ಶಾಂತಿ, ಸಮೃದ್ಧಿ, ಮತ್ತು ವಿಶ್ವ ಕಲ್ಯಾಣದ ಜ್ಞಾನವನ್ನು ಪ್ರತಿಬಿಂಬಿಸುವುದು ಈ ಲಿಟ್ ಫೆಸ್ಟ್ನ ಪ್ರಮುಖ ಉದ್ದೇಶವಾಗಿದೆ.
ಲಿಟ್ ಫೆಸ್ಟ್ ಅನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕವಿ ಮತ್ತು ಜಾನಪದ ತಜ್ಞ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎನ್ ವಿನಯ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಜೀವಮಾನದ ಪ್ರಶಸ್ತಿಯನ್ನು ಖ್ಯಾತ ಸಂಶೋಧಕ, ಲೇಖಕ ಮತ್ತು ಇತಿಹಾಸಕಾರರಾದ ಡಾ. ಎಂ. ಚಿದಾನಂದ ಮೂರ್ತಿ ಅವರಿಗೆ ಪ್ರದಾನಿಸಲಾಗುತ್ತಿದೆ.
ಲಿಟ್ ಫೆಸ್ಟ್ನಲ್ಲಿ ವಾಗ್ಮಿಗಳಾಗಿ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಮಾಜಿ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ. ಬಕ್ಷಿ, ಸರ್ಜಿಕಲ್ ಸ್ಟ್ರೈಕ್ ರುವಾರಿ ಲೆ.ಜ.ಸತೀಶ್ ದುವಾ, ಪುರಾತತ್ವ ತಜ್ಞ, ಲೇಖಕ ಕೆಕೆ ಮುಹಮ್ಮದ್, ಸುನೀಲ್ ಅಂಬೇಕರ್, ಶಿವ್ ಅರೂರ್, ಡಾ.ವೇಲ್ ಶೇಖ್ ಹಸನ್ ಅವ್ವದ್, ಮಾರಿಯ ವಿರ್ತ್, ಲೂಸಿ ಗೆಸ್ಟ್, ಸ್ಮಿತಾ ಪ್ರಕಾಶ್, ಬರ್ಖಾ ದತ್, ಆನಂದ್ ರಂಗನಾಥನ್, ತೇಜಸ್ವಿ ಸೂರ್ಯ, ಅತುಲ್ ಕುಲಕರ್ಣಿ, ಮಾನುಷಿ ಸಿನ್ಹಾ, ಟಿ.ಎಸ್ ನಾಗಾಭರಣ, ಎಂ.ಡಿ. ನಲಪತ್, ಡಾ.ಅಜಕ್ಕಲ ಗಿರೀಶ್ ಭಟ್, ಡಾ.ರೋಹಿಣಾಕ್ಷ ಶಿರ್ಲಾಲು, ಡಾ.ವಸಂತ ಕುಮಾರ್ ಪೆರ್ಲ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಜನರು ಭಾಗಿಯಾಗುತ್ತಿದ್ದಾರೆ.
ನವೆಂಬರ್ 29 ರಂದು ಸಂಜೆ 5 ಗಂಟೆಗೆ ಅಳ್ವಾಸ್ ಸಾಂಸ್ಕೃತಿಕ ವೈಭವದ ವಿದ್ಯಾರ್ಥಿಗಳು ‘ಸಾಂಸ್ಕೃತಿಕ ಸಂಧ್ಯಾ’ ಪ್ರಸ್ತುತಪಡಿಸಲಿದ್ದಾರೆ. ‘ಭಾರತವೆಂಬ ಪರಿಕಲ್ಪನೆ: ಇಂದು ಮತ್ತು ನಾಳೆ’ ಎಂಬ ಪ್ರಬಂಧ ಸ್ಪರ್ಧೆಯನ್ನೂ ಆಯೋಜನೆಗೊಳಿಸಲಾಗಿದೆ. ಮಣ್ಣಿನ ಕಲಾಕೃತಿ ರಚನೆ, ಪುಸ್ತಕ ಪ್ರದರ್ಶನ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳೂ ನೆರವೇರಲಿವೆ. ಪುಟಾಣಿ ಮಕ್ಕಳಿಗೆ ಕಥಾ ಅವಧಿಯೂ ಆಯೋಜನೆಗೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.