ಒಂದು ತಿಂಗಳ ಹಿಂದೆ ಮುಂಬಯಿಯ ಅರೇ ಅರಣ್ಯವು ತನ್ನ 2,700 ಮರಗಳನ್ನು ಕಳೆದುಕೊಂಡಿತು, ಕಾಂಕ್ರೀಟ್ ಕಾಡನ್ನು ನಿರ್ಮಾಣ ಮಾಡುವುದಕ್ಕಾಗಿ ನಗರದ ಆಮ್ಲಜನಕದ ಮೂಲವನ್ನೇ ಕಿತ್ತೆಸೆಯಲಾಯಿತು. ಪ್ರತಿಭಟನೆ, ವಿರೋಧದ ನಡುವೆಯೂ ಮರಗಳು ಉರುಳಿ ಬಿದ್ದವು.
ದೇಶದ ಆಮ್ಲಜನಕದ ಮೂಲವನ್ನೇ ಅಲುಗಾಡಿಸಲಾಗುತ್ತಿರುವ ಈ ಸಂದರ್ಭದಲ್ಲಿ, ಉತ್ತರ ಪಂಜಾಬಿನ ವ್ಯಕ್ತಿಯೊಬ್ಬರು ಅರಣ್ಯೀಕರಣದ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಹೃದಯಕ್ಕೆ ಹತ್ತಿರವಾದ ಗಿಡಗಳ ಪಾಲನೆ ಪೋಷಣೆಯಲ್ಲಿ ಸಾರ್ಥಕತೆಯನ್ನು ಕಾಣುತ್ತಿದ್ದಾರೆ. ಈ ಮೂಲಕ ತನ್ನ ನಗರಕ್ಕೆ ಉಸಿರು ನೀಡುತ್ತಿದ್ದಾರೆ.
ರೋಹಿತ್ ಮೆಹ್ರಾ ಲುಧಿಯಾನದಾದ್ಯಂತ ಗಿಡ ನೆಡುವ ಕಾರ್ಯವನ್ನು ಸಕ್ರಿಯವಾಗಿ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ವಾಯು ಮಾಲಿನ್ಯವು ಎಲ್ಲೆ ಮೀರಿರುವುದನ್ನು ಗಮನಿಸಿ ಅವರು ಈ ಕಾರ್ಯವನ್ನು ನಡೆಸುತ್ತಿದ್ದಾರೆ.
ಲುಧಿಯಾನದ ಹಲವು ಕಡೆಗಳಲ್ಲಿ ಮೆಹ್ರಾ ಅವರು ಸಣ್ಣ ಕಾಡುಗಳನ್ನು ನಿರ್ಮಾಣ ಮಾಡಿದ್ದಾರೆ.
“ನಾನು ಬಾಲ್ಯದಲ್ಲಿ ಬೇಸಿಗೆ ರಜಾದಿನಗಳನ್ನು ಅತೀವ ಇಷ್ಟಪಡುತ್ತಿದೆ, ಏಕೆಂದರೆ ಅದು ನಿರಾಳತೆಯನ್ನು ನೀಡುವ ವಿರಾಮವಾಗಿರುತ್ತಿತ್ತು. ಆದರೀಗ ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ನನ್ನ ಮಗನಿಗೆ ರಜೆ ಸಿಕ್ಕಿದೆ. ನಮ್ಮ ರಜಾದಿನಗಳನ್ನು ನಾವು ಆನಂದಿಸಲು ಸಾಧ್ಯವಾಗುತ್ತಿತ್ತು, ಆದರೀಗ ಹೊರಗಿನ ಹವಾಗುಣದಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ರಜೆಯನ್ನು ನೀಡಲಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸ”ಎಂದು ಮೆಹ್ರಾ ಹೇಳುತ್ತಾರೆ.
ಮಿಯಾವಾಕಿ ಎಂದು ಕರೆಯಲ್ಪಡುವ ಮರಗಳನ್ನು ವ್ಯಾಪಕವಾಗಿ ನೆಡುವ ಜಪಾನಿನ ಪ್ರಕ್ರಿಯೆಯನ್ನು ಬಳಸಿ ಅವರು”ಮೈಕ್ರೋ ಜಂಗಲ್ಸ್” ಅನ್ನು ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಅವರು “ವೃಕ್ಷಾಯುರ್ವೇದ” ಎಂದು ಕರೆಯಲ್ಪಡುವ ಮರ-ತೋಟ ಕುರಿತ ಪ್ರಾಚೀನ ಭಾರತೀಯ ಗ್ರಂಥವನ್ನು ಸಹ ಅಭ್ಯಾಸ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಒಂದೇ ಸಮಯದಲ್ಲಿ ಅನೇಕ ಮರಗಳನ್ನು ನೆಡಲು ನಿರ್ದಿಷ್ಟ ಭೂಮಿಯನ್ನು ಬಳಸಲಾಗುತ್ತದೆ.
ಮೆಹ್ರಾ ಅವರ ಸೂಕ್ಷ್ಮ ಕಾಡುಗಳಲ್ಲಿ, ಅವರು “ಪಂಚವತಿ” ಎಂದು ಕರೆಯಲ್ಪಡುವ ಐದು ದೊಡ್ಡ ಮರಗಳನ್ನು ನೆಟ್ಟಿದ್ದಾರೆ, ಅವುಗಳಲ್ಲಿ ಬೇವು, ನೆಲ್ಲಿಕಾಯಿ, ಬಾರ್ಗಡ್, ಅಶ್ವಥ ಮತ್ತು ಅಶೋಕ್ ಮರಗಳು ಸೇರಿವೆ. ಅವುಗಳ ಸುತ್ತಲೂ ತೇಗ, ಚಮೇಲಿ, ಹರಿಷ್ಣಕ್ರಿ ಮರಗಳಿವೆ.
ಗಿಡಗಳನ್ನು ಪರಸ್ಪರ 2.5 ಅಡಿ ದೂರದಲ್ಲಿ ನೆಡಲಾಗಿದೆ. ವಿವಿಧ ಎತ್ತರಗಳ ಸಸ್ಯವರ್ಗಗಳನ್ನು, ಮರಗಳು, ಪೊದೆಗಳು ಮತ್ತು ಬಳ್ಳಿಗಳನ್ನು ಪರಸ್ಪರ ಪಕ್ಕದಲ್ಲಿ ನೆಡಲಾಗುತ್ತದೆ. ಮಣ್ಣನ್ನು ನೈಸರ್ಗಿಕ ಜೀವರಾಶಿ, ಕೋಲು, ಕೃಷಿ-ತ್ಯಾಜ್ಯ ಮತ್ತು ಎಲೆ ಗೊಬ್ಬರದೊಂದಿಗೆ ಸಂಸ್ಕರಿಸಲಾಗುತ್ತದೆ, ಇದನ್ನು ಕೆಲವು ದಿನಗಳವರೆಗೆ ಇಡಲಾಗುತ್ತದೆ, ಬಳಿಕ ಗಿಡಗಳ ನೆಡುವಿಕೆಯಲ್ಲಿ ಬಳಸಲಾಗುತ್ತದೆ.
ಮೆಹ್ರಾ ಅವರು ಈಗಾಗಲೇ 27 ಕ್ಕೂ ಹೆಚ್ಚು ಕಾಡುಗಳನ್ನು ರಚಿಸಿದ್ದಾರೆ, 10 ಪಟ್ಟು ವೇಗವಾಗಿ, 30 ಪಟ್ಟು ಸಾಂದ್ರವಾಗಿ ಮತ್ತು 10 ಪಟ್ಟು ಹೆಚ್ಚು ಜೀವವೈವಿಧ್ಯವಾಗಿ ಬೆಳೆಯುವ ಗಿಡಗಳನ್ನು ಅವರು ತಮ್ಮ ಕಾಡುಗಳಲ್ಲಿ ನೆಟ್ಟಿದ್ದಾರೆ. ಈ ಕೆಲಸಕ್ಕಾಗಿ 500 – 600 ಚದರ ಅಡಿ ಅಥವಾ 4 ಎಕರೆಗಳಷ್ಟು ದೊಡ್ಡದಾದ ಭೂಮಿಯನ್ನು ಅವರು ಬಳಸಿಕೊಂಡಿದ್ದಾರೆ.
ಈ ಕಾಡುಗಳಿಗೆ ಕೆಲವು ಪೂರ್ವಜರುಗಳ ಹೆಸರುಗಳನ್ನು ಇಟ್ಟಿರುವುದು ವಿಶೇಷ. ಸಿಖ್ ಧರ್ಮದ ಸಂಕೇತವಾಗಿ ಅವರು ಕಾಡಿಗೆ ‘ನಾನಕ್ ವನ್’ ಎಂದು ಹೆಸರಿಟ್ಟರು ಮತ್ತು ರಾಜ್ಯದಾದ್ಯಂತ ಇಂತಹ ಕಾಡುಗಳನ್ನು ಸೃಷ್ಟಿಸುವುದಾಗಿ ಪ್ರತಿಜ್ಞೆ ಮಾಡಿದರು. ಸಿಐಐ, ಎಫ್ಐಸಿಸಿಐ, ಮತ್ತು ಇತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರೊಂದಿಗೆ ಮಿನಿ ಕಾಡುಗಳನ್ನು ರಚಿಸುತ್ತಿದ್ದಾರೆ.
ಇದರೊಂದಿಗೆ ಅವರು ಮರಗಳನ್ನು ನೆಡುವಾಗ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.
ರೋಹಿತ್ ಮೆಹ್ರಾ ಅವರು ಜನರ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಪ್ರತಿಪಾದಿಸುತ್ತಾರೆ. ತನ್ನ ಪ್ರಯತ್ನಗಳಲ್ಲಿ, ಸೂಕ್ಷ್ಮ ಕಾಡುಗಳ ತಯಾರಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸುತ್ತಾರೆ.
ಶಾಲೆಗಳು, ಕಾಲೇಜುಗಳು, ಸಂಘ ಸಂಸ್ಥೆಗಳು, ಕೈಗಾರಿಕಾ ಪ್ರದೇಶಗಳು, ತೋಟದ ಮನೆಗಳು, ತೆರೆದ ಪ್ಲಾಟ್ಗಳು, ಗುರುದ್ವಾರಗಳು ಮುಂತಾದವುಗಳಲ್ಲಿ ಅವರು ಕಾಡುಗಳನ್ನು ನಿರ್ಮಿಸಿದ್ದಾರೆ. ಮರಗಳನ್ನು ನೆಡಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುವ ಸಂವಾದಾತ್ಮಕ ಕಾರ್ಯಕ್ರಮವಾದ ‘ಗ್ರೀನ್ ಗೆಟ್ ಟುಗೆದರ್’ ಅನ್ನು ಸಹ ಅವರು ಆಯೋಜನೆಗೊಳಿಸುತ್ತಾರೆ. ನಗರದ ಟೋಲ್ ಪ್ಲಾಜಾಗಳಲ್ಲಿ ಬೀಜದ ಚೆಂಡುಗಳನ್ನು ಕೂಡ ವಿತರಣೆ ಮಾಡುತ್ತಾರೆ.
ರೋಹಿತ್ ಮೆಹ್ರಾ ಅವರು ಅಮೃತಸರ, ಲುಧಿಯಾನ, ಸೂರತ್, ಗುರಗ್ರಾಮ್, ಬರೋಡಾ ಮತ್ತು ಇತರ ಸ್ಥಳಗಳಲ್ಲಿ 20ಕ್ಕೂ ಹೆಚ್ಚು ಸಣ್ಣ ಕಾಡುಗಳನ್ನು ರಚಿಸಿದ್ದಾರೆ.
ಸ್ಥಳೀಯ ಜನಸಮೂಹದಿಂದ ‘ಗ್ರೀನ್ ಮ್ಯಾನ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಮೆಹ್ರಾ ಭವಿಷ್ಯದ ಪೀಳಿಗೆಗೆ ಸ್ವಚ್ಛ, ಹಸಿರು ಭೂಮಿಯನ್ನು ಬಿಟ್ಟು ಹೋಗುವ ಪಣ ತೊಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.