ತಾಷ್ಕೆಂಟ್: ಪ್ರಸ್ತುತ ಉಜ್ಬೇಕಿಸ್ಥಾನದ ತಾಷ್ಕೆಂಟ್ನಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಶುಕ್ರವಾರ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಶಾಸ್ತ್ರಿ ಅವರ ಸರಳತೆ ಮತ್ತು ಪ್ರಮಾಣಿಕತೆಯನ್ನು ಅವರು ಸ್ಮರಿಸಿದರು. ಶಾಸ್ತ್ರಿ ಅವರು 1966 ರ ಜನವರಿ 11 ರಂದು, ಭಾರತ-ಪಾಕಿಸ್ಥಾನದ ನಡುವೆ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿದ್ದ ಮರುದಿನವೇ ಕೊನೆಯುಸಿರೆಳೆದಿದ್ದರು.
ಸರಣಿ ಟ್ವೀಟ್ಗಳನ್ನು ಮಾಡಿರುವ ರಾಜನಾಥ್ ಅವರು, “ಲಾಲ್ ಬಹದ್ದೂರ್ ಶಾಸ್ತ್ರಿ ಭಾರತವನ್ನು ಕಠಿಣ ಕಾಲದಲ್ಲಿ ಮುನ್ನಡೆಸಿದರು ಮತ್ತು ಅವರ ಬಲವಾದ ಇಚ್ಛಾಶಕ್ತಿ ಮತ್ತು ದೃಢನಿಶ್ಚಯದ ಮೂಲಕ ದೇಶಕ್ಕೆ ಹೊಸ ಶಕ್ತಿಯನ್ನು ತುಂಬಿದರು. “ಜೈ ಜವಾನ್, ಜೈ ಕಿಸಾನ್” ಎಂಬ ತಮ್ಮ ಘೋಷಣೆಯ ಮೂಲಕ, ಶಾಸ್ತ್ರಿ ಯುದ್ಧದ ಸಮಯದಲ್ಲಿ ರಾಷ್ಟ್ರವನ್ನು ಒಂದುಗೂಡಿಸಿದರು ಮತ್ತು ದೇಶದ ಜನರಲ್ಲಿ ಸ್ವಾಭಿಮಾನ, ಗೌರವ ಮತ್ತು ಹೆಮ್ಮೆಯ ಭಾವನೆಯನ್ನು ಬಲಪಡಿಸಿದರು” ಎಂದಿದ್ದಾರೆ.
ರಾಜನಾಥ್ ಸಿಂಗ್ ಅವರು ಶಾಸ್ತ್ರಿ ಅವರನ್ನು ಸರಳತೆ ಮತ್ತು ಪ್ರಾಮಾಣಿಕತೆಯ ಸಾಕಾರಮೂರ್ತಿ ಎಂದು ಬಣ್ಣಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಘನತೆಯನ್ನು ಅವರು ಪ್ರತಿಪಾದಿಸಿದರು ಎಂದಿದ್ದಾರೆ.
ಶಾಸ್ತ್ರಿ ಅವರ ಸ್ಮರಣಾರ್ಥ ನಿರ್ಮಿಸಲಾದ ಶಾಲೆಗೆ ಭೇಟಿ ನೀಡಿ ಅಲ್ಲಿ ಓದುತ್ತಿರುವ ಮಕ್ಕಳೊಂದಿಗೆ ರಾಜನಾಥ್ ಸಿಂಗ್ ಸಂವಾದ ನಡೆಸಿದರು. ಭಾರತ ಮತ್ತು ಹಿಂದಿ ಭಾಷೆಯ ಮೇಲಿನ ಮಕ್ಕಳ ಪ್ರೀತಿಯನ್ನು ಗಮನಿಸಿ ಸಂತೋಷ ವ್ಯಕ್ತಪಡಿಸಿದರು.
ನವೆಂಬರ್ 2, 2019 ರಂದು ಎಸ್ಸಿಒದ ಸರ್ಕಾರದ ಮುಖ್ಯಸ್ಥರ ಸಭೆ (ಸಿಎಚ್ಜಿ) ಸಭೆಯಲ್ಲಿ ರಾಜನಾಥ್ ಸಿಂಗ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು 2019 ರ ನವೆಂಬರ್ 2-3 ರಂದು ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ. ಉಜ್ಬೇಕಿಸ್ಥಾನದ ಮೇಜರ್ ಜನರಲ್ ಕುರ್ಬಾನೋವ್ ಬಖೋದಿರ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಅಲ್ಲಿನ ರಕ್ಷಣಾ ಸಚಿವ ನಿಜಾಮೊವಿಚ್ ಅವರೊಂದಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.