ಬೆಂಗಳೂರು: ಸಾಮೂಹಿಕ ವಿವಾಹವನ್ನು ನೆರವೇರಿಸುವ ಮಹತ್ವದ ನಿರ್ಧಾರವನ್ನು ಯಡಿಯೂರಪ್ಪ ಸರ್ಕಾರ ತೆಗೆದುಕೊಂಡಿದೆ. ಒಂದು ವರ್ಷದಲ್ಲಿ ಸುಮಾರು 1 ಸಾವಿರ ಜೋಡಿಗಳಿಗೆ ವಿವಾಹ ಮಾಡಿಸುವ ಮಹತ್ತರವಾದ ಆಶಯವನ್ನು ಅದು ಹೊಂದಿದೆ. ಮುಜರಾಯಿ ಇಲಾಖೆಯ ಎ ದರ್ಜೆ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನೆರವೇರಲಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಹಿತಿ ನೀಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು, ” ಒಂದೊಂದು ದೇವಾಲಯದಲ್ಲಿ 100 ಜೋಡಿಗೆ ಮದುವೆ ಮಾಡಿಸುವ ಗುರಿಯನ್ನು ಹಾಕಲಾಗಿದೆ. ಜಾತಿಭೇದವಿಲ್ಲದೇ ಎಲ್ಲಾ ವರ್ಗದ ಬಡವರಿಗಾಗಿ ಯೋಜನೆ ರೂಪಿಸಲಾಗಿದ್ದು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ. ಪ್ರತಿ ಜೋಡಿಗೆ ವಿವಾಹಕ್ಕೆ 55 ಸಾವಿರ ಖರ್ಚಿನ ಅಂದಾಜು ಮಾಡಲಾಗಿದ್ದು ಯೋಜನೆಗೆ ಪ್ರತಿ ವರ್ಷ 25-30 ಕೋಟಿ ವೆಚ್ಚ ಮಾಡಲಾಗುತ್ತದೆ. ವಧು-ವರರಿಗೆ ಸರ್ಕಾರದಿಂದಲೇ ವಸ್ತ್ರ, ಮಾಂಗಲ್ಯ ನೀಡಲು ನಿರ್ಧರಿಸಲಾಗಿದೆ”ಎಂದಿದ್ದಾರೆ.
ಎ ದರ್ಜೆಯ 90-100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ನಡೆಯಲಿದ್ದು, ಮೊದಲ ಸಾಮೂಹಿಕ ಮದುವೆ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
ಮದುವೆ ಆಗಲು ಬಯಸುವವರು 30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು. ಪೋಷಕರು ವಧು-ವರರ ದಾಖಲೆಯನ್ನು ನೀಡಬೇಕಾಗುತ್ತದೆ. ಎರಡನೇ ಮದುವೆಗೆ ಅವಕಾಶ ಇಲ್ಲ. ತಂದೆ ತಾಯಿ ಒಪ್ಪಿದರೆ ಅಂತರ್ಜಾತಿ ವಿವಾಹಕ್ಕೆ ಅನುಮತಿ ನೀಡಲಾಗುತ್ತದೆ. ಕಡ್ಡಾಯವಾಗಿ ವರನಿಗೆ 21, ವಧುವಿಗೆ 18 ವರ್ಷ ಆಗಿರಲೇಬೇಕು. ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.
ಶಿಶು ಕಲ್ಯಾಣ ಇಲಾಖೆಯಿಂದ ಪ್ರೊತ್ಸಾಹ ಧನ ನೀಡಲಾಗುತ್ತದೆ. 40 ಸಾವಿರ ವೆಚ್ಚದಲ್ಲಿ 8 ಗ್ರಾಂ ಚಿನ್ನದ ತಾಳಿ ವರನಿಗೆ ವಸ್ತ್ರಕ್ಕಾಗಿ 5 ಸಾವಿರ ರೂ., ವಧುವಿಗೆ ಸೀರೆಗಾಗಿ 10 ಸಾವಿರ ರೂ. ನೀಡಲಾಗುತ್ತದೆ. ಹಣವನ್ನು ಮದುವೆಯ ನಂತರ ಬ್ಯಾಂಕ್ ಖಾತೆ ಜಮೆ ಮಾಡಲಾಗುತ್ತದೆ.
ವಿವಾಹಕ್ಕೆ ಸೂಕ್ತ ದಾಖಲೆಗಳು ಸಲ್ಲಿಕೆ ಕಡ್ಡಾಯವಾಗಿದ್ದು ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ದೇವಾಲಯ, ಮೈಸೂರಿನ ಚಾಮುಂಡಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ‘ಎ’ ವಲಯದ ದೇವಾಲಯಗಳನ್ನು ಸಾಮೂಹಿಕ ವಿವಾಹಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.