ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ಗಿರೀಶ್ ಚಂದ್ರ ಮುರ್ಮು ಅವರು ಗುರುವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾ ಕೃಷ್ಣ ಮಾಥುರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೇಹ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರು ಇಬ್ಬರಿಗೂ ಪ್ರಮಾಣವಚನವನ್ನು ಬೋಧಿಸಿದರು.
ಇಂದಿನಿಂದ ಲಡಾಖ್ ಮತ್ತು ಜಮ್ಮು&ಕಾಶ್ಮೀರ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ.
ಮುರ್ಮು ಅವರು ಗುಜರಾತ್ ಕೇಡರ್ನ 1985 ರ ಬ್ಯಾಚ್ನ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದು, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. 59 ರ ಹರೆಯದ ಜಿಸಿ ಮುರ್ಮು ದೇಶದ ಕಿರಿಯ ಗವರ್ನರ್ಗಳಲ್ಲಿ ಒಬ್ಬ ಎನಿಸಿಕೊಂಡಿದ್ದಾರೆ.
ಜಿ.ಸಿ. ಮುರ್ಮು ಉತ್ಕಲ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಅವರು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ರಾಧಾ ಕೃಷ್ಣ ಮಾಥುರ್ ಅವರು ತ್ರಿಪುರಾ ಕೇಡರ್ನ 1977 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿದ್ದ ಇವರು ನವೆಂಬರ್ 2018 ರಲ್ಲಿ ನಿವೃತ್ತರಾದರು. ಭಾರತದ ರಕ್ಷಣಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಭಾರತದ ರಕ್ಷಣಾ ಉತ್ಪಾದನಾ ಕಾರ್ಯದರ್ಶಿ, ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯದರ್ಶಿ ಮತ್ತು ತ್ರಿಪುರದ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಮಾಥುರ್ ಅವರು ಐಐಟಿ ಕಾನ್ಪುರದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ , ಐಐಟಿ ದೆಹಲಿಯ ಕೈಗಾರಿಕಾ ಎಂಜಿನಿಯರಿಂಗ್ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ ಪದವಿ ಪಡೆದುಕೊಂಡಿದ್ದಾರೆ. ಸ್ಲೊವೇನಿಯಾದ ಲುಜ್ಬುಲಿನ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಪ್ರಮೋಷನ್ ಆಫ್ ಎಂಟರ್ಪ್ರೈಸಸ್ ಯಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ಇದುವರೆಗೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ಅವರು ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರನ್ನು ಗೋವಾ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.