ಅಶ್ಫಾಕುಲ್ಲಾ ಖಾನ್ ಭಾರತದ ಕ್ರಾಂತಿಕಾರಿ ವೀರರಲ್ಲಿ ಒಬ್ಬರು. ಅವರು ಚಂದ್ರಶೇಖರ್ ಆಜಾದ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ರಂತಹ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಬೆರೆತು ಹೋರಾಟದ ಕಿಚ್ಚನ್ನು ಹೆಚ್ಚಿಸಿದವರು. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಬಂಧಿಸಲ್ಪಟ್ಟವರು. ಕಟ್ಟಾ ಮುಸ್ಲಿಂ ಆಗಿದ್ದ ಅವರು ರಾಮ್ ಪ್ರಸಾದ ಬಿಸ್ಮಿಲ್ ಮತ್ತು ತನ್ನ ನಡುವೆ ಬ್ರಿಟೀಷ್ ಅಧಿಕಾರಿಯೊಬ್ಬರು ಮತೀಯ ಸಂಘರ್ಷ ತಂದಿಡುವ ಸಂದರ್ಭದಲ್ಲಿ ಅದಕ್ಕೆ ಜಗ್ಗದೆ ರಾಷ್ಟ್ರೀಯ ಚಿಂತನೆಗೆ ತನ್ನನ್ನು ಅರ್ಪಿಸಿಕೊಂಡವರು. ಇಂದಿನ ಪ್ರತ್ಯೇಕತಾವಾದಿಗಳಿಗೆ ಇವರ ಜೀವನ ಒಂದು ಪಾಠವೇ ಸರಿ.
ಸ್ವಾತಂತ್ರ್ಯಕ್ಕಾಗಿ ನೇಣು ಹಗ್ಗವನ್ನೇ ಹಾರವನ್ನಾಗಿಸಿಕೊಂಡ ಕ್ರಾಂತಿಕಾರಿ. ಮುಸ್ಲಿಂ ತರುಣ ವೀರನಾದ ಅಶ್ಫಾಕ್ ಅವರು ಕುರಾನನ್ನು ಪಠಿಸುತ್ತಾ ದೇಶಕ್ಕಾಗಿ ಮೃತ್ಯುವನ್ನಾಲಂಗಿಸಿದ ಅಪ್ರತಿಮ ದೇಶಭಕ್ತ. 1900 ಅ.22 ರಂದು ಶಹಜಹಾನ್ಪುರದಲ್ಲಿ ಹುಟ್ಟಿದ ಅವರು ಉರ್ದು ಕವಿಯೂ ಆಗಿದ್ದರು. ಪ್ರತಿಯೊಬ್ಬರಿಗೂ ಆದರ್ಶವಾಗಿರುವ ಆ ಮಹಾನ್ ನಾಯಕನ ಜನ್ಮದಿನವಿಂದು.
ಅಶ್ಫಾಕುಲ್ಲಾ ಖಾನ್ ಬ್ರಿಟಿಷ್ ಭಾರತದ ವಾಯುವ್ಯ ಪ್ರಾಂತ್ಯದ ಶಹಜಹಾನ್ಪುರದಲ್ಲಿ ಶಫಿಕುಲ್ಲಾ ಖಾನ್ ಮತ್ತು ಮಜರುನಿಸ್ಸ ದಂಪತಿಗೆ 1900ರ ಅಕ್ಟೋಬರ್ 22 ರಂದು ಜನಿಸಿದರು. ಅವರ ಆರು ಒಡಹುಟ್ಟಿದವರಲ್ಲಿ ಅವರು ಕಿರಿಯರು.
1922 ರಲ್ಲಿ ಮಹಾತ್ಮ ಗಾಂಧಿ ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ತಮ್ಮ ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದರು. ಆದರೆ 1922 ರಲ್ಲಿ ನಡೆದ ಚೌರಿ ಚೌರಾ ಘಟನೆಯ ನಂತರ, ಮಹಾತ್ಮ ಗಾಂಧಿಯವರು ಈ ಆಂದೋಲನದ ಕರೆಯನ್ನು ಹಿಂಪಡೆಯಲು ನಿರ್ಧರಿಸಿದರು. ಆ ಸಮಯದಲ್ಲಿ, ಅಶ್ಫಾಕುಲ್ಲಾ ಖಾನ್ ಸೇರಿದಂತೆ ಅನೇಕ ಯುವಕರು ತೀವ್ರ ಅಸಮಾಧಾನಕ್ಕೆ ಒಳಗಾದರು ಮತ್ತು ಕ್ರಾಂತಿಕಾರಿಗಳಾಗಿ ಬದಲಾದರು. 1924 ರಲ್ಲಿ ಸ್ಥಾಪನೆಯಾದ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ನಂತಹ ಸಂಸ್ಥೆಗಳತ್ತ ಮುಖ ಮಾಡಿದರು. ಈ ಸಂಘದ ಉದ್ದೇಶ ಸ್ವತಂತ್ರ ಭಾರತವನ್ನು ಸಾಧಿಸಲು ಸಶಸ್ತ್ರ ಕ್ರಾಂತಿಗಳನ್ನು ಆಯೋಜಿಸುವುದಾಗಿತ್ತು.
ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಆಂದೋಲನಕ್ಕೆ ಉತ್ತೇಜನ ನೀಡಲು ಮತ್ತು ಅದರ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಖರೀದಿಸಲು, ಈ ಕ್ರಾಂತಿಕಾರಿಗಳು ಆಗಸ್ಟ್ 8, 1925 ರಂದು ಶಹಜಹಾನ್ಪುರದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ, ರೈಲುಗಳಲ್ಲಿ ಸಾಗಿಸುವ ಸರ್ಕಾರಿ ಹಣವನ್ನು ಲೂಟಿ ಮಾಡಲು ನಿರ್ಧರಿಸಲಾಯಿತು. ಆಗಸ್ಟ್ 9, 1925 ರಂದು, ಅಶ್ಫಾಕುಲ್ಲಾ ಖಾನ್ ಮತ್ತು ಇತರ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್, ರಾಜೇಂದ್ರ ಲಾಹಿರಿ, ಠಾಕೂರ್ ರೋಶನ್ ಸಿಂಗ್, ಸಚೀಂದ್ರ ಬಕ್ಷಿ, ಚಂದ್ರಶೇಖರ್ ಆಜಾದ್, ಕೇಶಬ್ ಚಕ್ರವರ್ತಿ, ಬನ್ವಾರಿ ಲಾಲ್, ಮುಕುಂಡಿ ಲಾಲ್, ಮನ್ಮಥ್ ನಾಥ್ ಗುಪ್ತ ಅವರು ಲಕ್ನೋದ ಸಮೀಪ ರೈಲಿನಲ್ಲಿ ಸಾಗಾಣೆಯಾಗುತ್ತಿದ್ದ ಸರಕಾರದ ಹಣವನ್ನು ಕೊಳ್ಳೆ ಹೊಡೆದರು.
ರೈಲು ದರೋಡೆಯಾಗಿ ಒಂದು ತಿಂಗಳು ಕಳೆದರೂ ಯಾರೊಬ್ಬರನ್ನು ಬಂಧಿಸಲಾಗಿಲ್ಲ. ಬ್ರಿಟಿಷ್ ಸರ್ಕಾರವು ದೊಡ್ಡ ತನಿಖಾ ಜಾಲವನ್ನು ಹರಡಿತ್ತು. ಕೊನೆಗೆ 26 ಸೆಪ್ಟೆಂಬರ್ 1925 ರ ಬೆಳಿಗ್ಗೆ, ಬಿಸ್ಮಿಲ್ ಅವರನ್ನು ಪೊಲೀಸರು ಹಿಡಿದರು. ಅಶ್ಫಾಕುಲ್ಲಾ ಖಾನ್ ಒಬ್ಬರೇ ಪೊಲೀಸರಿಗೆ ಸಿಕ್ಕಿ ಬೀಳಲಿಲ್ಲ. ಅವರು ತಲೆಮರೆಸಿಕೊಂಡು ಬಿಹಾರದಿಂದ ಬನಾರಸ್ಗೆ ತೆರಳಿದರು, ಅಲ್ಲಿ ಅವರು 10 ತಿಂಗಳು ಎಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸ ಮಾಡಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಸಹಾಯ ಮಾಡಲು ಎಂಜಿನಿಯರಿಂಗ್ ಕಲಿಯಲು ವಿದೇಶಕ್ಕೆ ಹೋಗಲು ಬಯಸಿದ್ದರು. ಇದಕ್ಕಾಗಿ ಅವರು ದೇಶದಿಂದ ಹೊರಹೋಗುವ ಮಾರ್ಗಗಳನ್ನು ಕಂಡುಕೊಳ್ಳಲು ದೆಹಲಿಗೆ ಆಗಮಿಸಿದರು, ಅಲ್ಲಿ ಅವರು ತಮ್ಮ ಹಿಂದಿನ ಸಹಪಾಠಿಯಾಗಿದ್ದ ಸ್ನೇಹಿತರೊಬ್ಬರ ಸಹಾಯವನ್ನು ಪಡೆಯಲು ಮುಂದಾದರು. ಆದರೆ ಆ ಸ್ನೇಹಿತ ಇವರಿಗೆ ದ್ರೋಹ ಮಾಡಿಬಿಟ್ಟ, ಇವರು ಇದ್ದ ಸ್ಥಳದ ಬಗ್ಗೆ ಪೊಲೀಸರಿಗೆ ತಿಳಿಸಿದ.
ಅಶ್ಫಾಕುಲ್ಲಾ ಖಾನ್ ಅವರನ್ನು ಫೈಜಾಬಾದ್ ಜೈಲಿನಲ್ಲಿ ಬಂಧಿಸಿಡಲಾಯಿತು, ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಯಿತು. ಅವರ ಸಹೋದರ ರಿಯಾದತುಲ್ಲಾ ಖಾನ್ ಅವರ ಕಾನೂನು ಸಲಹೆಗಾರರಾಗಿದ್ದರು. ಜೈಲಿನಲ್ಲಿದ್ದಾಗ, ಅಶ್ಫಾಕುಲ್ಲಾ ಖಾನ್ ನಿಯಮಿತವಾಗಿ ಕುರಾನ್ ಪಠಿಸುತ್ತಿದ್ದರು ಮತ್ತು ಇಸ್ಲಾಮಿಕ್ ರಂಜಾನ್ ತಿಂಗಳಲ್ಲಿ ಕಟ್ಟುನಿಟ್ಟಾಗಿ ಉಪವಾಸವನ್ನು ಮಾಡುತ್ತಿದ್ದರು. ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರಾಜೇಂದ್ರ ಲಾಹಿರಿ ಮತ್ತು ಥಾಂಕುರ್ ರೋಶನ್ ಸಿಂಗ್ ಅವರಿಗೆ ಮರಣದಂಡನೆ ವಿಧಿಸುವ ಮೂಲಕ ಕಾಕೋರಿ ದರೋಡೆ ಪ್ರಕರಣಕ್ಕೆ ಅಂತ್ಯವನ್ನು ಹಾಡಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಅಶ್ಫಾಕುಲ್ಲಾ ಖಾನ್ ಅವರನ್ನು 1927 ರ ಡಿಸೆಂಬರ್ 19 ರಂದು ಫೈಜಾಬಾದ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಈ ಕ್ರಾಂತಿಕಾರಿ ತನ್ನ ತಾಯಿನಾಡಿನ ಮೇಲಿನ ಪ್ರೀತಿ, ಸ್ಪಷ್ಟ ಚಿಂತನೆ, ಅಚಲ ಧೈರ್ಯ, ದೃಢತೆ ಮತ್ತು ನಿಷ್ಠೆಯಿಂದಾಗಿ ಹುತಾತ್ಮ ಎನಿಸಿಕೊಂಡು ದಂತಕಥೆಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.