ಆತ ಆಕೆಯ ದೂರದ ಬಂಧು. ಆದರೆ ತನ್ನ ಸ್ವಂತ ತಂಗಿಯೆಂದೇ ಭಾವಿಸಿ ಆಕೆಯ ಕಷ್ಟ ಸುಖಗಳಲ್ಲಿ ಬೆರೆಯುತ್ತಿದ್ದ. ಆತನಿಗೆ ಸ್ವಂತ ತಂಗಿ ಇಲ್ಲದಿದ್ದುದೂ ಇದಕ್ಕೊಂದು ಕಾರಣವಿರಬಹುದು.ಆಕೆಯಲ್ಲೇ ತನ್ನ ಸ್ವಂತ ತಂಗಿಯನ್ನು ಕಾಣುತ್ತಿದ್ದ ಆತ, ಆಕೆಯ ಇಬ್ಬರು ಇಂಜಿನಿಯರ್ ಹೆಣ್ಣುಮಕ್ಕಳ ಮದುವೆಗೆ ಹಗಲು ರಾತ್ರಿಯ ಪರಿವೆ ಇಲ್ಲದೆ ಶ್ರಮಿಸಿದ್ದ. ಆಕೆಯ ಪತಿ ಬಹಳ ಹಿಂದೆಯೇ ತೀರಿಕೊಂಡಿದ್ದರಿಂದ ಮನೆಯಲ್ಲಿ ಮುಂದೆ ನಿಂತು ಜವಾಬ್ದಾರಿ ಹೊರುವ ಗಂಡಸರು ಇರಲಿಲ್ಲ. ಈತನೇ ತನ್ನ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾತುಕತೆ, ಅನಂತರ ನಿಶ್ಚಿತಾರ್ಥ, ಆಮೇಲೆ ಮದುವೆ ಎಲ್ಲದಕ್ಕೂ ಓಡಾಡಿದ್ದ. ಆಕೆಗೂ ತುಂಬ ಸಂತಸ ಆಗಿತ್ತು. ತನ್ನ ಅಣ್ಣನ ಸ್ಥಾನವನ್ನು ಈತ ತುಂಬಿದನಲ್ಲ ಎಂಬ ಹಿಗ್ಗು. ಇಬ್ಬರು ಹೆಣ್ಣು ಮಕ್ಕಳೂ ಉತ್ತಮ ಕುಟುಂಬವನ್ನೇ ಸೇರಿ ಸುಖವಾಗಿದ್ದರು.
ಆದರೆ ಅದೇನಾಯಿತೋ ಗೊತ್ತಿಲ್ಲ. ಎರಡನೆ ಮಗಳ ಮದುವೆ ಮುಗಿದ ಬಳಿಕ ಈಕೆ ಒಂದು ದಿನ ತನ್ನ ಅಣ್ಣನೆಂದು ತಿಳಿದಿದ್ದ ಈತನ ಮನೆಗೆ ಬಂದಾಗ, ಬೆಳಿಗ್ಗೆ ಉಪ್ಪಿಟ್ಟು ತಿನ್ನುವಾಗ ಕೂದಲೊಂದು ಸಿಕ್ಕಿತಂತೆ. ತನ್ನ ಅಣ್ಣ ಬೇಕೆಂದೇ ತನ್ನನ್ನು ಅವಮಾನಿಸಲು ಉಪ್ಪಿಟ್ಟಿನಲ್ಲಿ ಕೂದಲು ಬೆರೆಸಿದ್ದಾನೆ, ತನ್ನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಆಕೆ ಅನಂತರ ಸಂಬಂಧವನ್ನೇ ಕಡಿದುಕೊಂಡಳು. ಆದರೆ ಆತನೇನೂ ತನ್ನ ತಂಗಿಗೆ ಅವಮಾನಿಸಲೆಂದು ಉಪ್ಪಿಟ್ಟಿನಲ್ಲಿ ಕೂದಲು ಬೆರೆಸಿರಲಿಲ್ಲ. ಅಕಸ್ಮಾತ್ ಗಾಳಿಗೆ ಹಾರಿಬಂದ ಕೂದಲು ಉಪ್ಪಿಟ್ಟಿನಲ್ಲಿ ಬೆರೆತಿತ್ತಷ್ಟೆ. ಆದರೆ ಹಲವಾರು ವರ್ಷಗಳ ಅಣ್ಣ-ತಂಗಿಯ ಮಧುರ ಬಾಂಧವ್ಯಕ್ಕೆ ಆ ಕೂದಲು ಅಡ್ಡಿಯಾಯಿತು. ಈಗ ಆಕೆ ತನ್ನ ಅಣ್ಣನ ಬಳಿ ಹೆಚ್ಚು ಮಾತನಾಡುತ್ತಿಲ್ಲ. ಮೊದಲೆಲ್ಲ ಪ್ರತಿನಿತ್ಯ ಫೋನಾಯಿಸುತ್ತಿದ್ದ ಆಕೆ ಈಗ ಈತ ಫೋನ್ ಮಾಡಿದರೂ ಹುಂ, ಉಹುಂ, ಸರಿ ಆಯ್ತು, ಓಕೆ ಎಂದಷ್ಟೇ ಉತ್ತರಿಸಿ ಕರೆಯನ್ನು ಸ್ಥಗಿತಗೊಳಿಸುತ್ತಾಳೆ. ನಿಸ್ವಾರ್ಥ, ನಿಷ್ಕಲ್ಮಶ ಸಂಬಂಧವೊಂದು ಹೀಗೆ ಇದ್ದಕ್ಕಿದ್ದಂತೆ ವಿದ್ಯುತ್ತಂತಿಯಂತೆ ಕಡಿದುಹೋಗಿದೆ. ಪ್ರೀತಿಯ ವಿದ್ಯುತ್ ಪ್ರವಾಹ ಸ್ಥಗಿತಗೊಂಡಿದೆ. ವಿಶ್ವಾಸ, ನಂಬಿಕೆ ಕಮರಿದೆ.
* * *
ಅದೊಂದು ಮದುವೆ ಮಾತುಕತೆ ಸಂದರ್ಭ. ವರನ ಕಡೆಯವರು ಮದುವೆಯಾಗಬೇಕಿದ್ದ ವಧುವಿನ ಮನೆಗೆ ಬಂದಿದ್ದರು. ಹಿಂದಿನ ಕಾಲದಲ್ಲಾಗಿದ್ದರೆ ಹುಡುಗಿಯ ತಂದೆ ತಾಯಿ, ಹಿರಿಯರು ಮಾತ್ರ ಹುಡುಗನ ಬಳಿ ಮಾತನಾಡಿ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಮಾತ್ರ ಹಾಗಲ್ಲ. ಕಾಲ ಬದಲಾಗಿದೆ. ಹುಡುಗಿಯೇ ಹುಡುಗನ ಬಗ್ಗೆ ಎಲ್ಲ ವಿವರಗಳನ್ನು ಮುಲಾಜಿಲ್ಲದೆ ವಿಚಾರಿಸಿಕೊಳ್ಳುತ್ತಾಳೆ. ಹುಡುಗನ ನೌಕರಿ, ವೇತನ, ಆತನಿಗೆ ಇರಬಹುದಾದ ಆಸ್ತಿಪಾಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಇತ್ಯಾದಿ ವಿಚಾರಿಸಿದ ಬಳಿಕ ಹುಡುಗಿ ಕೊನೆಯದಾಗಿ ಕೇಳಿದ್ದು : ‘ನಿಮ್ಮ ಮನೆಯಲ್ಲಿ ಹಳೆಯ ಲಗೇಜ್ಗಳು ಇಲ್ಲ ತಾನೆ?” ಹುಡುಗನ ಕಡೆಯವರು ಮುಗ್ಧರು. ಈ ಪ್ರಶ್ನೆಯ ತಲೆಬುಡ ಅರ್ಥವಾಗಲಿಲ್ಲ. ಮಿಕಿಮಿಕಿ ನೋಡಿದರು. ಹುಡುಗಿಯೇ ಅನಂತರ ಬಿಡಿಸಿ ಹೇಳಿದಳು – ಹಳೆಯ ಲಗೇಜ್ ಅಂದ್ರೆ ಮನೆಯಲ್ಲಿ ನಿಮ್ಮ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಇತ್ಯಾದಿ ಮುದಿ ಜೀವಗಳು ಇವೆಯೇ? ಅಂತಹ ಹಳೆಯ ಲಗೇಜ್ಗಳಿದ್ದರೆ ನಾನು ಮದುವೆಯಾಗಲಾರೆ ಎಂದು ಕಡ್ಡಿ ಮುರಿದಂತೆ ಹೇಳಿ ಒಳನಡೆದಳು. ಮದುವೆಯ ಮಾತುಕತೆ ಮುರಿದುಬಿತ್ತು.
-ಇವೆರಡೂ ಕಲ್ಪಿತ ಘಟನೆಗಳಲ್ಲ. ನಿಜವಾಗಿ ನಡೆದಿದ್ದು. ನಾನೇ ಕಣ್ಣಾರೆ ಕಂಡಿದ್ದು. ಇಂತಹ ಇನ್ನೂ ಅದೆಷ್ಟೋ ಪ್ರಸಂಗಗಳು ನಿಮ್ಮ ಅನುಭವಕ್ಕೂ ಬಂದಿರಲೇಬೇಕು. ಮದುವೆಯಾಗಲಿರುವ ಹುಡುಗಿಗೆ ಗಂಡನ ಮನೆಯಲ್ಲಿ ಹಿರಿಯರು ಇರುವುದು ಹಿತವಿಲ್ಲ. ತನ್ನ ಜತೆ ಗಂಡ ಮಾತ್ರ ಇರಬೇಕು. ಅತ್ತೆ, ಮಾವ ಎಂಬ ಹಳೆಯ ಲಗೇಜ್ಗಳಿದ್ದರೆ ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ. ತನ್ನ ಸ್ವಚ್ಛಂದತೆಗೆ ಯಾರಿಂದಲೂ ಅಡ್ಡಿಯಾಗಕೂಡದು. ಹುಡುಗಿಯ ತಾಯಿಗೂ ಈಗೀಗ ಅದೇ ರೀತಿಯ ಭಾವನೆ. ಅತ್ತೆ, ಮಾವನ ಕಾಟವೇ ಬೇಡವೆಂದು ಈಗ ಟೆಕ್ಕಿ ದಂಪತಿಗಳು ವಿದೇಶಕ್ಕೆ ಹಾರಿ ಅಲ್ಲೇ ನೆಲೆಸುವ ನಿದರ್ಶನಗಳಿಗೂ ಕೊರತೆಯಿಲ್ಲ.
ಒಂದು ಕಾಲವಿತ್ತು. ಒಂದು ಮನೆಯೆಂದರೆ ಅಲ್ಲಿರುವ ಅಜ್ಜ, ಅಜ್ಜಿ, ತಂದೆ ತಾಯಿ, ಅಣ್ಣ ಅತ್ತಿಗೆ, ಅಕ್ಕ ತಂಗಿಯರ ಬಗ್ಗೆ ಕುಟುಂಬದ ಕಿರಿಯರಿಗೆ ಎಲ್ಲಿಲ್ಲದ ಗೌರವ. ಹಿರಿಯರಿಗೆ ಕಿರಿಯರ ಮೇಲೆ ಇನ್ನಿಲ್ಲದ ಅತೀವ ಮಮಕಾರ. ಮನೆಯಿಂದ ಹೊರಗೆ ಹೋಗುವ ಮುನ್ನ ಹಿರಿಯರ ಕಾಲ್ಮುಟ್ಟಿ ಶುಭಾಶೀರ್ವಾದ ಬೇಡುವ ಆ ಸತ್ಪರಂಪರೆ ಮಾಯವಾಗಿ ಎಷ್ಟೋ ಕಾಲವಾಗಿದೆ. ಕುಟುಂಬವೊಂದರಲ್ಲಿ ಹತ್ತು -ಹದಿನೈದು ಸದಸ್ಯರಿದ್ದರೂ ಅವರ ನಡುವೆ ಅನ್ಯೋನ್ಯತೆ ಇರುತ್ತಿತ್ತು. ಕಟಿಪಿಟಿ, ಕಿತ್ತಾಟ, ಗುದ್ದಾಟಗಳಿರುತ್ತಿರಲಿಲ್ಲ. ಒಬ್ಬರಿಗೊಬ್ಬರು ನೆರವಾಗುವ ಅಪರೂಪದ ಪರಿಪಾಠ ಅಲ್ಲಿರುತ್ತಿತ್ತು. ಸಿಹಿಜೇನಿನಂತೆ ಮಧುರ ಒಸಗೆ ಅವರ ನಡುವೆ ಬೆಸುಗೆಯಾಗಿರುತ್ತಿತ್ತು. ಪ್ರೀತಿಯ ಜೇನಿನ ಹೊಳೆ ಹರಿದಿರುತ್ತಿತ್ತು. ಮನೆಯ ಹೆಣ್ಣು ಮಗಳ ಮದುವೆಯಾಗಿ ಆಕೆಯನ್ನು ಗಂಡನ ಮನೆಗೆ ಕಳಿಸುವ ಸಂದರ್ಭದಲ್ಲಿ ಮನೆಮಂದಿಯ ಕಣ್ಣಲ್ಲಿ ದುಃಖದ ಕಣ್ಣೀರು ಉಮ್ಮಳಿಸಿ ಬರುತ್ತಿತ್ತು. ಮನೆಯ ಹಿರಿಯರೊಬ್ಬರಿಗೆ ತೀವ್ರ ಅನಾರೋಗ್ಯವಾಗಿ ಹಾಸಿಗೆ ಹಿಡಿದರೆ ಎಲ್ಲರೂ ಚಿಂತಿತರಾಗಿ ಅವರ ಸೇವೆಗೆ ಧಾವಿಸುತ್ತಿದ್ದರು. ಈಗ ಮನೆಯ ಮಗಳು ಮದುವೆಯಾಗಿ ಹೊರ ನಡೆದರೆ ಅಳುವ ಕಣ್ಣುಗಳಿಲ್ಲ. (ಸ್ವತಃ ಮಗಳ ಕಣ್ಣಲ್ಲೇ ನೀರು ಒಸರುವುದಿಲ್ಲ!) ಮನೆಯ ಹಿರಿಯರು ಅನಾರೋಗ್ಯದಿಂದ ಹಾಸಿಗೆ ಹಿಡಿದರೆ ವ್ಯಾಕುಲಿತರಾಗುವ ಮನಸ್ಸುಗಳಿಲ್ಲ. ಔಷಧಿ ಖರ್ಚು ಭರಿಸೋದು ಹೇಗೆ? ಇನ್ನೆಷ್ಟು ದಿನ ಈ ಮುದಿ ಜೀವದ ಸೇವೆ ಮಾಡೋದು? ಯಾರಾದರೂ ನರ್ಸ್ ನೇಮಿಸೋಣವೆಂದರೆ ಸಾವಿರಾರು ರೂ.ಗಳ ಖರ್ಚು. ಬೇಗ ಗೊಟಕ್ ಎನ್ನಬಾರದೆ? ಹೀಗೆ ಹಲುಬುವ ಮನಸುಗಳೇ ಈಗ ಅಧಿಕ.
ಬೆಂಗಳೂರಿನಲ್ಲಿ ಇಂಜಿನಿಯರ್ ಒಬ್ಬರು ತಮ್ಮ ಏಕೈಕ ಪುತ್ರನನ್ನು ತುಂಬ ಕಕ್ಕುಲತೆಯಿಂದ ಬೆಳೆಸಿ, ಆತನನ್ನು ಇಂಜಿನಿಯರಿಂಗ್ ಓದಿಸಿದರು. ಅವನ ಬೇಕು-ಬೇಡಗಳನ್ನೆಲ್ಲ ಪೂರೈಸಲು ತಮ್ಮ ಪ್ರೀತಿ, ಆರ್ಥಿಕ ಶಕ್ತಿ ಎಲ್ಲವನ್ನೂ ಧಾರೆಯೆರೆದರು. ಪದವಿ ಬಳಿಕ ಮಗನಿಗೆ ದೂರದ ಅಮೆರಿಕದಲ್ಲಿ ಆಕರ್ಷಕ ವೇತನದ ನೌಕರಿಯೂ ದೊರಕಿತು. ಮೊದಮೊದಲು ಈ ಪುತ್ರ ತನ್ನ ಪ್ರೀತಿಯ ತಂದೆಯನ್ನು ವಾರಕ್ಕೊಂದಾವರ್ತಿ ಫೋನ್ ಮಾಡಿ ಕುಶಲ ವಿಚಾರಿಸುತ್ತಿದ್ದ. ಅನಂತರ ಅದು ತಿಂಗಳಿಗೊಮ್ಮೆ ಬದಲಾಯಿತು. ಮತ್ತೆ ಮತ್ತೆ ಈ ಅಂತರ ಹೆಚ್ಚುತ್ತಾ ಹೋಯಿತು. ಮಗನ ಈ ವರ್ತನೆಯಿಂದ ನೊಂದ ತಂದೆ ಹಾಸಿಗೆ ಹಿಡಿದರು. ಒಮ್ಮೆ ಮನೆಗೆ ಬಂದು ಹೋಗು ಎಂದು ಫೋನ್ ಮಾಡಿ ಗೋಗರೆದರು. ‘ಈಗ ರಜೆ ಸಿಗೋಲ್ಲ . ಮುಂದೆ ರಜೆ ಸಿಕ್ಕಾಗ ಬರುವೆ’ ಎಂದು ಕಾಗೆ ಹಾರಿಸಿದ ಮಗರಾಯ. ಇದೇ ಚಿಂತೆಯಲ್ಲಿ ನರಳಿ ನರಳಿ ತಂದೆ ಒಂದು ದಿನ ಪರಂಧಾಮ ಸೇರಿದರು. ಬಂಧುಗಳು ಮಗನಿಗೆ ತಕ್ಷಣ ವಿಷಯ ತಿಳಿಸಿ, ತಕ್ಷಣ ಹೊರಟು ಬಾ ಎಂದು ಕರೆ ಮಾಡಿದರೆ ಅಮೆರಿಕದಲ್ಲಿ ಜಾಲಿಯಾಗಿದ್ದ ಆತ ತಣ್ಣಗೆ ಹೇಳಿದ : “ನನಗೀಗ ರಜೆ ಸಿಗೋಲ್ಲ. ತಂದೆಯ ಅಂತ್ಯಕ್ರಿಯೆ, ಅನಂತರದ ಕೆಲಸಗಳನ್ನು ನೀವೇ ಮುಗಿಸಿಬಿಡಿ. ಅದಕ್ಕೆ ಖರ್ಚಾಗುವ ಹಣ ಬೇಕಿದ್ರೆ ಕಳಿಸ್ತೀನಿ” ಹಣವನ್ನೇನೋ ಆತ ಕಳುಹಿಸಿದ. ಆದರೆ ತನ್ನನ್ನು ಪ್ರೀತಿಯಿಂದ ಪಾಲಿಸಿ, ಪೋಷಿಸಿ, ವಿದ್ಯೆ ನೀಡಿ ಅಮೆರಿಕೆಗೆ ಹೋಗುವಂತೆ ಮಾಡಿದ ತಂದೆಯ ಅಂತಿಮ ದರ್ಶನಕ್ಕೆ ಬರಬೇಕೆಂದು ಆತನಿಗೆ ಅನಿಸಲೇ ಇಲ್ಲವಲ್ಲ. ಅದೆಂಥ ಮನುಷ್ಯತ್ವ! ಮಗನ ಏಳಿಗೆಗಾಗಿ ತಂದೆ ಅಪಾರ ಪರಿಶ್ರಮ, ತ್ಯಾಗ ಮಾಡಿದ್ದರು. ಮಗನಿಗೆ ಮಾತ್ರ ಅಮೆರಿಕದ ನೌಕರಿ, ಮತ್ತಿನ್ನೇನೋ ಆಕರ್ಷಕವಾಗಿ ಕಂಡಿತ್ತು!
ಸಡಿಲಗೊಳ್ಳುತ್ತಿರುವ, ಕರಗಿ ಹೋಗುತ್ತಿರುವ ಮನುಷ್ಯ ಸಹಜ ಸಂಬಂಧಗಳ ಇಂತಹ ಜೀವಂತ ನಿದರ್ಶನಗಳು ಪ್ರತಿನಿತ್ಯ ಸಿಗುತ್ತಲೇ ಇರುತ್ತವೆ. ಕುಟುಂಬಗಳಲ್ಲಿ ಹಿರಿಯ ಮೇಲೆ ಕಿರಿಯರಿಗೆ ಗೌರವ ಇಲ್ಲ. ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಗೆ ಗೌರವವಿಲ್ಲ (ಶಿಕ್ಷಕರೂ ಗೌರವಕ್ಕೆ ಭಾಜನರಾಗುವ ಅರ್ಹತೆ ಉಳಿಸಿಕೊಂಡಿಲ್ಲ. ಆ ಮಾತು ಬೇರೆ). ಕಚೇರಿಗಳಲ್ಲಿ ಅಧಿಕಾರಿಗಳ ಮೇಲೆ ಉಳಿದ ಸಿಬ್ಬಂದಿ ವರ್ಗಕ್ಕೆ ಗೌರವವಿಲ್ಲ. ಎದುರಿಗೆ ‘ಗುಡ್ ಮಾರ್ನಿಂಗ್ ಸಾರ್’ ಎಂದು ಹೇಳಿದರೂ ಒಳಗೊಳಗೇ ತಮ್ಮ ಅಧಿಕಾರಿಗೆ ಹಿಡಿಶಾಪ ಹಾಕುವವರೆಷ್ಟೋ! ಸಭೆಯಲ್ಲಿ ವಿದ್ವಾಂಸರೊಬ್ಬರು ಮಾತನಾಡುತ್ತಿದ್ದರೆ ಅದನ್ನಾಲಿಸುವ ಗೋಜಿಗೆ ಹೋಗದೆ, ಕಾಲ ಮೇಲೆ ಕಾಲು ಹಾಕಿ ಮೊಬೈಲ್ನಲ್ಲಿ ತಮ್ಮ ಪಾಡಿಗೆ ಚಾಟ್ ಮಾಡುವವರೆಷ್ಟೋ. ಮದುವೆ, ಮುಂಜಿ ಸಮಾರಂಭಗಳಲ್ಲಿ ವಧುವರರನ್ನು ಆಶೀರ್ವದಿಸುವ ಬದಲು ಮೊಬೈಲ್ ಸಂಭಾಷಣೆಯಲ್ಲೇ ಕಳೆದುಹೋಗುವವರೆಷ್ಟೋ. ಸಾವಿನ ಮನೆಯಲ್ಲಿ ಸಾಂತ್ವನ ಹೇಳುವ ಬದಲು ಮೊಬೈಲ್ ಕಿವಿಗಿಟ್ಟು ನಿರ್ದಯಿಗಳಾಗಿ ಕಾಲಹರಣ ಮಾಡುವವರಿಗೂ ಕೊರತೆಯಿಲ್ಲ. ಸಂಘ ಸಂಸ್ಥೆಗಳ ಸದಸ್ಯರು ಸಭೆ ನಡೆಸಿದಾಗ, ಇತರ ಸದಸ್ಯರ ಸಲಹೆ ಆಲಿಸುವ ಸೌಜನ್ಯ ಪ್ರದರ್ಶಿಸದೆ, ತಮ್ಮ ಬೇಳೆ ಬೇಯಿಸಿಕೊಳ್ಳುವವರ ಸಂಖ್ಯೆಯಂತೂ ಹೇರಳ.
ಹೀಗೆ ಮನೆ, ಕಚೇರಿ, ಕಾರ್ಯಾಲಯ, ವಿಧಾನಸಭೆ, ಸಂತೆ, ಜಾತ್ರೆ, ಮದುವೆ ಮುಂಜಿ, ಸಾವು…. ಎಲ್ಲ ಸಂದರ್ಭಗಳಲ್ಲಿ ಸಡಿಲಗೊಂಡ ಸಂಬಂಧಗಳ ಒಡೆದು ಚೂರಾದ ಚಿತ್ರವೇ ಕಣ್ಣಿಗೆ ರಾಚುತ್ತದೆ. ತಂದೆಗೆ ಮಗನ ಮೇಲೆ ವಿಶ್ವಾಸವಿಲ್ಲ. ಮಗನಿಗೆ ತಂದೆಯ ಬಗ್ಗೆ ಗೌರವವಿಲ್ಲ. ಅಧಿಕಾರಿಗೆ ಸಿಬ್ಬಂದಿ ವರ್ಗದ ಮೇಲೆ ಪ್ರೀತಿಯಿಲ್ಲ. ಸಿಬ್ಬಂದಿ ವರ್ಗಕ್ಕೆ ಅಧಿಕಾರಿಯ ಮೇಲೆ ಗೌರವವಿಲ್ಲ. ಪ್ರಧಾನಿಯನ್ನೂ ‘ಚೋರ್’ ಎಂದು ಹೀಗಳೆಯುವ ರಾಹುಲ್ ಗಾಂಧಿಗಳಿಗೂ ಕೊರತೆಯಿಲ್ಲ. ಯಾರ ಮೇಲೆ ಯಾರಿಗೂ ವಿಶ್ವಾಸ, ಗೌರವಗಳಿಲ್ಲ. ನಂಬಿಕೆ ಕುಸಿದಿದೆ. ಪ್ರೀತಿ ಹಳಸಿದೆ. ವಿಶ್ವಾಸ ಕಮರಿ ಹೋಗಿದೆ. ಮನುಷ್ಯರು ಕಾಣಿಸುತ್ತಿಲ್ಲ. ಮನುಷ್ಯ ಮುಖವಾಡ ತೊಟ್ಟ ಮಹಿಷಾಸುರರೇ ಹೆಜ್ಜೆ ಹೆಜ್ಜೆಗೆ ಕಾಣಿಸತೊಡಗಿದ್ದಾರೆ.
ಪರಸ್ಪರ ನಂಬಿಕೆ, ವಿಶ್ವಾಸ, ಸ್ನೇಹ ಸಂಬಂಧ, ಪ್ರೀತಿ, ಗೌರವ ಭಾವ ಇದ್ದಾಗ ಮಾತ್ರ ಕುಟುಂಬ, ಸಮಾಜ, ದೇಶ ಸಶಕ್ತವಾಗಬಲ್ಲುದು. ಮನಸ್ಸು ಮನಸ್ಸುಗಳ ನಡುವೆ ಪ್ರೀತಿ, ವಿಶ್ವಾಸ, ಹೃದಯ ಹೃದಯಗಳ ನಡುವೆ ಸ್ನೇಹಸಂಬಂಧ, ಮಧುರ ಬಾಂಧವ್ಯದ ಬೆಸುಗೆ ಇದ್ದಾಗ ಮಾತ್ರ ಮಾನವತೆ ಅರಳಬಲ್ಲುದು. ಆಂಟಿ, ಅಂಕಲ್, ಮಮ್ಮಿ, ಡ್ಯಾಡಿಗಳ ಕೃತಕ ಸಂಬಂಧ ತೊಲಗಿ ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಅತ್ತಿಗೆ, ಮೈದುನ ನಾದಿನಿಯರ ಸುಮಧುರ ಶಾಶ್ವತ ಸಂಬಂಧ ಹರಳುಗಟ್ಟಬಹುದು.
ಅಂತಹ ಸುಮಧುರ ಸಂಬಂಧಗಳನ್ನು ಬೆಸೆಯಲು ನಾವು – ನೀವೆಲ್ಲರೂ ಶ್ರಮಿಸೋಣ. ಅದಕ್ಕೆ ಬೇಕಿರುವುದು ಹಣ, ಅಧಿಕಾರ, ಅಂತಸ್ತುಗಳಲ್ಲ; ಆದರೆ ಒಬ್ಬರನ್ನೊಬ್ಬರು ಅಂತಃಕರಣಪೂರ್ವಕ ಪ್ರೀತಿಸುವ ಮನುಷ್ಯ ಸಹಜ ಗುಣ.
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.