ನವದೆಹಲಿ: ಭಾರತದಲ್ಲಿ ಭಯೋತ್ಪಾದನೆಗೆ ಇಂಬುಕೊಡುತ್ತಿರುವ ಪಾಕಿಸ್ಥಾನದ ವಿರುದ್ಧ ಕಿಡಿ ಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಭಾರತ ತನ್ನ ಎಲ್ಲಾ ನೆರೆಹೊರೆಯವರೊಂದಿಗೂ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುತ್ತದೆ ಆದರೆ ಬೆದರಿಕೆಯ ನಡುವೆ ಅಲ್ಲ ಎಂದಿದೆ.
ಭಾರತ-ಅಮೆರಿಕಾ ಸ್ಟ್ರ್ಯಾಟಜಿಕ್ ಪಾರ್ಟ್ನರ್ಶಿಪ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ ಅವರು, “ಎಲ್ಲಾ ನೆರೆಹೊರಯವರೊಂದಿಗೂ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ನಾವು ಬಯಸುತ್ತೇವೆ, ಆದರೆ ಬೆದರಿಕೆ ನಡುವೆ ಅಲ್ಲ. ನಿನ್ನೆ ರಾತ್ರಿಯಷ್ಟೇ, ಶ್ರೀನಗರದಿಂದ ವಾಪಾಸ್ ಬಂದೆ, 48 ಗಂಟೆ ಅಲ್ಲಿ ಪಾಕಿಸ್ಥಾನಿಯರ ಕಡೆಯಿಂದ ಶೆಲ್ ದಾಳಿ ನಡೆಯುತ್ತಿತ್ತು, ಉಗ್ರರನ್ನು ಕಾಶ್ಮೀರದೊಳಗೆ ನುಸುಳಿಸುವ ಸಲುವಾಗಿ ಅವರು ಈ ದಾಳಿಗಳನ್ನು ನಡೆಸುತ್ತಾರೆ. ಹೀಗಾಗಿ ನಮ್ಮ ಸೇನಾಪಡೆಗಳಿಗೆ ಮತ್ತೊಮ್ಮೆ ಪಿಒಕೆಯಲ್ಲಿನ ಲಾಂಚ್ ಪ್ಯಾಡ್ಗಳನ್ನು ಧ್ವಂಸಗೊಳಿಸಬೇಕಾಯಿತು” ಎಂದಿದ್ದಾರೆ.
ಪಿಒಕೆಯಲ್ಲಿನ ನಾಲ್ಕು ಲಾಂಚ್ ಪ್ಯಾಡುಗಳನ್ನು ಭಾರತೀಯ ಸೇನೆಯು ಭಾನುವಾರ ಧ್ವಂಸಗೊಳಿಸಿದೆ. ಇದರಲ್ಲಿ ಹಲವಾರು ಮಂದಿ ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಐವರು ಪಾಕ್ ಸೈನಿಕರೂ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯ ಈ ದಾಳಿಯಿಂದ ಪಾಕಿಸ್ಥಾನಕ್ಕೆ ತೀವ್ರ ಸ್ವರೂಪದ ನಷ್ಟವಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಧವ್ ಈ ಹೇಳಿಕೆಯನ್ನು ನೀಡಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ ಅವರು, ಈ ಇಸ್ಲಾಮಿಕ್ ರಾಷ್ಟ್ರದ ಭಯೋತ್ಪಾದನೆ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಮಾರಕ ಎಂದು ಅವರು ಪ್ರತಿಪಾದಿಸಿದ್ದಾರೆ.
ಭಯೋತ್ಪಾದನೆಯಂತಹ ಒಂದು ನಿರ್ದಿಷ್ಟ ವಿಷಯದಲ್ಲಿ ಇಡೀ ಪ್ರಜಾಪ್ರಭುತ್ವ ಜಗತ್ತು ಒಟ್ಟಾಗಿ ಪಾಕಿಸ್ಥಾನದ ನಾಯಕತ್ವದ ಮೇಲೆ ಒತ್ತಡ ಏರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.