ನವದೆಹಲಿ: ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಇಂದು ಸಂಜೆ ಐದು ಗಂಟೆಗೆ ಅಂತ್ಯಗೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಹೇಳಿದ್ದಾರೆ. ವಕೀಲರು ವಾದ ಮಂಡನೆಗೆ ಇನ್ನಷ್ಟು ಸಮಯಾವಕಾಶ ನೀಡಬೇಕು ಎಂದು ಕೇಳಿದ ಸಂದರ್ಭದಲ್ಲಿ ಗೋಗಯ್ ಅವರು, “ಇಲ್ಲಿಗೆ ಸಾಕು, ಇಂದು ಸಂಜೆ 5 ಗಂಟೆಗೆ ವಿಚಾರಣೆ ಮುಗಿಯಲಿದೆ” ಎಂದಿದ್ದಾರೆ.
ಅಯೋಧ್ಯೆ ವಿವಾದದ ವಿಚಾರಣೆಗೆ ರಚನೆ ಮಾಡಲಾದ ಗೋಗಯ್ ನೇತೃತ್ವದ ಸಾಂವಿಧಾನಿಕ ಪೀಠವು ಸುದೀರ್ಘ 39 ದಿನಗಳ ವಿಚಾರಣೆಯನ್ನು ನಡೆಸಿದ್ದು, ಇಂದು 40ನೇ ದಿನವಾಗಿದೆ. ನ್ಯಾಯಾಲಯದ ಸಾಂವಿಧಾನಿಕ ಪೀಠವೊಂದು ಇಷ್ಟು ದಿನಗಳವರೆಗೆ ಸುದೀರ್ಘ ಮೌಖಿಕ ವಿಚಾರಣೆಯನ್ನು ನಡೆಸಿದ್ದು ಇತಿಹಾಸದಲ್ಲಿ ಇದು ಎರಡನೇಯ ಬಾರಿಗೆ. 1972ರಲ್ಲಿ ಕೇಸವನಂದನ್ ಭಾರತಿ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ಸುದೀರ್ಘ 68 ದಿನಗಳ ವಿಚಾರಣೆ ನಡೆಸಿತ್ತು.
ಅಯೋಧ್ಯೆ ಪ್ರಕರಣದಲ್ಲಿ, 2010ರ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ 14 ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖರಾ ಮತ್ತು ರಾಮ್ ಲಲ್ಲಾ ಎಂಬ ಮೂರು ಅರ್ಜಿದಾರರ ನಡುವೆ ಸಮಾನವಾಗಿ ವಿಭಜಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಕೆಯಾಗಿದೆ.
16 ನೇ ಶತಮಾನದಲ್ಲಿ ಬಾಬರಿ ಮಸೀದಿಯನ್ನು ಹಿಂದೂ ದೇವರು ರಾಮನಿಗೆ ಅರ್ಪಿತವಾದ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ಬಲವಾದ ವಾದ. ರಾಮನ ಜನ್ಮಸ್ಥಳವೂ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.