ನವದೆಹಲಿ : 26/11ರ ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮತ್ತು ಇತರ ಭಯೋತ್ಪಾದಕರ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ವಿಧಿಸಿರುವ (ಯುಎನ್ಎಸ್ಸಿಆರ್ 1267 ) ನಿರ್ಬಂಧಗಳನ್ನು ಜಾರಿಗೆ ತರಲು ಪಾಕಿಸ್ಥಾನ ವಿಫಲವಾಗಿದೆ ಎಂದು ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ನ ಏಷ್ಯಾ ಪೆಸಿಫಿಕ್ ಗ್ರೂಪ್ (ಎಪಿಜಿ) ಆರೋಪಿಸಿದೆ.
ಆಗಸ್ಟ್ 2019 ರಲ್ಲಿ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ಪಾಕಿಸ್ಥಾನದ ಪರಸ್ಪರ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದ ಏಷ್ಯಾ ಪೆಸಿಫಿಕ್ ಗ್ರೂಪ್, “ಪಟ್ಟಿಯಲ್ಲಿರುವ ಭಯೋತ್ಪಾದಕ ವ್ಯಕ್ತಿಗಳು ಮತ್ತು ಅವರ ಸಂಘಟನೆಗಳ ವಿರುದ್ಧ ಯುಎನ್ಎಸ್ಸಿಆರ್ 1267 ಕಟ್ಟುಪಾಡುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ಪಾಕಿಸ್ಥಾನ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ. ಅದರಲ್ಲೂ ವಿಶೇಷವಾಗಿ ಲಷ್ಕರ್, ಜಮಾತ್ ಉದ್ ದಾವಾ, ಫಲಾಹ್ ಇ ಇನ್ಸಾನಿಯತ್ ಫೌಂಡೇಶನ್ಗಳ ವಿರುದ್ಧ ಮತ್ತು ಈ ಗುಂಪುಗಳ ನಾಯಕ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ಥಾನ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದೆ.
ಹಫೀಜ್ ಸಯೀದ್ಗೆ ಆತನ ಬ್ಯಾಂಕ್ ಖಾತೆಗಳಿಂದ ಹಣವನ್ನು ಡ್ರಾ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪಾಕಿಸ್ಥಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸಂಪರ್ಕಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪಾಕಿಸ್ಥಾನದ ಮನವಿಯನ್ನು ಭಾರತ ಖಂಡಿಸಿದ್ದು, ಉಗ್ರರಿಗೆ ಪಾಕೆಟ್ ಮನಿ ನೀಡಲು ಪಾಕಿಸ್ಥಾನ ಬಯಸುತ್ತಿದೆ ಎಂದು ಹೇಳಿದೆ.
ಪಾಕಿಸ್ಥಾನ ಉಗ್ರರ ವಿರುದ್ಧ ಸಮರ್ಪಕ ಕ್ರಮಕೈಗೊಂಡಿಲ್ಲ ಎಂಬ ಏಷ್ಯಾ ಫೆಸಿಪಿಕ್ ಗ್ರೂಪ್ ವರದಿಯು ಆ ದೇಶಕ್ಕೆ ದೊಡ್ಡ ಮಟ್ಟದ ಹಿನ್ನಡೆಯನ್ನು ನೀಡಿದೆ. ಮುಂಬರುವ ದಿನಗಳಲ್ಲಿ ಅದು ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ನ ಕಪ್ಪು ಪಟ್ಟಿಗೆ ಸೇರುವ ಆತಂಕವನ್ನೂ ಎದುರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.