ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಇಂದು ನಡೆದಿದ್ದು, ಮೇಯರ್ ಆಗಿ ಬಿಜೆಪಿಯ ಎಂ. ಗೌತಮ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಅವರ ಪರವಾಗಿ 129 ಮತಗಳು ಬಿದ್ದಿವೆ. ಉಪ ಮೇಯರ್ ಆಗಿ ರಾಮ್ ಮೋಹನ್ ರಾಜ್ ಅವರು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರು ಘೋಷಣೆಯನ್ನು ಮಾಡಿದ್ದಾರೆ.
ಜೋಗುಪಾಳ್ಯ ವಾರ್ಡ್ ನ ಕಾರ್ಪೋರೇಟರ್ ಆಗಿರುವ ಗೌತಮ್ ಕುಮಾರ್ ಅವರು ಪಾಲಿಕೆಯ 53ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳಿಂದ ಮೇಯರ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಸತ್ಯನಾರಾಯಣ ಹಾಗೂ ಉಪಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್ ನ ಗಂಗಮ್ಮ ಕಣದಲ್ಲಿದ್ದರು.
ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಗೌತಮ್ ಕುಮಾರ್ ಅವರು, “ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಬಿಬಿಎಂಪಿ ಪ್ರವೇಶಿಸುವ ಕನಸು ನನಗಿರಲಿಲ್ಲ. ಆದರೆ ಪಕ್ಷ ನನಗೆ ಅವಕಾಶ ನೀಡಿ ಮೇಯರ್ ಆಗಿ ಮಾಡಿದೆ. ಪಕ್ಷಕ್ಕೆ ನಾನು ಸದಾ ಚಿರಋಣಿ. ನಮ್ಮ ನಾಯಕರಾದ ಯಡಿಯೂರಪ್ಪ ಮತ್ತು ನರೇಂದ್ರ ಮೋದಿಯವರಿಗೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡುತ್ತೇನೆ. ಇದು ನಮ್ಮ ಬೆಂಗಳೂರು, ಇದನ್ನು ಚೆನ್ನಾಗಿಯೇ ಕಟ್ಟುತ್ತೇವೆ” ಎಂದಿದ್ದಾರೆ.
“ಬೆಂಗಳೂರು ನಗರವನ್ನು ಅತೀವವಾಗಿ ಬಾಧಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಟ್ರಾಫಿಕ್ ಸಮಸ್ಯೆಯನ್ನು ನೀಗಿಸಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
ಬಿಬಿಎಂಪಿಯಲ್ಲಿ ಒಟ್ಟು 257 ಇದ್ದು. ಬಿಜೆಪಿಗೆ 125, ಕಾಂಗ್ರೆಸ್ 104, ಜೆಡಿಎಸ್ 21 ಹಾಗೂ 7 ಪಕ್ಷೇತರ ಕಾರ್ಪೋರೇಟರ್ ಗಳಿದ್ದಾರೆ. ಮೇಯರ್ ಪಟ್ಟಕ್ಕಾಗಿ ಮ್ಯಾಜಿಕ್ ನಂಬರ್ 129 ಆಗಿದೆ. ಬಿಜೆಪಿಯ 125 ಹಾಗೂ ಪಕ್ಷೇತರರು 5 ಮಂದಿ ಮತ ಚಲಾಯಿಸಿದ್ದಾರೆ. ಗೌತಮ್ ಅವರ ಪರವಾಗಿ 129 ಮತಗಳು ಚಲಾವಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.